ಉತ್ತಮ ಸಮಾಜಕ್ಕಾಗಿ

ಸೆಪ್ಟೆಂಬರ್ 15 ರಂದು ಬೆಳಗಾವಿಗೆ ರಾಷ್ಟ್ರಪತಿ ಭೇಟಿ

news belagavi

0

ಸೆಪ್ಟೆಂಬರ್ 15 ರಂದು ಬೆಳಗಾವಿಗೆ ರಾಷ್ಟ್ರಪತಿ ಭೇಟಿ
ಭದ್ರತೆ-ಶಿಷ್ಟಾಚಾರ ಪಾಲನೆ: ಪೂರ್ವಭಾವಿ ಸಭೆ
ಬೆಳಗಾವಿ: (news belagavi)ಘನತೆವೆತ್ತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ ಅವರು ಕರ್ನಾಟಕ ಲಾ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೆಪ್ಟೆಂಬರ್ 15 ರಂದು ನಗರಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಶಿಷ್ಟಾಚಾರ ಹಾಗೂ ಭದ್ರತಾ ಕಾರ್ಯದಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
News Belgaum-ಭದ್ರತೆ-ಶಿಷ್ಟಾಚಾರ ಪಾಲನೆ: ಪೂರ್ವಭಾವಿ ಸಭೆಘನತೆವೆತ್ತ ರಾಷ್ಟ್ರಪತಿ ಅವರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ(ಆ.30) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನ್ಯ ರಾಷ್ಟ್ರಪತಿ ಸೇರಿದಂತೆ ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯಪಾಲರು, ರಾಜ್ಯದ ಹಿರಿಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿಗಳು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಟಿಳಕವಾಡಿಯ ಗೋಗಟೆ ಕಾಲೇಜಿನ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವ ಸ್ಥಳದವರೆಗೆ ಗಣ್ಯರು ಸಂಚರಿಸಲಿರುವ ಮಾರ್ಗಗಳು, ಭದ್ರತೆ ಬಗ್ಗೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸುವಂತೆ ತಿಳಿಸಿದರು.

ರಸ್ತೆ ದುರಸ್ತಿಗೆ ಸೂಚನೆ:
ವಿಮಾನ ನಿಲ್ದಾಣದಿಂದ ಗಣ್ಯರು ಸಂಚರಿಸಲಿರುವ ಮಾರ್ಗವನ್ನು ಅಂತಿಮಗೊಳಿಸಿದ ತಕ್ಷಣವೇ ಆ ರಸ್ತೆಯ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು.
ಗಣ್ಯಾತೀಗಣ್ಯರು ಸಂಚರಿಸಲಿರುವುದರಿಂದ ಕಾರ್ಯಕ್ರಮದ ದಿನಾಂಕದವರೆಗೆ ಕಾಯದೇ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದರು.
ವೇದಿಕೆಯ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ಗಳು ಪರಿಶೀಲಿಸಿ ಪ್ರಮಾಣಪತ್ರ ನೀಡಬೇಕು. ಅದೇ ರೀತಿ ವಿದ್ಯುಚ್ಛಕ್ತಿ ವ್ಯವಸ್ಥೆ ಹಾಗೂ ಪರ್ಯಾಯ ವ್ಯವಸ್ಥೆಯನ್ನು ಸಮರ್ಪಕವಾಗಿರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಪರಿಶೀಲಿಸಬೇಕು.

ಗಣ್ಯರು ಸಂಚರಿಸುವ ಮಾರ್ಗದಲ್ಲಿ ಸ್ವಾಗತ ಕೋರುವ ಬ್ಯಾನರ್/ಪೋಸ್ಟ್‍ರ್‍ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಮಾನ ನಿಲ್ದಾಣ, ಕಾರ್ಯಕ್ರಮ ಸ್ಥಳದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ವೈದ್ಯರ ತಂಡ, ಅಂಬ್ಯುಲೆನ್ಸ್‍ಗಳನ್ನು ನಿಯೋಜಿಸಬೇಕು. ತುರ್ತು ಚಿಕಿತ್ಸೆಗೆ ಆಸ್ಪತ್ರೆಯನ್ನು ಗುರುತಿಸಿ ಅಲ್ಲಿಯೂ ಕೂಡ ವೈದ್ಯರು ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ಲಾ ಸೊಸೈಟಿಯ ಸಿಬ್ಬಂದಿ, ವಕೀಲರು, ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ 3 ರಿಂದ 5 ಸಾವಿರ ಜನರನ್ನು ಆಹ್ವಾನಿಸಲಾಗುತ್ತಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ವಿವೇಕ ಕುಲಕರ್ಣಿ ಸಭೆಯಲ್ಲಿ ವಿವರಿಸಿದರು.
ಶಿಷ್ಟಾಚಾರದ ಪ್ರಕಾರ ಗಣ್ಯರಿಗೆ ಎಲ್ಲ ರೀತಿಯ ಭದ್ರತೆ ಒದಗಿಸಲಾಗುವುದು ಹಾಗೂ ಗಣ್ಯರ ಸುಗಮ ಸಂಚಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಡಿ.ಸಿ.ರಾಜಪ್ಪ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಡಿಸಿಪಿ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಸಭೆಯನ್ನು ನಿರ್ವಹಿಸಿದರು.
ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ, ಡಿಎಚ್‍ಓ ಡಾ.ಅಪ್ಪಾಸಾಹೇಬ್ ನರಟ್ಟಿ, ಅಬಕಾರಿ ಇಲಾಖೆ ಉಪ ಆಯುಕ್ತ ಅರುಣಕುಮಾರ್. ಆರ್‍ಟಿಓ ಶಿವಾನಂದ ಮಗ್ದುಂ, ಅಗ್ನಿಶಾಮಕದಳದ ಅಧಿಕಾರಿ ಶಿವಕುಮಾರ್, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಸೈಯದ್ ಆಫ್ರೀನ್‍ಬಾನು ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.