ಉತ್ತಮ ಸಮಾಜಕ್ಕಾಗಿ

ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಮಸ್ಯೆಗಳ ಚರ್ಚೆ

0

ಆರ್‍ಟಿಪಿಎಸ್ ಮತ್ತು ವೈಟಿಪಿಎಸ್ ಭೂ ಸಂತ್ರಸ್ತ
ಅರ್ಹ ಅರ್ಜಿದಾರರಿಗೆ ತ್ವರಿತ ಉದ್ಯೋಗ
ಸಚಿವ: ಡಿ.ಕೆ. ಶಿವಕುಮಾರ
ಬೆಳಗಾವಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಅರ್ಹತೆ ಆಧಾರದ ಮೇಲೆ ತ್ವರಿತವಾಗಿ ಉದ್ಯೋಗ ಒದಗಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ತಿಳಿಸಿದರು.
ವಿಧಾನಪರಿಷತ್‍ನಲ್ಲಿಂದು ಸದಸ್ಯ ಅಮರನಾಥ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೆಂದ್ರಕ್ಕೆ 1,427ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ವೈಟಿಪಿಎಸ್ ಗೆ ಭೂಮಿ ಕಳೆದುಕೊಂಡಿರುವ ಭೂಮಾಲೀಕರ ಪೈಕಿ ಮೊದಲ ಹಂತದಲ್ಲಿ 149 ಸಂತ್ರಸ್ತರು 2ನೇ ಹಂತದಲ್ಲಿ 86 ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಇದುವರೆಗೆ 108 ಜನರಿಗೆ ನಿಗಮದಲ್ಲಿ ಉದ್ಯೋಗ ನೀಡಲಾಗಿದೆ. ಬಾಕಿ ಇರುವ 127 ಅರ್ಜಿಗಳಿಗೆ ಸಂಬಂಧಿಸಿದ ಅವಶ್ಯಕ ದಾಖಲೆ, ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ ಹಾಗೂ ಇತರೆ ಆಕ್ಷೇಪಣೆಗಳನ್ನು ಸರಿಪಡಿಸಲು ಸಲ್ಲಿಸಲು ತಿಳಿಸಲಾಗಿದೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 462 ಭೂ ಸಂತ್ರಸ್ತ ಕುಟುಂಬಗಳ ಪೈಕಿ 2013 ರ ವರೆಗೆ ಒಟ್ಟು 327 ಕುಟುಂಬಗಳಿಗೆ ತರಬೇತಿ ಮತ್ತು ಉದ್ಯೋಗ ನೀಡಲಾಗಿದೆ. ಆರ್‍ಟಿಪಿಎಸ್ ಗೆ ಭೂಮಿ ಕಳೆದುಕೊಂಡ ಕುಟುಂಬಗಳಿಂದ ಅರ್ಜಿ ಆಹ್ವಾನಿಸಿ 2005ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 554 ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ ನಿಯಮಾವಳಿಯಂತೆ ಅರ್ಹತೆ ಹೊಂದಿದ 75 ಭೂ ಸಂತ್ರಸ್ತ ಕುಟುಂಬಗಳಿಗೆ ನಿಗಮದಲ್ಲಿ ಉದ್ಯೋಗ ಮತ್ತು ತರಬೇತಿ ನೀಡಲಾಗಿದೆ ಎಂದರು.
ಆಗ ಸದಸ್ಯ ಅಮರನಾಥ ಪಾಟೀಲ ಮಾತನಾಡಿ ರಾಜ್ಯಕ್ಕೆ ಬೆಳಕು ನೀಡುವ ಆರ್‍ಟಿಪಿಎಸ್ ನ 614 ಮತ್ತು ವೈಟಿಪಿಎಸ್ ನ 127 ಭೂ ಸಂತ್ರಸ್ತರಿಗೆ ಶೀಘ್ರವಾಗಿ ಉದ್ಯೋಗ ಒದಗಿಸುವಂತೆ ಒತ್ತಾಯಿಸಿದಾಗ ಸಚಿವರು ಉತ್ತರಿಸಿ ರಾಜ್ಯದ ಇತರೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಹೋಲಿಕೆ ಮಾಡಿದರೆ ಆರ್‍ಟಿಪಿಎಸ್ ಮತ್ತು ವೈಟಿಪಿಎಸ್ ನಲ್ಲಿ 2037 ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಬಾಕಿ ಇರುವ ಭೂ ಸಂತ್ರಸ್ತರ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಪ್‍ಕಾಮ್ಸ್ ಸಂಸ್ಥೆ ರೈತರ ಬಾಕಿ ಹಣ 3, 4 ದಿನಗಳಲ್ಲಿ ಪಾವತಿ
ಸಚಿವ: ಎಸ್.ಎಸ್. ಮಲ್ಲಿಕಾರ್ಜುನ
ಬೆಳಗಾವಿ, ಹಾಪ್‍ಕಾಮ್ಸ್ ಸಂಸ್ಥೆಗೆ ತರಕಾರಿ, ಹಣ್ಣು ಸರಬರಾಜು ಮಾಡಿದ ರೈತರಿಗೆ ಕಳೆದ ನವೆಂಬರ್ 8 ರ ವರೆಗೆ 72,99,341 ರೂ.ಗಳನ್ನು ಪಾವತಿಸಬೇಕಾಗಿದೆ. ಈ ಹಣವನ್ನು 3 ರಿಂದ 4 ದಿನಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುವುದು. ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ವಿಧಾನಪರಿಷತ್‍ನಲ್ಲಿಂದು ಸದಸ್ಯೆ ತಾರಾಅನೂರಾಧಾ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು. ರೈತರು ಸರಬರಾಜು ಮಾಡಿದ ಹಣ್ಣು, ತರಕಾರಿಗಳ ಖರೀದಿ ಬಿಲ್ಲುಗಳು ಹಾಗೂ ರೈತರ ಬ್ಯಾಂಕಿನ ವಿವರಗಳನ್ನು ಪರಿಶೀಲಿಸಿ ದೃಢೀಕರಿಸಿ ಮೇಲಾಧಿಕಾರಿಗಳ ಅನುಮೋದನೆ ಪಡೆದು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಕಾಲಾವಕಾಶ ಬೇಕಾಗುತ್ತದೆ.
ಹಾಪ್‍ಕಾಮ್ಸ್ ಸಂಸ್ಥೆಯಿಂದ ಸ್ವಯಂ ನಿವೃತ್ತಿ ಹೊಂದಿರುವ 7 ನೌಕರರಿಗೆ ರೂ.19ಲಕ್ಷಗಳ ಗ್ರ್ಯಾಚ್ಯುಯಿಟಿ ನೀಡಬೇಕಾಗಿದೆ. ಸಂಸ್ಥೆಯ ಸೇವಾ ನಿಯಮಗಳಲ್ಲಿ ಸ್ವಯಂ ನಿವೃತ್ತಿ ಹೊಂದಿದ 90 ದಿನಗಳ ನಂತರ ಈ ಹಣ ಪಾವತಿಸಬೇಕು. ಅದರಂತೆ ಕ್ರಮ ವಹಿಸಲಾಗಿದೆ. ಹಾಪ್‍ಕಾಮ್ಸ್‍ನಿಂದ ವಿವಿಧ ಸಂಘ ಸಂಸ್ಥೆಗಳಿಗೆ ರೂ.2,97,43,436/-ಗಳನ್ನು ಕೊಡಬೇಕಾಗಿದೆ. ಕೈಗಾರಿಕಾ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದ ರೂ.3ಕೋಟಿಗಳನ್ನು ವಾಪಸ್ಸು ಪಡೆದಿಲ್ಲ. ಸಂಸ್ಥೆಯ ಗೊಬ್ಬರ ಖಾತೆಯ ಲಾಭಾಂಶ ಮೊತ್ತದಿಂದ ದೈನಂದಿನ ವಹಿವಾಟಿಗಾಗಿ ಷರತ್ತುಬದ್ಧವಾಗಿ ಹಣ ಹಿಂಪಡೆಯಲಾಗಿದೆ. ಹಾಪ್‍ಕಾಮ್ಸ್ ಸಂಸ್ಥೆಯ 2015-16 ನೇ ಸಾಲಿನ ಆರ್ಥಿಕ ವರ್ಷದ ಲೆಕ್ಕಪರಿಶೋಧನೆ ಮುಗಿದಿದೆ. 2016-17ನೇ ಸಾಲಿನ ಲೆಕ್ಕಪರಿಶೋಧನೆ ಪ್ರಗತಿಯಲ್ಲಿದೆ. ಸಂಸ್ಥೆಯು ಯಾವುದೇ ರೀತಿಯ ಆರ್ಥಿಕ ದುಸ್ಥಿತಿಯಲ್ಲಿರುವುದಿಲ್ಲ. ಯಾರ ವಿರುದ್ಧವೂ ಕ್ರಮ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವರು ತಿಳಿಸಿದರು.

ಶಿರಾಡಿ ಘಾಟ್ ರಸ್ತೆಗೆ ರಿಜಿಡ್ ಪೇವ್‍ಮೆಂಟ್
ಸಚಿವ: ಡಾ: ಹೆಚ್.ಸಿ. ಮಹದೇವಪ್ಪ
ಬೆಳಗಾವಿ, ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಶಿರಾಡಿ ಘಾಟ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 48ರ ಕೆಂಪುಹೊಳಿಯಿಂದ ಅಡ್ಡಹೊಳೆಯವರೆಗೆ ರಿಜಿಡ್ ಪೇವ್‍ಮೆಂಟ್ ಕಾಮಗಾರಿ ಕೈಗೊಳ್ಳುವ ಯೋಜನೆ ಸರ್ಕಾರದ ಮುಂದಿದೆ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ: ಹೆಚ್.ಸಿ. ಮಹದೇವಪ್ಪ ತಿಳಿಸಿದರು.
ವಿಧಾನಪರಿಷತ್‍ನಲ್ಲಿಂದು ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿ 48 ರ ಕಿ.ಮೀ.190 ರಿಂದ 250 ರ ವರೆಗೆ ಹಾಗೂ ಕಿ.ಮೀ. 263 ರಿಂದ 328 ರ ವರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. 250 ಕಿ.ಮೀ.ಯಿಂದ 263 ಕಿ.ಮೀ. ವರೆಗೆ ಅಂದರೆ ಕೆಂಪು ಹೊಳೆಯಿಂದ ಅಡ್ಡ ಹೊಳೆಯವರೆಗೆ ರಿಜಿಡ್ ಪೇವ್‍ಮೆಂಟ್ ಕಾಮಗಾರಿ ಕೈಗೊಳ್ಳಲು ಯೋಜಿಸಲಾಗಿದೆ. ಗುತ್ತಿಗೆ ನಿಗದಿಪಡಿಸಲು ಟೆಂಡರ್ ಕರೆಯಲಾಗಿದ್ದು, ಮಂಗಳೂರಿನ ಓಸಿಯನ್ ಕನಸ್ಟ್ರಕ್ಷನ್ಸ್ ಪ್ರೈ.ಲಿಮಿಟೆಡ್ ಸಂಸ್ಥೆ ನಮೂದಿಸಿರುವ 74 ಕೋಟಿ ರೂ.ಗಳ ಅತೀ ಕಡಿಮೆ ಬಿಡ್ ನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಸೆಪ್ಟೆಂಬರ್ 27 ರಂದು ಅನುಮೋದನೆಗಾಗಿ ಕಳುಹಿಸಲಾಗಿದೆ. ಅನುಮೋದನೆ ದೊರೆತ ನಂತರ ಬರುವ ಜನೇವರಿ 1 ರಿಂದ ಈ ರಸ್ತೆಯನ್ನು ಸಂಚಾರಕ್ಕೆ ಸ್ಥಗಿತಗೊಳಿಸಿ ಕಾಮಗಾರಿ ಪ್ರಾರಂಭಿಸಿ 2018 ರ ಜೂನ್‍ಗೆ ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದರು.

 

Leave A Reply

 Click this button or press Ctrl+G to toggle between Kannada and English

Your email address will not be published.