ಉತ್ತಮ ಸಮಾಜಕ್ಕಾಗಿ

ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿ: ಸದನ ಸಮಿತಿ ರಚನೆಗೆ ನಿರ್ಣಯ

0

ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿ: ಸದನ ಸಮಿತಿ ರಚನೆಗೆ ನಿರ್ಣಯ
ಬೆಳಗಾವಿ: ರಾಜ್ಯದಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವಿವಿಧ ಕಾಲೇಜ್‍ಗಳಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲು ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಕುರಿತು ಸಮಗ್ರ ವಿಚಾರಣೆ ನಡೆಸಲು ಸದನ ಸಮಿತಿ ರಚಿಸಲು ವಿಧಾನ ಪರಿಷತ್‍ನಲ್ಲಿಂದು ನಿರ್ಣಯ ಕೈಗೊಳ್ಳಲಾಯಿತು.
ಪ್ರಶ್ನೋತ್ತರ ವೇಳೆ ಸದಸ್ಯ ರಘುನಾಥ್‍ರಾವ್ ಮಲ್ಕಾಪೂರೆ ಅವರ ಪ್ರಶ್ನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಸರ್ಕಾರಿ ಪಾಲಿಟೆಕ್ನಿಕ್, ಇಂಜಿನೀಯರಿಂಗ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ಗಳಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಸಮುದಾಯಗಳ 2.5ಲಕ್ಷ ವರಮಾನಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್‍ಗಳನ್ನು ಉಚಿತÀವಾಗಿ 2017-18ನೇ ಸಾಲಿನಿಂದ ವಿತರಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ 2016-17ನೇ ಸಾಲಿನಲ್ಲಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ 31,742 ಲ್ಯಾಪ್‍ಟಾಪ್‍ಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿತ್ತು. ಟೆಂಡರ್‍ನಲ್ಲಿ ಅತೀ ಕಡಿಮೆ ಬಿಡ್ ಮಾಡಿದ ಮೆ: ಏಸರ್ ಇಂಡಿಯಾ ಪ್ರೈ.ಲಿಮಿಟೆಡ್ ಸಂಸ್ಥೆಯು ಪ್ರತಿ ಲ್ಯಾಪ್‍ಟಾಪ್‍ಗೆ ಎಲ್ಲ ತೆರಿಗೆಗಳು ಸೇರಿ ರೂ.14,490/-ಗಳನ್ನು ನಮೂದಿಸಿದೆ. ಈ ದರದಲ್ಲಿ 31742 ಲ್ಯಾಪ್‍ಟಾಪ್‍ಗಳನ್ನು ಪೂರೈಸಲು ಅಕ್ಟೋಬರ್ 3 ರಂದು ಖರೀದಿ ಆದೇಶ ನೀಡಲಾಗಿದೆ ಎಂದು ವಿವರಿಸಿದರು.
ಸಚಿವರ ಉತ್ತರದಿಂದ ತೃಪ್ತರಾಗದ ಸದಸ್ಯ ರಘುನಾಥ್‍ರಾವ್ ಮಲ್ಕಾಪೂರೆ ಅವರು ಈ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಆರೋಪಿಸಿದರು. ಆಗ ಸಚಿವ ರಾಯರಡ್ಡಿ ಅವರು ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಪ್ರತಿಯೊಂದು ಲ್ಯಾಪ್‍ಟಾಪ್‍ನ ಗುಣಮಟ್ಟ ಪರೀಕ್ಷಿಸಿ ಸ್ವೀಕರಿಸಲಾಗುತ್ತಿದೆ. ಕಳೆದ ವರ್ಷ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಒದಗಿಸಲಾಗಿರುವ ಈ ಸೌಲಭ್ಯವನ್ನು ಇದೇ ವರ್ಷದಿಂದ ಎಲ್ಲ ಸಮುದಾಯದ 2.5ಲಕ್ಷ ವರಮಾನಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ತಡೆಒಡ್ಡಿ ಸಾಮಾನ್ಯ ವರ್ಗ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಡಿ ಎಂದರು. ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ ಯಾವುದೇ ಅವ್ಯವಹಾರ ನಡೆದಿಲ್ಲವಾದರೆ ವಿಚಾರಣೆಗೆ ಜಂಟಿ ಸದನ ಸಮಿತಿ ರಚಿಸಿ ವರದಿ ಪಡೆಯಲು ಸಲಹೆ ನೀಡಿದರು. ಆಗ ಸದನದ ಪ್ರತಿಪಕ್ಷಗಳ ಸದಸ್ಯರು ಅದಕ್ಕೆ ದನಿಗೂಡಿಸಿದರು. ಸಭಾಪತಿ ಡಿ.ಹೆಚ್. ಶಂಕರ್‍ಮೂರ್ತಿ ಅವರು ಈ ಕುರಿತು ಜಂಟಿ ಸದನ ಸಮಿತಿ ರಚಿಸಿ 15 ದಿನಗಳೊಳಗೆ ವರದಿ ನೀಡಬೇಕೆಂದು ನಿರ್ಣಯ ನೀಡಿದರು.

ಹಂಪಿ ಕ.ವಿ.ವಿ. ಗೆ 25 ಕೋಟಿ ಶೀಘ್ರ ಬಿಡುಗಡೆ : ಸಚಿವ ಬಸವರಾಜ ರಾಯರಡ್ಡಿ
ಬೆಳಗಾವಿ,  2017-18ನೇ ಸಾಲಿನ ಆಯವ್ಯಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ರೂ.25ಕೋಟಿಗಳನ್ನು ಘೋಷಿಸಲಾಗಿದೆ. ಈ ಅನುದಾನದಲ್ಲಿ ಯಾವುದೇ ಕಡಿತ ಮಾಡಿಲ್ಲ. ವಿಶ್ವವಿದ್ಯಾಲಯದ ಕುಲಪತಿಗಳು ಕಾಮಗಾರಿಗಳ ವಿನ್ಯಾಸ ಹಾಗೂ ಅಂದಾಜು ಪಟ್ಟಿ ಸಲ್ಲಿಸಿದ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ವಿಧಾನಪರಿಷತ್‍ನಲ್ಲಿಂದು ಸದಸ್ಯ ರಾಮಚಂದ್ರಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹಂಪಿ ಕ.ವಿ.ವಿ. ಗೆ 2014-15 ರಲ್ಲಿ 4.67 ಕೋಟಿ, 2015-16 ರಲ್ಲಿ 3.52ಕೋಟಿ ಹಾಗೂ 2016-17 ರಲ್ಲಿ 3ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. 2017-18ನೇ ಸಾಲಿನಲ್ಲಿ 12.6ಕೋಟಿ ರೂ.ಗಳನ್ನು ಅಭಿವೃದ್ಧಿ ಅನುದಾನವನ್ನು ಒದಗಿಸಲಾಗಿದೆ. ಈ ಅನುದಾನದಲ್ಲಿ 3 ತ್ರೈಮಾಸಿಕ ಹಂತಗಳಲ್ಲಿ 9.49ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 2017-18ರ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವ 25 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ 7 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಕಾಮಗಾರಿಗಳ ವಿನ್ಯಾಸ ಮತ್ತು ಅಂದಾಜು ಪಟ್ಟಿಯನ್ನು ವಿ.ವಿ. ಕುಲಪತಿಗಳು ಸಲ್ಲಿಸಿದರೆ ಶೀಘ್ರ ಹಣ ಬಿಡುಗಡೆ ಮಾಡಲಾಗುವುದು. ಕನ್ನಡ ಭಾಷೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ನಿರತವಾಗಿರುವ ಹಂಪಿ ಕನ್ನಡ ವಿ.ವಿ.ಯ ಅಭಿವೃದ್ಧಿಗೆ ಮತ್ತು ಕನ್ನಡದ ಎಲ್ಲ ಕೆಲಸಗಳಿಗೆ ಸರ್ಕಾರ ಸದಾ ಬೆಂಬಲ ನೀಡುತ್ತಿದೆ ಎಂದರು.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ತಜ್ಞರಿಂದ ನಿಯಮಾವಳಿಗಳ ರಚನೆ
ಸಚಿವ: ಬಸವರಾಜ ರಾಯರಡ್ಡಿ
ಬೆಳಗಾವಿ: ಅಂತರರಾಷ್ಟ್ರೀಯ ಗುಣಮಟ್ಟದ ಬೆಂಗಳೂರು ಡಾ: ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯಾಗಿ ರೂಪಿಸುತ್ತಿದ್ದು, ವಿಶ್ರಾಂತ ಕುಲಪತಿ ಪ್ರೊ: ವಿ.ಬಿ. ಕುಟಿನ್ಹೋ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ನಿಯಮಾವಳಿಗಳನ್ನು ರೂಪಿಸುತ್ತಿದೆ. ಒಂದು ತಿಂಗಳೊಳಗಾಗಿ ನಿಯಮಾವಳಿಗಳ ಕರಡು ಸರ್ಕಾರದ ಕೈ ಸೇರುವ ನಿರೀಕ್ಷೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ವಿಧಾನಪರಿಷತ್‍ನಲ್ಲಿಂದು ಸದಸ್ಯ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಂಗಳೂರು ಡಾ: ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯು ಡಿಮ್ಡ್ ವಿಶ್ವವಿದ್ಯಾಲಯವಾಗಿರುವುದಿಲ್ಲ. ಅದನ್ನು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ನಿರ್ಧರಿಸಲಿದೆ. ಈ ಸಂಸ್ಥೆಗೆ ಕಟ್ಟಡ ಮತ್ತು ಮೂಲ ಸೌಕರ್ಯಗಳಿಗಾಗಿ 150 ಕೋಟಿ ರೂ.ಗಳನ್ನು ನೀಡಲು ಅನುಮೋದನೆ ದೊರೆತಿದೆ. ಅದರಲ್ಲಿ ಈಗಾಗಲೇ 106.96 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 16.96 ಕೋಟಿ ರೂ.ಗಳನ್ನು ಸಂಸ್ಥೆಯ ಸ್ಥಾಪನೆ ಮತ್ತು ಪ್ರಾಥಮಿಕ ಆವರ್ತಕ ವೆಚ್ಚಗಳಿಗಾಗಿ ಬಳಸಿಕೊಳ್ಳಲು ಅನುಮೋದನೆ ನೀಡಲಾಗಿದೆ. ಸಂಸ್ಥೆಯನ್ನು ಐಐಟಿ ಮಾದರಿಯಲ್ಲಿ ಸಹಕಾರ ಸಂಘಗಳ ನೊಂದಣಿ

ಅಧಿನಿಯಮದಡಿ ನೊಂದಾಯಿಸಲಾಗಿದೆ. ಸಂಸ್ಥೆಗೆ ಸದ್ಯ 4 ತಿಂಗಳ ಅವಧಿ ಇಲ್ಲವೆ ಖಾಯಂ ನಿರ್ದೇಶಕರು ನೇಮಕವಾಗುವವರೆಗೆ ತಾತ್ಕಾಲಿಕವಾಗಿ ದೇಶಪಾಂಡೆ ಎಂಬುವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಖಾಯಂ ನೇಮಕಾತಿಗೆ ಪ್ರೊ: ಕಸ್ತೂರಿ ರಂಗನ್, ಪ್ರೋ:ಬಿಸಲಯ್ಯ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಹೆಚ್‍ಕೆಆರ್‍ಡಿಬಿ ಯಿಂದ ಶಾಲೆಗಳ ಮೂಲ ಸೌಕರ್ಯಕ್ಕೆ ಅನುದಾನ
ಸಚಿವ: ತನ್ವೀರ್ ಸೇಠ್
ಬೆಳಗಾವಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಹೆಚ್‍ಕೆಆರ್‍ಡಿಬಿ ಯ ಮೈಕ್ರೋ ಯೋಜನೆಯಡಿಯಲ್ಲಿ ಶೇ.30 ರಷ್ಟು ಅನುದಾನ ಮೀಸಲಿಡಲು ಪತ್ರ ಬರೆಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ವಿಧಾನಪರಿಷತ್‍ನಲ್ಲಿಂದು ಸದಸ್ಯ ಬಸವರಾಜ ಪಾಟೀಲ ಇಟಗಿ ಅವರ ಪ್ರಶ್ನೆಗೆ ಉತ್ತರಿಸುತ್ತ ಸಚಿವರು ಈ ಮಾಹಿತಿ ನೀಡಿದರು. 2017-18ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯ 23 ಪ್ರೌಢಶಾಲೆಗಳ ಅಭಿವೃದ್ಧಿಗಾಗಿ 19 ಕೋಟಿ ರೂ. ಹಾಗೂ ಪ್ರಾಥಮಿಕ ಶಾಲೆಗಳ ದುರಸ್ತಿಗಾಗಿ 18.3ಕೋಟಿ ರೂ.ಗಳು ಹಾಗೂ ಕೊಪ್ಪಳ ಜಿಲ್ಲೆಯ 19 ಪ್ರೌಢಶಾಲೆಗಳಿಗೆ 18ಕೋಟಿ ರೂ., ಪ್ರಾಥಮಿಕ ಶಾಲೆಗಳ ದುರಸ್ತಿಗೆ 78ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಹೈದ್ರಾಬಾದ ಕರ್ನಾಟಕದ ಎಲ್ಲಾ 6 ಜಿಲ್ಲೆಗಳ ಶಾಲೆಗಳ ದುರಸ್ತಿ, ಶೌಚಾಲಯ ಹಾಗೂ ಅಡುಗೆ ಕೊಠಡಿ ಸೇರಿದಂತೆ ವಿಶೇಷ ಸೌಕರ್ಯಗಳಿಗಾಗಿ ಹೆಚ್‍ಕೆಆರ್‍ಡಿಬಿ ಯ ಮೈಕ್ರೋ ಯೋಜನೆಯಡಿ ಶೇ.30ರಷ್ಟು ಅನುದಾನ ಒದಗಿಸಲು ಪತ್ರ ಬರೆಯಲಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಎಲ್ಲ ಶಾಲೆಗಳನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸಲು ಸ್ಥಳೀಯ ಶಾಸಕರು 7 ಕೋಟಿ ರೂ.ಗಳ ಅನುದಾನ ಕ್ರೋಢೀಕರಿಸಿ ಕೊಟ್ಟಿದ್ದಾರೆ. ಇಲಾಖೆಯಿಂದ 3.3ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಪಿಡಿಓ ಹುದ್ದೆ ಗ್ರೂಪ್ ‘ಬಿ’ ದರ್ಜೆಗೆ- ವೇತನ ಆಯೋಗಕ್ಕೆ ಪ್ರಸ್ತಾವನೆ
ಸಚಿವ: ಹೆಚ್.ಕೆ. ಪಾಟೀಲ
ಬೆಳಗಾವಿ: ಸ್ವಯಂ ಆಡಳಿತದ ಸ್ಥಳೀಯ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಯೋಜನೆಗಳ ಅನುಷ್ಠಾನ ಜವಾಬ್ದಾರಿ ಹೊಂದಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗ್ರೂಪ್ ‘ಬಿ’ ವೃಂದಕ್ಕೆ ಉನ್ನತೀಕರಿಸಲು ವೇತನ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ರಾಜ್ಯದಲ್ಲಿ 4181 ಪಿಡಿಓ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಂವಿಧಾನದ 73 ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಅಧಿಕಾರ ಮತ್ತು ಅರ್ಥಿಕ ವಿಕೇಂದ್ರೀಕರಣವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮವನ್ನು 1993 ರಲ್ಲಿ ಜಾರಿಗೊಳಿಸಲಾಗಿದೆ. ಈ ನಿಯಮದಡಿ ಗ್ರಾಮಪಂಚಾಯಿತಿಗಳು ಸ್ವಯಂ ಆಡಳಿತ ಸ್ಥಳೀಯ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮಪಂಚಾಯಿತಿಗಳ ಸಮರ್ಪಕ ಕಾರ್ಯನಿರ್ವಹಣೆ ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಗ್ರೂಪ್ ‘ಸಿ’ ದರ್ಜೆಯ ಪಿಡಿಓ ಹುದ್ದೆಯನ್ನು (ರೂ.20000-36300) ಗ್ರೂಪ್ ‘ಬಿ’ ದರ್ಜೆಗೆ (22800-43200) ಉನ್ನತೀಕರಿಸಲು ವೇತನ ಆಯೋಗಕ್ಕೆ ಶಿಫಾರಸ್ಸು ಮಾಡಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಭಡ್ತಿ ಮೀಸಲಾತಿ ಮುಂದುವರಿಕೆ ವಿಧೇಯಕ ಸರ್ವಾನುಮತದಿಂದ ಅಂಗೀಕಾರ
ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸರಕಾರಿ ನೌಕರರಿಗೆ ಭಡ್ತಿ ಮೀಸಲಾತಿ ಮುಂದುವರಿಸಲು ಅವಕಾಶ ಕಲ್ಪಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದ ಬಳಿಕ ವಿಧೇಯಕ ಪರ್ಯಾಲೋಚನೆಗೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವಕಾಶ ಕಲ್ಪಿಸಿದರು. ‘ಕರ್ನಾಟಕ (ರಾಜ್ಯ ಸಿವಿಲ್ ಸೇವೆಗಳಲ್ಲಿ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ವಿಧೇಯಕ-2017ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದರು.
ಸಿವಿಲ್ ಸೇವೆಗಳಿಗೆ ಸೇರಿದ ಹುದ್ದೆಗಳಿಗೆ ಇರುವ ಎಲ್ಲ ಭಡ್ತಿಗಳು ಮೀಸಲಾತಿ ಆದೇಶಗಳ ಉಪಬಂಧಗಳ ವ್ಯಾಪ್ತಿಯೊಳಗೆ ಮತ್ತು ನೇಮಕಾತಿ ವಿಧಾನಕ್ಕೆ ಹಾಗೂ ಜೇಷ್ಠತೆ ಸಂಬಂಧಿಸಿದ ಇತರ ನಿಯಮಗಳಿಗೆ ಅನುಸಾರವಾಗಿ ಇರಬೇಕು. ನೇಮಕಾತಿ ಪ್ರಾಧಿಕಾರವು, ಭಡ್ತಿಗಳು ಕ್ರಮಾನುಸಾರವಾಗಿ ಮಾಡಲಾಗುವುದನ್ನು ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಬೇಕು ಮತ್ತು ಪುನರ್ ರಚಿಸಬೇಕು ಎಂದು ವಿವರಣೆ ನೀಡಿದರು.
ಅಂತಹ ಪುನರ್ ಅವಲೋಕನೆಯ ತರುವಾಯ ಎಸ್ಸಿ-ಎಸ್ಟಿಗೆ ಸೇರಿದ ಸರಕಾರಿ ನೌಕರರನ್ನು ಮೀಸಲಾತಿ ಮತ್ತು ಬ್ಯಾಕ್‍ಲಾಗ್ ಖಾಲಿಸ್ಥಾನಗಳಿಗಿಂತ ಹೆಚ್ಚಾಗಿ ಅಥವಾ ಮೀಸಲಾತಿ ಆದೇಶಗಳಲ್ಲಿ ಕಲ್ಪಿಸುವ ಮೀಸಲಾತಿಗೆ ಸರಿಹೊಂದಿಸಬೇಕು. 1978ರ ಎಪ್ರಿಲ್ 27ರಂದು ಯಾವುದೇ ಭಡ್ತಿಯ ಸಂಬಂಧ ಕೈಗೊಂಡ ಅಥವಾ ಕೈಗೊಳ್ಳಲಾದ ಎಲ್ಲ ನಡವಳಿಗಳು ಸಿಂಧುವಾಗಿವೆ ಎಂದು ಭಾವಿಸತಕ್ಕದ್ದು ಎಂದು ತಿಳಿಸಿದರು.
ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದು, ಎಸ್ಸಿ-ಎಸ್ಟಿ ಹಿಂದುಳಿದಿರುವಿಕೆ, ರಾಜ್ಯ ಸಿವಿಲ್ ಸೇವೆಗಳಲ್ಲಿ ಅವರ ಪ್ರಾತಿನಿಧ್ಯದ ಅಭಾವ ಮತ್ತು ರಾಜ್ಯದ ಆಡಳಿತದ ಮೇಲೆ ಭಡ್ತಿಯಲ್ಲಿನ ಮೀಸಲಾತಿಯ ಪರಿಣಾಮದ ಕುರಿತು ಅಧ್ಯಯನ ನಡೆಸುವ ಮತ್ತು ವರದಿಯನ್ನು ಸಲ್ಲಿಸಲು 2017ರ ಮಾರ್ಚ್ 22ರಂದು ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆಯಲಾಗಿದೆ.
ಅಲ್ಲದೆ, ಆ ವರದಿಯನ್ನು ಆಧರಿಸಿ ಕಾನೂನು ಆಯೋಗ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹಾಗೂ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಠಾಕೂರ್ ಅವರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಮುಂಭಡ್ತಿ ಪಡೆದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸರಕಾರಿ ನೌಕರರ ಪ್ರಾತಿನಿಧ್ಯವನ್ನು ಖಚಿತಪಡಿಸುವುದಕ್ಕಾಗಿ 1978ರ ಮೀಸಲಾತಿ ನೀತಿ ಅನ್ವಯದ ಮೇಲೆ ಭಡ್ತಿಗೊಂಡ ವ್ಯಕ್ತಿಗಳಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ಒದಗಿಸುವುದಕ್ಕಾಗಿ ಮತ್ತು ಬಲವಾದ ಕಾರಣಗಳಿಗಾಗಿ ಅಸ್ತಿತ್ವದಲ್ಲಿರುವಂತೆಯೇ ಮುಂದುವರಿಸಲು ನಿರ್ಧಾರಿಸಲಾಗಿದೆ ಎಂದು ವಿವರಿಸಿದರು.
‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣೆಗಾಗಿ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಸರಕಾರ ಮಸೂದೆಗೆ ತಂದಿದೆ. ವಿರೋಧ ಪಕ್ಷಗಳ ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟು ಮೊಸೂದೆಯ ಪರವಾಗಿದ್ದಾರೋ ಅಥವಾ ವಿರುದ್ದವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿದರು.
ವಿಧೇಯಕವನ್ನು ಬೆಂಬಲಿಸಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರಿಶಿಷ್ಟ ನೌಕರರ ಹಿತದೃಷ್ಠಿಯಿಂದ ರಾಜ್ಯ ಸರಕಾರ ತಂದಿರುವ ಮಸೂದೆಗೆ ನಮ್ಮ ಬೆಂಬಲವಿದೆ. ಮುಂಬರುವ ದಿನಗಳಲ್ಲಿ ಭಡ್ತಿ ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಗಳಲ್ಲಿ ಹಿನ್ನೆಡೆಯಾಗದಂತೆ ಸರಕಾರ ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಹಿಣರಕ್ಷಣೆ ಸಾಧ್ಯವೇ: ಇದೇ ವೇಳೆ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಸರಕಾರ ತಂದಿರುವ ಮಸೂದೆಗೆ ನಮ್ಮ ವಿರೋಧವಿಲ್ಲ. ಆದರೆ, ಈ ಕಾನೂನಿನಿಂದ ಪರಿಶಿಷ್ಟ ನೌಕರರ ಹಿತ ರಕ್ಷಣೆ ಸಾಧ್ಯವೇ ಎಂಬುದನ್ನು ಆಲೋಚಿಸಬೇಕು ಎಂದರು.
ಮಸೂದೆಯನ್ನು ಬೆಂಬಲಿಸಿ ಬಿಜೆಪಿ ಸದಸ್ಯರಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ. ಗೋವಿಂದ ಕಾರಜೋಳ, ಜೆಡಿಎಸ್ ಸದಸ್ಯ ವೈಎಸ್ ವಿ ದತ್ತ, ಆಡಳಿತ ಪಕ್ಷದ ಸದಸ್ಯ ಶಿವಮೂರ್ತಿ ಸೇರಿದಂತೆ ಇತರ ಸದಸ್ಯರು ಮಾತನಾಡಿದರು..

ರೈತರಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ 9400ಕೋಟಿ ರೂ. ವೆಚ್ಚ -ಸಚಿವ ಡಿ.ಕೆ.ಶಿವಕುಮಾರ್
ಬೆಳಗಾವಿ: ಕಳೆದ ಮೂರು ವರ್ಷಗಳಲ್ಲಿ ರೈತರಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ ಸರ್ಕಾರ 9400ಕೋಟಿ ರೂ. ವೆಚ್ಚ ಮಾಡಿದೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ಐಹೊಳೆ ಡಿ. ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಸತತ ಬರಗಾಲ ಪರಿಸ್ಥಿತಿಯಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಪ್ರತಿದಿನ 7ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎಷ್ಟೇ ಸಂಕಷ್ಟದ ಪರಿಸ್ಥಿತಿಯಿದ್ದರೂ, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವುದಿಲ್ಲ. ರೈತರಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ ಇದುವರೆಗೆ 9400ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಬಹುಶಃ ಇದು ದೇಶದಲ್ಲೇ ಯಾವುದೇ ರಾಜ್ಯ ಇಷ್ಟು ಮೊತ್ತವನ್ನು ಉಚಿತ ವಿದ್ಯುತ್ ಪೂರೈಕೆಗಾಗಿ ವೆಚ್ಚ ಮಾಡಿರಲಿಕ್ಕಿಲ್ಲ ಎಂದು ಹೇಳಿದರು.
ರಾಯಭಾಗ್ ತಾಲೂಕಿಗೆ 250ಕೋಟಿ ರೂ. ವೆಚ್ಚದ 440ಕೆವಿ ವಿದ್ಯುತ್ ಉಪಕೇಂದ್ರವನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಉಪಕೇಂದ್ರಕ್ಕೆ ಅಗತ್ಯವಿರುವ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದಲ್ಲದೆ ಮೊರಬ ಗ್ರಾಮದಲ್ಲಿ 110ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. ಮುಗಳಖೋಡದ 220ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಅಗತ್ಯ ಭೂಮಿಯನ್ನು ಗುರುತಿಸಲಾಗುತ್ತಿದೆ ಎಂದರು.
ವಿದ್ಯುತ್ ಉತ್ಪಾದನೆಗೆ ಕ್ರಮ: ವಿದ್ಯುತ್ ಅಭಾವವನ್ನು ನೀಗಿಸಲು ಕರ್ನಾಟಕ ವಿದ್ಯುತ್ ನಿಗಮದಿಂದ ನೂತನವಾಗಿ ಜಲ ವಿದ್ಯುತ್ ಉತ್ಪಾದನೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಸ್ಕೀಮ್ ಅಡಿ 2ಸಾವಿರ ಮೆ.ವ್ಯಾ ಉತ್ಪಾದನೆಗೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಶಿವನಸಮುದ್ರಂ ರನ್ ಆಫ್ ದಿ ರಿವರ್ ಪ್ರಾಜೆಕ್ಟ್ ಅಡಿ 200ಮೆ.ವ್ಯಾ ವಿದ್ಯುತ್ ಉತ್ಪಾದನಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನವೀಕರಿಸಬಹುದಾದ ಇಂಧನ ಮೂಲಗಳು ಹಾಗೂ ಸಹ ವಿದ್ಯುತ್ ಯೋಜನೆಗಳಿಂದ 7685 ಮೆ.ವ್ಯಾ ಸಾಮಥ್ರ್ಯದ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಇಂಧನ ಸಚಿವರು ವೈ.ಎಸ್.ವಿ.ದತ್ತಾ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.
ರಟ್ಟೆಹಳ್ಳಿಗೆ ವಿದ್ಯುತ್ ಉಪವಿಭಾಗ : ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ರಟ್ಟೆಹಳ್ಳಿಯಲ್ಲಿ ಪ್ರತ್ಯೇಕ ಹೆಸ್ಕಾಂ ಉಪ ವಿಭಾಗವವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಯು.ಬಿ.ಬಣಕಾರ್ ಅವರ ಪ್ರಶ್ನೆಗೆ ಇಂಧನ ಸಚಿವರು ಉತ್ತರಿಸಿದರು.

ವಿಮೆ ಮಾಡದ ಎಮ್ಮೆ/ಕೋಣಗಳಿಗೂ ಅಪಘಾತ ಪರಿಹಾರ ವಿಸ್ತರಣೆ-ಸಚಿವ ಎ.ಮಂಜು
ಬೆಳಗಾವಿ: ಅಪಘಾತದಲ್ಲಿ ಸಾವನ್ನಪ್ಪುವ ವಿಮೆ ಮಾಡಿಸದ ಎಮ್ಮೆ/ಕೋಣಗಳಿಗೆ ಪರಿಹಾರ ಧನ ನೀಡುವ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ.ಮಂಜು ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ಉಮೇಶ ಕತ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಪಘಾತದಲ್ಲಿ ವಿಮೆ ಮಾಡದ ಎತ್ತು/ಹಸುಗಳ ಸಾವಿನಿಂದ ನಷ್ಟ ಅನುಭವಿಸಿದ ರೈತರಿಗೆ ಸಂಕಷ್ಟ ನಿವಾರಣೆಗಾಗಿ ಪ್ರತಿ ರಾಸಿಗೆ ಗರಿಷ್ಟ 10ಸಾವಿರ ರೂ. ಪರಿಹಾರ ಧನ ನೀಡುವ ಯೋಜನೆಯನ್ನು 2017-18ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. ಈವರೆಗೆ ಒಟ್ಟು 44.80ಲಕ್ಷ ರೂ. ಪರಿಹಾರಕ್ಕಾಗಿ 448ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.
ಈ ಯೋಜನೆಯಡಿ ಆಡು, ಕುರಿ ಮತ್ತು ಮೇಕೆಗಳಿಗೆ ಅನ್ವಯವಾಗುವುದಿಲ್ಲ. ಆದರೆ ಕುರಿ ಮತ್ತು ಮೇಕೆಗಳು ಆಕಸ್ಮಿಕ ಮರಣ ಹೊಂದಿದ್ದಲ್ಲಿ ಪ್ರತಿ ಕುರಿ ಮತ್ತು ಮೇಕೆಗೆ ತಲಾ 5ಸಾವಿರ ರೂ. ನಂತೆ ಹಾಗೂ 6ತಿಂಗಳ ಒಳಗಿನ ಮರಿಗಳಿಗೆ ರೂ.2500ರಂತೆ ಎಕ್ಸ್‍ಗ್ರೇಷಿಯಾ ಪರಿಹಾರ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಕುರಿ ಮತ್ತು ಮೇಕೆಗಳಿಗೆ ಧನ ಸಹಾಯ ನೀಡುವ ಯೋಜನೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.
ಎಲ್ಲಾ ಹಾಲು ಒಕ್ಕೂಟಗಳಲ್ಲಿ ಸಮಾನ ದರ ನಿಗದಿ: ಎಲ್ಲಾ ಸಹಕಾರಿ ಹಾಲು ಒಕ್ಕೂಟಗಳಲ್ಲಿ ಹಾಲಿಗೆ ಸಮಾನ ದರ ನಿಗದಿಪಡಿಸುವ ಕುರಿತಂತೆ ಶೀಘ್ರವೇ ಎಲ್ಲಾ ಹಾಲು ಒಕ್ಕೂಟಗಳ ಸಭೆಯನ್ನು ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ಹಾಲು ಒಕ್ಕೂಟಗಳಲ್ಲಿ ಹಾಲಿನ ದರದಲ್ಲಿ ವ್ಯತ್ಯಾಸವಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಲಿನ ದರವನ್ನು ಏಕರೂಪಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಪ್ರತಿದಿನ 77ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದ್ದು, ಇದರಲ್ಲಿ 50ಲಕ್ಷ ಲೀಟರ್ ಹಾಲನ್ನು ದ್ರವರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.

ಗ್ರಾಮೀಣ ರಸ್ತೆಗಳ ಉನ್ನತೀಕರಣಗೊಳಿಸಲು ಪರಿಶೀಲನೆ-ಸಚಿವ ಎಚ್.ಸಿ.ಮಹದೇವಪ್ಪ
ಬೆಳಗಾವಿ: ರಾಜ್ಯದಲ್ಲಿರುವ ಗ್ರಾಮೀಣ ರಸ್ತೆಗಳನ್ನು ಉನ್ನತೀಕರಿಸುವ ಕುರಿತಾಗಿ ರಚಿಸಲಾಗಿರುವ ಸಮಿತಿಯ ವರದಿಯನ್ನು ಸಕಾರಾತ್ಮಕವಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ರಸ್ತೆಗಳನ್ನು ಉನ್ನತೀಕರಿಸುವ ಕುರಿತಂತೆ ಈ ವರ್ಷ ಅತಿ ಹೆಚ್ಚಿನ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಪ್ರಸ್ತಾವನೆಗಳ ಅನುಷ್ಟಾನ ಕುರಿತಂತೆ ಸಮಿತಿಯಲ್ಲಿ ಚರ್ಚಿಸಿ ಹಣಕಾಸು ಇಲಾಖೆ ಅನುಮೋದನೆಯೊಂದಿಗೆ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.
ನಿಪ್ಪಾಣಿ ಮತಕ್ಷೇತ್ರದಿಂದ 13ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಅವರು ಹೇಳಿದರು.
ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ: ಈ ಬಾರಿ ಮಳೆಯಿಂದಾಗಿ ಹಲವು ರಸ್ತೆಗಳು ಹಾಳಾಗಿದ್ದು, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಮಾಹಿತಿ ವ್ಯವಸ್ಥೆ ಕುರಿತಾದ ಸಾಫ್ಟ್‍ವೇರ್ ಸಿದ್ಧಪಡಿಸಲಾಗಿದ್ದು ಈ ಮೂಲಕ ರಸ್ತೆ ಸ್ಥಿತಿಗತಿ ತಿಳಿಯುವುದು ಸುಲಭವಾಗಿದೆ ಎಂದು ಶಾಸಕ ಗೋವಿಂದ ಕಾರಜೋಳ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ 9ಖಾಸಗಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ: ಸಚಿವ ಡಿ.ಕೆ.ಶಿವಕುಮಾರ್
ಬೆಳಗಾವಿ(ಸುವರ್ಣ ವಿಧಾನಸೌಧ) : ಖಾಸಗಿ ಸೋಲಾರ್ ಪಾರ್ಕ್ ಯೋಜನೆಯಡಿ ಇದುವರೆಗೆ ರಾಜ್ಯದಲ್ಲಿ ಒಟ್ಟು 382 ಮೆ.ವ್ಯಾಟ್ ಸಾಮಥ್ರ್ಯದ 9ಖಾಸಗಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಈ 9 ಸೋಲಾರ್ ಪಾರ್ಕ್‍ಗಳ ಪೈಕಿ ಈಗಾಗಲೇ 2ಘಟಕಗಳಿಂದ 58.43ಮೆ.ವ್ಯಾ ಸಾಮಥ್ರ್ಯದಷ್ಟು ಯೋಜನೆಗಳು ಅನುಷ್ಟಾನಗೊಂಡಿವೆ. ಕೆ.ಇ.ಆರ್.ಸಿ ಮಾನದಂಡದಂತೆ ಒಂದು ಮೆ.ವ್ಯಾ ಸಾಮಥ್ರ್ಯದ ಸೌರ ಘಟಕದ ಅನುಷ್ಟಾನಕ್ಕೆ ಅಂದಾಜು 5ಎಕರೆ ಜಮೀನು ಅವಶ್ಯಕತೆಯಿದೆ. ಖಾಸಗಿ ಸೌರ ಪಾರ್ಕನ್ನು ಖಾಸಗಿ ಅಭಿವೃದ್ಧಿದಾರರೇ ಅನುಷ್ಟಾನಗೊಳಿಸುವುದರಿಂದ ಖಾಸಗಿ ಸೌರ ಪಾರ್ಕ್‍ಗಳಿಗೆ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮತ್ತು ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾ ಸಹಯೋಗದೊಂದಿಗೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಐದು ಗ್ರಾಮಗಳಾದ ವಳ್ಳೂರು, ರಾಯಚೆರ್ಲು, ಕ್ಯಾತಗಾನಚೆರ್ಲು, ಬಳಸಮುದ್ರ ಮತ್ತು ತಿರುಮಣಿ ವ್ಯಾಪ್ತಿಯಲ್ಲಿ 2ಸಾವಿರ ಮೆ.ವ್ಯಾ ಸಾಮಥ್ರ್ಯದ ಸೌರಪಾರ್ಕನ್ನು 13ಸಾವಿರ ಎಕರೆ ಪ್ರದೇಶದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಗದಗ ಮತ್ತು ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿ ಒಂದು ಸಾವಿರ ಮೆ.ವ್ಯಾ ಸಾಮಥ್ರ್ಯದ ಸೋಲಾರ್ ಪಾರ್ಕ್ ನಿರ್ಮಿಸುವ ಪ್ರಸ್ತಾವನೆ ಇದೆ ಎಂದು ಶಾಸಕ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದರು.

ಅಡಿಕೆ ತೋಟ ಪುನಶ್ಚೇತನಕ್ಕೆ ಆರ್ಥಿಕ ನೆರವು: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಬೆಳಗಾವಿ(ಸುವರ್ಣ ವಿಧಾನಸೌಧ) : ಅಡಿಕೆ ತೋಟಗಳನ್ನು ಪುನಶ್ಚೇತನಗೊಳಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ವಿಧಾನಸಭೆಯಲ್ಲಿಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಹಾಳಾದ ಅಡಿಕೆ ತೋಟಗಳ ಪುನಶ್ಚೇತನಕ್ಕೆ ಈ ಯೋಜನೆಯಡಿ, ಪ್ರತಿ ಹೆಕ್ಟೇರ್‍ಗೆ ರೂ. 71,315ರಂತೆ ಘಟಕ ವೆಚ್ಚ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಾನಿಗೀಡಾಗಿರುವ ತೆಂಗು ಮತ್ತು ಅಡಿಕೆ ಬೆಳೆಗಳಿಗೆ2477ಕೋಟಿ ರೂ. ಪರಿಹಾರ ಒದಗಿಸುವಂತೆ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಬರದಿಂದಾಗಿ 229925ಹೆಕ್ಟೇರ್ ತೆಂಗು ಮತ್ತು 114822ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯ ಇಳುವರಿ ಶೇ.33ಕ್ಕಿಂತ ಅಧಿಕ ಕುಸಿತ ಉಂಟಾಗಿದೆ. ಇದರಿಂದಾಗಿ ತೆಂಗಿನ ಬೆಳೆಗೆ 2209 ಕೋಟಿ ರೂ ಮತ್ತು ಅಡಿಕೆ ಬೆಳೆಗೆ 7297 ಕೋಟಿ ರೂ. ಹಾನಿ ಉಂಟಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಾನಿಗೀಡಾಗಿರುವ ರೈತರಿಗೆ, ಪ್ರತಿ ಹೆಕ್ಟೇರ್‍ಗೆ 18ಸಾವಿರ ರೂ. ಇನ್‍ಪುಟ್ ಸಬ್ಸಿಡಿಯನ್ನು ಗರಿಷ್ಟ 2ಹೆಕ್ಟೇರ್ ಪ್ರದೇಶಕ್ಕೆ ಪರಿಹಾರವಾಗಿ ನೀಡಲಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.