ಉತ್ತಮ ಸಮಾಜಕ್ಕಾಗಿ

ಸುವರ್ಣ ಸೌಧದ ಮುಖ್ಯ ದ್ವಾರದ ಗೇಟಿಗೆ ಬೀಗ ಹಾಕಿ, ಅಹೋರಾತ್ರಿ ಧರಣಿ ಆರಂಭಿಸಲಾಗುವದು.

news belagavi

0

ಬೆಳಗಾವಿ:(news belgaum) ಇಲ್ಲಿಯ ಸುವರ್ಣ ಸೌಧಕ್ಕೆ ರಾಜ್ಯ ಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತಿರುವ ಮೂಲಕ ಸುವರ್ಣ ಸೌಧವನ್ನು ಈ ಭಾಗದ ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ, ಸೆಪ್ಟೆಂಬರ 15 ರೊಳಗಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯಲಾಗುತ್ತಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ತಿಳಿಸಿದ್ದಾರೆ.
ಶನಿವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯೋಗದ ಭೇಟಿಯ ನಂತರವೂ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳ ದಿಸೆಯಲ್ಲಿ ಪೂರಕ ಕ್ರಮಗಳನ್ನು ಕೈ ಕೊಳ್ಳದಿದ್ದರೇ, ಈ ತಿಂಗಳ ಕೊನೆಯ ವಾರದಲ್ಲಿ ಸುವರ್ಣ ಸೌಧದ ಮುಖ್ಯ ದ್ವಾರದ ಗೇಟಿಗೆ ಬೀಗ ಹಾಕಿ, ಅಹೋರಾತ್ರಿ ಧರಣಿ ಆರಂಭಿಸಲಾಗುವದು. ಆಗ ಆಗುವ ಅನಾಹುತಗಳಿಗೆ ರಾಜ್ಯ ಸರಕಾರವೇ ಹೊಣೆಯಾಗಬೇಕಾಗುವದೆಂದು ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಈ ಬೇಡಿಕೆಗಳಿಗೆ ಆಗ್ರಹಿಸಿ ನೂರಾರು ಮಠಾಧೀಶರ ನೇತೃತ್ವದಲ್ಲಿ ಪಕ್ಷಾತೀತ ಧರಣಿ ನಡೆಸಿದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭರವಸೆಯ ಮಾತುಗಳನ್ನಾಡಿದರು. ಆದರೆ, ನಂತರದ ದಿನಗಳಲ್ಲಿ ಯಾವ ಪೂರಕ ಹೆಜ್ಜೆಗಳು ಇಡಲಿಲ್ಲ. ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರದ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂಬ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು.
ಬೇಡಿಕೆಗಳನ್ನು ಈಡೇರಿಸುವದರ ಬದಲು ಇಲ್ಲಿಯ ಕೆಲ ಕಚೇರಿಗಳನನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಸರಕಾರದ ಈ ಕ್ರಮ ಸರಿ ಅಲ್ಲ. ಇಂತಹ ಕ್ರಮಗಳಿಂದ ಪ್ರತ್ಯೇಕತೆಯ ಕೂಗು ಹೆಚ್ಚಾಗುವದೆಂಬುದನ್ನು ರಾಜ್ಯ ಸರಕಾರ ಬೇಗ ಅರ್ಥ ಮಾಡಿಕೊಳ್ಳಬೇಕು. ಪ್ರತ್ಯೇಕತೆಯ ಕೂಗು ಹೆಚ್ಚಾದರೆ, ಅದನ್ನು ತಡೆಯುವದು ಸಾಧ್ಯವಾಗುವದಿಲ್ಲ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಬಂದ ನಂತರ ನಮ್ಮ ಬೇಡಿಕೆಗಳ ಬಗ್ಗೆ ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸಲು ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರವಾಸ ಹಮ್ಮಿಕೊಳ್ಳಲಾಗುವದು ಎಂದರು.
ಕಲ್ಯಾಣರಾವ ಮುಚಳಂಬಿ ಅವರು, ರಾಜ್ಯ ಸರಕಾರ ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಗಳ ಬಗ್ಗೆ ಪೂರಕ ಕ್ರಮಗಳನ್ನು ಕೈಗೊಳ್ಳುವದರ ಬದಲು ವಿರುದ್ಧ ಹೆಜ್ಜೆಗಳನ್ನು ಇಡುತ್ತಿರುವದು ಸರಿ ಅಲ್ಲ. ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರ್.ಎಸ್.ದರ್ಗೆ ಅವರು, ರಾಜ್ಯ ಸರಕಾರಗಳು ನಮ್ಮ ಭಾಗದ ಬೇಡಿಕೆಗಳಿಗೆ ಬೇಗ ಸ್ಪಂಧಿಸುವದಿಲ್ಲ. ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ರಚನೆಯೆಂತಹ ಸಣ್ಣ ಸಣ್ಣ ಬೇಡಿಕೆಗಳ ಈಡೇರಿಕೆಗಾಗಿ ದಶಕಗಳ ಹೋರಾಟ ಮಾಡಬೇಕಾಯಿತು. ರಾಜ್ಯ ಸರಕಾರಗಳ ಇಂತಹ ನಿರ್ಲಕ್ಷತನವು ಆಕ್ರೋಶ ಮೂಡಿಸುತ್ತಿದೆ. ನಾವು ಏನೆ ಪಡೆಯಬೇಕಾದರೂ ಅದಕ್ಕೆ ಸುಧೀರ್ಘ ಹೋರಾಟ ಮಾಡಬೇಕಾಗುತ್ತಿದೆ. ಆದರೆ, ನಮ್ಮ ಹೋರಾಟ ನಿಲ್ಲುವದಿಲ್ಲ. ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರೆಯುತ್ತದೆ ಎಂದರು.
ಎಂ.ಟಿ.ಪಾಟೀಲ, ಪ್ರವೀಣ ಪಾಟೀಲ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.