ಉತ್ತಮ ಸಮಾಜಕ್ಕಾಗಿ

ರಾಜ್ಯದ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ – ಹೆಚ್.ಡಿ.ಕುಮಾರಸ್ವಾಮಿ

0

ರಾಜ್ಯದ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ – ಹೆಚ್.ಡಿ.ಕುಮಾರಸ್ವಾಮಿ

ಜನರ ಸಮಸ್ಯೆ ಅರಿಯಲು ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Kalaburagi News Kannada

ಕಲಬುರಗಿ : ರಾಜ್ಯದ ರೈತನ ಬದುಕು ಹಸನಾಗಿಸಲು ಕೃಷಿ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಮತ್ತು ಗ್ರಾಮೀಣ ಭಾಗದ ಯುವಸಮೂಹದ ಸಮಸ್ಯೆಗಳನ್ನು ಆಲಿಸಲು ಶೀಘ್ರದಲ್ಲಿಯೇ ರಾಜ್ಯದ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ ನಡೆಸಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

ಅವರು ಸೋಮವಾರ ಕಲಬುರಗಿ ನಗರದ ಹಳೆ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಡೆಸುವ ಈ ಸಭೆಗೆ ರೈತ ಮುಖಂಡರನ್ನು ಆಹ್ವಾನಿಸಿ ರೈತ ಸಮುದಾಯ ಆರ್ಥಿಕವಾಗಿ ಪ್ರಗತಿ ಸಾಧಿಸಲು ಅವರಿಂದಲೂ ಸಹ ಸಲಹೆ ಪಡೆಯಲಾಗುವುದು. ವಿಶೇಷವಾಗಿ ಗ್ರಾಮೀಣ ಭಾಗದ ಯುವ ಸಮುದಾಯದ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಆಲಿಸಲಾಗುವುದು ಎಂದರು.

ಇದನ್ನೂ ಓದಿ >>>ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಜೈಲು ಸಿಎಂ ಖಡಕ್ ಎಚ್ಚರಿಕೆ

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಹೈದ್ರಾಬಾದ್ ಕರ್ನಾಟಕ ಭಾಗ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂಬುದು ಸತ್ಯ. ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕುಗಳು ಈ ಭಾಗದಲ್ಲಿವೆ.

ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಬೇಕೆಂಬ ಮಾತು ಕೇಳಿಬಂದಿದೆ. ಇದು ನನಸಾಗಬೇಕಾದರೆ, ಪ್ರಸಕ್ತ ಸಮ್ಮಿಶ್ರ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಈ ಭಾಗದಲ್ಲಿ ಉದ್ಯೋಗ, ಗ್ರಾಮಗಳ ಅಭಿವೃದ್ಧಿ, ಮಹಿಳೆಯರ ಕಲ್ಯಾಣ, ನೀರಾವರಿ ಯೋಜನೆಗಳು, ಸರ್ವ ಜನಾಂಗದ ಅಭಿವೃದ್ಧಿ ಹೀಗೆ ಪ್ರತಿ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾಗಿ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇತ್ತೀಚೆಗೆ ಕೆಲವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟು ರಾಜ್ಯದ ಅಖಂಡತೆಗೆ ಧಕ್ಕೆ ಉಂಟು ಮಾಡುವ ಕೆಲಸದಲ್ಲಿ ತೊಡಗಿದ್ದರು, ಆದರೆ ಇಲ್ಲಿನ ಜನ ಅದಕ್ಕೆ ಸೊಪ್ಪು ಹಾಕದೆ ಅಖಂಡ ಕರ್ನಾಟಕದಲ್ಲಿ ವಿಶ್ವಾಶವಿಟ್ಟಿರುವುದಕ್ಕೆ ಹೈ.ಕ.ಭಾಗದ ಜನರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.

ಹೈ.ಕ.ಭಾಗದ ಸರ್ವತೋನ್ಮುಖ ಅಭಿವೃದ್ಧಿಗಾಗಿ 371 (ಜೆ) ಜಾರಿಗೆ ತಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ನೀಡಲಾಗುತ್ತಿದೆ. ಪ್ರಸಕ್ತ ವರ್ಷವೂ ಮಂಡಳಿಗೆ 1500 ಕೋಟಿ ರೂ. ನೀಡಿದೆ.

ಇಷ್ಟೊಂದು ಪ್ರಮಾಣದಲ್ಲಿ ಅನುದಾನ ನೀಡಿದರೂ, ನಿಗಧಿತ ಅವಧಿಯಲ್ಲಿ ಹಣ ಖರ್ಚು ಮಾಡದ ಪರಿಣಾಮ ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಆಗುತ್ತಿಲ್ಲ, ಇದಕ್ಕೆ ಸಿಬ್ಬಂದಿಗಳ ಕೊರತೆ ಕಾರಣ ಎಂಬುದು ನನ್ನ ಗಮನಕ್ಕೆ ಬಂದಿದೆ.

ಇದನ್ನೂ ಓದಿ >>> ಹಾಸ್ಟಲ್‌ಗಳಿಗೆ ಗುಣಮಟ್ಟದ ಸೌಲಭ್ಯ ಕಲ್ಪಿಸಿ : ರಾಜೇಂದರ್ ಕುಮಾರ್

ಮುಂದಿನ ದಿನದಲ್ಲಿ ಈ ಭಾಗಕ್ಕೆ ಹಂಚಿಕೆ ಮಾಡಲಾದ ಅನುದಾನ ಸಂಪೂರ್ಣವಾಗಿ ಬಳಸಲು ಚಾಲನೆ ನೀಡುವುದಲ್ಲದೆ ಹೈ.ಕ.ಭಾಗ ಸಮಗ್ರ ಅಭಿವೃದ್ಧಿ ಪಡಿಸುವುದನ್ನು ಸವಾಲಾಗಿ ಸ್ವೀಕರಿಸುತ್ತೇನೆ ಎಂದ ಮುಖ್ಯಮಂತ್ರಿಗಳು ಇನ್ನೆರಡು ದಿನಗಳಲ್ಲಿ ಹೈ.ಕ.ಮಂಡಳಿಗೆ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಅಭಿವೃದ್ಧಿಯಲ್ಲಿ ಹೈ.ಕ. ಭಾಗದ ಹಿನ್ನಡೆಗೆ ಮಾನವ ಸಂಪನ್ಮೂಲ ಕೊರತೆ ಪ್ರಮುಖ ಕಾರಣವಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಇಲ್ಲಿಗೆ ಮುಂಬಡ್ತಿ ಅಥವಾ ವರ್ಗಾವಣೆ ಮಾಡಿದರೂ, ಇಲ್ಲಿಗೆ ಬರಲು ಹಿಂಜರಿಯುತ್ತಿದ್ದು, ಈ ಬಗ್ಗೆ ಗಂಭೀರ ಚಿಂತನೆ ಮಾಡಲಾಗುವುದು.

ಇದಲ್ಲದೆ ಈ ಸಮಸ್ಯೆಯನ್ನು ಕೊನೆಗಾಣಿಸಲು ಸ್ಥಳೀಯವರನ್ನೇ ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.

ಹೈ.ಕ. ಉದ್ಯೋಗ ಮೀಸಲಾತಿಯಲ್ಲಿ ಕೆಲವೊಂದು ಗೊಂದಲಗಳಿದ್ದು, ಅದನ್ನು ಸಹ ಕೂಡಲೆ ನಿವಾರಿಸಲಾಗುವುದು. ಮುಂದಿನ 8-10 ದಿನಗಳಲ್ಲಿ ಮತೊಮ್ಮೆ ಕಲಬುರಗಿಗೆ ಭೇಟಿ ನೀಡಿ ಪ್ರಮುಖ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಹಾಗೂ ಈ ಭಾಗದ ಎಲ್ಲಾ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗುವುದು.

ಇದನ್ನೂ ಓದಿ >>> ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು

ಒಟ್ಟಾರೆ ಹೈದ್ರಾಬಾದ ಕರ್ನಾಟಕದ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು, ಈ ಭಾಗದ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ನುಡಿದರು.

ಇಂದು ಅಫಜಲಪುರ ತಾಲೂಕಿನ ಚೌಡಾಪುರ ಮತ್ತು ಗೊಬ್ಬೂರ (ಬಿ) ಗ್ರಾಮಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಮಳೆಯಿಲ್ಲದ ಕಾರಣ ತೊಗರಿ, ಉದ್ದು ಬೆಳೆಗಳು ನಾಶವಾಗಿದ್ದನ್ನು ಕಂಡಿದ್ದೇನೆ.

ಇತ್ತೀಚೆಗೆ ರಾಜ್ಯದ ದಕ್ಷಿಣ ಭಾಗದಲ್ಲಿ ಸುರಿದ ಅಪಾರ ಮಳೆಯಿಂದ ಅತಿವೃಷ್ಠಿ ಪ್ರದೇಶಗಳಿಗೆ ಎನ್.ಡಿ.ಆರ್.ಎಫ್. ನಿಯಮಾವಳಿಗಳನ್ನು ಬದಿಗೊತ್ತಿ ಮಾನವೀಯತೆಯಿಂದ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಕಲ್ಪಿಸಿದೆ.

ಅದೇ ರೀತಿ ಇಲ್ಲಿನ ಬರಪೀಡಿತ ಪ್ರದೇಶದ ರೈತರಿಗೂ ಪರಿಹಾರ ನೀಡಲಾಗುವುದು. ಈಗಾಗಲೆ ರಾಜ್ಯದ 86 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿ ಪ್ರತಿ ತಾಲೂಕಿಗೆ ಕುಡಿಯುವ ನೀರು ಮತ್ತು ಬರ ಪರಿಹಾರ ಕಾಮಗಾರಿಗೆಂದು 50 ಲಕ್ಷ ರೂ. ಅನುದಾನ ನೀಡಲಾಗಿದೆ.

ಬರ ಹಿನ್ನೆಲೆಯಲ್ಲಿ ರಾಜ್ಯದ ನೆರವಿಗೆ ಧಾವಿಸುವಂತೆ ಪ್ರಧಾನಮಂತ್ರಿಗಳನ್ನು ಮತ್ತು ಕೇಂದ್ರದ ಗೃಹ ಸಚಿವರನ್ನು ಈಗಾಗಲೆ ಕೋರಲಾಗಿದೆ. ರಾಜ್ಯದಲ್ಲಿನ ಅತಿವೃಷ್ಠಿಯಿಂದ ಸುಮಾರು 3000 ಸಾವಿರ ಕೋಟಿ ರೂ. ಮೊತ್ತದ ಅಪಾರ ಆಸ್ತಿ, ಬೆಳೆಗಳು ಹಾನಿಯಾಗಿದ್ದು ಅದನ್ನು ಭರಿಸುವಂತೆ ಹಾಗೂ ತುರ್ತಾಗಿ 1200 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಇದನ್ನೂ ಓದಿ >>> ಮಳೆಗೆ ಕೊಚ್ಚಿಹೋದ ಎಮ್ಮೆ, ಆಮೇಲೆ ಆಗಿದ್ದೇನು ಗೊತ್ತ

ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ತೋಟಗಾರಿಕೆ ಸಚಿವ ಎಂ.ಸಿ.ಮನಗುಳಿ, ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ರಾಜಶೇಖರ ಬಿ.ಪಾಟೀಲ ಸೇರಿದಂತೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ////

WebTitle : ರಾಜ್ಯದ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ – ಹೆಚ್.ಡಿ.ಕುಮಾರಸ್ವಾಮಿ – Janaspandana Meeting in every hobli of the state Says HD Kumaraswamy

>>> ಕರ್ನಾಟಕ ಕನ್ನಡ ನ್ಯೂಸ್ ಗಾಗಿ  ಕ್ಲಿಕ್ಕಿಸಿ ರಾಜಕೀಯ ವಿಭಾಗ  : Karnataka Politics News | Kannada Politics News | Kalaburagi News Online

Kannada Politics News

The post ರಾಜ್ಯದ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ – ಹೆಚ್.ಡಿ.ಕುಮಾರಸ್ವಾಮಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.