ಉತ್ತಮ ಸಮಾಜಕ್ಕಾಗಿ

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರ ಪ್ರಸ್ತಾಪ ಬೆಂಬಲ ಬೆಲೆ: ಹೆಸರು ಖರೀದಿ ಶೀಘ್ರ- ಜಿಲ್ಲಾಧಿಕಾರಿ

0

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರ ಪ್ರಸ್ತಾಪ  ಬೆಂಬಲ ಬೆಲೆ: ಹೆಸರು ಖರೀದಿ ಶೀಘ್ರ- ಜಿಲ್ಲಾಧಿಕಾರಿ

ಬೆಳಗಾವಿ, ಈಗಾಗಲೇ ಬೆಂಬಲ ಬೆಲೆ ನಿಗದಿಪಡಿಸಲಾಗಿರುವ ಹೆಸರು, ಸೋಯಾಬಿನ್ ಹಾಗೂ ಉದ್ದು ಖರೀದಿಯನ್ನು ತಕ್ಷಣ ಆರಂಭಿಸಬೇಕು ಎಂದು ಜಿಲ್ಲೆಯ ಅನೇಕ ಶಾಸಕರು ಪಕ್ಷಭೇದ ಮರೆತು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ(ಅ.6) ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ಶಾಸಕ ಉಮೇಶ್ ಕತ್ತಿ ಅವರು, ಬೆಂಬಲ ಬೆಲೆ ಈಗಾಗಲೇ ನಿಗದಿಪಡಿಸಿದ್ದರೂ ಹೆಸರು ಏಕೆ ಖರೀದಿ ಮಾಡುತ್ತಿಲ್ಲ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಹೆಸರು ಖರೀದಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಈಗಾಗಲೇ ಎಂಟು ಕೇಂದ್ರಗಳನ್ನು ಆರಂಭಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕರೆ ಇನ್ನೆರಡು ದಿನಗಳಲ್ಲಿ ಖರೀದಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ರೀತಿ ಸೋಯಾಬಿನ್ ಹಾಗೂ ಉದ್ದು ಖರೀದಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಶಾಸಕರು ಆಗ್ರಹಿಸಿದರು.

ಶುದ್ಧ ಕುಡಿಯುವ ನೀರು ಘಟಕ:
ಜಿಲ್ಲೆಯಾದ್ಯಂತ ಅನೇಕ ಶುದ್ಧ ಕುಡಿಯುವ ನೀರು ಘಟಕಗಳು ದುಸ್ಥಿತಿಗೆ ತಲುಪಿರುವುದರಿಂದ ಗ್ರಾಮೀಣ ಪ್ರದೇಶ ಜನರಿಗೆ ಕುಡಿಯು ನೀರಿನ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಶಾಸಕರಾದ ದುರ್ಯೋಧನ ಐಹೊಳೆ ಹಾಗೂ ಶ್ರೀಮಂತ ಪಾಟೀಲ ಸಭೆಯಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ದನಿಗೂಡಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳ ತುರ್ತು ದುರಸ್ತಿ ಮತ್ತು ಸುಗಮ ನಿರ್ವಹಣೆಗೆ ಜಿಲ್ಲಾಮಟ್ಟದ ವಿಚಕ್ಷಣ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಮಚಂದ್ರನ್ ಆರ್. ಅವರು, ಈಗಾಗಲೇ ಎಲ್ಲ ಘಟಕಗಳನ್ನು ದುರಸ್ತಿ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಸಹಾಯವಾಣಿಗೆ ದೂರು ಬಂದರೆ ಆದ್ಯತೆಯ ಮೇರೆಗೆ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಲಾಗುವುದು ಎಂದು ವಿವರಿಸಿದರು.
ಮಳೆಯ ನಂತರ ಹೂಳು ಮಿಶ್ರಿತ ನೀರು ಶುದ್ಧ ಕುಡಿಯುವ ನೀರು ಘಟಕಕ್ಕೆ ಸೇರುವುದರಿಂದ ಘಟಕಗಳು ಪದೇ ಪದೇ ಹಾಳಾಗುತ್ತಿರುವುದರಿಂದ ಆಧುನಿಕ ತಂತ್ರಜ್ಞಾನದ ಘಟಕಗಳನ್ನು ಅಳವಡಿಸಿ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಕಂಪನಿಗಳಿಗೆ ವಹಿಸಬೇಕು ಎಂದರು.

ಶಿಥಿಲವಾದ ಆರೋಗ್ಯ ಕೇಂದ್ರ-ಕ್ರಮಕ್ಕೆ ಸೂಚನೆ:
ಖಾನಾಪುರ ತಾಲ್ಲೂಕಿನ ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಶಿಥಿಲಗೊಂಡು ಸೋರುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದರೆ ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

ಆರೋಗ್ಯ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗೆ ಗುತ್ತಿಗೆದಾರರು ಅನೇಕ ತಿಂಗಳುಗಳಿಂದ ಭವಿಷ್ಯನಿಧಿ ಹಾಗೂ ಇಎಸ್‍ಐ ಪಾವತಿಸಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಆರೋಪಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದನ್ನು ಪರಿಶೀಲಿಸಿ ವರದಿ ನೀಡಬೇಕು. ಒಂದು ವೇಳೆ ಭವಿಷ್ಯನಿಧಿ ಕಟ್ಟದೇ ಇದ್ದರೆ ಸಂಬಂಧಪಟ್ಟ ಡಿಡಿಓ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೈಟೆಕ್ ಬಸ್ ನಿಲ್ದಾಣ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಸೂಚನೆ:
ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗಳನ್ನು ಇದೇ ಡಿಸೆಂಬರ್ ಅಂತ್ಯ ದೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ಪ್ರಕಾಶ್ ಹುಕ್ಕೇರಿ ಅವರು ಸೂಚನೆ ನೀಡಿದರು.
ನಿಗದಿತ ನಿಲುಗಡೆ ಇರುವ ಕಡೆಗಳಲ್ಲಿ ಬಸ್ ನಿಲುಗಡೆ ಮಾಡದಿರುವುದರಿಂದ ಹಾಗೂ ಸಮರ್ಪಕ ಬಸ್ ಸಂಚಾರ ಕಲ್ಪಿಸದಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತೀವ್ರ ಅನಾನುಕೂಲ ಆಗುತ್ತಿದೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.

ಪಿಡಿಓ ಗಳಿಗೆ ಷೆಡ್ಯೂಲ್:
ಅನೇಕ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೆಲಸದ ಅವಧಿಯಲ್ಲಿ ಆಯಾ ಪಂಚಾಯತ ಕಚೇರಿಗಳಲ್ಲಿ ಲಭ್ಯವಿರುವುದಿಲ್ಲ. ಇದರಿಂದ ಜನರಿಗೆ ಅನಾನುಕೂಲ ಆಗುತ್ತಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಸಭೆಯ ಗಮನಕ್ಕೆ ತಂದರು.
ಕೆಲ ಪಿಡಿಓ ಗಳು ಎರಡುಮೂರು ಪಂಚಾಯ್ತಿಗಳ ಹೆಚ್ಚುವರಿ ಪ್ರಭಾರ ಹೊಂದಿರುವುದರಿಂದ ಅವರಿಗೆ ಆಯಾ ದಿನದ ಷೆಡ್ಯೂಲ್ ಹಾಕಬೇಕು ಎಂದು ಶಾಸಕ ಪಿ.ರಾಜೀವ್ ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಜಿಪಂ ಸಿಇಓ ರಾಮಚಂದ್ರನ್ ಅವರು, ಪಿಡಿಓ ಗಳಿಗೆ ಷೆಡ್ಯೂಲ್ ಹಾಕುವ ಮೂಲಕ ಆಯಾ ದಿನ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗಡಿಗಳಿಗೆ ಸಿಸಿಟಿವಿ ಕಡ್ಡಾಯ:
ಹೊಸದಾಗಿ ಜಾರಿಗೆ ಬಂದಿರುವ ಕರ್ನಾಟಕ ಸಾರ್ವಜನಿಕರ ಸುರಕ್ಷತೆ ಕಾಯ್ದೆ ಪ್ರಕಾರ ಪ್ರತಿಯೊಂದು ಅಂಗಡಿ-ಮುಂಗಟ್ಟುಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವುದು ಕಡ್ಡಾಯ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ ರೆಡ್ಡಿ ಅವರು ತಿಳಿಸಿದರು.
ಅಂಗಡಿಕಾರರಿಗೆ ಈ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲಾಗುವುದು. ಇದಾದ ಬಳಿಕವೂ ನಿಯಮಾವಳಿ ಪ್ರಕಾರ ಸಿಸಿಟಿವಿ ಅಳವಡಿಸದಿದ್ದರೆ ಅಂಗಡಿ ಜಪ್ತು ಮಾಡಲು ಅವಕಾಶವಿದೆ ಎಂದು ವಿವರಿಸಿದರು.
ಕೆಲವು ಠಾಣೆಗಳಲ್ಲಿ ದೂರು ಕೊಡಲು ಬಂದ ವ್ಯಕ್ತಿಗಳನ್ನೇ ಹೆದರಿಸುವ ಕೆಲಸಗಳಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪಿ.ರಾಜೀವ್ ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ, ಸಭೆಯ ಚರ್ಚಿಸಲಾದ ಎಲ್ಲ ವಿಷಯಗಳು ಹಾಗೂ ಸಮಸ್ಯೆಗಳಿಗೆ ಸಂಬಂದಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮುಂದಿನ ಸಭೆಗೆ ಬರುವಾಗ ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ತರಬೇಕು ಎಂದು ಸೂಚನೆ ನೀಡಿದರು.
ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಶಾಸಕರಾದ ಸತೀಶ್ ಜಾರಕಿಹೊಳಿ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

The post ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರ ಪ್ರಸ್ತಾಪ ಬೆಂಬಲ ಬೆಲೆ: ಹೆಸರು ಖರೀದಿ ಶೀಘ್ರ- ಜಿಲ್ಲಾಧಿಕಾರಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.