ಉತ್ತಮ ಸಮಾಜಕ್ಕಾಗಿ

ಎಸ್‍ಸಿಪಿ/ಟಿಎಸ್‍ಪಿ ಯೋಜನೆಗಳ ಪ್ರಗತಿ ಪರಿಶೀಲನೆ ಅಸಮರ್ಪಕ ನಿರ್ವಹಣೆ: ಅಧಿಕಾರಿಗಳಿಗೆ ಎಚ್ಚರಿಕೆ

0

ಬೆಳಗಾವಿ, ಜನವರಿ 23 ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕಾಗಿ ಸರ್ಕಾರ ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವ ಇಲಾಖೆ/ಸರ್ಕಾರಿ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪರಿಶಿಷ್ಟ ಜಾತಿ/ಪಂಗಡಗಳ ವಿಧಾನಮಂಡಳದ ಶಾಸನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಶಿವಮೂರ್ತಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ(ಜ.23) ನಡೆದ ಎಸ್‍ಸಿಪಿ/ಟಿಎಸ್‍ಪಿ ಅನುದಾನ ಬಳಕೆ ಕುರಿತ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ಕಾಯ್ದೆ ಪ್ರಕಾರ ಖರ್ಚು ಮಾಡದೇ ಇರುವವರ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದ ಅವರು, ಕಾನೂನು ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‍ಷಿಪ್ ನಿರೀಕ್ಷಿತ ಪ್ರಮಾಣದಲ್ಲಿ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಗ್ರ ವರದಿಗೆ ಸೂಚನೆ:
ಪ್ರತಿ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಮೀಸಲಿಟ್ಟಿರುವ ಅನುದಾನ, ಕ್ರಿಯಾಯೋಜನೆ ರಚನೆ ಹಾಗೂ ಹಣ ಬಳಕೆಯ ಬಗ್ಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಗ್ರ ವರದಿಯೊಂದನ್ನು ತಯಾರಿಸುವಂತೆ ಕೆ.ಶಿವಮೂರ್ತಿ ಸೂಚನೆ ನೀಡಿದರು.
ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ ಎಂಬ ದೂರುಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಎರಡೂ ವಿಶ್ವವಿದ್ಯಾಲಯಗಳು ಕಾನೂನು ಪ್ರಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರೆ ವರದಿಯನ್ನು ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಒಂದು ವೇಳೆ ವಿಶ್ವವಿದ್ಯಾಲಯಗಳು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಅನುದಾನವನ್ನು ನಿಲ್ಲಿಸುವ ಬಗ್ಗೆಯೂ ಯೋಚಿಸಬಹುದು ಎಂದು ಶಿವಮೂರ್ತಿ ಹೇಳಿದರು.
ಇದಕ್ಕೆ ಉತ್ತರಿಸಿದ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ, ರಾಣಿ ಚನ್ನಮ್ಮ ವಿವಿ ಈಗಾಗಲೇ ಕ್ರಿಯಾ ಯೋಜನೆ ರೂಪಿಸಿದ್ದು, ಅದಕ್ಕೆ ಅನುಮೋದನೆ ಕೂಡ ನೀಡಲಾಗಿದೆ ಎಂದರು.
ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜತೆಗೆ ಚರ್ಚೆ ನಡೆಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಪರಿಶಿಷ್ಟ ಜಾತಿ/ಪಂಗಡಗಳ ಹಾಸ್ಟೆಲ್ ಅನುದಾನ ಬಳಕೆ, ಪರಿಶಿಷ್ಟರ ಕಾಲನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು, ಗಡಿ ಭಾಗದ ಗ್ರಾಮಗಳಿಗೆ ನೀಡಲಾಗುವ ವಿಶೇಷ ಅನುದಾನ ಬಳಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿವಮೂರ್ತಿ ಅವರು ಸಭೆಯಲ್ಲಿ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ.ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.