ಉತ್ತಮ ಸಮಾಜಕ್ಕಾಗಿ

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ: ರಸ್ತೆ-ವೃತ್ತಗಳಿಗೆ ಕವಿ, ಸಾಹಿತಿಗಳ ಹೆಸರಿಡಲು ಸೂಚನೆ ಕನ್ನಡ ಫಲಕಗಳು ಕಡ್ಡಾಯ: ಪ್ರೊ. ಸಿದ್ದರಾಮಯ್ಯ ಸೂಚನೆ

news belagavi

0

ಬೆಳಗಾವಿ: (news belagavi)ಮುಂಬರುವ ಕನ್ನಡ ರಾಜ್ಯೋತ್ಸವ (ನವೆಂಬರ್ 1)ದ ವೇಳೆಗೆ ಬೆಳಗಾವಿ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ನಡೆಸುವ ಎಲ್ಲ ಅಂಗಡಿ-ಮುಂಗಟ್ಟುಗಳು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಸೆ.5) ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತವು ‘ನಾಮಫಲಕ ಸಪ್ತಾಹ’ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ನವೆಂಬರ್ 1 ರೊಳಗೆ ಎಲ್ಲ ಫಲಕಗಳನ್ನು ಕಡ್ಡಾಯವಾಗಿ ಬರೆಯಿಸಲು ಕ್ರಮ ಕೈಗೊಂಡು ಪ್ರಾಧಿಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಹೇಳಿದರು.
ನಿಯಮಾವಳಿ ಪ್ರಕಾರ ಪ್ರತಿಯೊಂದು ವಾಣಿಜ್ಯ ಮಳಿಗೆಯವರು ಕಡ್ಡಾಯವಾಗಿ ಕನ್ನಡದಲ್ಲಿಯೇ ಫಲಕ ಬರೆಸಬೇಕು. ಒಂದು ವೇಳೆ ಇನ್ನೊಂದು ಭಾಷೆಯಲ್ಲೂ ಬಳಸಲು ಬಯಸಿದರೆ ಫಲಕದ ಶೇ.60ರಷ್ಟು ಸ್ಥಳದಲ್ಲಿ ಕನ್ನಡ ಹಾಗೂ ಉಳಿದ ಜಾಗೆಯಲ್ಲಿ ಇತರೆ ಭಾಷೆಯನ್ನು ಬಳಸಬಹುದು. ಆದರೆ ಕನ್ನಡಕ್ಕೆ ಆದ್ಯತೆ ನೀಡುವುದು ಕಡ್ಡಾಯವಾಗಿದೆ ಎಂದರು.
ಅದೇ ರೀತಿ ಇದುವರೆಗೆ ಹೆಸರು ಇಡದೇ ಇರುವ ನಗರದ ನೂತನ ಬಡಾವಣೆಗಳು, ರಸ್ತೆಗಳು, ವೃತ್ತಗಳು ಹಾಗೂ ಉದ್ಯಾನಗಳಿಗೆ ಕನ್ನಡದ ಕವಿ, ಸಾಹಿತಿಗಳ, ಹೋರಾಟಗಾರರ ಹೆಸರುಗಳನ್ನು ಇಡಬೇಕು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಸಕ್ತಿ ವಹಿಸಬೇಕು ಎಂದು ಪ್ರೊ.ಸಿದ್ದರಾಮಯ್ಯ ನಿರ್ದೇಶನ ನೀಡಿದರು.
ಕಡ್ಡಾಯ ಸಭೆಗೆ ಸೂಚನೆ:
ಕನ್ನಡದ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರ ರಚಿಸಿರುವ ಕನ್ನಡ ಜಾಗೃತ ಸಮಿತಿಯ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ನಡೆಸಬೇಕು. ಸಭೆಯ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುಪಾಲನಾ ವರದಿಯನ್ನು ಕಳುಹಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಕಾವಲುಗಾರ ಹುದ್ದೆಗಳ ಭರ್ತಿ ವೇಳೆ ನೇಮಕಾತಿ ಪ್ರಕ್ರಿಯೆಯನ್ನು ಇಂಗ್ಲಿಷಿನಲ್ಲಿ ನಡೆಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಇದಲ್ಲದೇ ಇತ್ತೀಚೆಗೆ ಸಮಾಜಕಲ್ಯಾಣ ಇಲಾಖೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿರುವ ಹುದ್ದೆಗಳ ಪೈಕಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆಯೂ ಮಾಹಿತಿ ಒದಗಿಸುವಂತೆ ತಿಳಿಸಿದರು.
ನೆರೆಯ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತಿರುವ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವೃತ್ತಿಶಿಕ್ಷಣವನ್ನು ಪಡೆಯಲು ಬಯಸಿದರೆ ಅಂತವಿಗೆ ಸುಲಭವಾಗಿ ಪ್ರವೇಶ ಕಲ್ಪಿಸಬೇಕು. ನೇಮಕಾತಿ ಸಂದರ್ಭದಲ್ಲೂ ಹೊರ ರಾಜ್ಯದಲ್ಲಿ ಕನ್ನಡ ಕಲಿತವರಿಗೂ ಕನ್ನಡ ಮಾಧ್ಯಮ ಕೋಟಾದಡಿಯಲ್ಲಿ ಶೇ.5 ರ ಮೀಸಲಾತಿ ಅಡಿಯಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಬ್ಯಾಂಕ್ ನೌಕರರಿಗೆ ಕನ್ನಡ ಕಲಿಕೆ ಕಡ್ಡಾಯ:
News Belgaum-ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ: ರಸ್ತೆ-ವೃತ್ತಗಳಿಗೆ ಕವಿ, ಸಾಹಿತಿಗಳ ಹೆಸರಿಡಲು ಸೂಚನೆ ಕನ್ನಡ ಫಲಕಗಳು ಕಡ್ಡಾಯ: ಪ್ರೊ. ಸಿದ್ದರಾಮಯ್ಯ ಸೂಚನೆಅಖಿಲ ಭಾರತ ಮಟ್ಟದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ಕರ್ನಾಟಕದಲ್ಲಿ ನಿಯೋಜನೆಗೊಳ್ಳುವ ಬ್ಯಾಂಕ್ ನೌಕರರು ಆರು ತಿಂಗಳಲ್ಲಿ ಕನ್ನಡ ಕಲಿತುಕೊಳ್ಳಬೇಕು ಎಂಬ ನಿಯಮವಿದೆ. ಒಂದು ವೇಳೆ ಕನ್ನಡ ಕಲಿಯದಿದ್ದರೆ ಅಂತಹ ನೌಕರರನ್ನು ಇಲ್ಲಿಂದ ಬಿಡುಗಡೆಗೊಳಿಸಬೇಕು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚನೆ ನೀಡಿದರು.
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್ ಅವರು, ಈಗಾಗಲೇ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಬಿರ ನಡೆಸಲಾಗುತ್ತಿದೆ. ಕನ್ನಡ ಕಲಿಯದವರ ನಿಖರ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳ ಚಲನ್‍ಗಳು, ಚೆಕ್‍ಬುಕ್, ಅರ್ಜಿ ನಮೂನೆ ಮತ್ತಿತರ ದಾಖಲೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಜತೆಗೆ ಕಡ್ಡಾಯವಾಗಿ ಕನ್ನಡವನ್ನೂ ಒಳಗೊಂಡಿರಬೇಕು ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಈ ಬಗ್ಗೆ ಕೇಂದ್ರ ಸರ್ಕಾರವೇ ನಿಯಮಾವಳಿ ರೂಪಿಸಿದ್ದರೂ ಕೆಲ ಬ್ಯಾಂಕುಗಳು ಇದನ್ನು ಪಾಲಿಸದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಇದೇ ರೀತಿಯಲ್ಲಿ ಐಸಿಎಸ್‍ಇ, ಸಿಬಿಎಸ್‍ಇ ಮತ್ತಿತರ ಪಠ್ಯಕ್ರಮ ಹೊಂದಿರುವ ಶಾಲೆಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು.

ಬೆಳಗಾಂವ ಅಲ್ಲ; ಇದು “ಬೆಳಗಾವಿ”:
News Belgaum- 135ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಚರಿಸುವ ಕೆಲವು ಬಸ್‍ಗಳ ಫಲಕಗಳಲ್ಲಿ ಈಗಲೂ “ಬೆಳಗಾಂವ ಅಥವಾ ಬೆಳಗಾಮ್” ಎಂದು ಇರುತ್ತದೆ ಎಂಬುದರ ಬಗ್ಗೆಯೂ ಚರ್ಚೆ ನಡೆಯಿತು.
ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಥವಾ ಸಂಬಂಧಪಟ್ಟ ಅಧಿಕಾರಿಗಳು “ಬೆಳಗಾವಿ” ಎಂದು ಮರುನಾಮಕರಣಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಲಗತ್ತಿಸಿ ಮಹಾರಾಷ್ಟ್ರದ ಸಾರಿಗೆ ಇಲಾಖೆಗೆ ಪತ್ರ ಬರೆಯುವ ಮೂಲಕ ಇದನ್ನು ಸರಿಪಡಿಸಬೇಕು ಎಂದು ತಿಳಿಸಿದರು.

ಕನ್ನಡದಲ್ಲಿರಲಿ ವೆಬ್‍ಸೈಟ್ ಮುಖಪುಟ:
ಜಿಲ್ಲಾಡಳಿತದ ವೆಬ್‍ಸೈಟ್ ಕನ್ನಡ ಮತ್ತು ಇಂಗ್ಲಿಷ್‍ನಲ್ಲಿದೆ. ಆದರೆ ಮುಖಪುಟ ಇಂಗ್ಲಿಷ್‍ನಲ್ಲಿದ್ದು, ಕನ್ನಡವನ್ನು ಆಯ್ಕೆ ಭಾಷೆಯಾಗಿ ನೀಡಲಾಗಿದೆ. ಇದರ ಬದಲಾಗಿ ವೆಬ್‍ಸೈಟಿನ ಮುಖಪುಟವನ್ನೇ ಕನ್ನಡೀಕರಣಗೊಳಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಸೂಚನೆ ನೀಡಿದರು.
ಬೆಳಗಾವಿ ಪೊಲೀಸ್ ಕಮೀಷನರೇಟ್ ವೆಬ್‍ಸೈಟ್ ಸಂಪೂರ್ಣ ಇಂಗ್ಲಿಷ್‍ನಲ್ಲಿದೆ. ಅದೇ ರೀತಿ ಮಹಾನಗರ ಪಾಲಿಕೆಯ ವೆಬ್‍ಸೈಟ್ ಕೂಡ ಇಂಗ್ಲಿಷ್‍ನಲ್ಲಿದ್ದು, ಹದಿನೈದು ದಿನಗಳಲ್ಲಿ ಇದನ್ನು ಕನ್ನಡೀಕರಣಗೊಳಿಸಿ ಪ್ರಾಧಿಕಾರಕ್ಕೆ ಅನುಪಾಲನಾ ವರದಿ ಸಲ್ಲಿಸುವಂತೆ ಹೇಳಿದರು.
ಕೊನೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಮುಂಬರುವ ರಾಜ್ಯೋತ್ಸವದ ವೇಳೆಗೆ ಎಲ್ಲ ಅಂಗಡಿ-ಮುಂಗಟ್ಟುಗಳ ಫಲಕಗಳು ಕನ್ನಡದಲ್ಲಿ ಬರೆಯಿಸಲು ಕ್ರಮ ಕೈಗೊಳ್ಳಲಾಗುವುದು. ಇತರೆ ಪಠ್ಯಕ್ರಮದ ಶಾಲೆಗಳಲ್ಲಿ ನಿಯಮಾವಳಿ ಪ್ರಕಾರ ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಬೋಧಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಜಿಲ್ಲಾ ಕನ್ನಡ ಜಾಗೃತ ಸಮಿತಿಯ ಸದಸ್ಯರಾದ ಡಾ.ಸರಜೂ ಕಾಟ್ಕರ್, ಅನಂತಕುಮಾರ ಬ್ಯಾಕೂಡ, ಡಾ.ವೀರಶೆಟ್ಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ್ ಕರಿಶಂಕರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಕೆ.ಮುರಳೀಧರ ಅವರು ಸಭೆಯನ್ನು ನಿರ್ವಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಇದಕ್ಕೂ ಮುಂಚೆ ಬೆಳಗಾವಿ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲೆಯ ಸಾಹಿತಿಗಳ, ಕನ್ನಡಪರ ಹೋರಾಟಗಾರರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ನಡೆಸಿ ಕನ್ನಡ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.