ಉತ್ತಮ ಸಮಾಜಕ್ಕಾಗಿ

ಖಾಸಗಿ ವೈದ್ಯರೇ ಪ್ರತಿಭಟನೆ ನಿಲ್ಲಿಸಿ; ಜನರ ಜೀವ ಉಳಿಸಿ: ಈಶ್ವರಪ್ಪ ಮನವಿ

0

ಬೆಳಗಾವಿ: ಇಂದಿನ ಪರಿಷತ್(council) ಕಲಾಪ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪರಸ್ಪರ ವಾದ ವಿವಾದ ನಡೆಯಿತು. ಸರಕಾರ ಇರುವುದು ಜನರ ಜೀವ ರಕ್ಷಿಸಲು; ಅದೇ ಆಗದಿದ್ದರೆ ಸರಕಾರ ಯಾಕೆ ಇರಬೇಕು ಎಂದು ಬಿಜೆಪಿ, ಜೆಡಿಎಸ್ ಶಾಸಕರು ಸರಕಾರದ ಮೇಲೆ ಹರಿಹಾಯ್ದರು. ನಿಲುವಳಿ ಸೂಚನೆ ವೇಳೆ ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಚರ್ಚೆ ಮಾಡೋಣ ಎಂದು ಕಾನೂನು ಸಚಿವ ಟಿ. ಬಿ. ಜಯಚಂದ್ರ ಸದನದಲ್ಲಿ ತಿಳಿಸಿದರು. ರಾಜ್ಯಾದ್ಯಂತ ವೈದ್ಯರು ನಡೆಸಿರುವ ಅನಿರ್ಧಿಷ್ಠಾವಧಿ ಪ್ರತಿಭಟನೆಯಿಂದ ಅಲ್ಲಲ್ಲಿ ನಡೆದಿರುವ ಅಮಾಯಕ ಜನರ ಸಾವಿಗೆ ನೇರವಾಗಿ ಸರಕಾರವೇ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಕೆಪಿಎಂಇ ಕಾಯ್ದೆ ಮಂಡನೆಗೆ ಪ್ರಸ್ತಾವನೆ ಸದನದಲ್ಲಿ ಸರಕಾರ ಸಲ್ಲಿಸಿದಾಗ ಈ ಚರ್ಚೆ ತೀವ್ರ ಗರಿಗೆದರಿತು. ವೈದ್ಯರು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವುದು ಮತ್ತು ಅಲ್ಲಲ್ಲಿ ರೋಗಿಗಳ ಸಾವು ನಡೆಯುತ್ತಿರುವುದು ಇದೇ ಮೊದಲು ಎಂದು ವಿರೋಧ ಪಕ್ಷದ ನಾಯಕ ಕೆ. ಎಸ್. ಈಶ್ವರಪ್ಪ ಸದನದ ಗಮನ ಸೆಳೆದರು.

ಆರೋಗ್ಯ ಸಚಿವರು ಜವಾಬ್ದಾರಿಯಿಂದ ವರ್ತಿಸಲಿ, ಸರಕಾರವೂ ಜವಾಬ್ದಾರಿ ತಿಳಿಯಲಿ. ಖಾಸಗಿ ವೈದ್ಯರಿಗೂ ಸಾಮಾಜಿಕ ಜವಾಬ್ದಾರಿ ಬೇಕು. ಈ ಕೂಡಲೇ ಖಾಸಗಿ ವೈದ್ಯರು ಪ್ರತಿಭಟನೆ ನಿಲ್ಲಿಸಿ ಜನರ ಸೇವೆಗೆ ಹೋಗ್ರಿ ಎಂದು ಸದನದಲ್ಲಿ ಕೆ. ಎಸ್. ಈಶ್ವರಪ್ಪ ಸುವರ್ಣಸೌಧದ ಹೊರಗೆ ಪ್ರತಿಭಟನೆ ನಡೆಸಿರುವ ವೈದ್ಯರಿಗೆ ಮನವಿ ಮಾಡಿದರು. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಕೂಡಲೇ ಮತ್ತೊಮ್ಮೆ ವೈದ್ಯರ ಸಭೆ ಕರೆದು ಸನಸ್ಯೆ ಬಗೆ ಹರಿಸಿ. ನಮಗೆ ನಿಲುವಳಿ ಸೂಚನೆಗೆ ಅನುವು ಮಾಡಿ ಎಂದು ಈಶ್ವರಪ್ಪ ಒತ್ತಾಯಿಸಿದರು.
ತಾಯಿಯೊಬ್ಬಳು ತನ್ನ ಮಗುವನ್ನು ಉಳಿಸುವಂತೆ ವೈದ್ಯರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿರುವ ವರದಿ ಕರುಣಾಜನಕ ಎಂದು ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿ ಚರ್ಚೆ ಮಾಡಿಯೇ ವಿಧೇಯಕ ಮಂಡಿಸಿ ಎಂದು ಈಶ್ವರಪ್ಪ ತಿಳಿಸಿದರು. ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡಿ ಎಂದರು. ಜಂಟಿ ಸದನ ಸಮಿತಿಯಲ್ಲಿ ಈ ವಿಧೇಯಕ ಚರ್ಚೆಯಾಗಿದೆ. ಪ್ರತಿಭಟನಾ ನಿರತ ವೈದ್ಯ ಪ್ರತಿನಿಧಿಗಳು ಸಹ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಕಾನೂನು ಸಚಿವ ಟಿ. ಬಿ. ಜಯಚಂದ್ರ ಸಭೆಗೆ ಮಾಹಿತಿ ನೀಡಿದರು. ಸಮಸ್ಯೆಯ ಗಾಂಭೀರ್ಯತೆ ಬಗ್ಗೆ ಪ್ರಶ್ನೋತ್ತರ ನಂತರ ಚರ್ಚಿಸೋಣ ಎಂದು ಜಯಚಂದ್ರ ಸಭೆಗೆ ಮನವಿ ಮಾಡಿದರು.

ವಿಧೇಯಕವನ್ನೇ ತರಬೇಡಿ ಎಂಬ ಮಿತಿಮೀರಿದ ಒತ್ತಡ ಸರಿಯಲ್ಲ ಎಂದು ಜಯಚಂದ್ರ ತಿಳಿಸಿದರು. ವಿರೋಧ ಪಕ್ಷದ ನಾಯಕರ ಮಾತನ್ನು ಸರಕಾರ ಸಂಪೂರ್ಣ ಕೇಳಿಸಿಕೊಂಡಿದೆ, ಪರಿಹಾರ ಎಲ್ಲರೂ ಕಂಡು ಹಿಡಿಯೋಣ ಎಂದರು. ಚರ್ಚೆಯಲ್ಲಿ ತಪ್ಪುಗಳನ್ನು ಹುಡುಕುವ ಬದಲು ಪರಿಹಾರ ಹುಡುಕಲು ಸದನದ ಶಾಸಕರು ಪ್ರಯತ್ನ ಮಾಡಬೇಕೆಂದು ಸಭಾಪತಿ ಡಿ. ಎಚ್. ಶಂಕರಮೂರ್ತಿ ಸಲಹೆ ನೀಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.