ಉತ್ತಮ ಸಮಾಜಕ್ಕಾಗಿ

ಪ್ರಕಟಣೆ

Publication

0

ಮಾಜಿ ಶಾಸಕ ಪ್ರಲ್ಹಾದ ರೆಮಾಣಿ ನಿಧನ; ಸಚಿವರ ಸಂತಾಪ
ಬೆಳಗಾವಿ: (tarun kranti) ಖಾನಾಪೂರದ ಮಾಜಿ ಶಾಸಕರಾದ ಶ್ರೀ ಪ್ರಲ್ಹಾದ ರೆಮಾಣಿಯವರ ನಿಧನಕ್ಕೆ ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಸಂತಾಪ ಸೂಚಿಸಿದ್ದಾರೆ. ಸರಳ ಸಜ್ಜನ ವ್ಯಕ್ತಿಯಾಗಿದ್ದ ಅವರು ಎಲ್ಲರೊಡನೆ ತುಂಬಾ ಆತ್ಮೀಯವಾಗಿ ಬೆರೆಯುತ್ತಿದ್ದರು. ಇವರು ವಿಧಾನಸಭೆ ಸದಸ್ಯರಾದ ಅವಧಿಯಲ್ಲಿ ಖಾನಾಪೂರ ತಾಲೂಕಿಗೆ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿಗೆ ಶ್ರಮಿಸಿದ್ದರು. ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಎಂದು ಸಚಿವರು ಪ್ರಾರ್ಥಿಸಿರುತ್ತಾರೆ.
ಪರೀಕ್ಷೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಬೆಳಗಾವಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇವರ ವತಿಯಿಂದ 2018ರ ಜನವರಿ 22 ರಿಂದ 30ರವರೆಗೆ ಬೆಳಗಾವಿ ನಗರದ ಸರ್ದಾರ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ಬೆಳಗಾವಿ ಪರೀಕ್ಷಾ ಕೆಂದ್ರದಲ್ಲಿ ವಾಣಿಜ್ಯ ಪರೀಕ್ಷೆಗಳು ಜರುಗಲಿದ್ದು, ಕಾರಣ ಪರೀಕ್ಷೆ ಅವಧಿಯಲ್ಲಿ ಸದರಿ ಸ್ಥಳವನ್ನು ಸೂಕ್ಷ್ಮ ಸ್ಥಳವೆಂದು ಪರಿಗಣಿಸಿ, ಸದರಿ ಸ್ಥಳದ 200 ಮೀಟರ ಸುತ್ತ-ಮುತ್ತಲಿನ ಪ್ರದೇಶವನ್ನು ಸಿ.ಆರ್.ಪಿ.ಸಿ. 1973 ಕಲಂ 144 ರನ್ವಯ ನಿಷೇಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.
ಅದರಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇವರ ವತಿಯಿಂದ 2018ರ ಜನವರಿ 31 ರಿಂದ ಫೆಬ್ರುವರಿ 6ರವರೆಗೆ ಬೆಳಗಾವಿ ನಗರದ ಆರ್.ಎನ್. ಶೆಟ್ಟಿ ಪಾಲಿಟೇಕ್ನಿಕ್ ಕಾಲೇಜು, ಶಿವಬಸವನಗರ ಬೆಳಗಾವಿ ಪರೀಕ್ಷಾ ಕೆಂದ್ರದಲ್ಲಿ ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು ಜರುಗಲಿದ್ದು, ಕಾರಣ ಪರೀಕ್ಷೆ ಅವಧಿಯಲ್ಲಿ ಸದರೀ ಸ್ಥಳವನ್ನು ಸೂಕ್ಷ್ಮ ಸ್ಥಳವೆಂದು ಪರಿಗಣಿಸಿ, ಸದರೀ ಸ್ಥಳದ 200 ಮೀಟರ ಸುತ್ತ-ಮುತ್ತಲಿನ ಪ್ರದೇಶವನ್ನು ಸಿ.ಆರ್.ಪಿ.ಸಿ. 1973 ಕಲಂ 144 ರನ್ವಯ ನಿಷೇಧಿತ ಪ್ರದೇಶವೆಂದು ಘೋಷಿಸಿ ಬೆಳಗಾವಿ ತಹಶೀಲ್ದಾರ ಮತ್ತು ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀಮತಿ ಮಂಜುಳಾ ನಾಯಕ ಅವರು ಆದೇಶ ಹೊರಡಿಸಿದ್ದಾರೆ.

ನಿಷೇದಿತ ಸ್ಥಳಗಳಲ್ಲಿ
ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿ ತಿರುಗಾಡುವುದನ್ನು, ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ಮಕ್ಕಳಿಗೆ ನಕಲು ಮಾಡಲು ಸಹಾಯ ಮಾಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಹತ್ತಿರ ಬರುವುದನ್ನು, ಸರ್ಕಾರಿ ಬಸ್ಸು ಹಾಗೂ ಇತರೆ ವಾಹನಗಳಗೆ ಅಡೆತಡೆ ಉಂಟುಮಾಡುವುದನ್ನು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಯಾವುದೇ ಸಭೆ/ಸಮಾರಂಭಗಳು ನಡೆಯುತ್ತಿದ್ದಲ್ಲಿ ಧ್ವನಿವರ್ಧಕಗಳನ್ನು ನಿರ್ಬಂಧಿಸಿದೆ.
ಈ ಆದೇಶವು ಮದುವೆ ಹಾಗೂ ಶವಸಂಸ್ಕಾರಕ್ಕೆ ಅನ್ವಯಿಸುವದಿಲ್ಲ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಫೆ.21 ರಿಂದ ರಸ್ತೆ ವಾಹನ ಸಂಚಾರ ಗಣತಿ ಕಾರ್ಯ
ಬೆಳಗಾವಿ: ಲೋಕೋಪಯೋಗಿ ಇಲಾಖೆ ವತಿಯಿಂದ ಫೆಬ್ರವರಿ 21 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 23 ರಂದು ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ಎಲ್ಲ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಈ ಗಣತಿಯಿಂದ ಸಂಗ್ರಹಿಸಲಾದ ಮಾಹಿತಿಯಿಂದ ವಾಹನಗಳ ಸಂಚಾರ ಸಾಂದ್ರತೆ ಮತ್ತು ಸಂಚಾರದ ತೀವ್ರತೆಯ ವಿವರಗಳು ತಿಳಿದು ಬರುತ್ತವೆ. ಇದರಿಂದ ಮುಂದೆ ಕೈಗೊಳ್ಳಲಾಗುವ ರಸ್ತೆ ಯೋಜನೆಗಳಲ್ಲಿ ರಸ್ತೆಗಳ ಅಗಲ ನಿರ್ಧರಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅನುಕೂಲವಾಗುತ್ತದೆ.
ಗಣತಿ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ರಸ್ತೆಗಳ ಬದಿಯಲ್ಲಿ ತಾತ್ಕಾಲಿಕ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ವಾಹನ ಸವಾರರಿಗೆ ಈ ಬಗ್ಗೆ ಗೊತ್ತಾಗುವ ನಿಟ್ಟಿನಲ್ಲಿ ‘ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ, ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ.
ಈ ಗಣತಿ ಕಾರ್ಯಕ್ಕೆ ರಸ್ತೆಗಳ ಮೇಲೆ ಸಂಚರಿಸುವ ಎಲ್ಲ ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಲೋಕಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ ಎಚ್. ಸುರೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ ಮಾಹೆಯ ಪಡಿತರ ಅಕ್ಕಿ, ಧಾನ್ಯ ಬಿಡುಗಡೆ
ಬೆಳಗಾವಿ: ಜನವರಿ-2018ರ ಮಾಹೆಗಾಗಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳಾದ ಅಕ್ಕಿ ಮಾತ್ರ ಉಚಿತವಾಗಿ ವಿತರಿಸಲು ಬಿಡುಗಡೆ ಮಾಡಲಾಗಿದೆ. ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಹಾಗೂ ಅಕ್ಷಯ ಪಡಿತರ ಚೀಟಿದಾರರಿಗೆ 5 ಕೆ.ಜಿ ಉಚಿತವಾಗಿ ಅಕ್ಕಿ ಹಾಗೂ 1 ಕೆ.ಜಿ ತೊಗರಿ ಬೆಳೆಯನ್ನು ನಿಯಮಾವಳಿಯಂತೆ ಕೆ.ಜಿ ಗೆ 38 ರೂಪಾಯಿ ದರದಲ್ಲಿ ವಿತರಿಸಲಾಗುತ್ತಿದೆ.
ಅದರಂತೆ ಆದ್ಯತೇತರ ಎಪಿಎಲ್ ಪಡಿತರ ಚೀಟಿದಾರರಿಗೆ ಏಕಸದಸ್ಯರಿರುವ ಪಡಿತರ ಚೀಟಿಗಳಿಗೆ 5ಕೆಜಿ ಹಾಗೂ ಆದ್ಯತೇತರ ಎಪಿಎಲ್ ಪಡಿತರ ಚೀಟಿದಾರರಿಗೆ ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗಳಿಗೆ 10ಕೆಜಿ ನಿಯಮಾವಳಿಯಂತೆ ಕೆ.ಜಿ ಗೆ 15 ರೂಪಾಯಿ ದರದಲ್ಲಿ ವಿತರಿಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಇರುವ ನ್ಯಾಯಬೆಲೆ ಅಂಗಡಿಕಾರರು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಕಾರ್ಯವನ್ನು ಮಾಡುತ್ತಾರೆ. ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ವಿತರಿಸುವಂತೆ ನ್ಯಾಯಬೆಲೆ ಅಂಗಡಿಕಾರರಿಗೆ ಸೂಚಿಸಲಾಗಿದೆ.
ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿಂದ ತೊಂದರೆಯಾದಲ್ಲಿ ಟೋಲ್‍ಫ್ರಿ ಸಂಖ್ಯೆ 1967 ಗೆ ಕರೆ ಮಾಡಿ ದೂರನ್ನು ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಅಕ್ರಮ:
ಒಟ್ಟು 32 ಸಾವಿರ ದಂಡ
ಬೆಳಗಾವಿ:ಹಾಲು ಹಾಗೂ ಹಾಲಿನ ಉತ್ಪನ್ನಗಳ ಲೇಬಲ್ ಮೇಲೆ ತಯಾರಿಸಿದ ದಿನಾಂಕ, ಮುಕ್ತಾಯ ದಿನಾಂಕ ಹಾಗೂ ಬ್ಯಾಚ್ ಸಂಖ್ಯೆಯನ್ನು ನಮೂದಿಸದೇ ವಾಹನದಲ್ಲಿ ಸಾಗಿಸುತ್ತಿದ್ದ ಪ್ರವೀಣ ದೇಸಾಯಿ ಎಂಬುವವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ರೂ.22000 ದಂಡ ವಿಧಿಸಿದ್ದಾರೆ.
ಜನವರಿ 21 ರಂದು ದಿನಶಾ ಐಸಕ್ರೀಮ್ ಕಂಪನಿಯನ್ನು ಪರಿಶೀಲಿಸಿದ ಅಧಿಕಾರಿಗಳು ಟ್ರಾನ್ಸ್‍ಪೋರ್ಟ್ ಲೈಸೆನ್ಸ್ ಇಲ್ಲದ್ದರಿಂದ ರೂ.10000 ದಂಡ ವಿಧಿಸಿದ್ದಾರೆ.
ಕಲ್ಮೇಶ್ವರ ಹಾಲಿನ ಡೈರಿಯಿಂದ ಬೆಳಗಾವಿಗೆ ವಾಹನದಲ್ಲಿ ಸಾಗಿಸುತ್ತಿದ್ದ ಎಮ್ಮೆ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪರಿವೀಕ್ಷಣೆಗಾಗಿ ಟಿಳಕವಾಡಿಯ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Publication

Leave A Reply

 Click this button or press Ctrl+G to toggle between Kannada and English

Your email address will not be published.