ಉತ್ತಮ ಸಮಾಜಕ್ಕಾಗಿ

ಸಿದ್ದಿ ಜನಾಂಗ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ : ಎಸ್‌ಟಿ ಆಯೋಗದ ಭರವಸೆ

0

ಸಿದ್ದಿ ಜನಾಂಗ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ : ಎಸ್‌ಟಿ ಆಯೋಗದ ಭರವಸೆ

ಬೆಳಗಾವಿ : ಜಿಲ್ಲೆಯಲ್ಲಿ ವಾಸಿಸುವ ಸಿದ್ದಿ ಜನಾಂಗದ ಜನರಿಗೆ ಪರಿಶಿಷ್ಟ ವರ್ಗಗಳ ಜಾತಿ ಪ್ರಮಾಣಪತ್ರ ನೀಡುವುದಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರು ಬುಧವಾರ (ಸೆ.೧೯) ಜಿಲ್ಲೆಗೆ ಭೇಟಿ ನೀಡಿ ಸಿದ್ದಿ ಜನಾಂಗದ ಸಾಮಾಜಿಕ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಆಯೋಗದ ಸದಸ್ಯರಾದ ಶ್ರೀಮತಿ ಮಾಯಾ ಹಾಗೂ ಹರ್ಷದ್‌ಭಾಯಿ ಚುನಿಲಾಲ್ ಅವರು, ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲಾಡಳಿತದಿಂದ ಸಿದ್ದಿ ಜನಾಂಗದ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದುಕೊಂಡು ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಸಿದ್ದಿ ಜನಾಂಗದ ಜನರನ್ನು ಭೇಟಿ ಮಾಡಿದರು.

ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮದಲ್ಲಿ ಸಿದ್ದಿ ಜನಾಂಗದ ಜನರ ಸಭೆ ನಡೆಸಿದ ಆಯೋಗದ ಸದಸ್ಯರು, ಸಿದ್ದಿ ಜನಾಂಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ನೇರವಾಗಿ ಅವರಿಂದಲೇ ಮಾಹಿತಿಯನ್ನು ಸಂಗ್ರಹಿಸಿದರು.

ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೆ ಮನವಿ :

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಿ ಜನಾಂಗದ ಜನರು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕು ವ್ಯಾಪ್ತಿಯಲ್ಲಿರುವ ಸಿದ್ದಿ ಜನಾಂಗದವರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಲಾಗುತ್ತಿದ್ದು, ಅದೇ ರೀತಿ ತಮ್ಮನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಸಿದ್ದಿ ಜನಾಂಗದ ಜನರು ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಈ ಮೂರೂ ಧರ್ಮಗಳಲ್ಲಿ ಗುರುತಿಸಿಕೊಂಡಿದ್ದು, ಉ.ಕ.ಜಿಲ್ಲೆಯ ಜನರೊಂದಿಗೆ ಕೌಟುಂಬಿಕ ಸಂಬಂಧ(ನೆಂಟಸ್ತಿಕೆ) ಕೂಡ ಹೊಂದಿದ್ದಾರೆ. ಆದ್ದರಿಂದ ಅಲ್ಲಿ ನೀಡಿರುವಂತೆ ತಮಗೂ ಪರಿಶಿಷ್ಟ ವರ್ಗದ ಜಾತಿ ಪ್ರಮಾಣಪತ್ರ ನೀಡಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಬೇಕು. ಇದರಿಂದ ಜನಾಂಗದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಆಯೋಗದ ಸದಸ್ಯರ ಎದುರು ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಆಯೋಗದ ಸದಸ್ಯರು, ಸಿದ್ದಿ ಜನಾಂಗದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಕೂಲಂಕುಶವಾಗಿ ಅಧ್ಯಯನ ನಡೆಸಿ, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕಿ ಡಾ.ಅಂಜಲಿ ನಿಂಬಾಳಕರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್., ಆಯೋಗದ ಉಪ ಕಾರ್ಯದರ್ಶಿ ಜೇಮ್ಸ್ ಕುಟ್ಟಿ, ಖಾನಾಪುರ ತಹಶೀಲ್ದಾರ ಶಿವಾನಂದ ಉಳ್ಳೆಗಡ್ಡಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿ ಸದಾಶಿವ ಬಡಿಗೇರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆಯೋಗದ ಸದಸ್ಯರು ನಂತರ ಖಾನಾಪುರ ತಾಲ್ಲೂಕಿನ ಗೋಧೂಳಿ ಮತ್ತು ತಾವರಗಟ್ಟಿ ಗ್ರಾಮದಲ್ಲಿರುವ ಸಿದ್ದಿ ಜನಾಂಗದ ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿದ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರು, ಸಿದ್ದಿ ಜನಾಂಗದ ಕುರಿತು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು, ಜಿಲ್ಲೆಯಲ್ಲಿರುವ ಸಿದ್ದಿ ಜನಾಂಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ಪರಿಗಣಿಸಿ ಅವರನ್ನು ಪರಿಶಿಷ್ಟ ವರ್ಗಗಳಿಗೆ ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೂರಣಕಿಯಲ್ಲಿ ೨೨ ಕುಟುಂಬಗಳು, ಗೋಧೂಳಿ ಗ್ರಾಮ ಪಂಚಾಯ್ತಿಯ ಗೋಧೂಳಿ ಗ್ರಾಮದಲ್ಲಿ ೬, ನಾಗರಗಾಳಿ ಗ್ರಾಪಂ ವ್ಯಾಪ್ತಿಯ ತಾವರಗಟ್ಟಿ ಗ್ರಾಮದಲ್ಲಿ ೪, ನಿಟ್ಟೂರ ಗ್ರಾಪಂ ವ್ಯಾಪ್ತಿಯ ಗಣೆಬೈಲ್ ಗ್ರಾಮದಲ್ಲಿ ೨ ಹಾಗೂ ಬಸ್ತವಾಡದಲ್ಲಿ ೧ ಕುಟುಂಬ ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು ವಾಸಿಸುತ್ತಿದ್ದು, ಒಟ್ಟಾರೆ ಜನಸಂಖ್ಯೆ ೪೬೦ರಷ್ಟಿದೆ ಎಂದು ವಿವರಿಸಿದರು.

ಆಯೋಗದ ಸದಸ್ಯರಾದ ಶ್ರೀಮತಿ ಮಾಯಾ, ಹರ್ಷದ್‌ಭಾಯಿ ಚುನಿಲಾಲ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಆಯೋಗದ ಉಪ ಕಾರ್ಯದರ್ಶಿ ಜೇಮ್ಸ್ ಕುಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ////

The post ಸಿದ್ದಿ ಜನಾಂಗ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ : ಎಸ್‌ಟಿ ಆಯೋಗದ ಭರವಸೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.