ಉತ್ತಮ ಸಮಾಜಕ್ಕಾಗಿ

ಜೇನು ಕೃಷಿ ಉತ್ತೇಜನಕ್ಕೆ ಇನ್ನಷ್ಟು ಕಾರ್ಯಕ್ರಮ ರೂಪಿಸಲು ಸಲಹೆ

0

ಜೇನು ಕೃಷಿ ಉತ್ತೇಜನಕ್ಕೆ ಇನ್ನಷ್ಟು ಕಾರ್ಯಕ್ರಮ ರೂಪಿಸಲು ಸಲಹೆ

ಮಡಿಕೇರಿ : ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ಜಿ.ಪಂ.ಅಧ್ಯಕ್ಷರಾದ ಬಿ.ಎ ಹರೀಶ್ ಅವರ ಅಧ್ಯಕ್ಷತೆಯಲ್ಲಿ ಜಿ.ಪಂ.ಸಾಮಾನ್ಯ ಸಭೆ ನಡೆಯಿತು.

ಜಿ.ಪಂ.ಸದಸ್ಯರಾದ ಪ್ರಥ್ಯು ಅವರು ಮಾತನಾಡಿ ಪೊನ್ನಂಪೇಟೆಯಲ್ಲಿರುವ ಸಾಯಿ ಶಂಕರ ಶಾಲೆಯಲ್ಲಿ ಈಗಾಗಲೇ ಅತಿವೃಷ್ಟಿಯಿಂದ ತೊಂದರೆಗೊಳಗಾದ ಕುಟುಂಬದ 125 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಈ ದಿಸೆಯಲ್ಲಿ ಸಾಯಿ ಶಂಕರ ಶಾಲೆಗೆ ಶಿಕ್ಷಣ ಇಲಾಖೆಯಿಂದ ಅಗತ್ಯ ನೆರವು ನೀಡಲು ಮುಂದಾಗಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಈ ಸಂಬಂಧ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸದಸ್ಯರಾದ ಪ್ರಥ್ಯು ಅವರು ಜಿಲ್ಲೆಯಲ್ಲಿ ಜೇನುಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮೀಸಲಿಟ್ಟಿರುವ ಅನುದಾನದ ಮಾಹಿತಿಯನ್ನು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಿಂದ ಪಡೆದರು.

ಜಿ.ಪಂ.ಸದಸ್ಯರಾದ ಭವ್ಯ ಅವರು ಮಾತನಾಡಿ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಶಾಲೆಗಳ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಿಲ್ಲೆಯಲ್ಲಿ ಇರುವಂತಹ ಸರ್ಕಾರಿ ಶಾಲೆಗಳ ವ್ಯಾಪ್ತಿಯ ಒತ್ತುವರಿಯಾಗಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿ ಜಿಲ್ಲೆಯಲ್ಲಿ ಆರ್‍ಎಂಎಸ್ ಶಾಲಾ ಕಟ್ಟಡಗಳ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಜಿ.ಪಂ.ಸದಸ್ಯರಾದ ವಿಜು ಸುಬ್ರಮಣಿ ಅವರು ಅತಿವೃಷ್ಟಿಯಿಂದ ಉಂಟಾಗಿರುವ ಭತ್ತದ ಬೆಳೆ ಹಾನಿ ಸಂಬಂಧ ಹಾಗೂ ತೆಗೆದುಕೊಂಡಿರುವ ಪರಿಹಾರ ಕ್ರಮಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರಿಗೆ ಭತ್ತಬೆಳೆ ಕೃಷಿ ಉತ್ತೇಜನಕ್ಕೆ ಅಗತ್ಯ ನೆರವು ಹಾಗೂ ಆರ್ಥಿಕ ಸಹಕಾರವನ್ನು ನೀಡಲು ಸಭೆಗೆ ಮನವಿ ಮಾಡಿದರು.

ಜಿ.ಪಂ.ಸದಸ್ಯರಾದ ಮಹೇಶ್ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಹಾಡಿಗಳಲ್ಲಿ ವಾಸಿಸುತ್ತಿರುವ ಜನಗಳಿಗೆ ಮನೆ ಕಟ್ಟಲು ತಕರಾರು ಮಾಡುತ್ತಿದ್ದು, ಹಾಗೂ ಆನೆ ಹಾವಳಿ ತಡೆಗಟ್ಟಲು ವಿಫಲವಾಗಿದ್ದು ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಬೇಕೆಂದು ಸಭೆಯಲ್ಲಿ ತಿಳಿಸಿದರು.

ಜಿ.ಪಂ.ಸದಸ್ಯರಾದ ಶ್ರೀನಿವಾಸ್ ಅವರು ಕುಶಾಲನಗರ ಸಮುದಾಯ ಆಸ್ಪತ್ರೆ ಆವರಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಜಿಲ್ಲೆಯಲ್ಲಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲ್ಲಿ ಖಾಲಿ ಇರುವ ವೈದ್ಯ ಹುದ್ದೆ ನೇಮಕಕ್ಕೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಛತೆಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಮತ್ತು ವೈದ್ಯರ ನೇಮಕಕ್ಕೆ ಅಗತ್ಯ ಕ್ರಮಕೈಗೊಂಡಿರುವುದಾಗಿ ಸಭೆಗೆ ತಿಳಿಸಿದರು.

ಜಿ.ಪಂ.ಸದಸ್ಯರಾದ ಕುಮುದಾ ಧರ್ಮಪ್ಪ ಅವರು ಅತಿವೃಷ್ಟಿಯಿಂದ ಮಾದಾಪುರ ವ್ಯಾಪ್ತಿಯಲ್ಲಿನ ಹಾನಿಯ ಬಗ್ಗೆ ಹಾಗೂ ತೆಗದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ನದಿ ಪಾತ್ರಗಳಲ್ಲಿ ಮನೆ ಕಟ್ಟಲು ಅವಕಾಶವಿರುವುದಿಲ್ಲ ಮತ್ತು ಈ ಸಂಬಂಧ ಪಿಡಿಒ ಗಳಿಗೆ ಸ್ಪಷ್ಟ ನಿರ್ದೇಶನ ನೀಡಿರುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಇತರರು ಇದ್ದರು. ////

The post ಜೇನು ಕೃಷಿ ಉತ್ತೇಜನಕ್ಕೆ ಇನ್ನಷ್ಟು ಕಾರ್ಯಕ್ರಮ ರೂಪಿಸಲು ಸಲಹೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.