ಉತ್ತಮ ಸಮಾಜಕ್ಕಾಗಿ

2 ಕೋಟಿ ಅನುದಾನ ಬಿಡುಗಡೆಗೆ ಆಗ್ರಹ; ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲು ಸಲಹೆ

0

ರಾಜ್ಯೋತ್ಸವ: ಅದ್ಧೂರಿ ಆಚರಣೆಗೆ ನಿರ್ಧಾರ

ಬೆಳಗಾವಿ, ಜಿಲ್ಲೆಯ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರ ಸಲಹೆ-ಸೂಚನೆಗಳಂತೆ ಈ ಬಾರಿಯೂ ನವೆಂಬರ್ 1 ರಂದು ನಗರದ ಸಿಪಿಎಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ(ಅ.5) ನಡೆದ ರಾಜ್ಯೋತ್ಸವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾವಿರಾರು ಯುವಕರು ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ಭಾವಾವೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಎಚ್ಚರಿಕೆ ವಹಿಸಬೇಕು.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿರುತ್ತದೆ. ಆದಾಗ್ಯೂ ಸಣ್ಣಪುಟ್ಟ ಘಟನೆಗಳಿಂದ ಅಹಿತಕರ ಘಟನೆಗಳು ನಡೆಯುವ ಸಂಭವವಿರುತ್ತದೆ. ಆದ್ದರಿಂದ ಶಾಂತಿ-ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.

ಕನ್ನಡಪರ ಹೋರಾಟಗಾರರಿಗೆ ಸನ್ಮಾನ:

News Belgaum-2 ಕೋಟಿ ಅನುದಾನ ಬಿಡುಗಡೆಗೆ ಆಗ್ರಹ; ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲು ಸಲಹೆ 1ಈ ಬಾರಿ ರಾಜ್ಯೋತ್ಸವ ಸಮಾರಂಭದಲ್ಲಿ ಐವರು ಕನ್ನಡಪರ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುವುದು ಎಂದು ಡಾ.ಬೊಮ್ಮನಹಳ್ಳಿ ಪ್ರಕಟಿಸಿದರು.
ಐವರು ಕನ್ನಡಪರ ಹೋರಾಟಗಾರರನ್ನು ಗುರುತಿಸಲು ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಸದರಿ ಸಮಿತಿಯ ಸೂಕ್ತ ವ್ಯಕ್ತಿಗಳನ್ನು ಸನ್ಮಾನಕ್ಕೆ ಆಯ್ಕೆ ಮಾಡಲಿದೆ ಎಂದರು.
ಅದೇ ರೀತಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಸರ್ಕಾರಿ ಇಲಾಖೆಗಳ ಹಾಗೂ ಇತರೆ ಸಂಘಟನೆ ರೂಪಕಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ರೂಪಕವನ್ನು ಪ್ರದರ್ಶಿಸುವು ಸಂಘಟನೆಗಳು ಅಕ್ಟೋಬರ್ 20 ರೊಳಗೆ ಸಂಬಂಧಪಟ್ಟ ಸಮಿತಿಗಳಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.

ಸಿಎಂ ಆಹ್ವಾನ-ಸಚಿವರ ಜತೆ ಚರ್ಚೆ:

ರಾಜ್ಯದಲ್ಲಿಯೇ ವಿಶಿಷ್ಟವಾಗಿ ಹಾಗೂ ಅದ್ದೂರಿಯಾಗಿ ನಡೆಯುವ ಇಲ್ಲಿನ ರಾಜ್ಯೋತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಕರೆಸಬೇಕು ಎಂದು ಅನೇಕ ಜನರು ಸಭೆಯಲ್ಲಿ ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಿ ಅವರ ಮಾರ್ಗದರ್ಶನದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕನ್ನಡ ನಾಮಫಲಕ-ಸೂಕ್ತ ಕ್ರಮ:

ಬೆಳಗಾವಿ ಮಹಾನಗರದಲ್ಲಿರುವ ಅಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕಗಳನ್ನು ನಿಯಮಾವಳಿ ಪ್ರಕಾರ ಕನ್ನಡದಲ್ಲಿ ಬರೆಸುವುದಕ್ಕೆ ಸಂಬಂಧಿಸಿದಂತೆ ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಹೇಳಿದರು.
ಸಾರ್ವಜನಿಕರ ಸಲಹೆಯಂತೆ ಗಣೇಶೋತ್ಸವ ವಿಸರ್ಜನೆ ಸಂದರ್ಭದಲ್ಲಿ ನಿರ್ಮಿಸಲಾಗುವ ಪ್ರೇಕ್ಷಕರ ಗ್ಯಾಲರಿಯ ಮಾದರಿಯಲ್ಲಿ ರಾಜ್ಯೋತ್ಸವ ಸಂದರ್ಭದಲ್ಲೂ ಮಹಿಳೆಯರು-ಮಕ್ಕಳ ಅನುಕೂಲಕ್ಕಾಗಿ ಪ್ರೇಕ್ಷಕರ ಗ್ಯಾಲರಿಗಳನ್ನು ಪಾಲಿಕೆ ವತಿಯಿಂದ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಬಿಗಿ ಭದ್ರತೆ:

ಪ್ರತಿವರ್ಷದಂತೆ ರಾಜ್ಯೋತ್ಸವ ಮೆರವಣಿಗೆ ವೇಳೆ ಬಿಗಿ ಬಂದೋಬಸ್ತ್ ಮಾಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಪೊಲೀಸ್ ಇಲಾಖೆ ಜತೆ ಸಹಕರಿಸಬೇಕು ಎಂದು ಉಪ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮನವಿ ಮಾಡಿಕೊಂಡರು.
ಸಂಘಟನೆಗಳು ರೂಪಿಸುವ ಪ್ರತಿಯೊಂದು ರೂಪಕಗಳ ಮುಂದೆ ಸ್ವಯಂಸೇವಕರನ್ನು ನೇಮಿಸುವುದರಿಂದ ಪೊಲೀಸರಿಗೆ ಅನುಕೂಲವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸುವುದಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.
ಮೆರವಣಿಗೆಗೆ ಸಮಯ ನಿರ್ಬಂಧ ವಿಧಿಸಿರುವುದಿಲ್ಲ; ಆದರೆ ಬೇಗ ಆರಂಭಿಸಿ, ಬೇಗ ಮುಗಿಸುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಪರ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ಅವರು, ರಾಜ್ಯೋತ್ಸವಕ್ಕೆ ಸರ್ಕಾರದಿಂದ ನಿಶ್ಚಿತ ಅನುದಾನ ಒದಗಿಸಿದರೆ ಮಾತ್ರ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿವರ್ಷ ಎರಡು ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮೆಹಬೂಬ್ ಮಕಾನದಾರ, ರಾಜ್ಯೋತ್ಸವಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಬೇಕು; ಗಣೇಶೋತ್ಸವ ಮಾದರಿಯಲ್ಲಿ ಚನ್ನಮ್ಮ ವೃತ್ತದಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಬೇಕು; ನಗರದ ಪ್ರಮುಖ ಸ್ಥಳವಾಗಿರುವ ಚನ್ನಮ್ಮ ವೃತ್ತವನ್ನು ನವೀಕರಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಅನಂತಕುಮಾರ್ ಬ್ಯಾಕೂಡ ಮಾತನಾಡಿ, ಹುಕ್ಕೇರಿ ಮಠದ ಶ್ರೀಗಳ ಜತೆ ಚರ್ಚಿಸಿ ಈ ಬಾರಿಯೂ ಹೋಳಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ರಾಜ್ಯೋತ್ಸವ ದಿನದಂದು ಎಂಇಎಸ್ ಸಂಘಟನೆಯವರು ನಡೆಸುವ ಕರಾಳ ದಿನಾಚರಣೆಯನ್ನು ಜಿಲ್ಲಾಡಳಿತ ನಿರ್ಬಂಧಿಸಬೇಕು ಎಂದು ಕನ್ನಡಪರ ಸಂಘಟನೆಯ ಮುಖಂಡ ಮಹದೇವ ತಳವಾರ ಆಗ್ರಹಿಸಿದರು.
ಕನ್ನಡ, ಉರ್ದು ಹಾಗೂ ಮರಾಠಿ ಸೇರಿದಂತೆ ಪ್ರತಿಯೊಂದು ಶಾಲೆಯಲ್ಲೂ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕ್ರಮಕೈಗೊಳ್ಳಬೇಕು. ರಾಜ್ಯೋತ್ಸವ ಆಚರಿಸದ ಶಾಲೆಯ ಮುಖ್ಯೋಪಾಧ್ಯಾಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಸೊಂಟಕ್ಕಿ ಒತ್ತಾಯಿಸಿದರು.
ಮಾಜಿ ಮಹಾಪೌರ ಸಿದ್ಧನಗೌಡ ಪಾಟೀಲ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಅವರು ಸಭೆಯನ್ನು ನಿರ್ವಹಿಸಿದರು. ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಮಿತಿಗಳಿಗೆ ತಿಳಿಸಲಾಯಿತು.

The post 2 ಕೋಟಿ ಅನುದಾನ ಬಿಡುಗಡೆಗೆ ಆಗ್ರಹ; ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲು ಸಲಹೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.