ಉತ್ತಮ ಸಮಾಜಕ್ಕಾಗಿ

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕರೆ

0

ಬೆಳಗಾವಿ, ಜನವರಿ ಆಸೆ ಇಟ್ಟುಕೊಂಡು ಮತ್ತೊಬ್ಬರ ದಾಸನಾಗಿ ಬದುಕದೇ ಮನಮೆಚ್ಚಿದಂತೆ ಬದುಕುವ ಮೂಲಕ ಶಿವಶರಣರ ಆಶಯದಂತೆ ವೈಚಾರಿಕ-ವೈಜ್ಞಾನಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹುಕ್ಕೇರಿ ತಾಲ್ಲೂಕು ಬಸವಬೆಳವಿಯ ವಿರಕ್ತಮಠದ ಶರಣಬಸವ ಸ್ವಾಮೀಜಿ ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಶನಿವಾರ(ಜ.21) ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 857ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮೂಢನಂಬಿಕೆ, ಕಂದಾಚಾರ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಅಂಬಿಗರ ಚೌಡಯ್ಯನವರು, ದೇವರ ಕಾಣುವ ನೆಪದಲ್ಲಿ ಕಾಶಿಗೆ ಹೋಗಿ ಸ್ನಾನ ಮಾಡುವವರ ಹಾಗೂ ಅಕ್ರಮ ಸಂಪತ್ತಿನಿಂದ ದೇವರಿಗೆ ಕಾಣಿಕೆ ನೀಡಿ ತೃಪ್ತಿಪಡುವವರಿಗೆ ತಮ್ಮ ವಚನಗಳ ಮೂಲಕವೇ ಛಾಟಿ ಏಟು ನೀಡಿದ್ದಾರೆ ಎಂದು ಹೇಳಿದರು.
ಅಂಬಿಗರ ಚೌಡಯ್ಯನವರ ಅನೇಕ ವಚನಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬರೀ ಜಯಂತಿ ಆಚರಿಸಿದರೆ ಸಾಲದು ಸಮಾಜ ಬಾಂಧವರು ಅಂಬಿಗರ ಚೌಡಯ್ಯನವರ ವಚನಗಳನ್ನು ಅರಿತುಕೊಂಡು ಅವುಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.

ಅಂಬೇಡ್ಕರ್ ಆಶಯ ಈಡೇರಿಲ್ಲ:
ಕಾರ್ಯಕ್ರಮವನ್ನು ಉದ್ಘಾಟಿಸಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು, ‘ಶರಣರು ಹಾಗೂ ನಮ್ಮ ಪೂರ್ವಜರು ಯಾವುದನ್ನು ವಿರೋಧಿಸಿದರೋ ನಾವು ಇಂದು ಅದರ ಪರವಾಗಿ ನಡೆದುಕೊಳ್ಳುತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಣ್ಣನವರ ಆಶಯದಂತೆ ಸಮಾನತೆ ಸಮಾಜ ನಿರ್ಮಿಸಬೇಕಾದರೆ ನಾವು ಅಂಬೇಡ್ಕರ್ ಅವರ ಸಂವಿಧಾನವನ್ನು ಅರಿತುಕೊಂಡಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಬುದ್ಧ-ಬಸವ-ಅಂಬೇಡ್ಕರ್ ಅವರು ನಮ್ಮ ಸಮಾಜಕ್ಕೆ ಆದರ್ಶ ಆಗುವವರೆಗೆ ಸಂಘರ್ಷ ಮುಂದುವರಿಯುತ್ತದೆ ಎಂದು ಅಭಿಪ್ರಾಯಪಟ್ಟ ಸತೀಶ ಜಾರಕಿಹೊಳಿ ಅವರು, ತಿಂಗಳಿಗೆ ಕನಿಷ್ಠ ಒಂದು ವಚನವನ್ನಾದರೂ ಅರಿತುಕೊಂಡರೆ ಅಂಬಿಗರ ಚೌಡಯ್ಯನವರ ಜಯಂತಿ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು, ಸಾಮಾಜಿಕ ಪಿಡುಗಗಳ ವಿರುದ್ಧ ವೈಚಾರಿಕ ಚಳವಳಿ ಹುಟ್ಟುಹಾಕಿದ ಶರಣರಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದಗೌಡ ಸುಣಗಾರ, ತಾಪಂ ಸದಸ್ಯ ಯಲ್ಲಪ್ಪ ಕೋಳೆಕರ, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಗಂಗಾರಾಮ ತಳವಾರ, ಮಹಾನಗರ ಪಾಲಿಕೆ ಸದಸ್ಯರಾದ ಮಧುಶ್ರೀ ಪೂಜಾರಿ, ಸರಳಾ ಹೆರೇಕರ, ಜಯಶ್ರೀ ಮಾಳಗಿ, ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ವಿದುಷಿ ರೋಹಿಣಿ ಗಂಗಾಧರಯ್ಯ ವಚನಗಾಯನ ಪ್ರಸ್ತುತಪಡಿಸಿದರು. ವೈಷ್ಣವಿ ಕುಲಕರ್ಣಿ ನಾಡಗೀತೆ ಹಾಡಿದರು. ಗಂಗಾಮತಸ್ಥ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ನಿರೂಪಿಸಿದರು. ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪುರ ವಂದಿಸಿದರು.

ಭಾವಚಿತ್ರದ ಮೆರವಣಿಗೆ:
ಇದಕ್ಕೂ ಮುಂಚೆ ನಗರದ ಕೋಟೆ ಕೆರೆ ಬಳಿಯ ಅಶೋಕ ವೃತ್ತದಿಂದ ರಂಗಮಂದಿರದವರೆಗೆ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ ಮೆರವಣಿಗೆಗೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಸದಸ್ಯರಾದ ಜಯಶ್ರೀ ಮಾಳಗಿ, ಸರಳಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಅನೇಕ ಕಲಾತಂಡಗಳು, ಸಮಾಜದ ನೂರಾರು ಜನರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: