ಉತ್ತಮ ಸಮಾಜಕ್ಕಾಗಿ

‘ಮೆಟ್ರೋ ಯೋಜನೆಯಡಿ ವಿಮಾನ ನಿಲ್ದಾಣಕ್ಕೆ ಮಾರ್ಗ ನಿರ್ಮಿಸುವ ಗುರಿ’

0

ಬೆಳಗಾವಿ, ಬೆಂಗಳೂರು ಮೆಟ್ರೋ ಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ನಾಗವಾರ ಮೆಟ್ರೋ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗವನ್ನು ನಿರ್ಮಿಸಲು ಗುರಿ ಹೊಂದಿದೆ ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಇಂದು ಸದಸ್ಯ ರಿಜ್ವಾನ್ ಅರ್ಷದ್ ಅವರ ಚುಕ್ಕೆಯಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಅವರು, ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ- 1 ರಲ್ಲಿ 42.30 ಕಿ.ಮೀ.ಗಳ ಹಳಿ ಉದ್ದವಿದ್ದು, ಸದರಿ ಕಾಮಗಾರಿಯು ಪೂರ್ಣಗೊಂಡು ವಾಣಿಜ್ಯ ಸೇವೆಗೆ ಮುಕ್ತಗೊಳಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2 ರಲ್ಲಿ ನಾಲ್ಕು ವಿಸ್ತರಣೆಗಳು ಮತ್ತು 02 ಹೊಸ ಮಾರ್ಗಗಳನ್ನು ಹೊಂದಿದೆ. ಒಟ್ಟಾರೆಯಾಗಿ 72 ಕಿ.ಮೀ.ಗಳ ಉದ್ದ ಮತ್ತು 61 ನಿಲ್ದಾಣಗಳನ್ನು ಒಳಗೊಂಡಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2 ಎ ರಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್.ಪುರಂ ವರೆಗೆ ಹೊಸ ಮೆಟ್ರೋ ಮಾರ್ಗ 17 ಕಿ.ಮೀ. ಹಳಿ ಉದ್ದವಿರುತ್ತದೆ ಎಂದು ತಿಳಿಸಿದ್ದಾರೆ.
ಮಾರ್ಗ ವಿಸ್ತರಣೆ: ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಸಿರು ಮತ್ತು ನೇರಳೆ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಹಸಿರು ಬಣ್ಣದ ಮಾರ್ಗದಲ್ಲಿ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‍ಷಿಪ್ ವರೆಗೆ ಮತ್ತು ನಾಗಸಂದ್ರದಿಂದ ಬಿಐಇಸಿ ವರೆಗೆ ವಿಸ್ತರಿಸಲಾಗುವುದು. ನೇರಳೆ ಬಣ್ಣದ ಮಾರ್ಗದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಐಟಿಪಿಎಲ್ –ವೈಟ್‍ಫೀಲ್ಡ್ ವರೆಗೆ ಮತ್ತು ಮೈಸೂರು ರಸ್ತೆ ಟರ್ಮಿನಲ್‍ನಿಂದ ಕೆಂಗೇರಿ ವರೆಗೆ ವಿಸ್ತರಿಸಲಾಗುವುದು.
ಈ 02 ಮಾರ್ಗಗಳ ಕಾಮಗಾರಿಗಳು ಈಗಾಗಲೇ ಕೈಗೆತ್ತಿಕೊಂಡು ಪ್ರಗತಿಯಲ್ಲಿದೆ. ಹಸಿರು ಬಣ್ಣದ ಮಾರ್ಗವೂ ಡಿಸೆಂಬರ್ 2018 ರ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತಾಯಗೊಳಿಸಲಾಗುವುದು. ನೇರಳೆ ಬಣ್ಣದ ಮಾರ್ಗವು ಡಿಸೆಂಬರ್2018 ರ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಸದರಿ ಮಾರ್ಗಗಳ ಕಾಮಗಾರಿಗಳು ಸುರಂಗಮಾರ್ಗ ಹೊರತುಪಡಿಸಿ ಈಗಾಗಲೇ ಕಾಮಗಾರಿಯು ಪ್ರಾರಂಭವಾಗಿದೆ. ಈ ಮಾರ್ಗಗಳನ್ನು ಮಾಚ್ 2021 ರ ವೇಳೆಗೆ ಮುಕ್ತಾಯಗೊಳಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ 1225 ರಾಜಕಾಲುವೆ ಒತ್ತುವರಿ ತೆರವು
ಬೆಳಗಾವಿ, ಬೆಂಗಳೂರು ನಗರದಲ್ಲಿ ಮೂರು ವರ್ಷಗಳಲ್ಲಿ 1953ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲಾಗಿದ್ದು, ಇದುವರೆಗೆ ಒಟ್ಟು 1225 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಒತ್ತುವರಿ ತೆರವುಗೊಳಿಸಬೇಕಾಗಿರುವ 728 ಪ್ರಕರಣಗಳು ಬಾಕಿ ಇರುತ್ತವೆ ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಅವರು ವಿಧಾನಪರಿಷತ್ತಿನಲ್ಲಿಂದು ಸದಸ್ಯ ಸೋಮಣ್ಣ ಮ. ಬೇವಿನಮರದ ಅವರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿ ಈ ಮಾಹಿತಿ ನೀಡಿದ್ದಾರೆ. ಮಳೆನೀರುಗಾಲುವೆಗಳಲ್ಲಿ ಉಳಿಕೆ 728 ಒತ್ತುವರಿ ಜಾಗಗಳನ್ನು ಗುರುತಿಸಲು ಕಂದಾಯ ಇಲಾಖೆಯ ಭೂದಾಖಲೆಗಳ ನಿರ್ದೇಶಕರನ್ನು ಕೋರಲಾಗಿರುತ್ತದೆ. ಒತ್ತುವರಿ ಜಾಗಗಳನ್ನು ಗುರುತಿಸಿಕೊಟ್ಟ ನಂತರ ಬಾಕಿ ಇರುವ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲಾಗುವುದು. ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.