ಉತ್ತಮ ಸಮಾಜಕ್ಕಾಗಿ

ಬೆಳಗಾವಿಗೆ ಯರ್ ಬರ್ತಾಯಿದ್ದಾರೆ ಯಾಕೇ ಈ ಸಿದ್ದತೆ ಇಲ್ಲಿದೆ ನೋಡಿ ಮಾಹಿತಿ

news belagavi

0

 ಬೆಳಗಾವಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಭೇಟಿ ಸೆ.15 ರಂದು ಅಗತ್ಯ ಸಿದ್ಧತೆಗೆ ಪ್ರಾದೇಶಿಕ ಆಯುಕ್ತ ಮೇಘಣ್ಣವರ ಸೂಚನೆ 
ಬೆಳಗಾವಿ: (news belgaum)ನಗರದ ಕರ್ನಾಟಕ ಲಾ ಸೊಸೈಟಿ ಅಮೃತ ಮಹೋತ್ಸವದಲ್ಲಿ ಭಾಗವಹಿಸಲು ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಅವರು ಸೆ.15 ರಂದು ಆಗಮಿಸಲಿರುವುದರಿಂದ ಆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾನುಕೂಲ ಉಂಟಾಗದಂತೆ ಶಿಷ್ಟಾಚಾರ ಪ್ರಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಮಾನ್ಯ ರಾಷ್ಟ್ರಪತಿ ಅವರ ಭೇಟಿ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಂಗಳವಾರ (ಸೆ.4) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಘನತೆವೆತ್ತ ರಾಷ್ಟ್ರಪತಿ ಅವರಲ್ಲದೇ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯಪಾಲರು, ಅಟಾರ್ನಿ ಜನರಲ್ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಹನ್ನೆರಡಕ್ಕೂ ಅಧಿಕ ಗಣ್ಯಾತೀಗಣ್ಯರು ಆಗಮಿಸಲಿರುವುದರಿಂದ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಘಟಕರು ಪರಸ್ಪರ ಸಮನ್ವಯದೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪರ್ಯಾಯ ಮಾರ್ಗ ಪ್ರಸ್ತಾವನೆ:
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಪ್ರವಾಸಿ ಮಂದಿರದ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಸುಮಾರು 24 ಕಿ.ಮೀ. ರಸ್ತೆ ಮಾರ್ಗ ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಬಳಕೆ ಬಗ್ಗೆಯೂ ಪರಿಶೀಲಿಸಿ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು, “ಈಗಾಗಲೇ ಪೊಲೀಸ್ ಆಯುಕ್ತರ ಜತೆಗೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ರಸ್ತೆ ಮಾರ್ಗದ ಪರ್ಯಾಯವಾಗಿ ಮಚ್ಛೆ ಬಳಿ ಹೆಲಿಪ್ಯಾಡ್‍ಗಳನ್ನು ನಿರ್ಮಿಸಬಹುದಾಗಿದೆ. ಇದು ಕಾರ್ಯಕ್ರಮದ ಸ್ಥಳಕ್ಕೂ ಸಮೀಪದಲ್ಲಿದ್ದು, ವಿಟಿಯು ಅತಿಥಿಗೃಹವೂ ಇರುವುದರಿಂದ ಗಣ್ಯರ ಸಂಚಾರಕ್ಕೆ ಅನುಕೂಲಕರವಾಗಿದೆ” ಎಂದು ಅಭಿಪ್ರಾಯಪಟ್ಟರು.
ಮಾನ್ಯ ರಾಷ್ಟ್ರಪತಿಗಳ ಸಂಚಾರ ಮಾರ್ಗದ ಬಗ್ಗೆ ಉನ್ನತಮಟ್ಟದಲ್ಲಿ ಚರ್ಚಿಸಿದ ಬಳಿಕ ರಾಜ್ಯ ಶಿಷ್ಟಾಚಾರ ವಿಭಾಗದಿಂದ ಅಂತಿಮಗೊಳಿಸಲಾಗುವುದು. ಸದ್ಯಕ್ಕೆ ಎರಡೂ ಮಾರ್ಗಗಳ ಬಗ್ಗೆ ಪ್ರಸ್ತಾವ ಕಳಿಸಬಹುದು ಎಂದು ಪ್ರಾದೇಶಿಕ ಆಯುಕ್ತರಾದ ಮೇಘಣ್ಣವರ ತಿಳಿಸಿದರು.
ರಸ್ತೆ ದುರಸ್ತಿಗೆ ಸೂಚನೆ:
ವಿಮಾನ ನಿಲ್ದಾಣದಿಂದ ಗಣ್ಯರು ಸಂಚರಿಸಲಿರುವ ಮಾರ್ಗವನ್ನು ತಕ್ಷಣ ದುರಸ್ತಿಗೊಳಿಸಬೇಕು. ಈ ಮಾರ್ಗದಲ್ಲಿರುವ ರಸ್ತೆಹಂಪ್ಸ್‍ಗಳನ್ನೂ ತೆರವುಗೊಳಿಸಬೇಕು. ಪಾಲಿಕೆ, ಲೋಕೋಪಯೋಗಿ ಇಲಾಖೆ, ಕೆಶಿಪ್, ರಾಷ್ಟ್ರೀಯ ಹೆದ್ದಾರಿ ಹೀಗೆ ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದರು.
ಬರೀ ಗಣ್ಯರು ಮಾತ್ರವಲ್ಲದೇ ಜನಸಾಮಾನ್ಯರು ಸಂಚರಿಸುವ ರಸ್ತೆಗಳನ್ನು ಕೂಡ ಅಷ್ಟೇ ಆದ್ಯತೆ ಮೇರೆಗೆ ದುರಸ್ತಿಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.
ವೇದಿಕೆಯ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ಗಳು ಪರಿಶೀಲಿಸಬೇಕು. ಅದೇ ರೀತಿ ವಿದ್ಯುಚ್ಛಕ್ತಿ ವ್ಯವಸ್ಥೆ ಹಾಗೂ ಪರ್ಯಾಯ ವ್ಯವಸ್ಥೆಯನ್ನು ಸಮರ್ಪಕವಾಗಿರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಪರಿಶೀಲಿಸಬೇಕು.
ಬಿಎಸ್‍ಎನ್‍ಎಲ್ ವತಿಯಿಂದ ಹಾಟ್‍ಲೈನ್ ವ್ಯವಸ್ಥೆ, ಬ್ರಾಡಬ್ಯಾಂಡ್ ಸಂಪರ್ಕ ಕಲ್ಪಿಸಬೇಕು. ವಿಮಾನ ನಿಲ್ದಾಣ, ಕಾರ್ಯಕ್ರಮ ಸ್ಥಳದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ವೈದ್ಯರ ತಂಡ, ಅಂಬ್ಯುಲೆನ್ಸ್‍ಗಳನ್ನು ನಿಯೋಜಿಸಬೇಕು. ತುರ್ತು ಚಿಕಿತ್ಸೆಗೆ ಆಸ್ಪತ್ರೆಯನ್ನು ಗುರುತಿಸಿ ಅಲ್ಲಿಯೂ ಕೂಡ ವೈದ್ಯರು ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಅನೇಕ ಜನ ಗಣ್ಯರು ಆಗಮಿಸುವುದರಿಂದ ಆಹಾರ ಸುರಕ್ಷತೆ, ಭದ್ರತೆ ಮತ್ತು ಶಿಷ್ಟಾಚಾರ ಪಾಲನೆಗೆ ಪ್ರತ್ಯೇಕ ಅಧಿಕಾರಿಗಳ ತಂಡಗಳನ್ನು ನಿಯೋಜಿಸುವಂತೆ ಅವರು ತಿಳಿಸಿದರು.
ವಿವಿಐಪಿ/ವಿಐಪಿ ಸೇರಿದಂತೆ ಕಾರ್ಯಕ್ರಮದ ಆಹ್ವಾನಿತರಿಗೆ ನೀಡಲಾಗುವ ಪ್ರತಿಯೊಂದು ಆಮಂತ್ರಣ ಪತ್ರಿಕೆಗಳ ಮೇಲೆ ಕ್ರಮಸಂಖ್ಯೆಗಳನ್ನು ನಮೂದಿಸಿ ವಿತರಿಸಬೇಕು. ಆಮಂತ್ರಿತರ ಪಟ್ಟಿಯನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಮಾತನಾಡಿ, ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ಸ್ಥಳವನ್ನು ಪರಿಶೀಲನೆ ಮಾಡಲಾಗಿದ್ದು, ಈ ಬಗ್ಗೆ ರಾಜ್ಯದ ಶಿಷ್ಟಾಚಾರ ವಿಭಾಗಕ್ಕೆ ವರದಿಯನ್ನು ಕಳಿಸಲಾಗುವುದು. ಅಲ್ಲಿಂದ ರಾಷ್ಟ್ರಪತಿಗೆ ವರದಿ ಸಲ್ಲಿಸಲಾಗುತ್ತದೆ. ರಾಷ್ಟ್ರಪತಿ ಕಚೇರಿಯಿಂದ ಕಾರ್ಯಕ್ರಮ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದರು.
ಭದ್ರತೆ ಹಾಗೂ ರಸ್ತೆ ಮಾರ್ಗಗಳ ಬಗ್ಗೆ ಈಗಾಗಲೇ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶಿಷ್ಟಾಚಾರದ ಪ್ರಕಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ತಿಳಿಸಿದರು.
ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ, ಗುಪ್ತಚರ ಇಲಾಖೆಯ ಎಸ್‍ಪಿ ಚನ್ನಬಸವಣ್ಣ, ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.