ಉತ್ತಮ ಸಮಾಜಕ್ಕಾಗಿ

ಸುವರ್ಣ ವಿಧಾನಸೌಧ ದಿನ ಚರ್ಚೆ,

0

ತುಂಗಭದ್ರಾ ಜಲಾಶಯ ಸಂಗ್ರಹಣಾ ಸಾಮಥ್ರ್ಯ ಸರಿದೂಗಿಸಲು
ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ
ಸಚಿವ: ಎಂ.ಬಿ. ಪಾಟೀಲ
ಬೆಳಗಾವಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರ ಪ್ರದೇಶದ ಕೆಲವು ಭಾಗಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಶೇಖರಣೆಯಿಂದಾಗಿ ನೀರು ಸಂಗ್ರಹಣಾ ಸಾಮಥ್ರ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿರುವ ಅಂಶ ಸರ್ಕಾರದ ಗಮನದಲ್ಲಿದೆ. ಇದನ್ನು ಸರಿದೂಗಿಸಲು ಜಲಾಶಯದ ಎಡದಂಡೆ ಕಾಲುವೆಗೆ ಅದರ ಸಮಾನಾಂತರ ಮೇಲ್ಮಟ್ಟದಲ್ಲಿ ಒಂದು ಕಾಲುವೆಯನ್ನು ನಿರ್ಮಿಸಿ ಮಳೆಗಾಲದಲ್ಲಿ ನೀರು ಹರಿಸಿ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಬಳಿ ನೀರು ಶೇಖರಣೆ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ವಿಧಾನಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎನ್.ಎಸ್. ಬೋಸ್‍ರಾಜು ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡುತ್ತ ಈ ವಿಷಯ ತಿಳಿಸಿದರು. ತುಂಗಭದ್ರಾ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿಯೇ ಆಣೆಕಟ್ಟೆಗೆ ಪ್ರತಿವರ್ಷ ಅರ್ಧ ಟಿಎಂಸಿ ಹೂಳು ಬಂದು ಸೇರುತ್ತದೆ ಎಂದು ತಿಳಿಸಲಾಗಿದೆ. ಈಗ್ ಜಲಾಶಯ ನಿರ್ಮಾಣಗೊಂಡು 64 ವರ್ಷಗಳಾಗಿವೆ. 32 ಟಿಎಂಸಿ ಹೂಳು ತುಂಬಿ ನೀರಿನ ಕೊರತೆ ಆಗುತ್ತಿದೆ. ಇದನ್ನು ತೆರವುಗೊಳಿಸಲು ಜಾಗತಿಕ ಟೆಂಡರ್ ಕರೆದಾಗಲೂ ಸಹ ಹೂಳು ತೆರವು ಕಾರ್ಯ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನೀರಿನ ಕೊರತೆ ಸರಿದೂಗಿಸಲು ಸಮಾನಾಂತರ ಜಲಾಶಯ ಹಾಗೂ ಕಾಲುವೆಗಳ ನಿರ್ಮಾಣ ಮಾತ್ರ ಪರಿಹಾರವಾಗಿದೆ. ತುಂಗಭದ್ರಾ ಜಲಾಶಯವು ಅಂತರರಾಜ್ಯ ಜಲಾಶಯವಾಗಿದ್ದು, ತುಂಗಭದ್ರಾ ಮಂಡಳಿಯ ಸುಪರ್ದಿಗೆ ಒಳಪಟ್ಟಿದೆ. ಯಾವುದೇ ಪ್ರಸ್ತಾವನೆ ಮಂಡಳಿಯ ಅನುಮತಿ ಪಡೆಯಬೇಕಾಗಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಗಾಜನೂರು ಯೋಜನೆ ತುಂಗಭದ್ರಾ ಯೋಜನೆ ನಡುವೆ 11 ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇವುಗಳಲ್ಲಿ 2 ಯೋಜನೆಗಳು ಪೂರ್ಣಗೊಂಡಿವೆ. 5 ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. 4 ಯೋಜನೆಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ ಎಂದು ಸಚಿವರು ತಿಳಿಸಿದರು.
ಎನ್.ಆರ್.ಬಿ.ಸಿ. 152.70ಕೋಟಿ ವೆಚ್ಚ:
ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಕಾಲುವೆಯ 95ನೇ ಕಿ.ಮೀ. ನಿಂದ 168.50 ಕಿ.ಮೀ. ವರೆಗೆ 12 ಪ್ಯಾಕೇಜ್‍ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ. ಕಾಲುವೆ ವಿಸ್ತರಣೆಗೆ ಸೆಪ್ಟೆಂಬರ್ 2017 ರ ಅಂತ್ಯದವರೆಗೆ ಒಟ್ಟು ರೂ.152.70ಕೋಟಿ ವೆಚ್ಚ ಮಾಡಲಾಗಿರುತ್ತದೆ. ಒಟ್ಟು 34 ವಿತರಣಾ ಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿಯ ಕೆರೆಗಳಿಗೆ ಹನಿ ನೀರಾವರಿ ಮುಖಾಂತರ ನೀರು ತುಂಬಿಸಲು ಯೋಜಿಸಲಾಗಿದೆ. ಈಗಾಗಲೇ ರಾಯಚೂರು ತಾಲೂಕಿನ 8 ಕೆರೆಗಳನ್ನು ತುಂಬಿಸಲು ವಿತರಣಾ ಕಾಲುವೆ ಜಾಲವನ್ನು ನಿರ್ಮಿಸಲಾಗುತ್ತಿದೆ.
ಯೋಜನೆಯ 3ನೇ ಹಂತದಲ್ಲಿ 18.98ಟಿಎಂಸಿ ನೀರು ಬಳಸಿ ರಾಯಚೂರು ಹಾಗೂ ದೇವದುರ್ಗ ತಾಲೂಕುಗಳಿಗೆ ಸೇರಿದ 56,100 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿದೆ. ರಾಯಚೂರು ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವಿಷಯವು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ವ್ಯಾಪ್ತಿಗೆ ಬರುತ್ತದೆ ಎಂದು ಸಚಿವರು ವಿವರಿಸಿದರು.
ಬೆಳಗಾವಿ ಜಿಲ್ಲೆಯ 13 ಕೆರೆ ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ:
ಬೆಳಗಾವಿ ಜಿಲ್ಲೆಯಲ್ಲಿ ನದಿಗಳಿಂದ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಕುರಿತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲೆ ವ್ಯಾಪ್ತಿಯಲ್ಲಿ 13 ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 3 ಯೋಜನೆಗಳು ಪೂರ್ಣಗೊಂಡಿವೆ. ಉಳಿದ ಯೋಜನೆಗಳ ಅನುಷ್ಠಾನ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಇದೆ ಎಂದು ತಿಳಿಸಿದರು.

ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ
ಯೋಜನೆಗಳಿಗೆ 223 ಕೋಟಿ ರೂ.ಬಿಡುಗಡೆ
ಸಚಿವ: ಸಂತೋಷ್ ಲಾಡ್
ಬೆಳಗಾವಿ, ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಲ್ಯಾಣ ಚಟುವಟಿಕೆಗಳಿಗೆ 2007-08 ರಿಂದ 2012-13 ರ ವರೆಗೆ ಸುಮಾರು ರೂ.9ಕೋಟಿ ವ್ಯಯಿಸಲಾಗಿದ್ದರೆ 2013-14ರಿಂದ ಇಲ್ಲಿಯವರೆಗೆ 214 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದರು.
ವಿಧಾನಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಟಿ.ಎ. ಶರವಣ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ 5 ಮಂಡಳಿಗಳು ಹಾಗೂ 2 ಸೊಸೈಟಿಗಳು ಬರುತ್ತವೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಶೈಕ್ಷಣಿಕ, ಮದುವೆ, ಅಂತ್ಯಸಂಸ್ಕಾರ, ವೈದ್ಯಕೀಯ ವೆಚ್ಚ, ಹೆರಿಗೆ ಧನ ಸಹಾಯ, ಉಪಕರಣ ಖರೀದಿ, ಪಿಂಚಣಿ ಹಾಗೂ ದುರ್ಬಲತೆ ಪಿಂಚಣಿ, ಮತ್ತೀತರ ಯೋಜನೆಗಳಡಿ ಕಳೆದ 10 ವರ್ಷಗಳಲ್ಲಿ ಒಟ್ಟು 223 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಪ್ರಸಕ್ತ ಸರ್ಕಾರದ ಅವಧಿಯಲ್ಲಿಯೇ ಅತೀ ಹೆಚ್ಚು ಅಂದರೆ ಸುಮಾರು 214 ಕೋಟಿ ರೂ.ಗಳನ್ನು ಬಳಸಲಾಗಿದೆ.
ಮಂಡಳಿಯಲ್ಲಿ ಕಳೆದ 10 ವರ್ಷಗಳಲ್ಲಿ ನೋಂದಣಿ ಹಾಗೂ ವಂತಿಗೆ ಶುಲ್ಕದ ಬಡ್ಡಿ ಸೇರಿ ರೂ.6,108.88 ಕೋಟಿ ಸಂಗ್ರಹಿಸಲಾಗಿದೆ. ರೂ.62.44ಕೋಟಿ ಮೊತ್ತ ಮಂಡಳಿಯಲ್ಲಿದೆ. ಮಂಡಳಿಗೆ ವಂತಿಗೆ ಪಾವತಿಸುವ ಕಾರ್ಖಾನೆ, ಪ್ಲಾಂಟೇಷನ್, ಮೋಟಾರು ವಾಹನ ಹಾಗೂ ಅಂಗಡಿ, ವಾಣೀಜ್ಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಈ ಯೋಜನೆಗಳಡಿ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸಚಿವ ಲಾಡ್ ತಿಳಿಸಿದರು.
ಕಾರ್ಮಿಕರ ನೋಂದಣಿ ಕಾರ್ಯ ಚುರುಕುಗೊಳಿಸಲು ನೋಂದಣಿ ಶುಲ್ಕವನ್ನು ರದ್ದುಗೊಳಿಸಿ ಕಾರ್ಮಿಕರನ್ನು ಜಾಗೃತಿಗೊಳಿಸಬೇಕು ಎಂದು ಸದಸ್ಯರಾದ ಟಿ.ಎ. ಶರವಣ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಸಿದ್ಧಉಡುಪು ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರ ಒದಗಿಸದ 99 ಕಾರ್ಖಾನೆಗಳ ವಿರುದ್ಧ 99 ಮೊಕ್ಕದ್ದಮೆಗಳು
30 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಿದ್ಧಉಡುಪು ಕಾರ್ಖಾನೆಗಳಲ್ಲಿ ಬಾಲವಾಡಿ (ಮಕ್ಕಳ ಶಿಶುಪಾಲನಾ ಕೇಂದ್ರ) ಒದಗಿಸಬೇಕು. ಈ ನಿಯಮ ಉಲ್ಲಂಘಿಸಿರುವ 99 ಕಾರ್ಖಾನೆಗಳ ವಿರುದ್ಧ 99 ಮೊಕ್ಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಸದಸ್ಯ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ ಕರ್ತವ್ಯದ ವೇಳೆಯಲ್ಲಿ ಅಪಘಾತಗಳು ಸಂಭವಿಸದಂತೆ ಸುರಕ್ಷತಾ ನಿಯಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಿಯಮ ಕಾಲಿಕ ಪರಿವೀಕ್ಷಣೆಗಳ ಮುಖಾಂತರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಯಾವುದೇ ಅಪಘಾತಗಳು ಸಂಭವಿಸಿರುವುದಿಲ್ಲ. ಮಹಿಳಾ ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ ವರದಿಯಾಗಿರುವುದಿಲ್ಲ ಎಂದರು.

ಗ್ರಾ.ಪಂ. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಎಚ್.ಕೆ. ಪಾಟೀಲ
ಸುವರ್ಣ ವಿಧಾನಸೌಧ, ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದರು.
ಕಡೂರು ಶಾಸಕರಾದ ವೈ.ಎಸ್.ವಿ ದತ್ತ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ನೇರ ನೇಮಕಾತಿಯಡಿ 815 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ನೇಮಕಾತಿ ಮಾಡಿಕೊಳ್ಳಬೇಕಾಗಿದ್ದು, ಈಗಾಗಲೇ 809 ಹುದ್ದೆಗಳ ಭರ್ತಿ ಪ್ರಕ್ರಿಯೆ ಅಚಿತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
346 ಗ್ರೇಡ್-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ವೃಂದದ ಹುದ್ದೆಗಳು ಹಾಗೂ 98 ದ್ವಿತೀಯ ದರ್ಜೆ ಹಾಗೂ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುಂಬಡ್ತಿಯಿಂದ ಭರ್ತಿ ಮಾಡಬೇಕಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರೇಡ್-1 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 6,024 ಗ್ರಾಮ ಪಂಚಾಯತಿಗಳಿವೆ. 60,644 ವಿವಿಧ ಹಂತದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 4,181 ಪಿಡಿಒಗಳು, 1,138 ಗ್ರೇಡ್-1 ಕಾರ್ಯದರ್ಶಿ, 2,962 ಗ್ರೇಡ್-2 ಕಾರ್ಯದರ್ಶಿ, 2,249 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, 5,876 ಬಿಲ್ ಕಲೆಕ್ಟರ್, 5,535 ಡಾಟಾ ಎಂಟ್ರಿ ಆಪ್‍ರೇಟರ್, 27,061 ವಾಟರ್‍ಮೆನ್, ಪಂಪ್ ಆಪ್‍ರೇಟರ್, ಪಂಪ್ ಮೆಕ್ಯಾನಿಕ್, 5,301 ಅಟೆಂಡರ್ ಹಾಗೂ 6,341 ಸ್ವಚ್ಛತಾಗಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

462 ಗ್ರಾಮ ಪಂಚಾಯತಿಗೆ ಹೊಸ ಕಟ್ಟಡ:
ಸುವರ್ಣ ವಿಧಾನಸೌಧ, ಬೆಳಗಾವಿ :ಹೊಸದಾಗಿ ರಚನೆಯಾಗಿರುವ ಗ್ರಾಮ ಪಂಚಾಯತಿಗಳಿಗೆ ಕಟ್ಟಡ ನಿರ್ಮಿಸಲು ಪ್ರತಿ ಕಟ್ಟಡಕ್ಕೆ 40 ಲಕ್ಷ ರೂ. ನಿಗದಿಪಡಿಸಿ ಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಶಾಸಕರಾದ ಭೀಮಾನಾಯ್ಕ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವ, ರಾಜ್ಯದಲ್ಲಿ ಹೊಸದಾಗಿ 462 ಗ್ರಾಮ ಪಂಚಾಯತಿಗಳು ರಚನೆಯಾಗಿವೆ. ಪ್ರತಿ ಗ್ರಾಮ ಪಂಚಾಯತಿ ಕಟ್ಟಡವನ್ನು ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.