ಉತ್ತಮ ಸಮಾಜಕ್ಕಾಗಿ

ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ

news

0

ಬೆಳಗಾವಿ:(news belgaum) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಬುಧವಾರ (ಆ.15) 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ ಸಡಗರ, ಸಂಭ್ರಮದಿಂದ ಜರುಗಿತು.
ಪೌರಾಡಳಿತ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ 5ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ, ಶಾಸಕರಾದ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ್ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ, ಉಪಮಹಾಪೌರರಾದ ಮಧುಶ್ರೀ ಪೂಜಾರಿ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಉತ್ತರ ವಲಯ ಐಜಿಪಿ ಅಲೋಕ ಕುಮಾರ್, ಪ್ರಾದೇಶಿಕ ಆಯುಕ್ತರಾದ ಪಿ.ಎ. ಮೇಘಣ್ಣವರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್., ಪೊಲೀಸ್ ಆಯುಕ್ತರಾದ ಡಾ. ಡಿ.ಸಿ. ರಾಜಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ, ಉಪ ವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನವರ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ವಿವಿಧ ಶಾಲೆಯ ಮಕ್ಕಳು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆಕರ್ಷಕ ಪಥಸಂಚಲನ:
ಆರ್‍ಪಿಐ ಸಿಎಆರ್ ಪರೇಡ ಕಮಾಂಡರ್ ಪ್ರಭು.ಎಸ್. ಪಾಟೀಲ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ಜರುಗಿತು. ಕೆಎಸ್‍ಆರ್‍ಪಿ, ಸಶಸ್ತ್ರ ಪೊಲೀಸ್, ಕೈಗಾರಿಕಾ ಭದ್ರತಾ ಪಡೆ, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಎನ್‍ಸಿಸಿ, ಸ್ಕೌಟ್ಸ್-ಗೈಡ್ಸ್, ಸೇವಾದಳ, ಮಹೇಶ್ವರಿ ಅಂಧ ಮಕ್ಕಳ ಶಾಲೆಯ ತಂಡದವರು ಪಥಸಂಚಲನ ನಡೆಸಿಕೊಟ್ಟರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ:
News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವಿಠ್ಠಲರಾವ್ ಯಾಳಗಿ, ರಾಜೇಂದ್ರ ಕಲಘಟಗಿ, ಗಂಗಾಧರ ಕಾಮತ್, ರಾಜಾರಾಮ ಕಟ್ಟಿ, ಸದಾಶಿವರಾವ್ ಭೋಸಲೆ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಸನ್ಮಾನಿಸಿದರು.News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ 7

ಸಾಹಸ ಮೆರೆದ ಯುವಕನಿಗೆ ಅಭಿನಂದನೆ:
ಇತ್ತೀಚೆಗೆ ತಿಲಾರಿ ಘಾಟ್‍ನಲ್ಲಿ ಈಜು ಬಾರದೇ ಮುಳುಗುತ್ತಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರನ್ನು ವಿಕಲಚೇತನನಾಗಿದ್ದರೂ ಕೂಡ ಪ್ರಾಣದ ಹಂಗು ತೊರೆದು ರಕ್ಷಿಸಿ ಧೈರ್ಯ ಮತ್ತು ಸಾಹಸ ಪ್ರದರ್ಶಿಸಿದ ಬೆಳಗಾವಿ ತಾಲೂಕಿನ ಕುದ್ರೇಮನಿ ಗ್ರಾಮದ ವಿಕಲಚೇತನ ಯುವಕ ಮನೋಜ ಧಾಮನೆಕರ್ ಅವರನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿ, ಅಭಿನಂದಿಸಿದರು.

ಪಥಸಂಚಲನದಲ್ಲಿ ಪ್ರಶಸ್ತಿ ವಿಜೇತರು:News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ 1
ಪಥಸಂಚಲನದಲ್ಲಿ ಪೊಲೀಸ್ ವಿಭಾಗದಲ್ಲಿ ಕೆಎಸ್‍ಆರ್‍ಪಿ 2ನೇ ಮಹಿಳಾ ಪಡೆ ಪ್ರಥಮ ಬಹುಮಾನ, ಸಿ.ಎ.ಆರ್ ಬೆಳಗಾವಿ ನಗರ ದ್ವಿತೀಯ ಬಹುಮಾನ, ಎನ್‍ಸಿಸಿ ವಿಭಾಗದಲ್ಲಿ ಎನ್‍ಸಿಸಿ ಏರ್‍ವಿಂಗ್ ಸೀನಿಯರ್ ಪ್ರಥಮ, ಎನ್‍ಸಿಸಿ ಆರ್ಮಿ ಸೀನಿಯರ್ 26 ಕೆಎಆರ್ ಬಿಎನ್ ದ್ವಿತೀಯ ಬಹುಮಾನ ಗಳಿಸಿದವು.

ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಗಲ್ರ್ಸ್ ಗೈಡ್ ಮಹಿಳಾ ವಿದ್ಯಾಲಯ ಪ್ರಥಮ, ಗಲ್ರ್ಸ್ ಗೈಡ್ ಚಂಪಾಬಾಯಿ ಬೋಗಲೆ ಶಾಲೆ ದ್ವಿತೀಯ ಬಹುಮಾನ, ಸೇವಾದಳ ವಿಭಾಗದಲ್ಲಿ ಪೊಲೀಸ್ ಸ್ಟೂಡೆಂಟ್ ಕೆಡೆಟ್ ಸರ್ಕಾರಿ ಕೆಎಚ್‍ಪಿಎಸ್ ನ.14 ಪ್ರಥಮ, ಭಾರತ ಸೇವಾದಳ ಮಹಿಳಾ ವಿದ್ಯಾಲಯ ದ್ವಿತೀಯ ಬಹುಮಾನ ಪಡೆದವು.
ಪ್ರಶಸ್ತಿ ವಿಜೇತ ತಂಡಗಳಿಗೆ ವೇದಿಕೆಯಲ್ಲಿ ಗಣ್ಯರು ಬಹುಮಾನ ವಿತರಿಸಿ ಸನ್ಮಾನಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ:News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ 3 News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ 4
ಮಹಿಳಾ ವಿದ್ಯಾಲಯ, ಸರ್ಧಾರ್ ಪ್ರೌಢಶಾಲೆ, ಜೈನ್ ಹೆರಿಟೇಜ್ ಶಾಲೆ ಹಾಗೂ ಕೆಎಲ್‍ಇ ಇಂಟರ್ ನ್ಯಾಶನಲ್ ಶಾಲೆಯ ಮಕ್ಕಳು ಮೈದಾನದಲ್ಲಿ ವಿವಿಧ ದೇಶಭಕ್ತಿಯ ಗೀತೆಗಳಿಗೆ ನೃತ್ಯವನ್ನು ಪ್ರಸ್ತುತ ಪಡಿಸಿದರು.
ಸಹಶಿಕ್ಷಕರಾದ ರಮೇಶ ಗೋಣಿ ಹಾಗೂ ಭಾರತ ಸೇವಾದಳದ ವಿಭಾಗೀಯ ಸಂಘಟಕರಾದ ಬಸವರಾಜ ಹಟ್ಟಿಗೌಡರ ಅವರು ಕಾರ್ಯಕ್ರಮ ನಿರೂಪಿಸಿದರು.

ಸಚಿವರ ಸಂದೇಶ:News Belgaum-ಅದ್ಧೂರಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ 2
• 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಸ್ವಾತಂತ್ರ್ಯ ಹೋರಾಟಗಾರರೇ, ಜಿಲ್ಲೆಯ ಸಮಸ್ತ ಚುನಾಯಿತ ಪ್ರತಿನಿಧಿಗಳೇ, ಗಣ್ಯಮಾನ್ಯರೇ, ಎಲ್ಲಾ ಆಮಂತ್ರಿತರೇ, ಅಧಿಕಾರಿ ವರ್ಗದವರೇ, ನಾಗರಿಕ ಬಂಧುಗಳೇ, ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಹಾಗೂ ಮಾಧ್ಯಮದ ಸ್ನೇಹಿತರೇ,
• ತಮಗೆಲ್ಲರಿಗೂ 72ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
• ಭಾರತವು ಬ್ರಿಟೀಷರ ಆಳ್ವಿಕೆಯ ಸಂಕೋಲೆಯಿಂದ ಬಿಡುಗಡೆಯಾಗಿ 71 ವರ್ಷಗಳು ಕಳೆದಿವೆ. 72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಮಾಡುವ ಪವಿತ್ರ ಕರ್ತವ್ಯವು ನನಗೆ ದೊರತಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ.
• ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಈ ದಿನವು ಒಂದು ವಿಶೇಷ ದಿನವಾಗಿದೆ. ಈ ಸ್ವಾತಂತ್ರ್ಯ ದಿನವನ್ನು ದೇಶದಾಂದ್ಯಂತ ಅತ್ಯಂತ ಸಂಭ್ರಮ ಮತ್ತು ಸಡಗರಗಳಿಂದ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ.
• ಈ ದಿನವು ಸತ್ಯ, ತ್ಯಾಗ, ಬಲಿದಾನ, ಏಕತೆ ಮತ್ತು ಭಾವೈಕ್ಯತೆಯ ಸಂಕೇತವಾಗಿದೆ.
• ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವು ಸ್ಮರಣೀಯವಾದುದು. ಸ್ವಾತಂತ್ರ್ಯ ಗಳಿಕೆಗಾಗಿ ಭಾರತೀಯರು ನಡೆಸಿದ ಹೋರಾಟ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ವಿಶ್ವದ ಬೇರೆ ದೇಶಗಳಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಗಳಿಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮವು ಮಾದರಿಯಾಯಿತು.
• ಸಾಮ್ರಾಜ್ಯ ಕಟ್ಟಲು, ಸ್ವಾತಂತ್ರ್ಯ ಗಳಿಸಲು ಶಸ್ತ್ರ ಹಿಡಿದು ಯುದ್ಧ ಮಾಡಬೇಕೆಂಬ ಪುರಾತನ ನಂಬಿಕೆಗೆ ನಮ್ಮ ಸ್ವಾತಂತ್ರ್ಯ ಚಳುವಳಿಯು ಹೊಸ ವ್ಯಾಖ್ಯಾನ ನೀಡಿತು.
• ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯವು ಜಗತ್ತಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು.
• ಸುಮಾರು ಮೂರು ಶತಮಾನಗಳ ಕಾಲ ಭಾರತದಲ್ಲಿ ಬೇರೂರಿದ್ದ ಆಂಗ್ಲರನ್ನು ಅಹಿಂಸೆ, ಉಪವಾಸ, ಅಸಹಕಾರದಂತಹ ಅಸ್ತ್ರಗಳ ಮೂಲಕವೇ ಹಿಮ್ಮೆಟ್ಟಿಸಿರುವುದು ಭಾರತೀಯರ ಸಾತ್ವಿಕ ಶಕ್ತಿಗೆ ಸಾಕ್ಷಿಯಾಗಿದೆ.
• ಭಾರತೀಯರ ಈ ಸಾತ್ವಿಕ ಶಕ್ತಿಯಿಂದಾಗಿ ಭಾರತ ದೇಶವು ಇಂದು ಜಗತ್ತಿನ ಬಲಶಾಲಿ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿದೆ.
• ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕವಾಗಿರುವ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಹಾಗೂ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದು ನಾವು ನೆನಪಿಸಿಕೊಳ್ಳಬೇಕಿದೆ.
• ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಸುಭಾಷ್‍ಚಂದ್ರ ಬೋಸ್, ಸರ್ದಾರ ವಲ್ಲಭಭಾಯಿ ಪಟೇಲ್, ಲಾಲ್‍ಬಹದ್ದೂರ್ ಶಾಸ್ತ್ರಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಸರೋಜಿನಿ ನಾಯ್ಡು, ಖಾನ್ ಅಬ್ದುಲ್ ಗಫಾರ್ ಖಾನ್, ಲಾಲಾ ಲಜಪತರಾಯ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್, ದಾದಾಭಾಯಿ ನವರೋಜಿ, ಬಾಬು ರಾಜೇಂದ್ರ ಪ್ರಸಾದ್, ಆಚಾರ್ಯ ಕೃಪಲಾನಿ, ಮೌಲಾನ ಅಬುಲ್ ಕಲಾಂ ಅಜಾದ್ ಮುಂತಾದ ಅಸಂಖ್ಯಾತ ಮಹನೀಯರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿಕೊಂಡು ಅವರಿಗೆ ನಮ್ಮ ನಿಮ್ಮೆಲ್ಲರ ಗೌರವಪೂರ್ವಕ ನಮನ ಹಾಗೂ ಕೃತಜ್ಞತೆಗಳನ್ನು ಅರ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

• ಸ್ವಾತಂತ್ರ್ಯದ ಹೋರಾಟದ ಹಿಂದೆ ಒಂದು ದೊಡ್ಡ ಇತಿಹಾಸ ಮತ್ತು ಪರಂಪರೆಯಿದೆ.
• ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಕರ್ನಾಟಕ ರಾಜ್ಯವೂ ಸಹ ಮಹತ್ತರ ಪಾತ್ರವನ್ನು ವಹಿಸಿದೆ. ಮೈಸೂರಿನ ಹುಲಿ ಟಿಪ್ಪೂ ಸುಲ್ತಾನ್, ವೀರ ಸಿಂಧೂರ ಲಕ್ಷ್ಮಣ, ಸುರುಪುರದ ವೆಂಕಟಪ್ಪ ನಾಯಕ, ನರಗುಂದದ ಬಾಳಾಸಾಹೇಬ್, ಎನ್.ಎಸ್.ಹರ್ಡೀಕರ್, ಆಲೂರು ವೆಂಕಟರಾವ್, ವೀರ ವನಿತೆ ಒನಕೆ ಓಬವ್ವ, ಹುಬ್ಬಳ್ಳಿಯ ಉಮಾದೇವಿ ಕುಂದಾಪೂರ, ಬಳ್ಳಾರಿ ಸಿದ್ದಮ್ಮ, ತುಮಕೂರಿನ ಭಾಗೀರಥಮ್ಮ, ಶಿರಸಿ-ಸಿದ್ದಾಪೂರದ ದೇವಮ್ಮ ಮುಂತಾದವರ ಸ್ವಾತಂತ್ರ್ಯದ ಕಿಚ್ಚು, ಅಪರಿಮಿತ ದೇಶಪ್ರೇಮ, ಅಪ್ರತಿಮ ಹೋರಾಟ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆಯಾಯಿತು.
• ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯೂ ಸಹ ಮುಂಚೂಣಿಯಲ್ಲಿತ್ತು. ಅನೇಕ ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನಮ್ಮ ಜಿಲ್ಲೆಯು ನೀಡಿತ್ತು ಎಂಬುದು ಹೆಮ್ಮೆಯ ವಿಷಯ.
• ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಕಿತ್ತೂರು ರಾಣಿ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಯನ್ನು ದುಸ್ವಪ್ನವಾಗಿ ಕಾಡಿದರು. ಅವರ ದಿಟ್ಟ ಹೋರಾಟ ಮತ್ತು ಕೆಚ್ಚು ಇಂದಿಗೂ ಸಹ ಪ್ರತಿಯೊಬ್ಬ ನಾಗರೀಕರಿಗೂ ಸ್ಪೂರ್ತಿಯ ಸೆಲೆಯಾಗಿದೆ.
• ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ.
• ರಾಟಿ-ಮೇಟಿಗಳೇ ಭಾರತ ದೇಶದ ಶಕ್ತಿ; ಇವುಗಳ ಬಲದ ಮೇಲೆ ಭವ್ಯ ಭಾರತ ನಿರ್ಮಾಣದ ಕನಸು ಕಂಡವರು ಮಹಾತ್ಮಾ ಗಾಂಧೀಜಿ. ಗಾಂಧೀಜಿಯವರ ಈ ಕನಸು ಕರ್ನಾಟಕದಲ್ಲಿ ನನಸು ಮಾಡಿದ ಕೀರ್ತಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮಕ್ಕೆ ಸಲ್ಲುತ್ತದೆ.
• 1937ನೆಯ ಏಪ್ರಿಲ್ 17ರಂದು ಹುದಲಿ ಗ್ರಾಮಕ್ಕೆ ಆಗಮಿಸಿದ ಮಹಾತ್ಮಾ ಗಾಂಧೀಜಿಯವರು ಏಳು ದಿನಗಳ ಕಾಲ ಈ ಗ್ರಾಮದ ಕುಮರಿ ಆಶ್ರಮದಲ್ಲಿ ಉಳಿದುಕೊಂಡಿದ್ದರು.
• ಆಗ ಗಾಂಧೀಜಿಯವರು ಹುದಲಿ ಗ್ರಾಮದ ಜನರಿಗೆ ನೀಡಿದ ಖಾದಿ ದೀಕ್ಷೆ ಹಾಗೂ ನಂತರದ ಬೆಳವಣಿಗೆಗಳಿಂದಾಗಿ ಹುದಲಿ ಗ್ರಾಮವು ಗಾಂಧಿ ಗ್ರಾಮವಾಗಿ ಪರಿವರ್ತನೆಗೊಂಡಿದ್ದು, ದೇಶದ ಮಾದರಿ “ಖಾದಿಗ್ರಾಮ”ವಾಗಿ ಗುರುತಿಸಿಕೊಂಡಿದೆ.
• ಕರ್ನಾಟಕದ ಖಾದಿ ಭಗೀರಥ ಮತ್ತು ಕರ್ನಾಟಕ ಸಿಂಹ ಎಂಬ ಬಿರುದು ಹೊಂದಿರುವ ಹುದಲಿ ಗ್ರಾಮದ ಗಂಗಾಧರರಾವ್ ದೇಶಪಾಂಡೆ ಅಪ್ಪಟ ಗಾಂಧಿವಾದಿ ಹಾಗೂ ಖಾದಿಪ್ರೇಮಿಯಾಗಿದ್ದರು.
• ದೇಶಪಾಂಡೆ ಅವರ ಪರಿಶ್ರಮದ ಫಲವಾಗಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಹುದಲಿಯಲ್ಲಿ ಖಾದಿ ಕೆಲಸ ಆರಂಭಗೊಂಡಿತು. ಹೀಗೆ ನಮ್ಮ ಬೆಳಗಾವಿ ಜಿಲ್ಲೆಯು ಸ್ವಾತಂತ್ರ್ಯ ಹೋರಾಟ ಹಾಗೂ ಸ್ವದೇಶಿ ಚಳವಳಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
• ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಗೂ ಈ ಜಿಲ್ಲೆಗೂ ನಿಕಟವಾದ ಸಂಬಂಧವಿತ್ತು. ಗಾಂಧೀಜಿಯವರು ಒಮ್ಮೆ ಮಾತ್ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಆ ಅಧಿವೇಶನವು 1924ರಲ್ಲಿ ಬೆಳಗಾವಿಯಲ್ಲಿ ಜರುಗಿತು ಎಂಬುದು ಹೆಮ್ಮೆಯ ಸಂಗತಿ.
• ಅದರ ಸ್ಮಾರಕವಾಗಿ ನಿರ್ಮಾಣಗೊಂಡ ವೀರ ಸೌಧಗಳು ರಾಷ್ಟ್ರ ಭಾವನೆಗೆ ಸ್ಪೂರ್ತಿ ತಾಣಗಳಾಗಿವೆ. ಗಂಗಾಧರರಾವ ದೇಶಪಾಂಡೆ, ಅಣ್ಣು ಗುರೂಜಿ, ವಾಲಿ ಚೆನ್ನಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ಪಡೆಯನ್ನೇ ನೀಡಿದ ಕೀರ್ತಿ ಬೆಳಗಾವಿ ಜಿಲ್ಲೆಗೆ ಸಲ್ಲುತ್ತದೆ.
• ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಇನ್ನೂ ಅನೇಕ ಜನರು ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ. ಇಂತಹ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಆತ್ಮೀಯ ಬಂಧುಗಳೇ,
• “ಸ್ವಾತಂತ್ರ್ಯ” ಎನ್ನುವುದು ಅನುಪಮ. ಅಮೂಲ್ಯವಾದ ಜೀವನರತ್ನ. ನಮ್ಮ ಸ್ವಾತಂತ್ರ್ಯ ಹೋರಾಟದ ಉದ್ದೇಶಗಳನ್ನು ಸಂವಿಧಾನÀದ ಆಶಯಗಳನ್ನು ಜಾರಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
• ನಮ್ಮ ಹಿರಿಯರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನಾವೆಂದೂ ಮರೆಯಬಾರದು. ಅವರ ಉನ್ನತ ಮಾನವೀಯ ಗುಣ ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ನೆನಪು ನಮಗೆ ಸದಾ ದಾರಿ ದೀಪವಾಗಿರಬೇಕು.
• ನಮ್ಮ ರಾಷ್ಟ್ರದ ಯುವ ಜನಾಂಗವು ದೇಶಪ್ರೇಮ, ರಾಷ್ಟ್ರೀಯ ಪ್ರಜ್ಞೆ, ಪರಿಶ್ರಮ, ಪ್ರಾಮಾಣಿಕತೆ, ಶ್ರದ್ಧೆ, ವಿಶಾಲ ಮನೋಭಾವ, ದೃಢ ಸಂಕಲ್ಪ, ಶಿಸ್ತು ಮತ್ತು ಸಂಯಮಗಳನ್ನು ಮೈಗೂಡಿಸಿಕೊಳ್ಳಬೇಕು.
• ರಾಷ್ಟ್ರೀಯ ಐಕ್ಯತೆ, ಸಮಗ್ರತೆ ಮತ್ತು ಮತೀಯ ಸೌಹಾರ್ದತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ವಿಚ್ಛಿದ್ರಕಾರಕ ಮತ್ತು ದುಷ್ಟ ಶಕ್ತಿಗಳು ಅಲ್ಲಲ್ಲಿ ಪ್ರಯತ್ನ ನಡೆಸುತ್ತಿರುತ್ತವೆ. ಇವುಗಳ ದಮನಕ್ಕಾಗಿ ಪ್ರತಿಯೊಬ್ಬ ಭಾರತೀಯನೂ ಅದರಲ್ಲೂ ಯುವ ಸಮುದಾಯ ವೀರ ಸೇನಾನಿಗಳಾಗಿ ಒಗ್ಗಟ್ಟಿನಿಂದ ಹೋರಾಡಲು ಟೊಂಕ-ಕಟ್ಟಿ ನಿಲ್ಲಬೇಕು.
• ನಾವೆಲ್ಲರೂ ಒಂದೇ ಎಂಬ ಭಾವನೆ ಹಾಗೂ ಐಕ್ಯತೆ, ಸಮಗ್ರತೆ, ಸಹೋದರತೆ, ಕೋಮು ಸಾಮರಸ್ಯ ಮತ್ತು ಅಭಿವೃದ್ಧಿ ಕಾರ್ಯಗಳೇ ಪ್ರತಿಯೊಬ್ಬರ ಗುರಿಯಾಗಬೇಕು.
• ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಎಲ್ಲರೂ ಬದ್ಧರಾಗಿ ದೃಢಸಂಕಲ್ಪ ಮಾಡಬೇಕು. ದೇಶದ ಸಮಸ್ತ ಜನತೆಯು ಮೇಲು-ಕೀಳು ಎಂಬ ಭೇದ-ಭಾವವಿಲ್ಲದ ರಾಷ್ಟ್ರ ಭಕ್ತಿಯನ್ನು ಹೊಂದಿ ಶಾಂತಿ-ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ನಡೆಯಬೇಕು.
ಆತ್ಮಿಯರೇ,
• ಅನೇಕ ಜಾತಿ-ಧರ್ಮಗಳು, ವಿಭಿನ್ನ ಸಂಸ್ಕøತಿಯ ಜನರು, ನೂರಾರು ಭಾಷೆಗಳು ಹೀಗೆ ವೈವಿಧ್ಯಮಯವಾಗಿರುವ ವಿಶಾಲ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ.
• ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಪಣಕ್ಕಿಟ್ಟು ಹೋರಾಡಿದರು. ಮನೆ-ಮಠಗಳನ್ನು ತೊರೆದು ದೇಶಕ್ಕಾಗಿ ಜೀವನವನ್ನು ಮುಡಿಪಾಗಿಟ್ಟರು. ಸೆರೆಮನೆವಾಸ ಅನುಭವಿಸಿದರು. ಆಂಗ್ಲರ ಗುಂಡಿಗೆ ಬಲಿಯಾದರು. ನೇಣುಗಂಬವನ್ನು ಏರಿದರು.
• ಇಂತಹ ತ್ಯಾಗ-ಬಲಿದಾನ ಮತ್ತು ಸಾತ್ವಿಕ ಹೋರಾಟದ ಫಲವಾಗಿ ಸ್ವತಂತ್ರಗೊಂಡ ನಮ್ಮ ಭಾರತ ದೇಶವು ಈ 71 ವಸಂತಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ, ರಕ್ಷಣಾ ಪಡೆ, ಆಹಾರ ಭದ್ರತೆ, ಮಾಹಿತಿ ಮತ್ತು ತಂತ್ರಜ್ಞಾನ, ನೀರಾವರಿ, ಕೃಷಿ, ತೋಟಗಾರಿಕೆ, ಮೂಲಭೂತ ಸೌಕರ್ಯಗಳು, ಬಾಹ್ಯಾಕಾಶ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕøತಿಕ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ.
• ಜಗತ್ತಿನ ವಿವಿಧ ದೇಶಗಳು ನಮ್ಮ ಪ್ರಗತಿಯನ್ನು ಬೆರೆಗು ಕಣ್ಣಿನಿಂದ ನೋಡುವ ಮಟ್ಟಕ್ಕೆ ನಾವು ಬೆಳೆದಿರುವುದು ಹೆಮ್ಮೆಯ ವಿಷಯವಾಗಿದೆ.
• ಅಂತೆಯೇ, ಜಾಗತಿಕ ಮಟ್ಟದಲ್ಲಿ ಇಂದು ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಹಾಗೂ ನಮ್ಮ ರಾಜ್ಯವು ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ.
• ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ, ದೇಶದ ಏಕತೆ-ಸಮಗ್ರತೆ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ.
• ಸ್ವಾತಂತ್ರ್ಯ ದಿನಾಚರಣೆಯ ಈ ಶುಭಗಳಿಗೆಯಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ, ಕೋಮು-ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ನೆಲೆಗೊಂಡು ಸಮಸ್ತ ಜನತೆ ಸಂತೋಷದಿಂದ ಶಾಂತಿಯುತ ಸಹಬಾಳ್ವೆ ನಡೆಸಲಿ ಎಂದು ಹಾರೈಸುತ್ತೇನೆ.

*** ಜೈ ಹಿಂದ್ – ಜೈ ಕರ್ನಾಟಕ ***

Leave A Reply

 Click this button or press Ctrl+G to toggle between Kannada and English

Your email address will not be published.