ಉತ್ತಮ ಸಮಾಜಕ್ಕಾಗಿ

ಶಿಕ್ಷಣದ ಗುಣಮಟ್ಟ ಸುಧಾರಿಸಲಿ: ಪ್ರೊ. ಅನಿಲ ಸಹಸ್ರಬುದ್ಧೆ

0

 ಬೆಳಗಾವಿ:  (Tarun Kranti) ಶಿಕ್ಷಣದ ಗುಣಮಟ್ಟ ಸುಧಾರಿಸಲಿ: ಪ್ರೊ. ಅನಿಲ ಸಹಸ್ರಬುದ್ಧೆ : ದೇಶದ ಶಿಕ್ಷಣವನ್ನು ಮತ್ತಷ್ಟು ಗುಣಮಟ್ಟವನ್ನಾಗಿಸುವ ಮೂಲಕ ವಿದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಮ್ಮ ದೇಶಕ್ಕೆ ಬರುವಂತಾಗಬೇಕು ಎಂದು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪ್ರೊ. ಅನಿಲ.ಡಿ. ಸಹಸ್ರಬುದ್ಧೆ ಅವರು ಹೇಳಿದರು.
ಶಿಕ್ಷಣದ ಗುಣಮಟ್ಟ ಸುಧಾರಿಸಲಿ: ಪ್ರೊ. ಅನಿಲ ಸಹಸ್ರಬುದ್ಧೆ- Tarun krantiನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ (ಜ.9) ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ 17ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಉದ್ಘಾಟನಾ ಭಾಷಣ ಮಾಡಿದರು.
ಉದ್ಯೋಗಕ್ಕಾಗಿ ಪ್ರಪಂಚದಾದ್ಯಂತ ಸಾಕಷ್ಟು ಅವಕಾಶಗಳಿವೆ. ಉತ್ತಮ ಕೌಶಲ್ಯ, ಉತ್ತಮ ಯೋಚನೆ ಹಾಗೂ ಅಗತ್ಯ ಅರ್ಹತೆಗಳನ್ನು ಹೊಂದಿದ್ದರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆಯ ಬಾಗಿಲಿಗೆ ಬರುತ್ತವೆ ಎಂದು ಹೇಳಿದರು.
ಇಂದು ಮಾಹಿತಿ ಮತ್ತು ತಂತ್ರಜ್ಞಾನದ ಕ್ರಾಂತಿಯಿಂದ ದೇಶದಲ್ಲಿ ವಿಫುಲ ಉದ್ಯೋಗಾವಕಾಶಗಳು ಸೃಷ್ಠಿಯಾಗಿವೆ. ಭಾರತದ ಜನಸಂಖ್ಯೆಯಲ್ಲಿ 25 ವರ್ಷದೊಳಗಿನ ಯುವಜನರೇ ಶೇ.50 ರಷ್ಟು ಪ್ರಮಾಣದಲ್ಲಿ ಇದ್ದಾರೆ. ಜಗತ್ತಿನಲ್ಲೇ ಅತಿಹೆಚ್ಚು ಯುವಜನತೆಯನ್ನು ಹೊಂದಿದ ದೇಶ ಭಾರತವಾಗಿದೆ. ಈ ಯುವ ಜನತೆಯನ್ನು ಕೇವಲ ನಮ್ಮ ದೇಶದ ಏಳ್ಗೆಗಾಗಿ ಅಷ್ಟೇ ಅಲ್ಲದೇ, ಇಡೀ ಪ್ರಪಂಚದ ಏಳ್ಗೆಗಾಗಿ ನಾವು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಭಾರತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ಸರ್ಕಾರದ ಸ್ಕಿಲ್ ಇಂಡಿಯಾ, ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಉನ್ನತ್ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು.
ಸೋಲು ಗೆಲುವಿನ ಮೆಟ್ಟಿಲಾಗಿದ್ದು, ಸೋತಾಗ ಕುಗ್ಗದೇ ಸತತ ಪ್ರಯತ್ನವನ್ನು ಮುಂದುವರೆಸಬೇಕು. ಸದಾ ಹೊಸತನ್ನು ಕಲಿತುಕೊಳ್ಳಬೇಕು ಎಂದರು. ನಾವೆಲ್ಲರೂ ಸೇರಿ ಇಡೀ ಪ್ರಪಂಚಕ್ಕೆ ದಾರಿ ತೋರಿಸುವ ಹಾಗೂ ಮಾದರಿಯಾಗುವ ಬಲಿಷ್ಠ ಭಾರತದ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಅವರು ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ತಿಳಿಸಿದರು.
ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಗುರಿ ಹಾಗೂ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬಾರದು. ಸದಾ ಮೌಲ್ಯಯುತ ಹಾಗೂ ದೊಡ್ಡ ವಿಷಯಗಳ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಳಿದರು.

ಕಿರಣಕುಮಾರ ಗೌರವ ಡಾಕ್ಟರೇಟ್:-

ಶಿಕ್ಷಣದ ಗುಣಮಟ್ಟ ಸುಧಾರಿಸಲಿ: ಪ್ರೊ. ಅನಿಲ ಸಹಸ್ರಬುದ್ಧೆ- Tarun kranti 1ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳು ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಪದ್ಮಶ್ರೀ ಪುರಸ್ಕøತರಾದ ಎ.ಎಸ್. ಕಿರಣಕುಮಾರ ಅವರಿಗೆ ಘಟಿಕೋತ್ಸವದಲ್ಲಿ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಯಿತು.
ಪದವಿ ಸ್ವೀಕರಿಸಿ ಮಾತನಾಡಿದ ಕಿರಣಕುಮಾರ ಅವರು, ನನಗೆ ಸಂದಿರುವ ‘ಡಾಕ್ಟರ್ ಆಫ್ ಸೈನ್ಸ್’ ಪದವಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಅರ್ಪಿಸುವುದಾಗಿ ತಿಳಿಸಿದರು.
ಮಹಿಂದ್ರಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಆನಂದ ಮಹಿಂದ್ರಾ ಅವರಿಗೆ ಅವರ ಅನುಪಸ್ಥಿತಿಯಲ್ಲಿ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಯಿತು.
ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹಾಗೂ ರಾಜ್ಯಪಾಲರಾದ ವಜುಬಾಯಿ. ಆರ್. ವಾಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಉದ್ಘಾಟನೆ ನೆರವೇರಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಪದಕ ಮತ್ತು ಪದವಿಗಳನ್ನು ಪ್ರದಾನ ಮಾಡಿದರು.

ಕಾರ್ಯಕ್ರಮಕ್ಕೂ ಮುಂಚೆ ಕುಲಸಚಿವರಾದ ಡಾ|| ಎಚ್.ಎನ್. ಜಗನಾಥ ರೆಡ್ಡಿ ಅವರು ರಾಜ್ಯಪಾಲ ವಜುಬಾಯಿ ವಾಲಾ ಹಾಗೂ ಇನ್ನಿತರ ಅತಿಥಿಗಳನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು. ಕುಲಸಚಿವರಾದ ಡಾ|| ಎಚ್.ಎನ್. ಜಗನ್ನಾಥ ರೆಡ್ಡಿ ಅವರು ಪದಕ ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು.
ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ನೂರಾರು ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಚಿನ ಚಿನ್ನದ ಹುಡುಗ:
ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಯಾದ ಸಚಿನ ಕೀರ್ತಿ. ಎನ್ ಅವರು 13 ಚಿನ್ನದ ಪದಕಗಳನ್ನು ಗಳಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ಕೀರ್ತಿಗೆ ಭಾಜನರಾದರು.
ಬೆಂಗಳೂರಿನ ಬಿ.ಎನ್.ಎಂ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರತ್ಯೂಷಾ.ಎ, ಬೆಂಗಳೂರಿನ ಶಿರಡಿ ಸಾಯಿ ಇಂಜಿನಿಯರಿಂಗ್ ಕಾಲೇಜಿನ ಬಿಂದು ಎಸ್, ಬೆಳಗಾವಿಯ ಕೆ.ಎಲ್.ಇ. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನ ರಜತ್ ಹೊಗಾರ್ತಿ ಹಾಗೂ ಸುಳ್ಳೆಯ ಕುರಂಜಿ ವೆಂಕಟರಮನ ಕಾಲೇಜಿನ ಅರ್ಪಿತಾ.ಕೆ. ಎಸ್ ಅವರು ತಲಾ 5 ಪದಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಗಳಿಸಿದರು.
ಬೆಂಗಳೂರಿನ ಆರ್.ಎನ್.ಎಸ್ ಇನ್ಸ್ಟಿಟ್ಯೂಟ್‍ನ ವಿದ್ಯಾರ್ಥಿನಿ ಅಪೂರ್ವ ಶರ್ಮಾ ನಾಲ್ಕು ಪದಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಪಡೆದರು.

ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ 61790 ಬಿ.ಇ., 384 ಬಿ.ಆರ್ಕ್, 4592 ಎಂಬಿಎ, 2741 ಎಂಸಿಎ, 4347 ಎಂ.ಟೆಕ್., 15 ಎಂ.ಆರ್ಕ್, 20 ಎಂ.ಎಸ್ಸಿ (ಇಂಜಿನೀಯರಿಂಗ್) ಹಾಗೂ 302 ಪಿಎಚ್.ಡಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.
ರಾಜ್ಯಪಾಲರಾದ ವಜುಬಾಯಿ ವಾಲಾ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಎಲ್ಲ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರದಾನ ಮಾಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.