ಉತ್ತಮ ಸಮಾಜಕ್ಕಾಗಿ

ಕನ್ನಡ ಅನುಷ್ಠಾನ: ದೂರುಗಳನ್ನು ಪರಿಶೀಲಿಸಿದ ಕನ್ನಡ ಪ್ರಾಧಿಕಾರ ಭಾಷಾ ನೀತಿ ಉಲ್ಲಂಘನೆ-ವರದಿಗೆ ಸೂಚನೆ

news belagavi

0

ಬೆಳಗಾವಿ: (news belgaum)ಖಾನಾಪುರ ತಾಲ್ಲೂಕಿನ ವರಕಡ್‍ನಲ್ಲಿರುವ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕರ ಬಳಿಯಿದ್ದ ಮುಖ್ಯೋಪಾಧ್ಯಾಯರ ಹುದ್ದೆಯ ಪ್ರಭಾರವನ್ನು ನಿಯಮಾವಳಿ ಮೀರಿ ಮರಾಠಿ ಶಿಕ್ಷಕರೊಬ್ಬರಿಗೆ ಹಸ್ತಾಂತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ರಮದ ಬಗ್ಗೆ ಮತ್ತೊಮ್ಮೆ ಕೂಲಂಕುಶ ತನಿಖೆ ಕೈಗೊಂಡು ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಹಾಗೂ ಈ ಬಗ್ಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದಾರೆ.
ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಗುರುವಾರ(ಸೆ.6) ನಡೆದ ಚಿಕ್ಕೋಡಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಬೆರಗೇರ ಅವರು, ಸೇವಾಜೇಷ್ಠತೆ ಆಧರಿಸಿ ಮರಾಠಿ ಶಿಕ್ಷಕರಿಗೆ ಮುಖ್ಯೋಪಾಧ್ಯಯ ಹುದ್ದೆ ವಹಿಸಲಾಗಿತ್ತು ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರಾಧಿಕಾರದ ಅಧ್ಯಕ್ಷರು, ಬೇರೆ ಜಿಲ್ಲೆಯಿಂದ ವರ್ಗಾವಣೆಗೊಂಡು ಬರುವ ಶಿಕ್ಷಕರ ಸೇವಾ ಜೇಷ್ಠತೆ ಕೆಳಕ್ರಮಾಂಕದಿಂದ ಆರಂಭಗೊಳ್ಳುತ್ತದೆ ಎಂಬುದು ನಿಯಮ. ಆದರೆ ಇದನ್ನು ಮೀರಿ ಸೇವಾ ಹಿರಿತನದ ಹೊಂದಿದ್ದ ಕನ್ನಡ ಶಿಕ್ಷಕರಿಂದ ಹುದ್ದೆಯನ್ನು ಕಸಿದುಕೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಬೆಳಗಾವಿ ಭಾಷಾ ಸೂಕ್ಷ್ಮತೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಸರ್ಕಾರಿ ಅಧಿಕಾರಿಗಳು ಸೌಹಾರ್ದತೆ ಹಾಗೂ ಉತ್ತರದಾಯಿತ್ವದೊಂದಿಗೆ ಕಾರ್ಯನಿರ್ವಹಿಸಬೇಕು. ಉಪನಿರ್ದೇಶಕರೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇದನ್ನು ಇತ್ಯರ್ಥಪಡಿಸಬೇಕು ಮತ್ತು ಅನುಪಾಲನಾ ವರದಿಯನ್ನು ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಭಾಷಾ ನೀತಿ ಉಲ್ಲಂಘನೆ: ವರದಿ ಸಲ್ಲಿಸಲು ಸೂಚನೆ:
ಕನ್ನಡ ಹೊರತುಪಡಿಸಿ ಇತರೆ ಮಾಧ್ಯಮದ ಶಾಲೆಗಳಲ್ಲೂ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು ಎಂದು ಸರ್ಕಾರ 2015ರಲ್ಲೇ ಅಧಿಸೂಚನೆ ಹೊರಡಿಸಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಇತರೆ ಮಾಧ್ಯಮಗಳ ಶಾಲೆಗಳಲ್ಲಿ ಈ ರೀತಿ ಕನ್ನಡ ಭಾಷೆಯನ್ನು ಬೋಧಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚನೆ ನೀಡಿದರು.
ಕೆಲವು ಖಾಸಗಿ ಶಾಲೆಗಳಲ್ಲಿ ಭಾಷಾನೀತಿಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿರುವುದರಿಂದ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕು.
ಒಂದು ವೇಳೆ ಯಾವುದಾದರೂ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸದಿರುವುದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಐದು ಶಾಲೆಗಳನ್ನು ಹೊರತುಪಡಿಸಿ ಬಹುತೇಕ ಶಾಲೆಗಳು ಈ ನಿಯಮ ಪಾಲಿಸುತ್ತಿದ್ದು, ಈ ಶಾಲೆಗಳಿಗೆ ನೋಟಿಸ್ ನೀಡಿದ್ದರಿಂದ ಕೆಲವು ಶಾಲೆಗಳು ಈಗಾಗಲೇ ಕನ್ನಡದಲ್ಲಿ ಬೋಧನೆ ಆರಂಭಿಸಿವೆ. ಆದಾಗ್ಯೂ ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡಲಾಗುವುದು ಎಂದು ಉಪನಿರ್ದೇಶಕ ಎ.ಬಿ.ಪುಂಡಲೀಕ ತಿಳಿಸಿದರು.

ಖಾಸಗಿ ಶಾಲೆಗೆ ಅನುಮತಿ ಬೇಡ:
ಸರ್ಕಾರಿ ಶಾಲೆಗಳ ಒಂದು ಕಿ.ಮೀ. ಸುತ್ತಳತೆಯಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಎಂಬ ನಿಮವಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಯಮ ಪಾಲಿಸಿದರೆ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬಹುದು. ಆದ್ದರಿಂದ ಈ ನಿಯಮವನ್ನು ಕಟ್ಟನಿಟ್ಟಿನಿಂದ ಪಾಲಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ನಗರದಲ್ಲಿರುವ ಆರ್ಯನ್ಸ್ ವಲ್ರ್ಡ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದುಕೊಂಡು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುತ್ತಿತ್ತು. ಆ ಕಾರಣಕ್ಕೆ ಶಾಲೆಯನ್ನು ಬಂದ್ ಮಾಡಿಸಲಾಗಿತ್ತು. ಆದರೆ ಅವರು ಮೇಲ್ಮನವಿ ಸಲ್ಲಿಸಿ ಪುನಃ ಶಾಲೆ ಆರಂಭಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.
ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರಾಧಿಕಾರದ ಅಧ್ಯಕ್ಷರು, ನಿಯಮಾವಳಿ ಉಲ್ಲಂಘಿಸಿದ್ದಕ್ಕೆ ಶಾಲೆಯನ್ನು ಬಂದ್ ಮಾಡಿಸಿದ್ದರೂ ಪ್ರಕರಣ ಇನ್ನೂ ಇತ್ಯರ್ಥವಾಗದಿದ್ದರೂ ಪುನಃ ಶಾಲೆ ಆರಂಭಿಸಿ, ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವುದು ಸಹಿಸಲಾಗದು. ಆದ್ದರಿಂದ ಈ ಶಾಲೆಯ ಮೇಲೆ ಕಾನೂನು ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದರು.
ಬೆಳಗಾವಿ ತಾಲ್ಲೂಕಿನ ಬೆನಕನಹಳ್ಳಿಯಲ್ಲಿರುವ ಕನ್ನಡ ಶಾಲೆಯ ಮೈದಾನವನ್ನು ಬೇರೆ ಶಾಲೆಯವರು ಅತಿಕ್ರಮಣ ಮಾಡಿದ್ದಾರೆ ಎಂಬ ದೂರುಗಳ ಬಗ್ಗೆ ವಿಚಾರಣೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷರು, ಉಪನಿರ್ದೇಶಕರೇ ಖುದ್ದಾಗಿ ಸ್ಥಳ ಪರಿಶೀಲಿಸಿ ವರದಿ ನೀಡಬೇಕು ಎಂದರು.
ಹಿಂಡಲಗಾ, ಬಿಜಗರ್ಣಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿರುವ ಒಟ್ಟು 154 ಪ್ರಾಥಮಿಕ ಶಾಲೆಗಳ ವ್ಯಾಪ್ತಿಯಲ್ಲಿ ಒಂದೇ ಒಂದು ಕನ್ನಡ ಪ್ರೌಢಶಾಲೆ ಇಲ್ಲ ಎಂಬುದರ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಈ ಭಾಗದಲ್ಲಿ ಪ್ರೌಢಶಾಲೆಯಿಲ್ಲ; ಆದರೆ ಶಾಲೆ ಆರಂಭಿಸುವಂತೆ ಕೋರಿ ಅನೇಕ ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಉಪನಿರ್ದೇಶಕ ಎ.ಬಿ.ಪುಂಡಲೀಕ ವಿವರಿಸಿದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಅವರು, ಈ ಬಗ್ಗೆ ತಕ್ಷಣವೇ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಮಾತೃಭಾಷೆ ರಕ್ಷಣೆಗೆ ಪ್ರಾಥಮಿಕ ಶಾಲೆಗಳ ಶಿಕ್ಷಣ ಮಹತ್ವದ್ದಾಗಿದೆ. ಆದ್ದರಿಂದ ಈ ಹಂತದಲ್ಲಿಯೇ ಕನ್ನಡ ಅನುಷ್ಠಾನ ಪರಿಣಾಮಕಾರಿಯಾಗಬೇಕು. ಆರ್‍ಟಿಇ ಜಾರಿಯಿಂದ ಸರ್ಕಾರಿ ಶಾಲೆಗಳನ್ನು ಪರೋಕ್ಷವಾಗಿ ಮುಚ್ಚಿದಂತಾಗುತ್ತಿದೆ. ಆದ್ದರಿಂದ ಸರ್ಕಾರ ಆರ್‍ಟಿಇ ರದ್ದುಪಡಿಸಿ ಈ ಕಾಯ್ದೆ ಅಡಿ ಖಾಸಗಿ ಶಾಲೆಗಳಿಗೆ ನೀಡುವ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನೀಡಿದರೆ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಅವರು, ಕನ್ನಡ ಭಾಷೆ/ಕನ್ನಡಿಗರ ಹಿತರಕ್ಷಣೆಗಾಗಿ ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಪ್ರಾಧಿಕಾರವು ನಿರಂತರ ಚಟುವಟಿಕೆಗಳ ಮೂಲಕ ಕನ್ನಡ ಅನುಷ್ಠಾನಕ್ಕೆ ಮುಂದಾಗಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರತ್ನಾಕರ ಶೆಟ್ಟಿ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರಾದ ಡಾ.ಸರಜೂ ಕಾಟ್ಕರ್, ಅನಂತಕುಮಾರ ಬ್ಯಾಕೋಡ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಎಂ.ಜಿ.ದಾಸರ, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.