ಉತ್ತಮ ಸಮಾಜಕ್ಕಾಗಿ

ರೂ.63 ಲಕ್ಷ ಕ್ರಿಯಾ ಯೋಜನೆ ಅನುಮೋದನೆಗೆ ನಿರ್ಧಾರ

news belagavi

0

ಜಿಲ್ಲಾ ಪಂಚಾಯತ ಸಾಮಾನ್ಯ ಸಭೆ
ರೂ.63 ಲಕ್ಷ ಕ್ರಿಯಾ ಯೋಜನೆ ಅನುಮೋದನೆಗೆ ನಿರ್ಧಾರ
ಬೆಳಗಾವಿ: (news belgaum)ಕುಡಿಯುವ ನೀರು ಮತ್ತು ಸರಬರಾಜು ಕಾಮಗಾರಿಗೆ 63 ಲಕ್ಷ ರೂ. ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಕಾಮಗಾರಿಗೆ ಅನುಮೋದನೆ ನೀಡಲು ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಸೆ.6) ಜರುಗಿದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸರ್ಕಾರದಿಂದ ಕುಡಿಯುವ ನೀರು ಮತ್ತು ಸರಬರಾಜು ಕಾಮಗಾರಿಗೆ ಕೆಲವು ತಿಂಗಳುಗಳ ಹಿಂದೆ ರೂ.1 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ರೂ. 37 ಲಕ್ಷ ಸರ್ಕಾರಕ್ಕೆ ಹಿಂದುರಿಗಿ ಹೋಗಿದ್ದು, ಇನ್ನುಳಿದ 63 ಲಕ್ಷ ರೂ.ಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಯಿತು.
ಸರ್ಕಾರಕ್ಕೆ ಹಿಂದಿರುಗಿ ಹೋಗಿರುವ 37 ಲಕ್ಷ ರೂ.ಗಳನ್ನು ಜಿಲ್ಲಾ ಪಂಚಾಯತಗೆ ಮರಳಿ ನೀಡುವಂತೆ ಜಿಲ್ಲಾ ಪಂಚಾಯತ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲು ಸದಸ್ಯರು ಆಗ್ರಹಿಸಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಅವರು, ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರ ಅನುಮತಿಯೊಂದಿಗೆ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ಸ್ತ್ರೀರೋಗ ತಜ್ಞರನ್ನು ನೇಮಿಸಿ:
ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರು ಇಲ್ಲದಿರುವುದರಿಂದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಸ್ತ್ರೀರೋಗ ತಜ್ಞರನ್ನು ನೇಮಿಸುವಂತೆ ಸದಸ್ಯರೊಬ್ಬರು ಮನವಿ ಮಾಡಿದರು. ಇದಕ್ಕೆ ಇನ್ನಿತರ ಸದಸ್ಯರು ದನಿಗೂಡಿಸಿ ಜಿಲ್ಲೆಯ ಅನೇಕ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಸಮಸ್ಯೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಜಿಪಂ ಸಿಇಒ ರಾಮಚಂದ್ರನ್ ಅವರು, ಅಗತ್ಯ ಇರುವ ಆಸ್ಪತ್ರೆಗಳನ್ನು ಗುರುತಿಸಿ, ಸ್ತ್ರೀರೋಗ ತಜ್ಞರನ್ನು ನೇಮಿಸಬೇಕು. ಸಿಬ್ಬಂದಿಯ ಕೊರತೆಯಿದ್ದರೆ ವಾರದಲ್ಲಿ ಕೆಲವು ದಿನವಾದರು ಆಸ್ಪತ್ರೆಗಳಿಗೆ ಸ್ತ್ರೀರೋಗ ತಜ್ಞರನ್ನು ಕರ್ತವ್ಯದ ಮೇಲೆ ನೇಮಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳನ್ನು ಶೀಘ್ರವೇ ದುರಸ್ತಿಗೊಳಿಸಬೇಕು. ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಿಇಒ ರಾಮಚಂದ್ರನ್ ಅವರು ಸೂಚಿಸಿದರು.

ಜಿಪಂ ಸದಸ್ಯರಿಗೆ ಮಾಹಿತಿ ನೀಡಿ:
ಕೆಲವು ಇಲಾಖೆ ಅಧಿಕಾರಿಗಳು ಇಲಾಖೆಯ ಸೌಲಭ್ಯಗಳ ಕುರಿತು ಜಿಲ್ಲಾ ಪಂಚಾಯತ ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ. ಈ ರೀತಿಯಾಗಬಾರದು ಎಲ್ಲ ಇಲಾಖೆ ಅಧಿಕಾರಿಗಳು ಜಿಪಂ ಸದಸ್ಯರಿಗೆ ಯೋಜನೆಗಳ ಕುರಿತು ಮಾಹಿತಿ ನೀಡಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಅವರು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಆರಂಭಿಸಿ:
ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕೆಂದು ಸದಸ್ಯರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಚಿಕ್ಕೋಡಿ ಡಿಡಿಪಿಐ ದಾಸರ ಅವರು, ಪ್ರಾಥಮಿಕ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಬಿಸಲು ಈಗಾಗಲೇ ಸರ್ಕಾರದಿಂದ ಆದೇಶ ನೀಡಲಾಗಿದ್ದು, ಜಿಲ್ಲೆಯಲ್ಲಿಯೂ ಕೂಡ ಕೆಲವು ಶಾಲೆಗಳಲ್ಲಿ ಈಗಾಗಲೇ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಉದ್ಯೋಗ ಖಾತರಿ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಕೃಷಿ ಹೊಂಡ, ಬಿಸಿಯೂಟ, ಕುಡಿಯುವ ನೀರು ಸೇರಿದಂತೆ ಸಾರಿಗೆ, ಆರೋಗ್ಯ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಪಂಚಾಯತ ಸದಸ್ಯರು ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ, ಅಧಿಕಾರಿಗಳಿಮದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಸದಸ್ಯರು, ತಾಲೂಕು ಪಂಚಾಯತ ಅಧ್ಯಕ್ಷರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಪಂ ಅಧ್ಯಕ್ಷೆ ಆಶಾ ಐಹೊಳೆ ನಾಡಗಿತೆ ಹಾಡಿದರು. ಜಿಪಂ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಸಭೆ ನಿರ್ವಹಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.