ಉತ್ತಮ ಸಮಾಜಕ್ಕಾಗಿ

ಶೀಘ್ರವೇ ಬಸ್ ಆ್ಯಂಬುಲೆನ್ಸ್-ಇಂದಿರಾ ಕ್ಲಿನಿಕ್ ಸೇವೆ: – ಸದಾನಂದ ಡಂಗನವರ

Soon Bus Ambulance - Indira Clinic Service: - Sadananda Dange

0

ನೂತನ ಬಸ್ ಸೇವೆಗೆ ಚಾಲನೆ

ಬೆಳಗಾವಿ:belagavinews ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರವಾಗಿ ಬಸ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುವುದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಸದಾನಂದ ಡಂಗನವರ ಅವರು ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಆರು ನೂತನ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಸಾರಿಗೆ ವಿಭಾಗಕ್ಕೆ ಒಂದೊಂದು ಬಸ್ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದರು.
ಸಾರಿಗೆ ಸಂಸ್ಥೆ ವತಿಯಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಶೀಘ್ರದಲ್ಲೇ ‘ಇಂದಿರಾ ಕ್ಲಿನಿಕ್’ ಯೋಜನೆಯನ್ನು ಜಾರಿಗೊಳಿಸಲಾಗುವುದು. ಬಸ್‍ಗಳ ವೇಳಾಪಟ್ಟಿ ಸೇರಿದಂತೆ ರಾಜ್ಯ ಸಾರಿಗೆ ವ್ಯವಸ್ಥೆಯ ಸಮಗ್ರ ಮಾಹಿತಿಯನ್ನು ಪ್ರಯಾಣಿಕರು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಆ್ಯಪ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಬೆಳಗಾವಿಯಿಂದ ಮೈಸೂರು, ಬೀದರ್ ಹಾಗೂ ಚೆನೈಗೆ ನೂತನವಾಗಿ ಆರು ವೋಲ್ವೋ ಬಸ್‍ಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಈ ಬಸ್‍ಗಳಲ್ಲಿ ಸುಖಕರ ಪ್ರಯಾಣ ಹಾಗೂ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಆದ್ದರಿಂದ ಪ್ರಯಾಣಿಕರು ಇದನ್ನು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ಸಾರಿಗೆ ಸಂಸ್ಥೆಗೆ ಪ್ರಯಾಣಿಕರೇ ಪ್ರಭುಗಳಾಗಿದ್ದು, ಸಾರಿಗೆ ಸಂಸ್ಥೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹಂತ, ಹಂತವಾಗಿ ವಿವಿಧ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ಸುಖಕರ ಪ್ರಯಾಣವನ್ನು ಒದಗಿಸುವುದೇ ನಮ್ಮ ಮುಖ್ಯ ಧ್ಯೇಯವಾಗಿದೆ ಎಂದರು.
ಸರ್ಕಾರದಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 650 ಹೊಸ ಬಸ್‍ಗಳನ್ನು ನೀಡಲಾಗಿದೆ. ಅವುಗಳಲ್ಲಿ ಈಗಾಗಲೇ 100 ನಾನ್ ಎಸಿ, ಸ್ಲೀಪರ್ ಬಸ್‍ಗಳು ಸೇರಿದಂತೆ ಒಟ್ಟು 406 ಹೊಸ ಬಸ್‍ಗಳಿಗೆ ಚಾಲನೆ ನೀಡಲಾಗಿದೆ. ಇನ್ನುಳಿದ ಬಸ್‍ಗಳಿಗೆ ಶೀಘ್ರವೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಖಾಸಗಿ ಸಾರಿಗೆ ಸಂಸ್ಥೆಗಳಿಂದ ನಮಗೆ ಪೈಪೋಟಿ ಇಲ್ಲ. ಅವರು ಕೇವಲ ಲಾಭದ ದೃಷ್ಠಿಯಿಂದ ಕಾರ್ಯ ನಿರ್ವಹಿಸುತ್ತಾರೆ. ಆದರೆ ರಾಜ್ಯ ಸಾರಿಗೆ ಸಂಸ್ಥೆಗೆ ಲಾಭದ ಉದ್ದೇಶವಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ ಎಂದು ಹೇಳಿದರು.
ಮುಖ್ಯ ತಾಂತ್ರಿಕ ಇಂಜಿನೀಯರ್ ಪಿ.ಆರ್. ಮಹಾಜನ, ವಿಭಾಗೀಯ ಸಾರಿಗೆ ಅಧಿಕಾರಿ ಬಿ.ಡಿ. ಜಾಧವ, ಡಿಎಂಇ ವಿಜಯಕುಮಾರ, ನಿಯಂತ್ರಣಾಧಿಕಾರಿ ಗಣೇಶ ರಾಠೋಡ, ಕಾರ್ಪೋರೇಟರ್ ಜಯಶ್ರೀ ಮಾಳಗಿ, ಮೂಗಬಸ್ತ ಅಜ್ಜನವರು ಸೇರಿದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪ್ರಯಾಣಿಕರು ಉಪಸ್ಥಿತರಿದ್ದರು.

ಆರು ಬಸ್‍ಗಳಿಗೆ ಚಾಲನೆ-ಬಸ್‍ನಲ್ಲಿ ಅಧಿಕಾರಿಗಳ ಪ್ರಯಾಣ:
ಬೆಳಗಾವಿಯಿಂದ ಬೀದರ್, ಮೈಸೂರು ಹಾಗೂ ಚೆನ್ನೈಗೆ ತಲಾ ಎರಡು ನೂತನ ವೋಲ್ವೋ ಬಸ್‍ಗಳಿಗೆ ಚಾಲನೆ ನೀಡಲಾಯಿತು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಅವರು ಬಸ್‍ಗಳಿಗೆ ಪೂಜೆ ಸಲ್ಲಿಸಿ, ಭಾವುಟ ಪ್ರದರ್ಶಿಸಿ ಚಾಲನೆ ನೀಡಿದರು.
ನಂತರ ಅವರು ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಬಸ್‍ನಲ್ಲಿ ಪ್ರಯಾಣಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಸ್‍ಗಳು ನೂತನ ವ್ಯವಸ್ಥೆಯನ್ನು ಹೊಂದಿದ್ದು, ಬಸ್‍ನಲ್ಲಿ ಧೂಮಪಾನ ಮಾಡುವುದು ಕಂಡುಬಂದರೆ ಹಾಗೂ ಹೊಗೆ ಕಾಣಿಸಿದರೆ ಮತ್ತು ಇನ್ನಿತರ ತುರ್ತು ಸಂದರ್ಭಗಳಲ್ಲಿ ಪ್ಯಾಸೆಂಜರ್ ಅಲರ್ಟ್ ಬೆಲ್ ತಾನಾಗೆ ಭಾರಿಸುತ್ತದೆ ಎಂದು ತಿಳಿಸಿದರು.

ಬಸ್‍ಗಳಲ್ಲಿ ಒಟ್ಟು 47 ಆಸನಗಳಿದ್ದು, ಲೆಗ್ ರೆಸ್ಟ್ ಹಾಗೂ ಹ್ಯಾಂಡ್ ರೆಸ್ಟ್ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕವಾಗಿ ಮೊಬೈಲ್ ಚಾರ್ಜ್ ಮಾಡುವ ವ್ಯವಸ್ಥೆಯೂ ಇದೆ. ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಬಸ್‍ನ ಕಿಟಕಿ (ಗ್ಲಾಸ್) ಒಡೆಯಲು ಕಿಟಕಿಯ ಪಕ್ಕದಲ್ಲೇ ಹ್ಯಾಮರ್‍ನ್ನು ಅಳವಡಿಸಲಾಗಿದೆ. ತುರ್ತು ಬಾಗಿಲು, ಪ್ರಥಮ ಚಿಕಿತ್ಸೆ ಬಾಕ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಪ್ರಯಾಣಿಕರಿಗೆ ಮಾಹಿತಿಯನ್ನು ನೀಡಲು ವಾಹನ ಚಾಲಕರಿಗೆ ಮೈಕ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಸ್‍ನ್ನು ಹಿಂಬದಿ (ರಿವರ್ಸ್) ತೆಗೆದುಕೊಳ್ಳುವಾಗ ಅನುಕೂಲವಾಗಲು ಹಿಂಬದಿ ಕ್ಯಾಮೆರಾ ಅಳವಡಿಸಲಾಗಿದ್ದು, ವಾಹನ ಚಾಲಕರು ತಮ್ಮ ಮುಂದೆ ಇರುವ ಸ್ಕ್ರೀನ್‍ನಲ್ಲಿ ಅದನ್ನು ವೀಕ್ಷಿಸಬಹುದಾಗಿದೆ. ರೋಡ್ ಹಂಪ್ ಬಂದಾಗ ಬಸ್‍ನ್ನು ಮೇಲಕ್ಕೆತ್ತರಿಸುವ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು.
ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ:
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಡಂಗನವರ ಅವರು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಕೆಲಸಗಳನ್ನು ಪರಿಶೀಲನೆ ಮಾಡಿ, ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕಾಗಿ ಸುವ್ಯವಸ್ಥಿತವಾಗಿ ಬಸ್‍ನಿಲ್ದಾಣದ ಕಾಮಗಾರಿ ಕೈಗೊಳ್ಳಬೇಕು ಹಾಗೂ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಶ್ರೀಮತಿ ಜಯಶ್ರೀ ಮಾಳಗಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಗಣೇಶ ರಾಠೋಡ, ವಿಭಾಗೀಯ ತಾಂತ್ರಿಕ ಅಧಿಕಾರಿ ವಿಜಯಕುಮಾರ, ವಿಭಾಗೀಯ ಸಾರಿಗೆ ಅಧಿಕಾರಿ ಬಿ.ಡಿ ಜಾಧವ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

taraukranti    Soon Bus Ambulance – Indira Clinic Service: – Sadananda Dange

Leave A Reply

 Click this button or press Ctrl+G to toggle between Kannada and English

Your email address will not be published.