ಉತ್ತಮ ಸಮಾಜಕ್ಕಾಗಿ

ಗೋವಾ ಸಚಿವರಿಂದ ಶಿಷ್ಟಾಚಾರ ಉಲ್ಲಂಘನೆ; ಕನ್ನಡಿಗರ ಕ್ಷಮೆಯಾಚನೆಗೆ ಒತ್ತಾಯ ಅಕ್ರಮ ಕಾಮಗಾರಿ ನಡೆದಿಲ್ಲ: ಸಚಿವ ಎಂ.ಬಿ.ಪಾಟೀಲ ಸ್ಪಷ್ಟನೆ

0

ಬೆಳಗಾವಿ, tarunkranti (ಕರ್ನಾಟಕ ವಾರ್ತೆ): ಮಹದಾಯಿ ನದಿಪಾತ್ರದಲ್ಲಿ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಅಕ್ರಮವಾಗಿ ಕಾಮಗಾರಿ ನಡೆಸುತ್ತಿದೆ ಎಂದು ಗೋವಾ ರಾಜ್ಯದ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ; ಜನರ ದಿಕ್ಕು ತಪ್ಪಿಸಲು ಕರ್ನಾಟಕದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವರಾದ ಎಂ.ಬಿ.ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿರುವ ಮಹದಾಯಿ ನದಿಪಾತ್ರಕ್ಕೆ ಸೋಮವಾರ(ಜ.15) ಭೇಟಿ ನೀಡಿ ವಸ್ತುಸ್ಥಿತಿಯ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರದ ಗಮನಕ್ಕೆ ತಾರದೇ ಇತ್ತೀಚೆಗೆ ಮಹದಾಯಿ ನದಿಪಾತ್ರಕ್ಕೆ ಬೇಟಿ ನೀಡಿದ್ದ ಗೋವಾ ರಾಜ್ಯದ ಜಲಸಂಪನ್ಮೂಲ ಸಚಿವರು, ಕಳಸಾ-ಬಂಡೂರಿ ನಾಲಾಗೆ ಸಂಬಂಧಿಸಿದಂತೆ ಹಳೆಯ ಕಾಮಗಾರಿಯನ್ನು ಪರಿಶೀಲಿಸಿ ಕರ್ನಾಟಕದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ವಿವರಿಸಿದರು.

ಶಿಷ್ಟಾಚಾರ ಉಲ್ಲಂಘನೆ-ಪರಿಶೀಲನೆಗೆ ಅಭ್ಯಂತರವಿಲ್ಲ:

ಕಳಸಾ-ಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿದಂತೆ ಆಗಸ್ಟ್ ನಂತರದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಎಂ.ಬಿ.ಪಾಟೀಲ ಅವರು, ಈ ಬಗ್ಗೆ ತಟಸ್ಥವಾಗಿರುವ ಮೂರನೇ ತಂಡ ಬೇಕಾದರೆ ಪರಿಶೀಲನೆ ನಡೆಸಬಹುದು ಎಂದು ಹೇಳಿದರು.
ಮೂರನೇ ತಂಡವಾಗಿ ಯಾರೇ ಬಂದು ಪರಿಶೀಲಿಸಿದರೂ ಕರ್ನಾಟಕ ಸರ್ಕಾರದ ಅಭ್ಯಂತರವಿಲ್ಲ; ಆದರೆ ಗೋವಾ ರಾಜ್ಯದ ಸಚಿವರು ಶಿಷ್ಟಾಚಾರ ಪಾಲಿಸದೇ ನೇರವಾಗಿ ಬಂದು ಕಾಮಗಾರಿಯನ್ನು ಪರಿಶೀಲಿಸಿರುವುದು ಸರಿಯಲ್ಲ.
ಕಾಮಗಾರಿ ಪರಿಶೀಲನೆ ಮಾಡುವುದಿದ್ದರೆ ಗೋವಾ ಸರ್ಕಾರವು ಕರ್ನಾಟಕ ಸರ್ಕಾರದ ಜತೆ ಮಾತುಕತೆ ನಡೆಸಿ ಶಿಷ್ಟಾಚಾರದ ಪ್ರಕಾರ ಪರಿಶೀಲನೆ ನಡೆಸಬಹುದಿತ್ತು. ಈ ರೀತಿ ನೇರವಾಗಿ ಬಂದು ಪರಿಶೀಲಿಸಿರುವುದು ಸಮಂಜಸವಲ್ಲ ಎಂದರು.

ಗೋವಾ ಸಿಎಂ ಕ್ಷಮೆ ಕೇಳಲಿ:

ಗೋವಾ ರಾಜ್ಯದ ಸಚಿವ ಪಾಲೇಕರ ಅವರು ಅಕ್ರಮವಾಗಿ ಕರ್ನಾಟಕದಲ್ಲಿ ಬಂದು ಕಾಮಗಾರಿ ಪರಿಶೀಲನೆ ಮಾಡಿರುವುದಲ್ಲದೇ ಕೆಟ್ಟ ಪದ ಬಳಕೆ ಮಾಡಿ ಹೇಳಿಕೆ ನೀಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಗೋವಾ ಸಿಎಂ ಪರಿಕ್ಕರ್ ಅವರು ಕ್ಷಮೆ ಕೇಳಬೇಕು ಎಂದು ಸಚಿವ ಎಂ.ಬಿ.ಪಾಟೀಲ ಒತ್ತಾಯಿಸಿದರು.
ಮಹದಾಯಿ ಹೋರಾಟದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾದ ತಂತ್ರಗಾರಿಕೆಯಿಂದಾಗಿ ಗೋವಾ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಇದನ್ನು ಸರಿದೂಗಿಸಲು ಈ ರೀತಿಯ ಸುಳ್ಳು ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದರು.

ನೀರು ಬಳಕೆ ಸಾಧ್ಯವಿಲ್ಲ:
ಮಹದಾಯಿ ನದಿಪಾತ್ರದಲ್ಲಿ ಡ್ಯಾಂ ನಿರ್ಮಿಸಿದಾಗ ಮಾತ್ರ ಮಹದಾಯಿ ನದಿಪಾತ್ರದ ನೀರು ಬಳಕೆ ಸಾಧ್ಯವಾಗುತ್ತದೆ. ವಿವಾದ ಟ್ರಿಬ್ಯುನಲ್ ಮುಂದೆ ಇರುವುದರಿಂದ ಕರ್ನಾಟಕ ಸರ್ಕಾರವು ತಡೆಗೋಡೆಯನ್ನು ನಿರ್ಮಿಸಿರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಡ್ಯಾಂ ನಿರ್ಮಾಣ ಮಾಡಿ ತಡೆಗೋಡೆ ತೆರವುಗೊಳಿಸಿದ ನಂತರವೇ ನೀರು ಬಳಕೆ ಸಾಧ್ಯವಾಗಲಿದೆ. ಆದರೆ ಇದ್ಯಾವುದನ್ನು ಗಮನಿಸದ ಗೋವಾ ಸಚಿವರು ಹಳೆಯ ಕಾಮಗಾರಿ ವೀಕ್ಷಣೆ ಮಾಡಿ ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಸುಳ್ಳು ಆರೋಪಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ವಸ್ತುಸ್ಥಿತಿಯನ್ನು ಸಚಿವರಿಗೆ ವಿವರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.