ಉತ್ತಮ ಸಮಾಜಕ್ಕಾಗಿ

64ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ : ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಳಗಾವಿ: ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ ಹಾಗೂ ಇನ್ನಿತರ ಸಂಘ, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದು (ನ.14) ಆಯೋಜಿಸಿದ್ದ 64ನೇ ಸಹಕಾರ ಸಪ್ತಾಹ ಸಮಾರಂಭದ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.
ರಾಜ್ಯದ ಸಹಕಾರ ಕ್ಷೇತ್ರಕ್ಕೆ 113 ವರ್ಷಗಳ ಇತಿಹಾಸವಿದ್ದು, ರಾಜ್ಯದಲ್ಲಿ ಇಂದು ಸಹಕಾರ ಕ್ಷೇತ್ರ ಉತ್ತಮವಾಗಿ ಬೆಳವಣಿಗೆ ಹೊಂದಿದೆ. ಸಹಕಾರ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ನೆಹರೂ ಅವರ ಕೊಡುಗೆ ಅಪಾರವಾಗಿದೆ. ಮಹಾತ್ಮ ಗಾಂಧೀಜಿ ಅವರು ಕೂಡ ದೇಶ ಹಾಗೂ ಜನರ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಅಗತ್ಯವೆಂದು ಹೇಳಿದ್ದರು. ಸಮಾಜ ಹಾಗೂ ಜನರ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಅಗತ್ಯವಾಗಿದ್ದು ರಾಜ್ಯ ಸರ್ಕಾರವು ಸಹ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳಬೇಕೆಂದು ಸರ್ಕಾರದಿಂದ ಆದೇಶಿಸಲಾಗಿತ್ತು. ಅದರಂತೆ ಪ್ರಸ್ತುತ ಪ.ಜಾತಿ ಮತ್ತು ಪ.ಪಂಗಡದ 11 ಲಕ್ಷ ಜನರು ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದಾರೆ. ಜೊತೆಗೆ ಈ ಸದಸ್ಯರಿಗಾಗಿ ಸರ್ಕಾರದಿಂದ ಸಹಕಾರಿ ಸಂಸ್ಥೆಗಳಿಗೆ 49 ಕೋಟಿ ಹಣ ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದಿಂದ ಮಹಿಳಾ ಸಹಕಾರಿ ಸಂಘಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸ್ತುತ ಮಹಿಳಾ ಸಹಕಾರಿ ಸಂಘದ ಸದಸ್ಯರಿಗೆ ಶೇ.4 ರಷ್ಟು ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ. ಇದನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ರೈತರ ಸಾಲಮನ್ನಾ ಘೋಷಿಸಿದ ನಂತರ ಎಲ್ಲ ಸಹಕಾರಿ ಬ್ಯಾಂಕ್‍ಗಳಿಗೆ ಅಗತ್ಯ ಹಣ ನೀಡಲಾಗಿದೆ. ಈಗ ಚಳಿಗಾಲದ ಅಧಿವೇಶನದಲ್ಲಿ ಇನ್ನೊಂದು ಕಂತಿನಲ್ಲಿ ಸಹಕಾರಿ ಬ್ಯಾಂಕಗಳಿಗೆ 3 ಸಾವಿರ ಕೋಟಿ ಹಣವನ್ನು ನೀಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಪ್ರತಿವರ್ಷ 16 ಲಕ್ಷ ರೈತರು ಸಾಲಸೌಲಭ್ಯ ಪಡೆಯುತ್ತಿದ್ದರು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ 23 ಲಕ್ಷ ರೈತರಿಗೆ ಸಾಲಸೌಲಭ್ಯ ಒದಗಿಸಲಾಗುತ್ತಿದೆ. ಜೊತೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಮೂರು ಭಾರಿ ನೇಕಾರರ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಎಚ್.ಕೆ. ಪಾಟೀಲ ಅವರು ಮಾತನಾಡಿ, ರಾಜ್ಯ ಸರ್ಕಾರ ಕಳೆದ ನಾಲ್ಕುವರೆ ವರ್ಷಗಳಿಂದ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ರೈತರ ಶ್ರೇಯೋಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ರಾಜ್ಯದ ಎಲ್ಲ ಸಹಕಾರಿ ಸಂಘಗಳಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳುವಂತೆ ಸರ್ಕಾರದಿಂದ ಸೂಚಿಸಲಾಗಿದೆ. ಸಣ್ಣ ಕೈಗಾರಿಕೆಗಳು ಇಂದು ಅಳಿವಿನ
ಅಂಚಿಗೆ ಸರಿಯುತ್ತಿದ್ದು, ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರದಿಂದ ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನೇವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಸಹಕಾರ ಸಮ್ಮೇಳನ ನಡೆಸುವ ಕುರಿತು ಚರ್ಚಿಸಲಾಗಿದ್ದು, ಕಾರ್ಯಕ್ಕಮಕ್ಕಾಗಿ ಸ್ಥಳವನ್ನು ಗುರುತಿಸಲಾಗಿದೆ. ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶಾಸಕರಾದ ಕೆ. ರಾಜಣ್ಣ ಅವರು ಮಾತನಾಡಿ, ರಾಜ್ಯ ಸರ್ಕಾರದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗಾಗಿ ಮೀಸಲಿಡುವ ಹಣವನ್ನು ಸರ್ಕಾರ ಕೇವಲ ರಾಜ್ಯಮಟ್ಟದ ಸಹಕಾರಿ ಬ್ಯಾಂಕುಗಳಲ್ಲಿ ಮಾತ್ರ ಠೇವಣಿ ಇಡುತ್ತಿದೆ. ಇದರಿಂದ ಜಿಲ್ಲಾ ಸಹಕಾರಿ ಬ್ಯಾಂಕುಗಳು ಹಿಂದುಳಿಯುತ್ತಿವೆ. ಅದ್ದರಿಂದ ರಾಜ್ಯ ಸರ್ಕಾರದಿಂದ ಆಯೋಜಿಸುವ ಕಾರ್ಯಕ್ರಮಗಳಿಗಾಗಿ ಮೀಸಲಿಡುವ ಹಣವನ್ನು ಜಿಲ್ಲಾ ಬ್ಯಾಂಕುಗಳಲ್ಲೂ ಠೇವಣಿ ಇಡಬೇಕು. ಸಹಕಾರಿ ಕ್ಷೇತ್ರದ ಸಾಧಕರನ್ನು ಸರ್ಕಾರದಿಂದ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಉತ್ತಮ ಅಭಿವೃದ್ಧಿ ಸಾಧಿಸಿದೆ. ಮುಂಬರುವ ಬಜೆಟ್‍ನಲ್ಲಿ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹಕಾರ ಸಂಘವನ್ನು ಸ್ಥಾಪಿಸಲಾಗುವುದು ಹಾಗೂ ರಾಜ್ಯದ ಎಲ್ಲ ಸಹಕಾರ ಸಂಘಗಳಿಗೂ ಸ್ವಂತ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರ ಧ್ವಜಾರೋಹಣ ನೆರವೇರಿಸಿ, ವಸ್ತು ಪ್ರದರ್ಶನ ಮತ್ತು ಮಳಿಗೆಗಳ ಉದ್ಘಾಟನೆ ಮಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಹೆಚ್.ಕೆ. ಪಾಟೀಲ ಅವರು ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕೆ.ಎಲ್.ಇ ಸಂಸ್ಥೆಯ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ ಸ್ವಾಗತಿಸಿದರು. ಗಿರಿಜಾ ವಿಜಯಕುಮಾರ ಅವರು ನಿರೂಪಿಸಿದರು.
ಕಂದಾಯ ಸಚಿವರ ಸಂಸದಿಯ ಕಾರ್ಯದರ್ಶಿಯಾದ ಗಣೇಶ ಹುಕ್ಕೇರಿ, ಶಾಸಕರಾದ ಶಿವಾನಂದ ಪಾಟೀಲ, ಅರವಿಂದ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ್ ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ, ಸಹಕಾರ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಪಿ. ಹೇಮಲತಾ, ಜಿಲ್ಲಾಧಿಕಾರಿ ಜಿಯಾವುಲ್ಲಾ. ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್. ಆರ್ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಕಾರ ರತ್ನ ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯದ ಎಂಟು ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರು ನಗರ ವಿಭಾಗದಿಂದ ಶ್ರೀಮತಿ ಪಾತಿಮಾ ಕ್ರಿಶ್ಟಿನಾ ಲಾರೆನ್ಸ್ ಮತ್ತು ಬಾಬುರೆಡ್ಡಿ, ಬೆಂಗಳೂರು ಗ್ರಾಮೀಣ ವಿಭಾಗದಿಂದ ಕೆ.ಎಸ್. ಸುಧಾಕರ, ಮೈಸೂರು ವಿಭಾಗದಿಂದ ಕೆ. ಲಿಂಗೇಗೌಡ ಪಾಪಣ್ಣ, ಬೆಳಗಾವಿ ವಿಭಾಗದಿಂದ ಸುಭಾಶ.ಎಸ್. ಜೋಶಿ, ಕಲಬುರಗಿ ವಿಭಾಗದಿಂದ ಎ.ರಾಜಶೇಖರ ನಾಯಕ ಮತ್ತು ಎಸ್.ಬಿ. ರೆಡ್ಡಿ ಹಾಗೂ ನಿವೃತ್ತ ನೌಕರರ ವಿಭಾಗದಿಂದ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಕಮಲೇಕರ ಶಿವಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.