ಉತ್ತಮ ಸಮಾಜಕ್ಕಾಗಿ

ಜಾತಿ ಮೀರಿದ ಮಹಾನುಭಾವ ಶ್ರೀ ಸಿದ್ದರಾಮ ಶಿವಯೋಗಿ: ಪ್ರಕಾಶ ಗಿರಿಮಲ್ಲನವರ

0

 • ಬೆಳಗಾವಿ, ಜನವರಿ 18 12ನೇ ಶತಮಾನದ ಶರಣರಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಡುವ ಶ್ರೀ ಶಿವಯೋಗಿ ಸಿದ್ಧರಾಮ ಅವರು ಜಾತಿ ಮತಗಳನ್ನು ಮೀರಿದ ಮಹಾನುಭಾವರಾಗಿದ್ದಾರೆ ಎಂದು ಶರಣ ಶ್ರೀ ಪ್ರಕಾಶ ಗಿರಿಮಲ್ಲನವರ ಅವರು ಹೇಳಿದರು.
  ಅವರು ಇಂದು ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸದ್ದ, ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉತ್ಸವದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
  ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸಾಧಕರಾಗಿದ್ದಾರೆ. ಕೆರೆ ಕಟ್ಟೆ , ಗುಡಿಗಳನ್ನು ಕಟ್ಟುವ ಮೂಲಕ ಸಮಾಜ ಕಾಯಕ ಮಾಡಿದ್ದಾರೆ. ಬಸವ ಸಮಾಕಾಲಿನ ಶರಣರಲ್ಲಿ ಸಿದ್ಧರಾಮರು ಪ್ರಮುಖರಾಗಿದ್ದಾರೆ. ಕವಿ ರಾಘವಂಕ ರಚಿಸಿದ ಸಿದ್ಧರಾಮ ಚರಿತೆ ಕನ್ನಡದ ಮೊದಲ ಕಾವ್ಯವಾಗಿದೆ. ಇಲ್ಲಿಯವರೆಗೆ ಸಿದ್ಧರಾಮ ಶರಣ ಕುರಿತು ರಾಜ್ಯದ ನಾನಾ ಕಡೆಗಳಲ್ಲಿ 36 ಶಾಸನಗಳು ನಮಗೆ ಲಭಿಸಿವೆ.
  ಕರ್ನಾಟಕದ ಪ್ರಸಿದ್ಧ ರಾಜಮನೆತನವಾದ ನೊಳಂಬ ಅರಸರು ಶಿವಯೋಗಿ ಸಿದ್ಧರಾಮರನ್ನು ರಾಜಗುರುಗಳನ್ನಾಗಿ ಸ್ವೀಕರಿಸಿದ್ದರು. ಸಮಾಜದ ಏಳಿಗೆಗಾಗಿ ಸಮಭಾವದಿಂದ ಶ್ರಮಿಸಿದ ಶಿವಯೋಗಿ ಸಿದ್ಧರಾಮರು ಶಿವಯೋಗದ ಮೂಲಕ ನಿಜವಾದ ಶರಣರಾಗಿದ್ದಾರೆ ಎಂದು ಅವರು ಹೇಳಿದರು.
  ಸಮಾರಂಭವನ್ನು ಉದ್ಘಾಟಿಸಿದ ಸಂಸದರಾದ ಶ್ರೀ ಸುರೇಶ ಅಂಗಡಿ ಅವರು ಮಾತನಾಡಿ, ಸೋನ್ನಲಿಗೆ ಸಿದ್ಧರಾಮರು ಜನೊಪಕಾರಿ ಕಾರ್ಯಗಳಿಗೆ ಹೆಸರಾಗಿದ್ದರು, ತಮ್ಮ ನಿಷ್ಠಾವಂತ ಕಾಯಕದ ಮೂಲಕ ಅವರು ವಿಶಿಷ್ಠವಾಗಿ ಗುರುತಿಸಿಕೊಂಡಿದ್ದರು.
  ಇಂದಿನ ಸಮಾಜಿಕ ಬದಲಾವಣೆಗಾಗಿ ಎಲ್ಲರು ಮಾನಸಿಕವಾಗಿ ಸಿದ್ದಗೊಳಬೇಕಾಗಿದೆ ಇದಕ್ಕೆ ಶಿಕ್ಷಣ ಮೂಲ ಮಂತ್ರವಾಗಿದೆ. ಭೋವಿ ಸಮಾಜದಿಂದ ಕಾಯಕ ಪರಿಣಾಮಿ ಕೆಲಸಗಳಾಗಿವೆ. ಸ್ವಚ್ಛತೆಯಡಿಗೆ ಸಮಾಜ ಹೆಚ್ಚಿನ ಕಾಳಜಿ ವಹಿಸಬೇಕು. ಸರ್ಕಾರ ಸಮಾಜದ ಬಡವರಿಗಾಗಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಲ್ಲರೂ ಜೀವನದ ಉನ್ನತೀಕರಣಕ್ಕೆ ಆದ್ಯತೆ ನೀಡಿ ಬದುಕಬೇಕೆಂದು ಅವರು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಜಿಲ್ಲಾಧಿಕಾರಿ ಶ್ರೀ ಎನ್ ಜಯರಾಮ ಮಾತನಾಡಿ, ವ್ಯಕ್ತಿಯ ಹಿತ ಸಾಧನೆಯೊಂದಿಗೆ ಸಮಾಜದ ಹಿತ ಸಾಧಿಸಬೇಕು. ಶಿಕ್ಷಣ ಮತ್ತು ಸಂಘಟನೆ ಸಮಾಜದ ಉನ್ನತೀಕರಣಕ್ಕೆ ಅಡಿಪಾಯಗಳು ಜಾತಿ, ಧರ್ಮಗಳನ್ನು ಮೀರಿ ಬದುಕಬೇಕು. ಮತ್ತು ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು. ಈ ಹಿನ್ನಲೆಯಲ್ಲಿ ಶಿವಯೋಗಿ ಸಿದ್ಧರಾಮರು ಮಾದರಿಯಾಗಿದ್ದಾರೆ ಎಂದು ಹೇಳಿದರು.
  ಸಮಾರಂಭದ ಸಾನಿಧ್ಯ ವಹಿಸಿದ್ದ, ಶೇಗುಣಸಿ ವಿರಕ್ತಮಠದ ಕಿರಯ ಸ್ವಾಮಿಜಿಗಳಾದ ಶ್ರೀ ಮಹಾಂತ ದೇವರು ಆರ್ಶಿವಚನ ನೀಡಿ, ಸ್ತ್ರೀ ಸಮಾನತೆ ಮಾನ್ಯ ಮಾಡಿದ್ದ ಸಿದ್ಧರಾಮ ಶರಣರು ಸ್ತ್ರೀಯರಿಗೆ ದೇವರ ಸ್ಥಾನವನ್ನು ನೀಡಿದ್ದರು. ಕರ್ಮ ಮತ್ತು ಜ್ಞಾನಯೋಗಿಗಳಾಗಿದ್ದ ಶಿವಯೋಗಿ ಸಿದ್ಧರಾಮ ಶರಣರು ಐತಿಹಾಸಿಕ ವ್ಯಕ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು.
  ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಎಸ್ ಮಮದಾಪೂರ ಮಾತನಾಡಿ, ಸರ್ಕಾರದ ಕ್ರಮಗಳನ್ನು ಸ್ವಾಗತಿಸಿ, ಜನರಿಗೆ ಶಿವಯೋಗಿ ಸಿದ್ಧರಾಮರ ಭಾವಚಿತ್ರಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.ಮತ್ತು ಅವುಗಳನ್ನು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಇಡುವಂತೆ ವಿನಂತಿಸಿದರು.
  ವೇದಿಕೆಯಲ್ಲ್ಲಿ ಬೆಳಗಾವಿ ಉಪವಿಭಾಗಾಧಿಕಾರಿ ಶ್ರೀಮತಿ ರಾಜಶ್ರೀ ಜೈನಾಪೂರ, ತಹಶೀಲ್ದಾರ ಶ್ರೀ ಗಿರೀಶ ಸ್ವಾದಿ, ಪಾಲಿಕೆ ಸದಸ್ಯರಾದ ರವಿ ದೋತ್ರೆ, ಜಯಶ್ರೀ ಮಾಳಗಿ, ಸರಳಾ ಹೆರಳೆಕರ ಉಪಸ್ಥಿತರಿದ್ದರು.
  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕು. ವಿದ್ಯಾವತಿ ಭಜಂತ್ರಿ ಸ್ವಾಗತಿಸಿ, ಉಪವಿಭಾಗಾಧಿಕಾರಿ ಶ್ರೀಮತಿ ರಾಜಶ್ರೀ ಜೈನಾಪೂರ ವಂದಿಸಿದರು. ರಮೇಶ ಗೋಣಿ ನಿರೂಪಿಸಿದರು.
  ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉತ್ಸವದ ಮೆರವಣಿಗೆಗೆ ಸಂಸದರಾದ ಶ್ರೀ ಸುರೇಶ ಅಂಗಡಿ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಮೆರವಣಿಗೆ ಅಶೋಕ ವೃತ್ತದಿಂದ ಆರಂಭವಾಗಿ ಚನ್ನಮ್ಮ ವೃತ್ತ, ಕೋಲಾಪೂರ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರದವರೆಗೆ ಬಂದು ತಲುಪಿತು.

Leave A Reply

 Click this button or press Ctrl+G to toggle between Kannada and English

Your email address will not be published.