ಉತ್ತಮ ಸಮಾಜಕ್ಕಾಗಿ

ಸಾಲ ಮನ್ನಾ – ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ

0

ಸಾಲ ಮನ್ನಾ – ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ

ಮಡಿಕೇರಿ : ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಧಾರಾಕಾರ ಮಹಾಮಳೆಗೆ ಕೊಡಗು ಜಿಲ್ಲೆ ತತ್ತರಿಸಿ ಹೋಗಿತ್ತು, ಪ್ರಕೃತಿ ವಿಕೋಪ ಹಾಗೂ ಪ್ರವಾಹ ಉಂಟಾಗಿ ಜನಜೀವನವೇ ಅಸ್ತವ್ಯಸ್ತ ಉಂಟಾಗಿತ್ತು, ಇದರಿಂದ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಆದ್ದರಿಂದ ಜಿಲ್ಲೆಯ ಎಲ್ಲಾ ಜನರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿ.ಪಂ.ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಈ ಕುರಿತು ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಜಿ.ಪಂ.ಸದಸ್ಯರಾದ ಬಾನಂಡ ಪ್ರಥ್ಯು ಅವರು ಪ್ರಕೃತಿ ವಿಕೋಪದಿಂದಾಗಿ ಮನೆ, ಬೆಳೆ ಕಳೆದುಕೊಂಡಿದ್ದಾರೆ. ಅತಿವೃಷ್ಟಿಗೆ ಸಿಲುಕಿ ಹಲವರು ಮೃತಪಟ್ಟಿದ್ದಾರೆ. ಕೆಲವು ಕುಟುಂಬಗಳು ಊರು ಬಿಟ್ಟು ಹೋಗಿದ್ದಾರೆ. ಆದ್ದರಿಂದ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಜಿಲ್ಲೆಯ ಎಲ್ಲಾ ಜನರ ಸಂಪೂರ್ಣ ಸಾಲ ಮನ್ನಾ ಮಾಡುವಂತಾಗಬೇಕು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಈ ಕುರಿತು ಮಾತನಾಡಿದ ಜಿ.ಪಂ.ಅಧ್ಯಕ್ಷರಾದ ಬಿ.ಹರೀಶ್ ಅವರು ಪ್ರಕೃತಿ ವಿಕೋಪದಿಂದ ಜಿ.ಪಂ.ವ್ಯಾಪ್ತಿಯಲ್ಲಿ ಮನೆ, ರಸ್ತೆ, ಬೆಳೆ ಹಾನಿ ಹೀಗೆ ಹಲವು ರೀತಿಯಲ್ಲಿ ಅಪಾರ ಪ್ರಮಾಣ ನಷ್ಟ ಉಂಟಾಗಿದ್ದು, ಜಿ.ಪಂ.ಗೆ 300 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸದಸ್ಯರಾದ ಯಾಲದಾಳು ಪದ್ಮಾವತಿ ಅವರು ಮಾತನಾಡಿ ಮಕ್ಕಂದೂರು, ಗಾಳಿಬೀಡು, ಮದೆ ಗ್ರಾ.ಪಂ.ಗಳಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಕೇವಲ 3800 ರೂ. ಚೆಕ್ ವಿತರಿಸಲಾಗಿದೆ. ಆದ್ದರಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಸದಸ್ಯರಾದ ಸರಿತಾ ಪೂಣಚ್ಚ ಅವರು ಮಾತನಾಡಿ ಸಿದ್ದಾಪುರ, ಗುಹ್ಯ ಮತ್ತಿತರ ಭಾಗಗಳಲ್ಲಿ ಕಾವೇರಿ ನದಿ ದಡದಲ್ಲಿ ಹಲವು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಇವರನ್ನು ಸ್ಥಳಾಂತರ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸೂಕ್ತ ನೆಲೆ ಕಲ್ಪಿಸಬೇಕಿದೆ ಎಂದು ಅವರು ಕೋರಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ಮಾತನಾಡಿ ನದಿ ದಡದಲ್ಲಿ ವಾಸಿಸುವ ಎಲ್ಲರನ್ನೂ ಸ್ಥಳಾಂತರ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ನದಿ ದಡದಲ್ಲಿ ಯಾರೂ ಸಹ ಮನೆ ಕಟ್ಟದಂತೆ ಎಚ್ಚರಿಕೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಸದಸ್ಯರಾದ ಲತೀಪ್ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದಾಗಿ ರಾಜ್ಯದ ನಾನಾ ಭಾಗಗಳಿಂದ ಆಹಾರ ಪದಾರ್ಥ ಸೇರಿದಂತೆ ಇತರ ಪದಾರ್ಥಗಳು ಹರಿದು ಬಂದವು, ಆದರೆ ಆಹಾರ ಪದಾರ್ಥಗಳನ್ನು ಕೆಲವರು ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ, ಜೊತೆಗೆ ಗೋದಾಮುಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯರಾದ ಮಂಜುಳಾ ಅವರು ಯಾರೂ ಸಹ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಎಲ್ಲವೂ ಸಮರ್ಪಕವಾಗಿ ವಿತರಣೆಯಾಗಿದೆ ಎಂದು ಅವರು ಹೇಳಿದರು.
ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ, ಸದಸ್ಯರಾದ ಲತೀಪ್ ಇತರರು ನಿರಾಶ್ರಿತರಿಗೆ ಸ್ಪಂದಿಸುವಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಿದ್ದಾರೆ ಎಂದು ಜಿ.ಪಂ. ಸದಸ್ಯರಾದ ಸರಿತಾ ಪೂಣಚ್ಚ ಅವರು ಅಭಿನಂದನೆ ಸಲ್ಲಿಸಿದರು.

ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಕೊಡಗಿನ ಜನರು ಇನ್ನೂ ಹೊರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಅದ್ದೂರಿ ದಸರಾ ಆಚರಣೆ ಸೂಕ್ತವೇ? ಈ ಬಗ್ಗೆ ಚರ್ಚೆಗಳು ನಡೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಜಿ.ಪಂ. ಸದಸ್ಯರು ಒತ್ತಾಯಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕಾರ್ಯಪ್ಪ ಅವರು ಮಾತನಾಡಿ ಪೊನ್ನಂಪೇಟೆ ಕ್ರೀಡಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು, ಪೋಷಕರ ಸಭೆ ನಡೆಸಲಾಗಿದ್ದು, ಸ್ಥಳೀಯ ಇಬ್ಬರು ಕ್ರೀಡಾ ತರಬೇತಿದಾರರು ಮತ್ತು ಒಬ್ಬ ನಿಲಯ ಮೇಲ್ವಿಚಾರಕರನ್ನು ನಿಯೋಜಿಸಬೇಕಿದೆ ಎಂದು ಅವರು ಸಲಹೆ ಮಾಡಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.

ಸಲಹಾ ಸಮಿತಿ ರಚನೆ ಮಾಡಬೇಕಿದೆ. ಕ್ರೀಡಾ ಶಾಲೆಯ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ನಂದೀಶ್ ಅವರು ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಪೋಷಕರ ಸಭೆ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಸದಸ್ಯರಾದ ವಿಜು ಸುಬ್ರಮಣಿ ಅವರು ಮಾತನಾಡಿ ಸ್ಥಳೀಯ ಕ್ರೀಡಾ ತರಬೇತಿದಾರರನ್ನು ನಿಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಒಂದು ವಾರದಿಂದ ನಿಲಯ ಮೇಲ್ವಿಚಾರಕರು ವಿದ್ಯಾರ್ಥಿ ನಿಲಯದಲ್ಲಿ ಇಲ್ಲದೆ ಮಕ್ಕಳು ಹೊಡೆದಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

‘ಸರಿತಾ ಪೂಣಚ್ಚ ಅವರು ಮಾತನಾಡಿ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯವನ್ನು ಸರಿಪಡಿಸುವ ಕಾರ್ಯವಾಗಬೇಕು. ನಿಲಯ ಮೇಲ್ವಿಚಾರಕರನ್ನು ತಕ್ಷಣವೇ ನಿಯೋಜಿಸುವಂತಾಗಬೇಕು. ಆ ನಿಟ್ಟಿನಲ್ಲಿ ಗೌರವ ಧನವನ್ನು ನಾನು ನೀಡಲು ಸಿದ್ಧ ಎಂದು ಅವರು ತಿಳಿಸಿದರು.’

ಜಿಲ್ಲೆಯ ಪೊನ್ನಂಪೇಟೆ, ಗೋಣಿಕೊಪ್ಪ, ಸಿದ್ದಾಪುರ, ನೆಲ್ಲಿಹುದಿಕೇರಿ ಮತ್ತಿತರ ಕಡೆಗಳಲ್ಲಿ ಕಸ ವಿಲೇವಾರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳ ಗುರುತು ಮಾಡಬೇಕು ಎಂದು ಎಂ.ಕೆ.ಸುಬ್ರಮಣಿ ಅವರು ಕೋರಿದರು.

ಕೇರಳ ರಾಜ್ಯದಲ್ಲಿಯೂ ಸಹ ಪ್ರಕೃತಿ ವಿಕೋಪ ಉಂಟಾಗಿತ್ತು, ಸಾಂಕ್ರಾಮಿಕ ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಸುಬ್ರಮಣಿ ಅವರು ಸಲಹೆ ಮಾಡಿದರು.

ಸಿ.ಕೆ.ಬೋಪಣ್ಣ ಅವರು ಮಾತನಾಡಿ ಗೋಣಿಕೊಪ್ಪದಲ್ಲಿ ಕಸವಿಲೇವಾರಿಗೆ ಜಾಗವಿಲ್ಲ. ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ನುಡಿದರು.

ಸದಸ್ಯರಾದ ವಿಜು ಸುಬ್ರಮಣಿ ಮತ್ತು ಸುನಿತಾ ಅವರು ಮಾತನಾಡಿ ಕಸ ವಿಲೇವಾರಿ ಘಟಕ ಸ್ಥಾಪಿಸುವಂತಾಗಬೇಕು. ಸಿಸಿಟಿವಿ ಅಳವಡಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಕವಿತಾ ಪ್ರಭಾಕರ್ ಅವರು ಮಾತನಾಡಿ ಭಾಗಮಂಡಲ ಬಳಿಯ ತಣ್ಣಿಮಾನಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು, ಆದರೆ ಹಲವು ಸಮಸ್ಯೆಗಳಿಂದಾಗಿ ಕಸ ವಿಲೇವಾರಿಗೆ ಅವಕಾಶ ಮಾಡುತ್ತಿಲ್ಲ. ಇದರಿಂದ ಆಸ್ಪತ್ರೆ ಬಳಿ ಕಸ ಸುರಿಯುತಿದ್ದು, ಪರಿಸರ ಅಶುಚಿತ್ವ ಆಗುತ್ತಿದೆ ಎಂದು ಅವರು ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಹಲವು ಕಡೆಗಳಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗ ಸಿಗುತ್ತಿಲ್ಲ. ಜಾಗ ಗುರುತು ಮಾಡಿದರೂ ಸಹ ಹಲವು ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ಹೇಳಿದರು.

ಸದಸ್ಯರಾದ ಮುರಳಿ ಕರುಂಬಮ್ಮಯ್ಯ ಅವರು ಮಾತನಾಡಿ ಕೊಡವ ಹೆರಿಟೇಜ್ ಕಟ್ಟಡ ಇನ್ನೂ ಸಹ ಪೂರ್ಣಗೊಂಡಿಲ್ಲ. ಆದರೂ ಸಹ ಹಳೇ ಮಾಹಿತಿಯನ್ನೇ ಅನುಪಾಲನಾ ವರದಿಯಲ್ಲಿ ನೀಡುತ್ತಿದ್ದಾರೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಕೊಡವ ಹೆರಿಟೇಜ್ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎಷ್ಟು ತಿಂಗಳು ಬೇಕು ಎಂದು ಅವರು ಮಾಹಿತಿ ಕೇಳಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಅವರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಟೆಂಡರ್‍ದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಹೊಸ ಏಜೆನ್ಸಿಯಿಂದ ಕಾಮಗಾರಿ ನಿರ್ವಹಿಸಲಾಗುವುದು ಎಂದು ಅವರು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅನುಪಾಲನಾ ವರದಿ ನೀಡುವಾಗ ನಿಖರ ಮಾಹಿತಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮಸಭೆಗೆ ನೋಡೆಲ್ ಅಧಿಕಾರಿಗಳೇ ಹಾಜರಾಗುವುದಿಲ್ಲ. ಇನ್ನೂ ಗ್ರಾಮ ಸಭೆಗಳು ಗಂಭೀರವಾಗಿ ನಡೆಯುವುದಾದರೂ ಹೇಗೆ ಎಂದು ಬಾನಂಡ ಪ್ರಥ್ಯು ಅವರು ಪ್ರಶ್ನಿಸಿದರು. ಗ್ರಾಮಸಭೆಗೆ ನೋಡಲ್ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಬರದಿದ್ದಲ್ಲಿ ತಕ್ಷಣವೇ ನನ್ನ ಗಮನಕ್ಕೆ ತರುವಂತೆ ತಾ.ಪಂ.ಇಒಗಳಿಗೆ ನಿರ್ದೇಶನ ನೀಡಿದರು.

ಸದಸ್ಯರಾದ ಪಂಕಜ ಅವರು ಗ್ರಾಮಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಬೇಕು. ಗ್ರಾಮಸಭೆಯಲ್ಲಿ ಯಾರೆಲ್ಲ ಪಾಲ್ಗೊಳ್ಳಬೇಕು ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸುವಂತೆ ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಜನರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ದೀನ್ ದಯಾಳ್ ಉಪಾಧ್ಯಾಯ ಹಾಗೂ ಸೌಭಾಗ್ಯ ಯೋಜನೆಯಡಿ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಇಲಾಖೆ ಎಂಜಿನಿಯರ್‍ಗಳಿಗೆ ಜಿ.ಪಂ.ಅಧ್ಯಕ್ಷರಾದ ಬಿ.ಎ. ಹರೀಶ್ ಅವರು ತಿಳಿಸಿದರು.
ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರೋಜಮ್ಮ, ಸದಸ್ಯರಾದ ಎಚ್.ಆರ್.ಶ್ರೀನಿವಾಸ್, ಭವ್ಯ, ಅಚ್ಚಪಂಡ ಮಹೇಶ್, ಸಿ.ಪಿ.ಪುಟ್ಟರಾಜು, ಎಂ.ಬಿ.ಸುನಿತಾ, ಕುಮುದ ಧರ್ಮಪ್ಪ, ಬಿ.ಜೆ.ದೀಪಕ್ ಇತರರು ಹಲವು ವಿಚಾರಗಳ ಕುರಿತು ವಿಷಯ ಪ್ರಸ್ತಾಪಿಸಿ ಗಮನ ಸೆಳೆದರು.////

The post ಸಾಲ ಮನ್ನಾ – ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.