ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಬಸ್ ನಿಲ್ದಾಣ- 26ರ ನಂತರ ಕಾಮಗಾರಿ ಆರಂಭ: ಸಚಿವ ರಾಮಲಿಂಗಾರೆಡ್ಡಿ

0


ಬೆಳಗಾವಿ, ಜನವರಿ 18 ಬೆಳಗಾವಿ ನಗರದಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಬಸ್‍ನಿಲ್ದಾಣದ ಕಾಮಗಾರಿಯನ್ನು ಇದೇ ಜನವರಿ 26ರ ನಂತರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಬುಧವಾರ(ಜ.18) ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ನಗರದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಜನವರಿ 25ರಂದು ಖಾಲಿ ಮಾಡಿಸಿ ಹಳೆ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗುವುದು. ಮಳಿಗೆಗಳನ್ನು ತೆರವುಗೊಳಿಸಲು ಅಂಗಡಿಕಾರರೂ ಒಪ್ಪಿರುವುದರಿಂದ ಯಾವುದೇ ವಿವಾದಗಳಿಲ್ಲ. ಪೂರ್ವನಿಗದಿಯಂತೆ ಜ.26ರ ನಂತರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.

ಸದಲಗಾ ಬಸ್ ಘಟಕ-ಪ್ರಸ್ತಾವ:
ಸದಲಗಾ ಬಸ್ ಘಟಕ ಆರಂಭಿಸುವಂತೆ ಆ ಭಾಗದ ಶಾಸಕರು ಪ್ರಸ್ತಾವ ಸಲ್ಲಿಸಿದ್ದಾರೆ. ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಇದಲ್ಲದೇ ಯಕ್ಸಂಬಾ ಮತ್ತು ಬೋರಗಾಂವ ಬಸ್‍ನಿಲ್ದಾಣಗಳ ನಿರ್ಮಾಣಕ್ಕೆ ಶಾಸಕರು ಒತ್ತಾಯಿಸಿದ್ದು, ಇದನ್ನು ಪರಿಶೀಲಿಸಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯ ಕಾಗವಾಡ, ಅಂಕಲಗಿ ಸೇರಿದಂತೆ ಅನೇಕ ಕಡೆ ಬಸ್ ನಿಲ್ದಾಣ ಮತ್ತು ಬಸ್ ಘಟಕಗಳ ಕಾಮಗಾರಿ ನಡೆದಿವೆ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ಕೇಂದ್ರ ಹೊಣೆಗಾರಿಕೆ ನಿರ್ವಹಿಸಲಿ:
ಬರಪರಿಹಾರ ಹಾಗೂ ರೈತರ ಸಾಲಮನ್ನಾ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಬರ ಪರಿಹಾರಕ್ಕಾಗಿ 4000 ಕೋಟಿ ರೂಪಾಯಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಕೇವಲ ಒಂದು ಸಾವಿರ ಕೋಟಿ ಮಾತ್ರ ನೀಡಲಾಗಿದೆ” ಎಂದು ವಿವರಿಸಿದರು.
ಬರ ನಿರ್ವಹಣೆ ಮತ್ತು ರೈತರ ಸಾಲಮನ್ನಾ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನಾ ಸಭೆಯ ಬಳಿಕ ಸಚಿವ ರಾಮಲಿಂಗಾರೆಡ್ಡಿ ಅವರು, ಬೆಳಗಾವಿ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನೂತನ ಬಸ್ ನಿಲ್ದಾಣ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು.
ಕಾಮಗಾರಿಯ ಕಾರಣಕ್ಕೆ ತೆರವುಗೊಳಿಸಲಾಗುವ ವಾಣಿಜ್ಯ ಮಳಿಗೆಗಳ ಮಾಲೀಕರು ಪರ್ಯಾಯ ವ್ಯವಸ್ಥೆ ಬಯಸಿದರೆ ತಾತ್ಕಾಲಿಕವಾಗಿ ಅವರಿಗೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಸಾರಿಗೆ ಇಲಾಖೆಯ ಜಂಟಿ ಆಯುಕ್ತರಾದ ಉಮಾಶಂಕರ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಗ್ದುಂ ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.