ಉತ್ತಮ ಸಮಾಜಕ್ಕಾಗಿ

ರಾಣಿ ಚನ್ನಮ್ಮ, ರಾಯಣ್ಣ ಮತ್ತು ಅಂಬೇಡ್ಕರ ಅವರ ಜೀವನ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು: ಉನ್ನತ ಶಿಕ್ಷಣ ಸಚಿವ ರಾಯರಡ್ಡಿ

0

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆರಂಭಿಸುತ್ತಿರುವ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರ ಕುರಿತ ಅಧ್ಯಯನ ಪೀಠಗಳು ಉತ್ತಮ ಸಂಶೋಧನೆ ಮಾಡುವ ಮೂಲಕ ಮುಂದಿನ ಜನಾಂಗಕ್ಕೆ ವಾಸ್ತವ ಇತಿಹಾಸವನ್ನು ತಿಳಿಸಿಕೊಡಬೇಕೆಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಅವರು ಇಂದು ಸಂಜೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಎರಡನೇಯ ಹಂತದ ಕಟ್ಟಡ ಕಾಮಗಾರಿ ಚಾಲನೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಗಣಕ ಯಂತ್ರ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳವಣಿಗೆಗಾಗಿ ಅನೇಕ ರೀತಿಯ ನೆರವನ್ನು ನೀಡಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಕಟ್ಟಡ ಕಾಮಗಾರಿಗಾಗಿ ಈಗಾಗಲೇ 80 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಕಟ್ಟಡಗಳನ್ನು ನಿರ್ಮಿಸಲು 65 ಕೋಟಿ ಅನುದಾನ ನೀಡಲು ಸರಕಾಕ್ಕೆ ವಿವಿ ಕುಲಪತಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲು ವಿನಂತಿಸಲಾಗುವುದು ಎಂದು ಅವರು ತಿಳಿಸಿದರು.
ಬರುವ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣದಿಂದ ಪದವಿ ಹಂತದವರೆಗೆ ವಿಸ್ತರಿಸಿರುವ ಶುಲ್ಕ ವಿನಾಯತಿಯನ್ನು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೂ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪಾರದರ್ಶಕತೆಯನ್ನು ತರುವದಕ್ಕಾಗಿ ನೂತನ ವಿಶ್ವವಿದ್ಯಾಲಯ ಕಾಯ್ದೆ ಮಾಡಲಾಗುತ್ತಿದೆ. ಇದು ವಿದ್ಯಾರ್ಥಿ ಸ್ನೇಹಿಯಾಗಿದ್ದು, ಬೋಧಕರ ಹಿತರಕ್ಷಣೆ ಮಾಡಲಿದೆ ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರ ಆದರ್ಶ ಜೀವನವನ್ನು ವಿದ್ಯಾರ್ಥಿಗಳು ಹೆಚ್ಚು, ಹೆಚ್ಚು ಅಧ್ಯಯನ ಮಾಡಿ ಬೆಳಕು ಚೆಲ್ಲಲಿ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ವಿವಿ ಆವರಣದಲ್ಲಿ ಬಾಬು ಜಗಜೀವನ ರಾಮ್ ಅವರ ಅಧ್ಯಯನ ಪೀಠ ನಿರ್ಮಿಸಲು 2 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ವಿನಯ ಕುಲಕರ್ಣಿ ಹಾಗೂ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು.
ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಮಾತನಾಡಿದರು. ವೇದಿಕೆಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ, ಜಿ.ಪಂ ಅಧ್ಯಕ್ಷ ಶ್ರೀಮತಿ ಆಶಾ ಐಹೊಳೆ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿವರ್ಗ, ಆಡಳಿತಮಂಡಳಿ ಸದಸ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಲಪತಿ ಪ್ರೋ.ಶಿವಾನಂದ ಹೊಸಮನಿ ಸ್ವಾಗತಿಸಿ. ವಿಶ್ವವಿದ್ಯಾಲಯದ ಸಾಧನೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕವೃಂದ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.