ಉತ್ತಮ ಸಮಾಜಕ್ಕಾಗಿ

ಯುಗಾದಿ: ಯುಗಯುಗಗಳ ಬೆಸುಗೆ

1

ಬೆಳಗಾವಿ:ಗಿಡ ಮರಗಳಲ್ಲಿ ಹೊಸ ಚಿಗುರಿನ ನಲಿವು, ಕೋಗಿಲೆಗಳ ಕುಹೂ ಕುಹೂ ಕೂಗು ನಮಗೆ ಸಂಭ್ರಮದ ಕಾಲವೂ ಹೌದು ಅಲ್ಲವೇ? ಸೂರ್ಯನು ಮೇಷರಾಶಿ ಪ್ರವೇಶಿಸುವ ಪುಣ್ಯ ಕಾಲ ಸೌರಮಾನ ಯುಗಾದಿ. ಆ ಗಿಡಮರಗಳಲ್ಲಿ ಚಿಗುರೊಡೆದ ಹಸಿರು ತೋರಣ, ಸುಗಂಧ ಹರಡಿ ನಗುವ ಪುಷ್ಪಗಳು, ಮಂದಗಮನದ ತಂಗಾಳಿ, ಕೋಗಿಲೆಯ ಇಂಪಾದ ಹಾಡು, ಗಾನದ ಲಹರಿಗೆ ಮನಸೋತ ವಸಂತನಿಂದ ಹೊಸ ಯುಗದ ಮುನ್ನುಡಿ.
ನೂತನ ವರ್ಷಾರಂಭದ ನವೋಲ್ಲಾಸದ ದಿನ. ಕಾಳುಕಡಿಗಳನ್ನೆಲ್ಲ ಮನೆಸೇರಿಸಿ ಸುಗ್ಗಿಯ ಸಂಭ್ರಮವಾಗಿ ಮಕರ ಸಂಕ್ರಾಂತಿ ಹಬ್ಬವಾದರೆ, ನಮ್ಮೆಲ್ಲರ ಬದುಕಿನ ಹೊಸ ಪುಟಗಳನ್ನು ತೆರೆಯುವ ಸಂಕೇತವಾಗಿ ಯುಗಾದಿಯ ಸಡಗರ. ಹಿಂದೂ ಸಂಪ್ರದಾಯದಂತೆ ಈ ಸುದಿನದ ಆಚರಣೆ ಸುಖ-ದುಃಖ ಎರಡನ್ನೂ ಸಮವಾಗಿ ಸ್ವೀಕರಿಸುವ ಪ್ರತೀಕವಾಗಿ ಹಬ್ಬದ ದಿನದಂದು ಬೇವು ಮತ್ತು ಬೆಲ್ಲ ಸೇವನೆ ಮಾಡುತ್ತೇವೆ. ಬದುಕು ಬರಿ ನಲುವಿನ ಹಾಡಲ್ಲ ನೋವಿನ ಹಾಡೂ ಆಗಿದೆ. ಮತ್ತು ಎರಡೂ ಬೆಸೆದುಕೊಂಡಿವೆ ಎಂಬ ಭಾವನೆ ತೋರಿಸಿಕೊಡುತ್ತದೆ.
“ಬೆಲ್ಲದ ಸಿಹಿ ಸವಿಗೆ
ಬೇವಿನ ಚಿಗುರು ಕೂಡಿದೆ
ಘಮಘಮದ ಮಲ್ಲಿಗೆ
ಮಾಂದಳಿರ ತೋರಣ ಕಟ್ಟಿದೆ”
ಸುಖ ದುಃಖಗಳ ಹೆಗಲೇರಿ ಮುಂದೆ ಸಾಗುವ ಬದುಕಿನ ಬಂಡಿ ಯುಗಾದಿಯಂದು ಮನೆ-ಮನೆಗಳಲ್ಲಿ ಬೇವು ಮಾವು ಎಲೆಗಳ ಅಲಂಕಾರ ಮಾಡುತ್ತಾರೆ. ಹಳ್ಳಿಗಳಲ್ಲಿ ತಮ್ಮ ಬದುಕಿನ ಬಂಡಿ ಎಳೆಯುವ ಎತ್ತಿನ ಬಂಡಿಗೆ ಸಿರಿಸಿಂಗಾರ. ಎತ್ತುಗಳಿಗೆ ನಾನಾ ತರದ ಬಣ್ಣದ ಚಿತ್ತಾರ ಬಳಿದು ಓಡಿಸಿ ಹರುಷದಿ ಯುಗಾದಿಗೆ ಸ್ವಾಗತ ಕೋರುವ ರೈತ ನಲಿಯುವನು.
ಈ ಕಂಪ್ಯೂಟರ್ ಯುಗದಲ್ಲಿ ತನ್ನತನ ಉಳಿಸಿಕೊಂಡಿರುವ ಯುಗಾದಿ ಹೊಸ ಆರಂಭಕ್ಕೆ ಹೊಸ ಆಶಯಗಳೊಂದಿಗೆ ಹಾರೈಸಿ ಯುಗ ಯುಗಕ್ಕೂ ಸಾಗಿ ಬಂದಿದೆ.
“ನನ್ನ ಹೃದಯ ಮರದಲ್ಲಿ
ಮತ್ತೊಂದು ಹೊಸ ಚಿಗುರು ನಲಿದಿದೆ
ಮತ್ತೆ ಹೊಸ ವರುಷವದು ಬರುತಿದೆ
ಬೊಗಸೆಯೊಳಗೆ ಒಂದಿನಿತು ಹೊಸತನ ತಂದಿದೆ……..”
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎನ್ನುವ ದ.ರಾ. ಬೇಂದ್ರೆಯವರ ಈ ಸಾಲುಗಳು ತನುಮನದೊಳೆಲ್ಲ ಅಗೋಚರವಾದ ಮಧುರ ಅನುಭವ ಉಂಟು ಮಾಡುತ್ತವೆ. ಈ ಸಾಲುಗಳು ನÀಮಗೆ ಸೂಚಿಸುತ್ತವೆ ಸಂಭ್ರಮದಿ ಆಚರಿಸಿಕೊಳ್ಳುವ ಹಬ್ಬ ಯುಗಾದಿ…………
ಚೈತ್ರಮಾಸದ ಆಗಮನದೊಂದಿಗೆ ವಸಂತನ ಆಗಮನ, ಹೊಸ ಚಿಗುರು, ಮನಸ್ಸಿಗೆ ಮುದ ನೀಡುತ್ತದೆ. ಗಿಡ ಮರಗಳು ಹಣ್ಣೆಲೆಗಳನ್ನು ಉದುರಿಸಿ ಹೊಸ ಚಿಗುರಿನ ಹೊಸ ಕಳೆಯಿಂದ ನವ ವಧುವಿನಂತೆ ಕಂಗೊಳಿಸುತ್ತವೆ. ಇಂತಹ ಸೊಬಗಿನ ಪರಿಸರದಲ್ಲಿ ಮಾವಿನ ಚಿಗುರು ತಿಂದು ಕೋಗಿಲೆ ಇಂಪಾಗಿ ಹಾಡುತ್ತದೆ.
ಬೇವು-ಬೆಲ್ಲದ ನಂಟು
ಯುಗಾದಿ ಹಬ್ಬಕ್ಕೂ ಬೇವಿಗೂ ಇರುವ ನಂಟಿಗೆ ವೈಜ್ಞಾನಿಕ ನೆಲೆಗಟ್ಟಿದೆ. ಯುಗಾದಿಯ ದಿನ ಮುಂಬಾಗಿಲಿಗೆ ತಳಿರುತೋರಣ ಶೃಂಗಾರದಿ ಕಟ್ಟುವಾಗ ಮಾವಿನ ಎಲೆಗಳ ಜೊತೆಗೆ ಬೇವಿನ ಎಲೆಗಳ ಕಂತೆಯನ್ನೂ ಬಾಗಿಲಿನ ಇಕ್ಕೆಲುಗಳಲ್ಲಿ ಕಟ್ಟುವುದು ನೋಡಿದ್ದೇವೆ. ಅದು ಸಂಪ್ರದಾಯ ಮಾತ್ರವಲ್ಲ, ಚೈತ್ರ ಮಾಸದಲ್ಲಿ ಬೇಸಿಗೆಯ ಬಿರುಬೇಗೆಯ ಝಳಝಳ ಅನುಭವ ಸಾಮಾನ್ಯ. ಇಂತಹ ಸಮಯದಲ್ಲಿ ರೋಗಾಣುಗಳು ಅಟ್ಯಾಕ್ ಮಾಡುವುದು ಹೆಚ್ಚು. ಬೇವಲ್ಲಿ ಕ್ರಿಮಿ ಕೀಟಗಳನ್ನು ಮತ್ತು ರೋಗಾಣುಗಳನ್ನು ನಾಶಪಡಿಸುವ ಗುಣವಿದೆ. ಆದ್ದರಿಂದ ನಮ್ಮ ಪೂರ್ವಜರು ಸ್ನಾನಕ್ಕೆ ನೀರು ಕಾಯಿಸುವಾಗ ಬೇವಿನ ಎಲೆಗಳನ್ನು ಹಾಕಿ ನೀರು ಕಾಯಿಸಿ ಸ್ನಾನ ಮಾಡುವುದು ರೂಢಿಮಾಡಿಕೊಂಡಿದ್ದರು. ಇನ್ನೂ ಬೆಲ್ಲದ ಬಳಕೆ ಬಗ್ಗೆ ಹೇಳಬೇಕೆಂದರೆ, ಬೇಸಿಗೆಯಲ್ಲಿ ಬೆವರುವುದು ಹೆಚ್ಚು ಅಲ್ಲವೇ? ಮೈಯಲ್ಲಿನ ನೀರಿನ ಅಂಶ ಕಡಿಮೆಯಾಗಿ ಆಯಾಸವಾಗುತ್ತದೆ. ಇದನ್ನು ತಡೆಗಟ್ಟಲು ಬೆಲ್ಲ ಸೇವಿಸುವುದು ಅವರು ಕಂಡುಕೊಂಡ ಉಪಾಯ. ಬೆಲ್ಲ ತಿನ್ನುವುದರಿಂದ ಚೈತನ್ಯ ಉಂಟಾಗುವುದು. ಹೀಗಾಗಿಯೇ ಈ ಎಲ್ಲದರ ಕುರುಹು ಆಗಿ ಯುಗಾದಿಯ ದಿನದಂದು ಬೇವು ಬೆಲ್ಲವನ್ನು ಸೇವಿಸುವುದು ಸರಿಯಾಗಿದೆ ಮತ್ತು ಸಮಂಜಸವಾಗಿದೆ ಎಂದೆನಿಸುತ್ತದೆ.
ಯುಗಾದಿಯ ದಿನ ಹೊಸ ವರ್ಷದ ಪಂಚಾಂಗವನ್ನು ದೇವರ ಮುಂದಿಟ್ಟು ಪೂಜಿಸಿ ಪಂಚಾಂಗ ಶ್ರವಣ ಮಾಡುವುದು ಸಂಪ್ರದಾಯವಾಗಿದೆ.
ಇನ್ನು ಚೈತ್ರಮಾಸದಿ ವಸುಂಧರೆಯ ಬಿನ್ನಾಣ ನೋಡಬೇಕು ನವ ಪಲ್ಲವಗಳು, ಹೂಗಳಿಂದ ಶೃಂಗರಿಸಿಕೊಂಡು ನವವಧುವಿನಂತೆ ಕಂಗೊಳಿಸುತ್ತಾಳೆ. ಇಂತಹ ಸುಮಧುರ ಪರಿಸರದಲ್ಲಿ ಹಿತವಾದ ಭಾವನೆಗಳು, ಹಿತ ಕಲ್ಪನೆಗಳು ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಗರಿಗೆದರುತ್ತವೆ. ಎಲ್ಲೆಲ್ಲೂ ಹೊಸತನದ ಹುರುಪು ಹೊಸ ಹೊಸ ನಿರೀಕ್ಷೆಗಳು ಹೊಸ ಆಸೆ ಆಕಾಂಕ್ಷೆಗಳ ಹೊತ್ತು ಮನುಜ ಕುಲವೆಲ್ಲ ನವಚೈತನ್ಯ ತುಂಬಿಕೊಳ್ಳುವ ಹೊಸ ಜೀವನದ ಶುಭಾರಂಭ ನೋಡಿ……..
ಯುಗ ಯುಗಾಂತರಗಳಿಂದಲೂ ಚೈತ್ರ ಮಾಸದಲಿ
ಕೋಗಿಲೆಯ ಕುಹೂ ಗಾನ, ಬೇಸರವಾಯಿತೆಂದು
ಹೇಳಿ ನಿಲ್ಲದೇ, ಯಾವುದೇ ಫಲದ ನಿರೀಕ್ಷೆಯಿಲ್ಲದೆ
ಮನುಕುಲಕ್ಕೆ ಸದಾ ಒಳಿತು ಮಾಡುವ ಕ್ರಿಯೆಯಲ್ಲಿರುವ
ಪ್ರಕೃತಿಮಾತೆಯ ಪಾದಗಳಿಗೆ ಹಣೆ ಸ್ಪರ್ಶಿಸಿ
ನಮಿಸೋಣ ಬನ್ನಿ………….. ಲೇಖಕಿ ಪ್ರೇಮಾ ನಡುವಿನಮನಿ ಧಾರವಾಡ.ನಂ. 9035261701

1 Comment
  1. ಪ್ರೇಮಾ ನಡುವಿನಮನಿ says

    ಚೆನ್ನಾಗಿ ಬಂದಿದೆ.ಧನ್ಯವಾದ ತಮಗೆ .ಯುಗಾದಿ ಶುಭಾಶಯ ತಿಳಿಸುತ್ತ ಪ್ರೇಮಾ

Leave A Reply

 Click this button or press Ctrl+G to toggle between Kannada and English

Your email address will not be published.