ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ತಂಡದಿಂದ ಬರ ಪರಿಶೀಲನೆ

0

ಬೆಳಗಾವಿ: ಕೇಂದ್ರ ಬರ ಅಧ್ಯಯನ ತಂಡವು ಶುಕ್ರವಾರ(ಫೆ.10) ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಬರ ಪರಿಸ್ಥಿತಿಯನ್ನು ಪರಿಶೀಲಿಸಿತು.
ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ತಂಡವು ಕುಡಿಯುವ ನೀರಿನ ಕೊರತೆ, ಬೆಳೆಹಾನಿ ಹಾಗೂ ಮೇವಿನ ಕೊರತೆಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡಿತು.
ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ, ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ವಿಭಾಗದ ಸಲೀಂ ಹೈದರ್ ಹಾಗೂ ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ ಉಪನಿರ್ದೇಶಕ ಕಮಲ್ ಚವಾಣ ಕೇಂದ್ರ ಬರ ಅಧ್ಯಯನ ತಂಡದಲ್ಲಿದ್ದರು.
ಬೈಲಹೊಂಗಲ ತಾಲ್ಲೂಕಿನ ಮುರ್ಕಿಬಾವಿ ಗ್ರಾಮದಲ್ಲಿ ಬಾವಿಗಳು ಬತ್ತಿರುವುದನ್ನು ಪರಿಶೀಲಿಸಿದ ತಂಡದ ಸದಸ್ಯರು, ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಮುರ್ಕಿಬಾವಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ನೀರು ಸರಬರಾಜು ವೇಳೆ ಅನಗತ್ಯ ಗೊಂದಲ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ಗ್ರಾಮದಲ್ಲಿರುವ ಮುಖ್ಯ ಬಾವಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಯರಾಮ್ ಹಾಗೂ ಇತರೆ ಅಧಿಕಾರಿಗಳು ವಿವರಿಸಿದರು.
ಮುರ್ಕಿಬಾವಿಯಿಂದ ಗಜಮನಾಳ ಗ್ರಾಮಕ್ಕೆ ತೆರಳಿದ ತಂಡವು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರನ್ನು ಮಾತನಾಡಿಸಿದ ತಂಡದ ಸದಸ್ಯರು, ಎಷ್ಟು ಕೂಲಿ ನೀಡಲಾಗುತ್ತಿದೆ, ಎಷ್ಟು ದಿನಗಳವರೆಗೆ ಉದ್ಯೋಗ ನೀಡಲಾಗುತ್ತಿದೆ ಮತ್ತು ಯಾವ ರೀತಿಯ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಂಡರು.
ಅಲ್ಲಿಂದ ಸೋಮನಟ್ಟಿ ಹಾಗೂ ಚಚಡಿ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಭೇಟಿ ನೀಡಿದ ಬೆಳೆಹಾನಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ರೈತರು ಬರಗಾಲದಿಂದಾಗಿ ಬೆಳೆಹಾನಿಯಾಗಿರುವುದನ್ನು ಪ್ರದರ್ಶಿಸಿದರು.
ಮಳೆ ಕೊರತೆಯಿಂದಾಗಿ ಕಡಲೆ ಹಾಗೂ ಜೋಳದ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಬದುಕು ನಡೆಸುವುದು ಕಷ್ಟಕರವಾಗುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ಮೇವು ಬ್ಯಾಂಕ್ ಪರಿಶೀಲನೆ

ಸವದತ್ತಿ ತಾಲ್ಲೂಕು ಆಡಳಿತ ಹಾಗೂ ಪಶು ಸಂಗೋಪನಾ ಇಲಾಖೆ ವತಿಯಿಂದ ತಡಸಲೂರ(ಹಲಕಿ ಕ್ರಾಸ್ ಹತ್ತಿರ) ಶ್ರೀ ಶಿವಯೋಗೀಶ್ವರ ದೇವಸ್ಥಾನದ ಎದುರು ಆರಂಭಿಸಲಾಗಿರುವ ರಿಯಾಯಿತಿ ದರದ “ಮೇವು ಬ್ಯಾಂಕ್”ಗೆ ಕೇಂದ್ರ ಬರ ಅಧ್ಯಯನ ತಂಡವು ಭೇಟಿ ನೀಡಿ ಪರಿಶೀಲಿಸಿತು.
ಸರ್ಕಾರವು ಪ್ರತಿ ಜಾನುವಾರುಗಳಿಗೆ ತಲಾ ಐದು ಕೆಜಿಯಂತೆ ರಿಯಾಯಿತಿ ದರದಲ್ಲಿ ಮೇವು ಪೂರೈಸುತ್ತಿದ್ದು, ಇದನ್ನು ಉಚಿತವಾಗಿ ಪೂರೈಸಬೇಕು ಎಂದು ರೈತರು ಆಗ್ರಹಿಸಿದರು.
ಸರ್ಕಾರ ಮೇವು ಒದಗಿಸುತ್ತಿರುವುದರಿಂದ ರೈತರಿಗೆ ಅನುಕೂಲಕರವಾಗಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ಜಾನುವಾರುಗಳಿಗೆ ಕನಿಷ್ಠ ಎಂಟು ಕೆಜಿ ಮೇವು ಒದಗಿಸಬೇಕು ಎಂದು ತಂಡದ ಸದಸ್ಯರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ವಿ.ಜೆ.ಪಾಟೀಲ, ಉಪನಿರ್ದೇಶಕ ಎಚ್.ಡಿ.ಕೋಳೆಕರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ರಾಯ್ಕರ ಅವರು ಬರ ನಿರ್ವಹಣೆ ಹಾಗೂ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಂಡದ ಸದಸ್ಯರಿಗೆ ಮಾಹಿತಿ ನೀಡಿದರು.

ಕೇಂದ್ರ ಬರ ಅಧ್ಯಯನ ತಂಡವು ರಾಮದುರ್ಗ ತಾಲ್ಲೂಕಿನ ಬರಪೀಡಿತ ಪ್ರದೇಶಗಳ ಪರಿಶೀಲನೆ ಬಳಿಕ ವಿಜಯಪುರ ಜಿಲ್ಲೆಗೆ ತೆರಳಿತು.

Leave A Reply

 Click this button or press Ctrl+G to toggle between Kannada and English

Your email address will not be published.