ಉತ್ತಮ ಸಮಾಜಕ್ಕಾಗಿ

ರೈತ ಪರ ಸಂಘಟನೆಗಳಿಂದ ನಂದಗಡದಿಂದ ಸುವರ್ಣಸೌಧಕ್ಕೆ ಪಾದಯಾತ್ರೆ ಪ್ರಾರಂಭ

0

ಬೆಳಗಾವಿ/ಖಾನಾಪುರ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಹಾಗೂ ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿಸ್ಥಳದಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು. ಭಾನುವಾರ ನಂದಗಡದಲ್ಲಿ ರೈತರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದೆ ಆದರೆ ರೈತರ ಪ್ರಕಾರ ಅದು ಆತ್ಮಹತ್ಯೆಯಲ್ಲದೇ ವ್ಯವಸ್ಥೆಯ ಷಡ್ಯಂತ್ರಕ್ಕೆ ಬಲಿಯಾದ ರೈತನ ಕೊಲೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಇಂದು ಸರಿಯಾದ ಧಾರಣೆ ಸಿಗುತ್ತಿಲ್ಲ. ಸ್ವಾತಂತ್ರ ದೊರೆತು 7 ದಶಕಗಳು ಗತಿಸಿದರೂ ರೈತರ ಪಾಲಿಗೆ ನೆಮ್ಮದಿ ಸಿಕ್ಕಿಲ್ಲ. ನಮ್ಮನ್ನಾಳಿದ ಸರ್ಕಾರಗಳು ರೈತರ ಹಿತಕಾಯುವ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಯಮಕನಮರಡಿ ಮಾತನಾಡಿ, ಪ್ರತಿಭಟನೆಯ ಮೂಲಕ ರಾಜ್ಯದ ಎಲ್ಲ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು, ಕಬ್ಬಿಗೆ ಎಸ್.ಎ.ಪಿ ಜಾರಿಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದು, ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಬಿಲ್ಲು ಪಾವತಿಗೆ ಕ್ರಮ ಕೈಗೊಳ್ಳುವುದು, ಕಳಸಾ ಬಂಡೂರಿ, ಮಹಾದಾಯಿ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸುವುದು ಮತ್ತು ಮುಖ್ಯವಾಗಿ ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ರೈತರ ಹೊಲಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸಫಾರ್ಮರ್‍ಗಳನ್ನು ನಿಗದಿತ ಅವಧಿಯ ಒಳಗೆ ದುರಸ್ತಿ ಮಾಡುವುದು, ದಿನಕ್ಕೆ ಕನಿಷ್ಠ 7 ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವುದು, ಕೃಷಿ ಕೂಲಿ ಕಾರ್ಮಿಕರು ಮತ್ತು ಕೃಷಿಕರಿಗೆ ಮಾಶಾಸನ ನೀಡುವುದು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ತುಂಬಿದ ರೈತರ ಮುಂಗಾರು ಬೆಳೆಗೆ ಪರಿಹಾರ ವಿತರಿಸುವುದು, ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವುದು ಸೇರಿದಂತೆ ರೈತಾಪಿ ವರ್ಗದ ವಿವಿಧ ಸಮಸ್ಯೆಗಳ ಬಗ್ಗೆ ಪ್ರತಿಭಟನೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ನಂದಗಡದಿಂದ ಹೊರಟ ಪಾದಯಾತ್ರೆ ಚಾಪಗಾವಿ, ಕೊಡಚವಾಡಗಳ ಮೂಲಕ ಸಂಚರಿಸಿ ಪಾರಿಶ್ವಾಡದಲ್ಲಿ ವಾಸ್ತವ್ಯ ಹೂಡಲಿದೆ. ಸೋಮವಾರ ಮುಂಜಾನೆ ಪಾರಿಶ್ವಾಡದಿಂದ ಹೊರಟು ಕೆ.ಕೆ ಕೊಪ್ಪ ಮಾರ್ಗವಾಗಿ ಮಧ್ಯಾಹ್ನ ಸುವರ್ಣಸೌಧ ತಲುಪಲಿದೆ. ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳ ಸಾವಿರಾರು ರೈತರು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ನಾಯ್ಕ, ಗುರುಲಿಂಗಯ್ಯ ಪೂಜೇರ, ಲಿಂಗರಾಜ ಪಾಟೀಲ, ಶಂಕರ ಸೋನೊಳ್ಳಿ, ಮಲ್ಲಿಕಾರ್ಜುನ ವಾಲಿ, ಮಹಾದೇವ ಸಾಗರೇಕರ, ವಾಸು ತಿಪ್ಪಣ್ಣವರ, ಯಲ್ಲಪ್ಪ ಚನ್ನಾಪುರ, ಗಂಗಪ್ಪ ಹೇರೆಕರ ಮತ್ತಿತರರು ಇದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.