ಉತ್ತಮ ಸಮಾಜಕ್ಕಾಗಿ

ಉತ್ತರ ವಲಯ ಪೊಲೀಸ್ ಸಿಬ್ಬಂದಿಗೆ ಪದೋನ್ನತಿ ಪ್ರದಾನ ಆರ್ಡರ್ಲಿ ರದ್ದು; ಸಬ್‍ಬೀಟ್ ವ್ಯವಸ್ಥೆ ಜಾರಿ-ಸಚಿವ ಪರಮೇಶ್ವರ್

0


ಬೆಳಗಾವಿ, ಜನವರಿ 20 ಉತ್ತರ ವಲಯದ 1555 ಪೊಲೀಸ್ ಸಿಬ್ಬಂದಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು(ಜ.20) ಪದೋನ್ನತಿ ಪ್ರದಾನ ಮಾಡಿದರು.
ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪದೋನ್ನತಿ ಪ್ರದಾನ ಮಾಡಿ ಮಾತನಾಡಿದ ಸಚಿವರು, ಬ್ರಿಟೀಷ್‍ರ ಕಾಲದಿಂದಲೂ ಪೊಲೀಸ್ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಆರ್ಡರ್ಲಿ ಪದ್ಧತಿಯನ್ನು ಕಿತ್ತುಹಾಕಲಾಗುವುದು ಎಂದು ಹೇಳಿದರು.
ಹಿರಿಯ ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ಆರ್ಡರ್ಲಿ ಪದ್ಧತಿಯನ್ನು ತೆಗೆದುಹಾಕಿ ಆ ಕೆಲಸಕ್ಕೆ ಮೀಸಲಾಗಿದ್ದ ಸಿಬ್ಬಂದಿಯನ್ನು ಇಲಾಖೆಯ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಸಬ್‍ಬೀಟ್ ವ್ಯವಸ್ಥೆ:
ಬೆಳಗಾವಿ ಜಿಲ್ಲಾ ಪೊಲೀಸ್ ಜಾರಿಗೆ ತಂದಿರುವ ವಿನೂತನ ಸಬ್‍ಬೀಟ್ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವ ಪರಮೇಶ್ವರ ಅವರು, ರಾಜ್ಯದಾದ್ಯಂತ ಈ ಪದ್ಧತಿಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
“ಠಾಣೆ ವ್ಯಾಪ್ತಿಯ ಪ್ರತಿ ಹಳ್ಳಿಗೂ ಪೊಲೀಸರನ್ನು ಸಬ್‍ಬೀಟ್‍ಗೆ ನಿಯೋಜಿಸುವುದರಿಂದ ಪ್ರತಿ ಗ್ರಾಮದ ಮಾಹಿತಿಯೂ ಠಾಣೆಯಲ್ಲಿ ಲಭ್ಯವಿರುತ್ತದೆ. ಸ್ಥಳೀಯ ಜನರನ್ನು ಬೀಟ್ ಸಮಿತಿಗೆ ನೇಮಿಸುವುದರಿಂದ ಏನೇ ಅಪರಾಧ ಘಟಿಸಿದರೂ ತಕ್ಷಣವೇ ಮಾಹಿತಿ ಲಭಿಸುತ್ತದೆ” ಎಂದು ವಿವರಿಸಿದರು.
ಈ ಪದ್ಧತಿಯನ್ನು ಬೆಳಗಾವಿಯಲ್ಲಿ ಜಾರಿಗೆ ತಂದಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಜನಸ್ನೇಹಿ ಪೊಲೀಸ್-ಆಶಯ:
ಕರ್ನಾಟಕ ಪೊಲೀಸ್ ಅನ್ನು ಜರ್ಮನಿ ಪೊಲೀಸ್ ವ್ಯವಸ್ಥೆಯ ಮಾದರಿಯಲ್ಲಿ ‘ಜನಸ್ನೇಹಿ’ ಮಾಡಬೇಕು ಎಂಬುದು ತಮ್ಮ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವ ಪರಮೇಶ್ವರ ತಿಳಿಸಿದರು.
ಪೊಲೀಸ್ ಇಲಾಖೆಯು ಸರ್ಕಾರದ ಮುಖವಾಣಿಯಾಗಿದೆ. ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಪೊಲೀಸರು ತಮ್ಮ ಹೊಣೆಗಾರಿಕೆ ಅರಿತುಕೊಂಡು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ತುಮಕೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪ್ರಸ್ತಾಪಿಸಿದ ಸಚಿವರು, ಪೊಲೀಸ್ ಸಿಬ್ಬಂದಿ ಶಿಸ್ತು ಹಾಗೂ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಮವಸ್ತ್ರದ ಘನತೆಯನ್ನೂ ಕಾಪಾಡಬೇಕು ಎಂದು ಹೇಳಿದರು.
ಸಮಾಜ ಹಾಗೂ ಸರ್ಕಾರ ಪೊಲೀಸ್ ಇಲಾಖೆಯ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದು, ಇದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯದಾದ್ಯಂತ ಕ್ಯಾಂಟೀನ್ ಸೌಲಭ್ಯ:
ರಾಜ್ಯದ ಪೊಲೀಸ್ ಸಿಬ್ಬಂದಿಗೆ ಉತ್ತಮ ಸಂಬಳ, ಭತ್ಯೆ ಒದಗಿಸಲು ಸರ್ಕಾರ ಮುಂದಾಗಿದ್ದು, ಕ್ಯಾಂಟೀನ್ ಸೌಲಭ್ಯವನ್ನು ರಾಜ್ಯದ ಎಲ್ಲ ಕಡೆಗಳಲ್ಲಿ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಪರಮೇಶ್ವರ ತಿಳಿಸಿದರು.
ಸಿಬ್ಬಂದಿಗೆ ಉತ್ತಮ ವೇತನ ಹಾಗೂ ಕಾಲಕಾಲಕ್ಕೆ ಬಡ್ತಿ ನೀಡುವ ನಿಟ್ಟಿನಲ್ಲಿ ಔರಾದಕರ್ ಸಮಿತಿಯನ್ನು ರಚಿಸಲಾಗಿತ್ತು. ಇಂತಹ ಸಮಿತಿಯನ್ನು ರಚಿಸಿ ಸಮಗ್ರವಾಗಿ ಅಧ್ಯಯನ ನಡೆಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಸಮಿತಿಯ ವರದಿ ಬಳಿಕ ವೇತನದಲ್ಲಿ ಹೆಚ್ಚಳ ಹಾಗೂ ಬಡ್ತಿ ನೀತಿಯನ್ನು ಸರ್ಕಾರ ಪರಿಷ್ಕರಿಸಿದೆ ಎಂದರು.
ಇದೇ ವೇಳೆ ಅಪರಾಧ ತಡೆ ಕುರಿತ ‘ಜಾಗೃತಿ’ ಎಂಬ ಚಿತ್ರಸುರುಳಿಯನ್ನು ಸಚಿವ ಪರಮೇಶ್ವರ ಬಿಡುಗಡೆಗೊಳಿಸಿದರು.

225 ಕೋಟಿ ಅನುದಾನ:
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೃಹಸಚಿವರ ಸಲಹೆಗಾರ ಕೆಂಪಯ್ಯ ಅವರು, ಸುಮಾರು 12 ಸಾವಿರ ಪೊಲೀಸರಿಗೆ ಏಕಕಾಲಕ್ಕೆ ಪದೋನ್ನತೆ ನೀಡುವ ಮೂಲಕ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬಣ್ಣಿಸಿದರು.
ಪದೋನ್ನತಿ ಹಾಗೂ ಭತ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ 225 ಕೋಟಿ ರೂಪಾಯಿ ಅನುದಾನವನ್ನು ನೀಡುವ ಮೂಲಕ ತನ್ನ ಕಾಳಜಿಯನ್ನು ತೋರಿಸಿದೆ. ಸಿಬ್ಬಂದಿ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಇನ್ನೋರ್ವ ಅತಿಥಿ ಕೆಎಸ್‍ಆರ್‍ಪಿಎಡಿಜಿಪಿ ಭಾಸ್ಕರರಾವ್ ಅವರು, ಕರ್ನಾಟಕ ಪೊಲೀಸ್ ಇಲಾಖೆಯು ಏಕಕಾಲಕ್ಕೆ 12 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಪದೋನ್ನತಿ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದು ಅಂತರ್‍ರಾಷ್ಟ್ರೀಯಮಟ್ಟದಲ್ಲಿ ಚರ್ಚೆ ನಡೆದಿದೆ ಎಂದರು.
ಇಲಾಖೆಯ ಸಬಲೀಕರಣಕ್ಕೆ ಈ ನಿರ್ಧಾರ ಪೂರಕವಾಗಿದ್ದು, ಇಲಾಖೆಯ ಹೊಣೆಗಾರಿಕೆ ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಸ್ವಾಗತಿಸಿದರು. ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ಟ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಿ.ಎಚ್.ರಾಣೆ, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಬಾಗಲಕೋಟೆಯ ಎಸ್‍ಪಿ ಸಿ.ಬಿ.ರಿಷಂತ್, ಗದಗ ಜಿಲ್ಲಾ ಎಸ್‍ಪಿ ಕೆ.ಸಂತೋಷಬಾಬು, ಧಾರವಾಡ ಎಸ್‍ಪಿ ಧಮೇಂದ್ರಕುಮಾರ್ ಮೀನಾ, ಬೆಳಗಾವಿ ಡಿಸಿಪಿ ರಾಧಿಕಾ, ಅಮರನಾಥ್ ರೆಡ್ಡಿ ಸೇರಿದಂತೆ ಪೊಲೀಸ್ ಇಲಾಖೆಯ ಉತ್ತರ ವಲಯದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

1555 ಸಿಬ್ಬಂದಿಗೆ ಪದೋನ್ನತಿ:

ಉತ್ತರ ವಲಯ ಪೊಲೀಸ್ ಸಿಬ್ಬಂದಿ ಪದೋನ್ನತಿ ಪ್ರದಾನ ಕಾರ್ಯಕ್ರಮದಲ್ಲಿ ಒಟ್ಟು 1555 ಸಿಬ್ಬಂದಿಗೆ ಪದೋನ್ನತಿ ಪ್ರದಾನ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ 203, ಬಿಜಾಪುರ-225, ಬಾಗಲಕೋಟೆ 257, ಗದಗ 187, ಧಾರವಾಡ 154, ಹುಬ್ಬಳ್ಳಿ-ಧಾರವಾಡ ಕಮೀಷನರೇಟ್- 402 ಹಾಗೂ ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯ ಸಿಬ್ಬಂದಿಗೆ ಪದೋನ್ನತಿ ನೀಡಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.