ಉತ್ತಮ ಸಮಾಜಕ್ಕಾಗಿ

ರಸ್ತೆ, ವೃತ್ತ ಅಥವಾ ಬಡಾವಣೆಗೆ ವಾಲ್ಮೀಕಿ ಹೆಸರಿಡಲು ಒತ್ತಾಯ

0

ರಸ್ತೆ, ವೃತ್ತ ಅಥವಾ ಬಡಾವಣೆಗೆ ವಾಲ್ಮೀಕಿ ಹೆಸರಿಡಲು ಒತ್ತಾಯ ಅ.24ರಂದು ವಾಲ್ಮೀಕಿ ಜಯಂತಿ: ಅದ್ದೂರಿ ಆಚರಣೆ-ಜಿಲ್ಲಾಧಿಕಾರಿ

ಬೆಳಗಾವಿ, ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಇದೇ ಅಕ್ಟೋಬರ್ 24 ರಂದು ಪ್ರತಿವರ್ಷದಂತೆ ಸಡಗರ-ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಅ.9) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂದು ಬೆಳಿಗ್ಗೆ ನಗರದ ಕೋಟೆ ಕೆರೆಯ ಬಳಿಯ ಅಶೋಕ ವೃತ್ತದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಲಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಹೊಂದಿರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಕೃಷಿ, ತೋಟಗಾರಿಕೆ, ಅರಣ್ಯ, ಶಿಕ್ಷಣ, ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ತಬ್ಧಚಿತ್ರ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಮೆರವಣಿಗೆಯು ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಲಿದ್ದು, ಬೆಳಿಗ್ಗೆ 11.30 ಗಂಟೆಗೆ ವೇದಿಕೆ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಮಾರಂಭ ಉದ್ಘಾಟಿಸಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಹೇಳಿದರು.
ರಂಗಮಂದಿರದಲ್ಲಿ ಮುಖ್ಯ ಸಮಾರಂಭ ನಡೆಯುವ ವೇದಿಕೆಗೆ ಶಿಕ್ಷಣಪ್ರೇಮಿ ಹಾಗೂ ಸಮಾಜದ ಮುಖಂಡರಾದ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಹೆಸರು ಇಡಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅದೇ ರೀತಿ ಈ ಬಾರಿ ಕಿತ್ತೂರು ಚನ್ನಮ್ಮ ವೃತ್ತದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಆರಂಭಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಅವರು, ಸರ್ಕಾರದ ವತಿಯಿಂದ ಆಚರಿಸಲಾಗುವ ಎಲ್ಲ ಮಹನೀಯರ ಜಯಂತಿ ಸಂದರ್ಭದಲ್ಲಿ ಕೋಟೆ ಕೆರೆ ಬಳಿಯಿಂದ ಮೆರವಣಿಗೆ ಆರಂಭಿಸಲಾಗುತ್ತಿದ್ದು, ಅದೇ ಸಂಪ್ರದಾಯ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು. ಇದಕ್ಕೆ ಸಮಾಜದ ಜನರು ಸಹಮತ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಭಾಗವಹಿಸುವ ಜನರಿಗೆ ಊಟ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವಂತೆ ಮತ್ತು ಸಮಾಜದ ಐತಿಹಾಸಿಕ ಮತ್ತು ಪೌರಾಣಿಕ ಮಹಾಪುರುಷರ ಭಾವಚಿತ್ರವಿರುವ ಪ್ರಚಾರಸಾಮಗ್ರಿಗಳನ್ನು ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಅಳವಡಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮಹರ್ಷಿ ವಾಲ್ಮೀಕಿ ಜೀವನಚರಿತ್ರೆ, ಸಮಾಜದ ಇತಿಹಾಸ ಮತ್ತು ಪ್ರಸ್ತುತ ಸ್ಥಿಗತಿಯ ಕುರಿತು ಉಪನ್ಯಾಸ ನೀಡಲು ಸಮಾಜದ ಮುಖಂಡರು ಸೂಚಿಸುವ ಸಂಪನ್ಮೂಲ ವ್ಯಕ್ತಿಯನ್ನು ವಿಶೇಷ ಉಪನ್ಯಾಸಕರನ್ನಾಗಿ ಆಹ್ವಾನಿಸಲಾಗುವುದು ಎಂದರು.
ಶಾಲಾ-ಕಾಲೇಜುಗಳಲ್ಲಿ ಸರಳವಾಗಿ ವಾಲ್ಮೀಕಿ ಜಯಂತಿ ಆಚರಿಸಲು ಕ್ರಮ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಮಹರ್ಷಿ ವಾಲ್ಮೀಕಿ ಹೆಸರಿಡಲು ಆಗ್ರಹ:

ಜಿಲ್ಲೆಯ ಪ್ರಮುಖ ಸಮಾಜವಾಗಿರುವ ವಾಲ್ಮೀಕಿ ಸಮಾಜದ ಆಶಯದಂತೆ ಬೆಳಗಾವಿ ನಗರದ ರಸ್ತೆ, ಬಡಾವಣೆ ಅಥವಾ ಪ್ರಮುಖ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ರಾಜಶೇಖರ ತಳವಾರ ಮತ್ತಿತರರು ಒತ್ತಾಯಿಸಿದರು.
ನಿರ್ದಿಷ್ಟ ರಸ್ತೆ, ಬಡಾವಣೆ ಅಥವಾ ವೃತ್ತವನ್ನು ಗುರುತಿಸಿ ಈ ಬಗ್ಗೆ ಮನವಿಪತ್ರ ನೀಡಿದರೆ ನಿಯಮಾವಳಿ ಪ್ರಕಾರ ವಾಲ್ಮೀಕಿ ಹೆಸರಿಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಭರವಸೆ ನೀಡಿದರು.
ವಾಲ್ಮೀಕಿ ಭವನ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಸಮಾಜದ ಜನರು ಜಿಲ್ಲಾಧಿಕಾರಿಗಳ ಗಮಸೆಳೆದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡ ಅವರು, ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಕಳಿಸಲಾಗಿದ್ದ, ಈ ಬಗ್ಗೆ ಕೂಡಲೇ ಚರ್ಚಿಸಿ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಪಾಲಿಕೆ ಆಯುಕ್ತರಾದ ಶಶಿಧರ್ ಕುರೇರ್ ಮತ್ತಿತರ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮಾಜದ ಜನರು ಉಪಸ್ಥಿತರಿದ್ದರು.

The post ರಸ್ತೆ, ವೃತ್ತ ಅಥವಾ ಬಡಾವಣೆಗೆ ವಾಲ್ಮೀಕಿ ಹೆಸರಿಡಲು ಒತ್ತಾಯ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.