ಉತ್ತಮ ಸಮಾಜಕ್ಕಾಗಿ

ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಪರಿವರ್ತಿಸಲು ಬಹುಗ್ರಾಮ ಯೋಜನೆ ಸಹಕಾರಿ -:ಸಚಿವ ಎಚ್.ಕೆ ಪಾಟೀಲ

0

ಸುವರ್ಣ ವಿಧಾನಸೌಧ ಬೆಳಗಾವಿ( ರಾಜ್ಯದ ಜನರಿಗೆ ಭೂಮೇಲ್ಮೈ ಜಲಮೂಲಗಳಾದ ನದಿ, ಜಲಾಶಯ, ನೀರಾವರಿ ಇಲಾಖೆ ಕರೆಗಳು ಹಾಗೂ ಇತರ ಜಲಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಕಾರಿಯಾಗಿದೆ. ರಾಜ್ಯದಲ್ಲಿ ಈವರೆಗೆ 544 ಯೋಜನೆಗಳನ್ನು ಕೈಗೆತ್ತಿಕೊಂಡು 409 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.
ವಿಧಾನ ಪರಿಷತ್ತಿನಲ್ಲಿಂದು ಸದಸ್ಯ ಮಹಾಂತೇಶ ಕವಟಗಿಮಠ ಅವರು ನಿಯಮ 72ರಡಿ ಮಂಡಿಸಿದ ಗಮನಸೆಳೆಯುವ ಸೂಚನೆಗೆ ಉತ್ತರ ನೀಡುತ್ತಾ ಈ ವಿಷಯ ತಿಳಿಸಿದರು.
ಪ್ರಸ್ತುತ ಸರ್ಕಾರದ ಅವಧಿಯಲ್ಲಿ 236 ಯೋಜನೆಗಳು ಪೂರ್ಣಗೊಂಡಿವೆ. 3426 ಜನ ವಸತಿಗಳ 49.58 ಲಕ್ಷ ಜನಸಂಖ್ಯೆಗೆ ಕುಡಿಯವ ನೀರು ಒದಗಿಸಿದೆ. ಪ್ರಸ್ತಕ ಸಾಲಿನಲ್ಲಿ 65 ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಮೂಲಕ 1909 ಜನವಸತಿಗಳ 29.67 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. 98 ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ 19 ಯೋಜನೆಗಳ ಟೆಂಡರ್ ಪ್ರಕ್ರಿಯೆ ನಡೆದಿದೆ. 18 ಯೋಜನೆಗಳಿಗೆ ತಾಂತ್ರಿಕ ಮಂಜೂರಾತಿ ನೀಡುವುದು ಬಾಕಿ ಇದೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಣಾಮಕಾರಿಯಾದ ಕ್ರಿಯಾಯೋಜನೆಗಳನ್ನು ತಯಾರಿಸಿ ಕಾಲಮಿತಿಗೊಳಪಟ್ಟು ಭೌತಿಕ ಪ್ರಗತಿ ಆಧರಿಸಿ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ. ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ 9526 ಜನವಸತಿಗಳ 142.15 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲದೆ ರಾಜ್ಯದಲ್ಲಿ ಇಡೀ ಜಿಲ್ಲೆಯನ್ನು ಒಂದು ಘಟಕವಾಗಿ ಪರಿಗಣಿಸಿ ಎಲ್ಲ ಹಳ್ಳಿಗಳಿಗೆ ಮೇಲ್ಮೈ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಯೋಜನೆಗಳನ್ನು ವಿನ್ಯಾಸಗೊಳಿಸಿ, ನಿರ್ಮಿಸಿ, ಚಾಲನೆಗೊಳಿಸಿ, ವರ್ಗಾಯಿಸುವ (ಡಿಬಿಒಟಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಕಬಿನಿ ನದಿಯಿಂದ ಚಾಮರಾಜನಗರ ಜಿಲ್ಲೆಯ 166 ಹಳ್ಳಿಗಳಿಗೆ ನೀರು ಪೂರೈಸುವ ಕಾರ್ಯ ಪೂರ್ಣಗೊಂಡಿದೆ. ಗದಗ ಜಿಲ್ಲೆಯ ರೋಣ, ನರಗುಂದ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗಳ ಶೇ. 90 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ.
ಕೇಂದ್ರ ಸರ್ಕಾರವು ಎನ್.ಆರ್.ಡಿ.ಡಬ್ಲೂ.ಪಿ ಯೋಜನೆಯಡಿ ತುರ್ತು ಸಂದರ್ಭ ಹೊರತುಪಡಿಸಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರಲು ಸೂಚಿಸಿರುವುದರಿಂದ ಯಾವುದೇ ಹೊಸ ಯೋಜನೆ ಆರಂಭಿಸುತ್ತಿಲ್ಲ. ಮುಂಬರುವ ರಾಜ್ಯ ಬಜೆಟ್‍ನಲ್ಲಿ 1050 ಕೋಟಿ ರೂಪಾಯಿಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ ಅವರು ವಿವರಿಸಿದರು.
ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿಯಿರುವ ಶೇ. 45 ರಷ್ಟು ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದಾಗ ಉತ್ತರಿಸಿದ ಸಚಿವರು ಎರಡು ತಿಂಗಳಲ್ಲಿಯೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸದನದ ಮುಖಾಂತರವೆ ಸೂಚಿಸಿದರು.
ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, 1996ರಲ್ಲಿ ಸುಪ್ರೀಂ ಕೋರ್ಟು ಕುಡಿಯುವ ನೀರು ಪ್ರತಿಯೊಬ್ಬನ ಮೂಲಭೂತ ಹಕ್ಕಾಗಿದೆ ಎಂದು ತೀರ್ಪು ನೀಡಿದೆ. ಅದನ್ನು ಪೂರೈಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಾಗ ಪ್ರತಿಕ್ರಿಯೆ ನೀಡಿದ ಸಚಿವರು ಉಗ್ರಪ್ಪನವರು ಸದನದ ಚರ್ಚೆಯ ಗೌರವವನ್ನು ಹೆಚ್ಚಿಸುವಂತಹ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಶ್ಲಾಘಿಸಿದರು.
ಸದಸ್ಯರಾದ ಮೋಟಮ್ಮ, ಶ್ರೀಕಂಠೇಗೌಡ, ಕಾಂತರಾಜು, ಅಪ್ಪಾಜಿಗೌಡ ಮತ್ತಿತರರು ಗಮನಸೆಳೆಯುವ ಸೂಚನೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.