ಉತ್ತಮ ಸಮಾಜಕ್ಕಾಗಿ

ಮೂಢ ಸಂಪ್ರದಾಯಗಳಾಚೆ ಹೊರಬನ್ನಿ: ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಕರೆ

news belagavi

0

ಬೆಳಗಾವಿ:(news belgaum) ಅಂದಿನ ಕಾಲಕ್ಕೆ ಪ್ರಸ್ತುತವಿದ್ದ ಸಂಪ್ರದಾಯಗಳಿಗೆ ಜೋತು ಬೀಳದೆ, ವಾಸ್ತವ ವರ್ತಮಾನಕ್ಕೆ ಅನುಗುಣವಾಗಿ ಲಭ್ಯ ಸಂಪನ್ಮೂಲಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಾನಗರ ಪೋಲಿಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಅಭಿಪ್ರಾಯ ಪಟ್ಟರು. ಬಸವಣ್ಣನವರ ಲಿಂಗೈಕ್ಯ ದಿನವಾದ ಬಸವ ಪಂಚಮಿಯ ನಿಮಿತ್ತ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ನಗರದ ಶ್ರೀ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪಂಚಮಿಯ ದಿನದಂದು ಹುತ್ತಕ್ಕೆ ಮತ್ತು ಕಲ್ಲು ನಾಗರಕಟ್ಟೆಗೆ ಹಾಲುಣಿಸದೆ ಮಕ್ಕಳಿಗೆ ಹಾಲು ಕುಡಿಸುವ ಪದ್ಧತಿ ಜಾರಿಯಾಗಬೇಕು ಎಂದರು. ಹುತ್ತಕ್ಕೆ ಹಾಲು ಎರೆಯುವದರಿಂದ ಯಾವ ಪ್ರಯೋಜನವೂ ಇಲ್ಲ. ಹಾಲು ಪೌಷ್ಠಿಕ ಆಹಾರ. ಆ ಆಹಾರವನ್ನು ಮಕ್ಕಳಿಗೆ ಕುಡಿಸುವ ಮೂಲಕ ಆಹಾರದ ಸದ್ಬಳಕೆ ಮಾಡಿಕೊಳ್ಳಬೇಕು. ಹಿಂದೆ ನಡೆದು ಬಂದ ಮೂಢ ಸಂಪ್ರದಾಯಗಳಿಗೆ ತಿಲಾಂಜಲಿ ಹೇಳಬೇಕು. ಸಮಾಜ ಸುಧಾರಣೆಯ ಪರಿವರ್ತಕ ವಿಶ್ವಗುರು ಬಸವಣ್ಣನವರ ಮಾರ್ಗದಲ್ಲಿ ನಾವೂ ನಡೆಯಬೇಕು. ಬಸವಣ್ಣನವರ ಸಮಾಜಮುಖಿ ಬದ್ದತೆ ನಮ್ಮ ಬದ್ದತೆಯಾಗಬೇಕು ಎಂದರು. ಕಣ್ಣು ಕಾಣದಿದ್ದರೂ ಅಂಧ ಮಕ್ಕಳು ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಆ ಮಕ್ಕಳ ಶಿಸ್ತು ನಮಗೆ ಮಾರ್ಗದರ್ಶನ ಆಗಬೇಕು. ಅಂಧ ಮಕ್ಕಳಿಗಾಗಿ ಶಾಲೆ ನಡೆಸುತ್ತಿರುವ ಆಡಳಿತ ಮಂಡಳಿಯವರು ಅಭಿನಂದನಾರ್ಹರು ಎಂದ ಅವರು, ಶಾಲೆಗೆ ₹10 ಸಾವಿರ ದೇಣಿಗೆ ನೀಡಿದರು.
ಸಾನಿಧ್ಯ ವಹಿಸಿದ್ದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಿಯ ದಿನದಂದು ಒಂದೆ ದಿನ ದಶಲಕ್ಷ ಲೀಟರಗಳಷ್ಟು ಹಾಲನ್ನು ಹುತ್ತಗಳಿಗೆ ಮತ್ತು ಕಲ್ಲು ನಾಗರಗಳ ಮೇಲೆ ಸುರಿಯಲಾಗುತ್ತದೆ. ಅಷ್ಟು ದೊಡ್ಡ ಪ್ರಮಾಣದ ಹಾಲನ್ನು ಮಕ್ಕಳಿಗೆ ನೀಡಿದರೆ, ಆ ಹಾಲು ಸಾರ್ಥಕವಾಗುತ್ತದೆ ಎಂದರು. ಜನರು ಹುತ್ತಕ್ಕೆ ಹಾಲೆರೆಯುವಂತಹ ಮೂಢ ನಂಬಿಕೆಗಳನ್ನು ತ್ಯಜಿಸಬೇಕು. ಬಸವ ಮಾರ್ಗದಲ್ಲಿ ನಡೆದು ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಹಸಿದ ಹೊಟ್ಟೆಗೆ ಹಾಲು ಆಹಾರವಾಗಬೇಕು. ಅದು ಪ್ರಸಾದವಾಗಬೇಕು. ಮಕ್ಕಳ ಹಸಿವು ತಣಿಸಬೇಕು ಎಂದರು.
ಇದೆ ಸಂದರ್ಭದಲ್ಲಿ ಲಿಂಗಾಯತ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ ತೇಲಸಂಗ ಅವರು ಅಂಧ ಮಕ್ಕಳ ಶಾಲೆಗೆ ₹51 ಸಾವಿರ ದೇಣಿಗೆ ನೀಡಿದರು. ಅಂಧ ಮಕ್ಕಳ ಸೇವಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ, ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಶಂಕರ ಗುಡಸ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿಂದ ಪರುಶೆಟ್ಟಿ, ನ್ಯಾಯವಾದಿ ಬಸವರಾಜ ರೊಟ್ಟಿ, ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಇತರರು ಭಾಗವಹಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.