ಉತ್ತಮ ಸಮಾಜಕ್ಕಾಗಿ

ನ.13 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರು ತಿಳಿಸಿದರು.

0

ನ.13 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ
9 ದಿನಗಳ ಕಾರ್ಯಕಲಾಪ, 4 ವಿಧೇಯಕಗಳ ಚರ್ಚೆ, 5 ವಿಧೇಯಕಗಳ ಮಂಡನೆ: ಸಭಾಧ್ಯಕ್ಷ ಕೆ.ಬಿ. ಕೋಳಿವಾಡ
ಬೆಳಗಾವಿ: ಪ್ರಸಕ್ತ 14ನೇ ವಿಧಾನಮಂಡಲದ ಚಳಿಗಾಲದ ಅಧಿವೇಶನವು ನ.13 ರಿಂದ 24ರವರೆಗೆ 9 ದಿನಗಳ ಕಾಲ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರು ತಿಳಿಸಿದರು.
ಸುವರ್ಣವಿಧಾನಸೌಧದಲ್ಲಿ ಇಂದು ಅಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಿ ಬಳಿಕ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಧಿವೇಶನದ ಮೊದಲ ದಿನವಾದ 13 ರಂದು ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುವುದು. ಕಳೆದ ಅಧಿವೇಶನ ಮುಕ್ತಾಯವಾದ ನಂತರ ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಹಾಲಿ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಹಾಗೂ ಚಿಕ್ಕಮಾದು.ಎಸ್ ಸೇರಿದಂತೆ ವಿಧಾನಮಂಡಲದ ಉಭಯ ಸದನಗಳ ಮಾಜಿ ಸದಸ್ಯರು ಹಾಗೂ ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್. ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಪತ್ರಕರ್ತರಾದ ಗೌರಿ ಲಂಕೇಶ ಮತ್ತು ಖಾದ್ರಿ. ಎಸ್.ಅಚ್ಯುತನ್ ಅವರುಗಳಿಗೆ ಸಂತಾಪ ಸೂಚನೆ ಮಂಡಿಸಲಾಗುವುದು.
9 ದಿನಗಳ ಈ ಕಲಾಪಕ್ಕೆ ಈವರೆಗೆ 1661 ಪ್ರಶ್ನೆಗಳು, 20 ಗಮನ ಸೆಳೆಯುವ ಸೂಚನೆಗಳು ಹಾಗೂ ನಿಯಮ 351ರ ಅಡಿಯಲ್ಲಿ 33 ಸೂಚನೆಗಳು ಸ್ವೀಕೃತವಾಗಿವೆ. ಕರ್ನಾಟಕದಲ್ಲಿ ನಡೆಯುವ ಬ್ಯಾಂಕಿಂಗ್, ಕೇಂದ್ರದ ಅಬಕಾರಿ ಸೇವೆಗಳು, ಎಸ್‍ಎಸ್‍ಸಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ತೆಗೆದುಕೊಳ್ಳಲು ಅವಕಾಶ ನೀಡುವುದು ಮತ್ತು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಎರಡು ಖಾಸಗಿ ನಿರ್ಣಯಗಳನ್ನು ವಿಧಾನಸಭೆಯ ಸದಸ್ಯರಾದ ಕೆ. ಗೋಪಾಲಯ್ಯ ಅವರಿಂದ ಸ್ವೀಕರಿಸಲಾಗಿದೆ.
ಹಿಂದಿನ ಅಧಿವೇಶನದ 4 ವಿಧೇಯಕಗಳಾದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ವಿಧೇಯಕ-2016, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ-2016, ಅಂತರ್ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ತಿದ್ದುಪಡಿ ವಿಧೇಯಕ-2017 ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2017 ನ್ನು ಈ ಅಧಿವೇಶನದಲ್ಲಿ ಚರ್ಚಿಸಿ ಅಂಗೀಕರಿಸಲು ಬಾಕಿ ಇರಿಸಲಾಗಿದೆ.

–2–

ಹೊಸದಾಗಿ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2017, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2017, ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕ-2017, ಕರ್ನಾಟಕ (ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ವಿಧೇಯಕ-2017 ಹಾಗೂ ಕರ್ನಾಟಕ ಧನವಿನಿಯೋಗ (ಸಂಖ್ಯೆ-4) ವಿಧೇಯಕ-2017 ನ್ನು ಈ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಲಾಗಿದೆ.
ಅಧಿವೇಶನದಲ್ಲಿ ಭಾಗವಹಿಸುವ ಶಾಸಕರುಗಳಿಗೆ ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೊಂದಿರುವವರಿಗೆ ದಿನವೊಂದಕ್ಕೆ 2500 ರೂ. ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ವಾಸ್ತವ್ಯ ಹೊಂದಿರುವವರಿಗೆ ದಿನವೊಂದಕ್ಕೆ 5000 ರೂ. ಸಾರಿಗೆ ಭತ್ಯೆಯನ್ನು ನೀಡಲಾಗುವುದು.
ಶಾಸಕರಿಗೆ ವಸತಿ ಸೌಕರ್ಯ ಹಾಗೂ ಇತರ ಸೌಲಭ್ಯಗಳ ಮಾಹಿತಿ ಒದಗಿಸಲು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ದೂ: 0831-2557995/6/7/8/9 ಸಹಾಯವಾಣಿ ಸಂಖ್ಯೆಗಳಾಗಿವೆ.
ಸಂಸದರು, ಶಾಸಕರು ಹಾಗೂ ಸರಕಾರಿ ಅಧಿಕಾರಿಗಳಿಗೆ ಫ್ಯಾಮಿಲಿರಿಸೇಷನ್ ಸಾರ್ಟಿ ಏರ್ಪಡಿಸುವಂತೆ ಪ್ರಧಾನ ಮಂತ್ರಿಗಳು ಸೂಚಿಸಿರುವುದರಿಂದ ಕಾರವಾರದ ಕರ್ನಾಟಕ ನೌಕಾನೆಲೆಯ ವೀಕ್ಷಣೆಗೆ ನ.18 ರಂದು ಸದಸ್ಯರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.
2017ನೇ ಸಾಲಿನಲ್ಲಿ ಇದುವರೆಗೆ ಒಟ್ಟು 30 ದಿನಗಳ ಕಾಲ ಅಧಿವೇಶನ ನಡೆದಿದೆ. ಬೆಳಗಾವಿಯಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ಉದ್ದೇಶಿಸಲಾಗಿದ್ದು, ಒಟ್ಟಾರೆ 40 ದಿನಗಳ ಕಾಲ ಅಧಿವೇಶನ ನಡೆದಂತಾಗುತ್ತದೆ. ಈ ಅಧಿವೇಶನದಲ್ಲಿ ಸದನದ ಎಲ್ಲ ಸದಸ್ಯರು ಚರ್ಚೆಗಳಲ್ಲಿ ಭಾಗವಹಿಸಿ ಉತ್ತಮ ಸಲಹೆಗಳನ್ನು ನೀಡಬೇಕು, ಸರ್ಕಾರವೂ ಇದಕ್ಕೆ ಸ್ಪಂದಿಸಿ ರಾಜ್ಯದ ಅಭಿವೃದ್ಧಿಗೆ ಸದನ ಸಾಕ್ಷಿಯಾಗಲಿದೆ ಎಂದು ಕೆ.ಬಿ. ಕೋಳಿವಾಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಸ್. ಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಡಾ. ಪಿ.ಎಸ್. ಹರ್ಷ, ಜಿಲ್ಲಾಧಿಕಾರಿ ಜಿಯಾವುಲ್ಲಾ.ಎಸ್ ಮತ್ತಿತರರು ಇದ್ದರು

Leave A Reply

 Click this button or press Ctrl+G to toggle between Kannada and English

Your email address will not be published.