ಉತ್ತಮ ಸಮಾಜಕ್ಕಾಗಿ

ಅ. 23 ರಿಂದ ಕಿತ್ತೂರು ಉತ್ಸವ: ಅದ್ಧೂರಿ ಆಚರಣೆಗೆ ನಿರ್ಧಾರ

0

ಅ. 23 ರಿಂದ ಕಿತ್ತೂರು ಉತ್ಸವ: ಅದ್ಧೂರಿ ಆಚರಣೆಗೆ ನಿರ್ಧಾರ
2 ಕೋಟಿ ಅನುದಾನಕ್ಕೆ ಮನವಿ: ಶಾಸಕ ದೊಡ್ಡಗೌಡರ

ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23, 24 ಹಾಗೂ 25 ರಂದು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲಾಗುವುದು. ಇದೇ ಮೊದಲ ಬಾರಿ ಉತ್ಸವದ ಸಂದರ್ಭದಲ್ಲಿ ಹೆಲಿಟೂರಿಸಂ ಏರ್ಪಡಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.

ಕಿತ್ತೂರು ಕಲ್ಮಠದ ಸಭಾಂಗಣದಲ್ಲಿ ಸೋಮವಾರ (ಅ.1) ನಡೆದ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಲಿಟೂರಿಸಂ ಗೆ ಅವಕಾಶ ಕಲ್ಪಿಸಲು ಮುಂಬೈ ಮೂಲದ ಕಂಪನಿ ಮುಂದೆ ಬಂದಿದ್ದು, ಸಚಿವರು ಹಾಗೂ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಹೆಲಿಟೂರಿಸಂ ಸೌಲಭ್ಯ ಕಲ್ಪಿಸಿದರೆ ಉತ್ಸವದ ವೇಳೆ ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹೆಲಿಕಾಪ್ಟರ್ ನಲ್ಲಿ ಜಿಲ್ಲೆಯ ದರ್ಶನ ಮಾಡಬಹುದು ಎಂದರು.

2 ಕೋಟಿ ಅನುದಾನಕ್ಕೆ ಮನವಿ:

ಕಿತ್ತೂರು ಉತ್ಸವವನ್ನು ವೈಭವಪೂರ್ಣವಾಗಿ ಆಚರಿಸಲು ಹಣಕಾಸಿನ ತೊಂದರೆ ಉಂಟಾಗುತ್ತಿರುವುದರಿಂದ ಪ್ರತಿವರ್ಷ ಎರಡು ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಮತ್ತೊಮ್ಮೆ ನಿಯೋಗ ಕರೆದುಕೊಂಡು ಹೋಗಿ ಹೆಚ್ಚಿನ ಅನುದಾನ ಕೇಳಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಕಿತ್ತೂರು ಉತ್ಸವ ಸರ್ಕಾರಿ ಉತ್ಸವವಲ್ಲ; ಅದು ಸಾರ್ವಜನಿಕರ ಉತ್ಸವ. ಆದ್ದರಿಂದ ಉತ್ಸವದ ವೇಳೆ ರಚಿಸುವ ಸಮಿತಿಗಳಲ್ಲಿ ಮಹಿಳೆಯರು, ಯುವಕರು, ಸಾಹಿತಿಗಳು, ಕ್ರೀಡಾಪಟುಗಳು ಸೇರಿದಂತೆ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು ಎಂದರು.
ನಾಗರಿಕರ ಸಲಹೆಗಳ ಪ್ರಕಾರ ಈ ಬಾರಿ ಸಾರ್ವಜನಿಕರಿಗೆ ಕಲ್ಮಠದಲ್ಲಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ದೊಡ್ಡಗೌಡರ ಪ್ರಕಟಿಸಿದರು.
ಕಿತ್ತೂರು ಮಹಾದ್ವಾರದ ಬಳಿ ನಿರ್ಮಿಸಲಾಗಿರುವ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪ ಪುತ್ಥಳಿಗಳನ್ನು ಉತ್ಸವದ ವೇಳೆ ಅನಾವರಣಗೊಳಿಸಲಾಗುತ್ತದೆ.
ಕಿತ್ತೂರು ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಂಬರುವ ದಿನಗಳಲ್ಲಿ ಪುತ್ಥಳಿಗಳ ಎತ್ತರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅದೇ ರೀತಿ ಪ್ರಾಧಿಕಾರದ ವತಿಯಿಂದ ರಾಕ್ ಉದ್ಯಾನ, ಕೋಟೆ ಬಳಿ ದೋಣಿ ವಿಹಾರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ದೊಡ್ಡಗೌಡರ ಹೇಳಿದರು.
ಇದಕ್ಕೂ ಮುಂಚೆ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು, ಉತ್ಸದ ಉದ್ಘಾಟನೆಗೆ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಗಳನ್ನು ಆಹ್ವಾನಿಸಬೇಕಾದರೆ ಕನಿಷ್ಠ ಐದಾರು ತಿಂಗಳು ಮುಂಚಿತವಾಗಿ ಪ್ರಯತ್ನಿಸಬೇಕು. ಇದೀಗ ಸಮಯದ ಅಭಾವ ಇರುವುದರಿಂದ ಮುಂದಿನ ಉತ್ಸವಕ್ಕೆ ಕರೆಸಲು ಪ್ರಯತ್ನಿಸಬಹುದು ಎಂದರು.
ಈ ಬಾರಿ ಉತ್ಸವದಲ್ಲಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ರೂಪಿಸುವ ಮೂಲಕ ಕಾರ್ಯಕ್ರಮದ ಸಂಘಟನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಅವರಿಗೆ ವಹಿಸಬೇಕು ಎಂದು ಸಲಹೆ ನೀಡಿದರು.

ಆಶಯ ನುಡಿ ಅನುರಣಿಸಲಿ:

ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಖ್ಯಾತ ಸಾಹಿತಿ ಅಥವಾ ಸಂಶೋಧಕರಿಂದ ಆಶಯ ನುಡಿ ಹೇಳಿಸಬೇಕು.ಕಿತ್ತೂರು ಹಾಗೂ ರಾಣಿ ಚನ್ನಮ್ಮನ ಕುರಿತ ಅವರ ಆಶಯ ನುಡಿಗಳು ಮೂರು ದಿನಗಳ ಉತ್ಸವದಲ್ಲಿ ಅನುರಣಿಸಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಯ.ರು.ಪಾಟೀಲ ಅನಿಸಿಕೆ ಹಂಚಿಕೊಂಡರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿಚ್ಚಣಿಕೆ ಮಠದ ಸ್ವಾಮೀಜಿ, ತಾಲ್ಲೂಕು ಪಂಚಾಯತ ಅಧ್ಯಕ್ಷೆ ಶೈಲಾ ಸಿದ್ರಾಮಣಿ, ಪಟ್ಟಣ ಪಂಚಾಯತ ಅಧ್ಯಕ್ಷ ಹನೀಫ್, ಡಿವೈಎಸ್ಪಿ ಕರುಣಾಕರ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ್ ಕರಿಶಂಕರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಉತ್ಸವದ ರೂಪುರೇಷೆಗಳು ಹಾಗೂ ಪೂರ್ವಸಿದ್ಧತೆ ಕುರಿತು ಸಾರ್ವಜನಿಕರು ಸಲಹೆಗಳನ್ನು ನೀಡಿದರು.
ಕ್ರೀಡಾಕೂಟದ ಉದ್ಘಾಟನೆಗೆ ಜಿಲ್ಲೆಯ ಮಲಪ್ರಭಾ ಜಾಧವ ಅಥವಾ ಬೇರೆ ಯಾರಾದರೂ ಖ್ಯಾತ ಕ್ರೀಡಾಪಟುಗಳನ್ನು ಆಹ್ವಾನಿಸಬೇಕು; ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು; ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ರೂಪಕಗಳನ್ನು ನಿರ್ಮಿಸಬೇಕು ಎಂಬುದು ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದರು.

The post ಅ. 23 ರಿಂದ ಕಿತ್ತೂರು ಉತ್ಸವ: ಅದ್ಧೂರಿ ಆಚರಣೆಗೆ ನಿರ್ಧಾರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.