ಉತ್ತಮ ಸಮಾಜಕ್ಕಾಗಿ

ತಿಂಗಳಲ್ಲಿ ಬಾಕಿ ಹಣ ಬಿಡುಗಡೆ; ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲು ಸೂಚನೆ

0

ಏತ ನೀರಾವರಿ ಯೋಜನೆ ಪುನಶ್ಚೇತನ: ಸಚಿವ ಸಿ.ಎಸ್. ಪುಟ್ಟರಾಜು

ಬೆಳಗಾವಿ: “ಬೆಳಗಾವಿ ಜಿಲ್ಲೆಯ 33 ಯೋಜನೆಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 183 ಏತ ನೀರಾವರಿ ಯೋಜನೆಗಳು ನಿಷ್ಕ್ರಿಯಗೊಂಡಿದ್ದು, ಇವುಗಳ ಪುನಶ್ಚೇತನಕ್ಕೆ ಅಂದಾಜು 300 ಕೋಟಿ ರೂಪಾಯಿ ಅಗತ್ಯವಿದೆ. ಪುನಶ್ಚೇತನಕ್ಕೆ ಸದ್ಯದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು” ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಸಿ.ಎಸ್. ಪುಟ್ಟರಾಜು ಅವರು ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ(ಸೆ.24) ನಡೆದ ಸಣ್ಣ ನೀರಾವರಿ ಇಲಾಖೆಯ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏತ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ಸರ್ಕಾರ ಅನುಮೋದನೆ ನೀಡಿದ ತಕ್ಷಣ ಮೊದಲ ಹಂತದಲ್ಲಿ ಬೆಳಗಾವಿಯ 33 ಯೋಜನೆಗಳ ಪುನಶ್ಚೇತನಕ್ಕೆ ಅಗತ್ಯವಿರುವ 55 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಕೆರೆ ಪುನರುಜ್ಜೀವನ, ಏತ ನೀರಾವರಿ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಸೇರಿದಂತೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಣಮಟ್ಟ ಕಾಪಾಡುವುದು ಮತ್ತು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಇದಕ್ಕೆ ತಪ್ಪಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಸಚಿವ ಪುಟ್ಟರಾಜು ಎಚ್ಚರಿಕೆ ನೀಡಿದರು.
ರೈತರಿಗೆ ಅನುಕೂಲ ಕಲ್ಪಿಸುವುದು ಇಲಾಖೆಯ ಪ್ರಥಮ ಆದ್ಯತೆಯಾಗಿದೆ. ಆದ್ದರಿಂದ ಆಯಾ ಕ್ಷೇತ್ರದ ಸಂಸದರು/ಶಾಸಕರ ಮಾರ್ಗದರ್ಶನದಲ್ಲಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು; ಅನುದಾನ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಾಕಿ ಹಣ ತಕ್ಷಣ ಬಿಡುಗಡೆ:
ಕೆರೆ ಪುನರುಜ್ಜೀವನ, ಕೆರೆ ಆಧುನೀಕರಣ, ಅಣೆಕಟ್ಟು ನಿರ್ಮಾಣ, ಎಸ್‍ಟಿಪಿ ಸೇರಿದಂತೆ ವಿವಿಧ ಯೋಜನೆಗಳಡಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರ ಬಾಕಿ ಹಣವನ್ನು ಮುಂದಿನ ಒಂದು ತಿಂಗಳೊಳಗೆ ಬಿಡುಗಡೆ ಮಾಡುವುದಾಗಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.

ಎಸ್‍ಸಿಪಿ/ಟಿಎಸ್‍ಪಿ ಕಾಮಗಾರಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ಅನುಮೋದನೆ ನೀಡಲಾಗುವುದು. ಸದರಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಅವರು, ಏತ ನೀರಾವರಿ ಯೋಜನೆಗಳು ನಿಷ್ಕ್ರಿಯಗೊಂಡಿರುವ ಬಗ್ಗೆ ಸಚಿವರ ಗಮನಸೆಳೆದರಲ್ಲದೇ ತಕ್ಷಣ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಏತ ನೀರಾವರಿ ಯೋಜನೆಗಳ ಪುನಶ್ಚೇತನ ಕಾಮಗಾರಿಯನ್ನು ಬೆಳಗಾವಿ ಜಿಲ್ಲೆಯಿಂದಲೇ ಆರಂಭಿಸುವುದಾಗಿ ಭರವಸೆ ನೀಡಿದರು.

ಖಾನಾಪುರ ತಾಲ್ಲೂಕಿನ ಸಾಥನಾಳ ಸೇತುವೆ ಸೇರಿದಂತೆ ಇತರೆ ಐದಾರು ಸೇತುವೆಗಳನ್ನು ತಕ್ಷಣ ನಿರ್ಮಿಸಿಕೊಡಬೇಕು ಎಂದು ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ಸಚಿವರನ್ನು ಒತ್ತಾಯಿಸಿದರು.
ಸೇತುವೆ ಇಲ್ಲದಿರುವುದರಿಂದ ಕಾಡಿನಂಚಿನ ಗ್ರಾಮಸ್ಥರಿಗೆ ರಸ್ತೆ ಸಂಪರ್ಕ ಇಲ್ಲದಂತಾಗಿದ್ದು, ಮಳೆಗಾಲ ಆರಂಭಗೊಂಡರೆ ಹೊರಗಿನ ಸಂಪರ್ಕವೇ ಇಲ್ಲದಂತಾಗುತ್ತದೆ. ಆದ್ದರಿಂದ ಮಳೆಗಾಲ ಆರಂಭಗೊಳ್ಳುವ ಮೊದಲೇ ಸೇತುವೆಯನ್ನು ನಿರ್ಮಿಸಿಕೊಡಬೇಕು ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲೇ ಸಾಥನಾಳ ಮತ್ತಿತರ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕ ಉಮೇಶ ಕತ್ತಿ ಅವರು, ಕೆರೆ ಒತ್ತುವರಿ ತೆರವು ಹಾಗೂ ಕೆರೆ ಅಭಿವೃದ್ಧಿಗಾಗಿ ಭೂಸ್ವಾಧೀನ ಮಾಡಿಕೊಂಡಿದ್ದರೂ ಜಮೀನು ಸಂಪೂರ್ಣವಾಗಿ ಬಳಕೆ ಮಾಡಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ವಿವಿಧ ಕಾಮಗಾರಿಗಳಿಗೆ ರೈತರಿಂದ ಭೂಸ್ವಾಧೀನ ಮಾಡಿಕೊಂಡಿದ್ದರೂ ಇದುವರೆಗೆ ಹಣ ಪಾವತಿಸಿಲ್ಲ ಎಂಬುದನ್ನು ಕೂಡ ಸಭೆಯಲ್ಲಿ ಚರ್ಚಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಪುಟ್ಟರಾಜು ಅವರು, ಯಾವುದೇ ಕಾರಣಕ್ಕೂ ಅನುದಾನದ ನೆಪ ಹೇಳಿ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತಿಲ್ಲ; ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಂಸದ ಸುರೇಶ ಅಂಗಡಿ ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಸಚಿವರ ಗಮನಸೆಳೆದರು.

ಇದಕ್ಕೂ ಮುಂಚೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಅವರು, ಎಸ್‍ಸಿಪಿ/ಟಿಎಸ್‍ಪಿ ಮತ್ತು ನಬಾರ್ಡ ಯೋಜನೆಗಳಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಮುಂಬರುವ ದಿನಗಳಲ್ಲಿ ಕೊಳವೆಬಾವಿ ನಿರ್ಮಿಸಿಕೊಡಲು 4.50 ಲಕ್ಷ ರೂಪಾಯಿ ಘಟಕ ವೆಚ್ಚದಲ್ಲಿ ಡ್ರಿಪ್ ಸಮೇತ ರೈತರಿಗೆ ಸೌಲಭ್ಯ ಒದಗಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವಿವರಿಸಿದರು.
ಕೊಳವೆಬಾವಿ ಕೊರೆದು ವಿದ್ಯುದ್ದೀಕರಣ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಹೆಸ್ಕಾಂ ಜತೆ ಸಮನ್ವಯದೊಂದಿಗೆ ತಕ್ಷಣವೇ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು. ಸಣ್ಣ ನೀರಾವರಿ ಇಲಾಖೆಯ

ಮುಖ್ಯ ಎಂಜಿನಿಯರ್ ಕೆ.ಎಚ್.ರಾಜು ಸಭೆಯನ್ನು ನಿರ್ವಹಿಸಿದರು. ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

The post ತಿಂಗಳಲ್ಲಿ ಬಾಕಿ ಹಣ ಬಿಡುಗಡೆ; ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲು ಸೂಚನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.