ಉತ್ತಮ ಸಮಾಜಕ್ಕಾಗಿ

ರಾಷ್ಟ್ರದ ಅಭಿವೃದ್ಧಿಗೆ ಅಭಿಯಾಂತ್ರಿಕ ನೈಪುಣ್ಯತೆಯ ಅಗತ್ಯವಿದೆ: ಡಾ. ಪ್ರೇಮ ಕೃಷ್ಣ

0


ಬೆಳಗಾವಿ, ಡಿಸೆಂಬರ್ 21 ಭಾರತ ಸರಕಾರ 2022ರೊಳಗೆ ಎಲ್ಲರಿಗೂ ವಸತಿ ಕಲ್ಪಿಸುವ ಗುರಿ ಹೊಂದಿದೆ ಮತ್ತು ರಾಷ್ಟ್ರದ ನೂರು ನಗರಗಳನ್ನು ಸ್ಮಾರ್ಟ ಸಿಟಿಗಳನ್ನಾಗಿ ರೂಪಿಸುವ ಯೋಜನೆ ಜಾರಿಮಾಡಿದೆ ಉತ್ತಮ ರಸ್ತೆ ಸಂಪರ್ಕಜಾಲ, ಉತ್ತಮ ಸಂವಹನ ಜಾಲವನ್ನು ರೂಪಿಸುವಲ್ಲಿ ಅಭಿಯಾಂತ್ರಿಕ ನೈಪುಣ್ಯತೆ ಅಗತ್ಯವಾಗಿದೆ ಎಂದು ರೂರ್ಕಿ ಐಐಟಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರೇಮ ಕೃಷ್ಣ ಹೇಳಿದರು.
ಅವರು ಇಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 16ನೇಯ ವಾರ್ಷಿಕಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ಮೂಲಭೂತ ಸೌಕರ್ಯಗಳನ್ನು ನಾವು ಕಾಣುವ ವಾಸ್ಥವ ಸಮಸ್ಯೆಗಳಾದ ಮನೆ, ನೀರು, ವಿದ್ಯುತ್ ಶಕ್ತಿ, ಆರೋಗ್ಯ ಕಾಳಜಿ, ಆಹಾರ, ರಕ್ಷಣೆಯಂತಹ ಸವಾಲುಗಳಿಗೆ ವೈಜ್ಞಾನಿಕವಾಗಿ ಅಭಿಯಾಂತ್ರಿಕ ಸಹಾಯದಿಂದ ಪರಿಹಾರ ಕಾಣುವ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿ ಸವಾಲುಗಳ ಸಮರ್ಪಕ ನಿರ್ವಹಣೆಗಾಗಿ ವಿಜ್ಞಾನಿಗಳು, ಅಭಿಯಂತರರು ಹಾಗೂ ಯೋಜನಾ ನಿರೂಪಕರು ವಾಸ್ತವಿಕ ನೆಲೆಯಲ್ಲಿ ಪರಿಹಾರಗಳನ್ನು ಗುರುತಿಸಬೇಕಿದೆ ಎಂದು ಅವರು ಹೇಳಿದರು.
ಸೋಲಾರ ಮತ್ತು ಪವನ ಶಕ್ತಿಯೊಂದಿಗೆ ಹೈಡ್ರೋ, ಥರ್ಮಲ ಮತ್ತು ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಸ್ವಚ್ಛ ಭಾರತ ಅಭಿಯಾನ ಮೂಲಕ ಸ್ವಚ್ಚತೆ, ಕಸ ನಿರ್ವಹಣೆ, ಇ- ಬ್ಯಾಂಕಿಂಗ್, ಇ- ವ್ಯವಹಾರ, ಇ- ಆಡಳಿತ ಹೀಗೆ ಉತ್ತಮ ಆಡಳಿತದ ಕ್ರಮವನ್ನು ಉತ್ತೇಜಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಭಿಯಾಂತ್ರಿಕ ತಂತ್ರಜ್ಞಾನದ ಪಾತ್ರ ಮುಖ್ಯವಾಗಿದೆ ಎಂದು ಡಾ. ಪ್ರೇಮ ಕೃಷ್ಣ ತಿಳಿಸಿದರು.
ಹಿಂದೆಂದಿಗಿಂತಲೂ ಗಾಂದಿಜೀಯವರ ತತ್ವಜ್ಞಾನ ಇಂದು ಹೆಚ್ಚು ಪ್ರಸ್ತುತವಾಗಿದೆ. ಇತರರಿಗೆ ಸಹಕಾರ ನೀಡುವುದರೊಂದಿಗೆ ತಮ್ಮಲ್ಲಿ ಪ್ರಗತಿ ಕಾಣಬೇಕು. ಯುವ ಪದವಿದರರು ಶಿಸ್ತು, ಕಠಿಣ ಪರಿಶ್ರಮ ಮತ್ತು ಇತರರನ್ನು ಗುರುತಿಸುವ ಗುಣ ಬೆಳೆಸಿಕೊಂಡರೆ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ. ಮತ್ತು ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.
ಹಿಂದಿನ ಅಭಿಯಾಂತ್ರಿಕ ಶಿಕ್ಷಣಗಿಂತ ಇಂದಿನ ಶಿಕ್ಷಣ ಸಾಕಷ್ಟು ಮುಂದುವರೆದಿದ್ದು, ಅನೇಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಕಡಿಮೆ ಅವಧಿಯಲ್ಲಿ ಯಾವುದೇ ಸವಾಲುಗಳನ್ನು ತಾಂತ್ರಿಕವಾಗಿ ವಿಜ್ಞಾನ ಬಳೆಸಿಕೊಂಡು ಸಮರ್ಪಕವಾದ ಪರಿಹಾರ ಕಾಣುವುದು ಸುಲಭವಾಗಿದೆ. ಯುವ ಪದವಿದರರು ಹೆಚ್ಚು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕೆಂದು ಪ್ರೇಮಕೃಷ್ಣ ಕರೆ ನೀಡಿದರು.
ಘಟಿಕೋತ್ಸವದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಶ್ರೀ ಬಸವರಾಜ ರಾಯರೆಡ್ಡಿ, ಈ ವರ್ಷದ 16ನೆ ಘಟಿಕೋತ್ಸವದಲ್ಲಿ ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 70 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಮತ್ತು 78ಜನ ಪದವಿದರರಿಗೆ ಪಿಎಚ್‍ಡಿ ಪದವಿ ನೀಡಲಾಗಿದೆ. ರಾಜ್ಯದಲ್ಲಿ 217 ತಾಂತ್ರಿಕ ಮಹಾವಿದ್ಯಾಲಯಗಳಿವೆ. ಪ್ರತಿ ವರ್ಷ 4.50 ಸಾವಿರ ಪದವಿ ಹಾಗೂ 12 ಸಾವಿರ ಸ್ನಾತಕೋತ್ತರ ಪದವಿದರರು ಬರುತ್ತಾರೆ. ರಾಜ್ಯ ಸರಕಾರ ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಿದ್ದು, ಕರ್ನಾಟಕದಿಂದ ಪ್ರತಿವರ್ಷ 15 ಸಾವಿರ ಇಂಜನಿಯರ್ ಪದವಿಧರರು ಹೊರ ಬರುತ್ತಿದ್ದು ಕೇವಲ ಶೇಕಡಾ 15 ರಿಂದ 20ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಅವರು ಹೇಳಿದರು.
ಮುಂಬರುವ ದಿನಗಳಲ್ಲಿ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಕೌಶಲ್ಯ ವಿಶ್ವವಿದ್ಯಾಲಯವನ್ನು ಕರ್ನಾಟದಲ್ಲಿ ಆರಂಭಿಸಲು ಸರಕಾರದಲ್ಲಿ ಚಿಂತನೆ ನಡೆದಿದೆ. ಆದಷ್ಟು ಶೀಘ್ರದಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಆ ಮೂಲಕ ಯಾವುದೇ ಪದವಿದರರು ಕೌಶಲ್ಯಯುತರಾಗಿ ರೂಪಗೊಳ್ಳುವಂತೆ ಮತ್ತು ಉದ್ಯೋಗ ಹೊಂದುವಂತೆ ಮಾಡಲಾಗುವುದು. ಬಾಬಾ ಸಾಹೇಬ ಅಂಬೇಡ್ಕರರ 125ನೇ ಜಯಂತಿ ನಿಮಿತ್ಯವಾಗಿ ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದ 44 ಎಕರೆ ವಿಸ್ತಿರ್ಣದಲ್ಲಿ ಲಂಡನಿನ ಸ್ಕೂಲ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ “ ಡಾ. ಬಾಬಾಸಾಹೇಬ ಅಂಬೇಡ್ಕರ ಸ್ಕೂಲ್ ಆಫ್ ಎಕನಾಮಿಕ್ಸ್” ಶಾಲೆಯನ್ನು ಆರಂಭಿಸಲಾಗುತ್ತಿದೆ. ಮುಂದಿನ ವಾರ ಜರುಗುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗಲಿದ್ದು, ಶೀಘ್ರದಲ್ಲಿಯೇ ಕಾರ್ಯರಂಭ ಮಾಡಲಿದೆ ಎಂದು ಸಚಿವರು ತಿಳಿಸಿದರು.
2015-16ನೆ ಸಾಲಿಗೆ ರಾಷ್ಟ್ರ ಗಳಿಸಿರುವ 6 ಲಕ್ಷ ಕೋಟಿ ವಿದೇಶಿ ವಿನಿಮಯದಲ್ಲಿ ಕರ್ನಾಟಕದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಬಹುಪಾಲು ಆದಾಯ ಗಳಿಸಿದೆ. ಸರಕಾರ ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ದೃಷ್ಠಿಯಿಂದ ಮಹಿಳೆಯರಿಗೆ ಸ್ನಾತಕೋತ್ತರ ಶಿಕ್ಷಣದವರೆಗೂ ಉಚಿತ ಶಿಕ್ಷಣವನ್ನು ನೀಡುವ ಚಿಂತನೆಯನ್ನು ಸರಕಾರ ನಡೆಸಿದೆ. ಉದ್ಯೋಗ ಆದಾರಿತ ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡುತ್ತಿದ್ದು, ರಾಜ್ಯದ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮರನ್ನು ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಿಸಲು ಸರಕಾರ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸುತ್ತಿದೆ ಎಂದು ಸಚಿವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯದೆಡೆ ವ್ಯಾಪಿಸಿ ಉತ್ತಮ ಕೆಲಸ ಮಾಡುತ್ತಿದೆ. ಸರಕಾರ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಲಿದೆ. ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಇನ್ನೊಂದು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಗತ್ಯವಿದ್ದು, ಶೀಘ್ರದಲ್ಲಿ ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ವಾಜುಭಾಯಿ ಆರ್ ವಾಲಾ ಅವರು ಅಧ್ಯಕ್ಷತೆ ವಹಿಸಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿದರರಿಗೆ ಚಿನ್ನದ ಪದಕ, ಪ್ರಮಾಣ ಪತ್ರಗಳನ್ನು ವಿತರಿಸಿದರು. ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಸ್ವಾಗತಿಸಿ ಅತಿಥಿ ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕುಲಸಚಿವ ಡಾ. ಎಚ್.ಎನ್.ಜಗನ್ನಾಥ ರೆಡ್ಡಿ, ಮೌಲ್ಯಮಾಪನ ಕುಲಸಚಿವ ಡಾ. ಸತೀಶ ಅಣ್ಣಿಗೇರಿ, ಡಿನ್‍ರಾ ಡಾ. ನಾಗರಾಜ ಹಾಗೂ ಸಿಂಡಿಕೆಟ್, ಅಕ್ಯಾಡೆಮಿಕ ಸದಸ್ಯರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.