ಉತ್ತಮ ಸಮಾಜಕ್ಕಾಗಿ

ಗಣಕೀಕರಣದ ಮಹತ್ವವನ್ನು ಅರಿತು ಅಭಿವೃದ್ಧಿ ಪತದತ್ತ ಸಾಗಬೇಕು

0

ಬೆಳಗಾವಿ: ರಾಷ್ಟ್ರೀಕೃತ ಬ್ಯಾಂಕುಗಳು ಎಲ್ಲ ತರಹದ ಬ್ಯಾಂಕಿಂಗ್ ಸೇವೆಗಳನ್ನು ಗಣಕೀಕರಣದ ಮೂಲಕ ನಿರ್ವಹಿಸುತ್ತಿದ್ದು, ಸಹಕಾರ ಸಂಸ್ಥೆಗಳೂ ಕೂಡ ಗಣಕೀಕರಣದ ಮಹತ್ವವನ್ನು ಅರಿತು ಅಭಿವೃದ್ಧಿ ಪತದತ್ತ ಸಾಗಬೇಕು ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕರಾದ ರಾಜೇಂದ್ರ ಅಂಕಲಗಿ ಅವರು ಹೇಳಿದರು.

ಸಹಕಾರ ಇಲಾಖೆ, ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ನಿ., ಇಫ್ಕೋ ಸಂಸ್ಥೆ ಹಾಗೂ ಶಿವಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಇವುಗಳ ಸಂಯುಕ್ತ ಆಶ್ರಯದಲ್ಲಿ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಹಕಾರ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡು ಸಹಕಾರ ಸಂಘಗಳ ಮೂಲಕ ಮಹಿಳಾ ಸಬಲೀಕರಣವೂ ಅವಶ್ಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಸವರಾಜ ಎಸ್. ಸುಲ್ತಾನಪುರಿ ಅವರು ಮಾತನಾಡಿ, ಇತ್ತೀಚೆಗೆ ಸಹಕಾರ ಕ್ಷೇತ್ರದಲ್ಲಿ ಗಣಕೀಕರಣದ ಮೂಲಕ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದು, ಆ ಬದಲಾವಣೆಗಳಿಗೆ ತಕ್ಕಂತೆ ಸಹಕಾರ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆ ನಿರ್ವಹಿಸಬೇಕು. ತಾಂತ್ರಜ್ಞಾನದ ಸಹಾಯದಿಂದ ಉನ್ನತಿ ಹೊಂದಬೇಕು ಎಂದು ಹೇಳಿದರು.
ಪ್ರತಿಯೊಂದು ಸಹಕಾರ ಸಂಸ್ಥೆಗಳು ತಮ್ಮದೇಯಾದ ಗೋದಾಮುಗಳನ್ನು ಹೊಂದುವುದು ಅನಿವಾರ್ಯವಾಗಿದ್ದು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು. ಇದರ ಜೊತೆಗೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ವಾಹನಗಳನ್ನು ಕಡಿಮೆ ಬಾಡಿಗೆಯ ಮೂಲಕ ಪೂರೈಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೂಜ್ಯ ಶ್ರೀ ಮ. ನಿ. ಪ್ರ. ಸ್ವ. ಡಾ|| ಸಿದ್ರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ಸಹಕಾರ ಸಂಸ್ಥೆಗಳು ರೈತರಿಗೆ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲ ಸೌಲಭ್ಯವನ್ನು ನೀಡಿ, ಅವರು ಬೆಳೆದ ಉತ್ಪನ್ನಗಳಗೆ ಸರಿಯಾದ ಬೆಲೆಯನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಹಿರಿಯ ನ್ಯಾಯವಾದಿ ದಿನೇಶ ಎಮ್. ಪಾಟೀಲ, ಇವರು “ಸಹಕಾರ ಸಂಸ್ಥೆಗಳು – ಉತ್ಪಾದಕರಿಂದ ಗ್ರಾಹಕರವರೆಗೆ” ಎಂಬ ವಿಷಯ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಲೋಕೊಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರಾದ ಬಿ. ಎ. ರಡ್ಡಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ಬಿ. ಎನ್. ಉಳ್ಳಾಗಡ್ಡಿ, ಎಸ್.ಎಫ್.ದೊಡಗೌಡರ, ಎಮ್.ಎನ್.ಆರ್.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಾ|| ಎನ್.ಜಿ. ಭಟ್ಟಲ್, ಆರ್. ಎನ್. ಸೋನವಾಲಕರ, ಎಸ್. ಎಮ್. ಬಡ್ಡೂರ, ಕೆಐಸಿಎಮ್ ಪ್ರಾಂಶುಪಾಲರಾದ ಚಂದ್ರಶೇಖರ ಹಾಗೂ ಇಫ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿಗಳಾದ ಶ್ರೀ ಬಿ. ಚೇತನ ವೇದಿಕೆ ಮೇಲಿದ್ದರು. ಶಿವಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿರ್ದೇಶಕರು ಉಪಸ್ಥಿತರಿದ್ದರು. ಎಸ್. ವಿ. ಹಿರೇಮಠ ಸ್ವಾಗತಿಸಿದರು. ಶಿವಾ ಕ್ರೆಡಿಟ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ವಾಯ್.ಎನ್.ಮೇಲಿನಮನಿ ಅವರು ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.