ಉತ್ತಮ ಸಮಾಜಕ್ಕಾಗಿ

ವಿಧಾನಸಭೆಯಲ್ಲಿಂದು ಜರುಗಿದ ಪ್ರಶ್ನೋತ್ತರ ಕಲಾಪ

0

ತಲಕಾವೇರಿ ದೇವಸ್ಥಾನ ಪ್ರವಾಸೋದ್ಯಮ ಇಲಾಖೆಗೆ ಇಲ್ಲ
-ಸಚಿವ ರುದ್ರಪ್ಪ ಲಮಾಣಿ
ಸುವರ್ಣ ವಿಧಾನಸೌಧ, ಬೆಳಗಾವಿ ಕೊಡಗು ಜಿಲ್ಲೆ ಭಗಂಡೇಶ್ವರ ಹಾಗೂ ತಲಕಾವೇರಿ ದೇವಸ್ಥಾನಗಳನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಪ್ರಸ್ತಾವ ಇಲ್ಲ ಎಂದು ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿಂದು ಅವರು ಭಗಂಡೇಶ್ವರ ಹಾಗೂ ತಲಕಾವೇರಿ ದೇವಸ್ಥಾನಗಳಿಗೆ ಬರುವ ಭಕ್ತಾಧಿಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಪ್ರಸ್ತುತ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇರಲಿದೆ ಎಂದು ಅವರು ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದರು.
ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಸ್ಥಾನಗಳನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಪ್ರಸ್ತುತ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪ್ರವರ್ಗ-ಎ ಅಧಿಸೂಚಿತ ಸಂಸ್ಥೆಯಾಗಿದ್ದು ದೇವಾಲಯಗಳಿಗೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು ಹಾಗೂ ದೇವಸ್ಥಾನದಲ್ಲಿ ನಿತ್ಯ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ದೇವಾಲಯದಲ್ಲಿ ಅಗತ್ಯಕ್ಕನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸೌರ ವಿದ್ಯುತ್ ಉತ್ತೇಜನಕ್ಕೆ ಸೌರನೀತಿ ಜಾರಿ
-ಸಚಿವ ಡಿ.ಕೆ. ಶಿವಕುಮಾರ
ಸುವರ್ಣ ವಿಧಾನಸೌಧ, ಬೆಳಗಾವಿ : ಸೌರ ವಿದ್ಯುತ್ ಯೋಜನೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2011ರಲ್ಲಿ ಸೌರ ನೀತಿ ಜಾರಿಗೊಳಿಸಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಲಾರ್‍ನಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ 2009 ರಿಂದ ಜಾರಿಗೆ ಬಂದಿದ್ದು ಸೌರ ವಿದ್ಯುತ್ ಉತ್ತೇಜನಕ್ಕಾಗಿ ಸೌರ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಅವರು ವಿಧಾನ ಪರಿಷತ್‍ನಲ್ಲಿಂದು ಅಮರನಾಥ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸೌರನೀತಿ-2014-21 ಅನ್ವಯ ರೈತರ ಭೂಮಿಯನ್ನು ಬಳಸಿ ವಿದ್ಯುತ್ ಉತ್ಪಾದನೆ ಉತ್ತೇಜಿಸಲು 300 ಮೆಗಾವ್ಯಾಟ್ ಸಾಮಥ್ರ್ಯದ ಸೌರಶಕ್ತಿ ಯೋಜನೆಯನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಪೈಕಿ 157 ಅರ್ಜಿದಾರರಿಗೆ 314 ಮೆಗಾವ್ಯಾಟ್ ಸಾಮಥ್ರ್ಯದ ಯೋಜನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ 40 ರೈತರಿಂದ ಸೋಲಾರ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದ್ದು ಸೌರನೀತಿ ಪ್ರಕಾರ ಗ್ರೀಡ್ ಸಂಪರ್ಕಿತ ಹೆಚ್ಚಿನ ಸಾಮಥ್ರ್ಯದ ಸ್ಥಾವರಗಳಿಗೆ ವಿವಿಧ ಪ್ರೋತ್ಸಾಹಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಪ್ರತಿದಿನ 7 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ ಇಂಧನ -ಸಚಿವ ಡಿ.ಕೆ. ಶಿವಕುಮಾರ
ಸುವರ್ಣ ವಿಧಾನಸೌಧ, ಬೆಳಗಾವಿ : ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆ 3 ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಇಂದು ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು ರಾಜ್ಯ ಸರ್ಕಾರದ ಆದೇಶದಂತೆ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದ ರೈತರ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್‍ನ್ನು ಬ್ಯಾಚ್‍ಗಳಲ್ಲಿ ಪೂರೈಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 25,48,805 ಪಂಪ್‍ಸೆಟ್‍ಗಳಿದ್ದು 10,553.56 ಮೆಗಾ ಯುನಿಟ್ ವಿದ್ಯುತ್‍ನ್ನು ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಎಲ್ಲ ಮೂಲಗಳಿಂದ 38144.01 ಮೆಗಾ ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ದಿನವಹಿ ವಿದ್ಯುತ್ ಬೇಡಿಕೆ ಅಂದಾಜು 180 ರಿಂದ 205 ದಶಲಕ್ಷ ಯುನಿಟ್ ಇದ್ದು 20 ದಶಲಕ್ಷ ಯುನಿಟ್ ಕೊರತೆ ಇರುತ್ತದೆ. ಈ ಕೊರತೆ ನೀಗಿಸಲು ರಾಜ್ಯ ಸರ್ಕಾರ ಪಿಸಿಕೆಎಲ್ ವತಿಯಿಂದ 900 ಮೆಗಾವ್ಯಾಟ್ ವಿದ್ಯುತ್ ಖರೀದಿಸುತ್ತಿದೆ ಎಂದು ತಿಳಿಸಿದರು.

ಬೀದರ ಪಶುವೈದ್ಯಕೀಯ ವಿವಿಗೆ ಶೀಘ್ರ ಕುಲಪತಿ ನೇಮಕ
-ಸಚಿವ ಎ.ಮಂಜು
ಸುವರ್ಣ ವಿಧಾನಸೌಧ, ಬೆಳಗಾವಿ : ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿಂದು ಆರ್. ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು ಬೀದರ್ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ನಿವೃತ್ತಿ ಹೊಂದಿದ್ದು ಹಂಗಾಮಿ ಕುಲಪತಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕುಲಪತಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ರೂ. 588 ಕೋಟಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ
-ಸಚಿವ ಎ. ಮಂಜು
ಸುವರ್ಣ ವಿಧಾನಸೌಧ, ಬೆಳಗಾವಿ : ಕ್ಷೀರಧಾರೆ ಯೋಜನೆಯಡಿ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಕ್ಕೆ ರೂ. 588.22 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಕೆದಾರರು ಪೂರೈಸುವ ಪ್ರತಿ ಲೀ. ರೂ. 5 ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ರಾಜ್ಯದಲ್ಲಿ 8.5 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆಗಸ್ಟ್-2017ರ ಮಾಹೆವರೆಗೆ ರಾಜ್ಯದ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳಿಗೆ ರೂ. 588.22 ಕೋಟಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಧಾನ ಪರಿಷತ್‍ನಲ್ಲಿಂದು ಬಿ.ಜೆ. ಪುಟ್ಟಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಗೃಹ ರಕ್ಷಕರಿಗೆ ದಿನಭತ್ಯೆ ಹೆಚ್ಚಳ-ಹುದ್ದೆ ಖಾಯಂ ಇಲ್ಲ
-ಗೃಹಸಚಿವ ರಾಮಲಿಂಗಾರೆಡ್ಡಿ
ಸುವರ್ಣ ವಿಧಾನಸೌಧ, ಬೆಳಗಾವಿ: ಗೃಹ ರಕ್ಷಕರ ದಿನಭತ್ಯೆಯನ್ನು ಹೆಚ್ಚಳ ಮಾಡುವ ಕುರಿತಾಗಿ ಸರ್ಕಾರ ಪರಿಶೀಲನೆ ನಡೆಸಿದೆ, ಆದರೆ ಗೃಹ ರಕ್ಷಕ ದಳ ಸ್ವಯಂ ಸೇವಕ ಇಲಾಖೆಯಾಗಿದ್ದು ಸ್ವಯಂ ಸೇವಕರನ್ನು ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಸದಸ್ಯ ಎಚ್.ಎನ್. ಕೋನರಡ್ಡಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಗೃಹ ಸಚಿವರು ಪೊಲೀಸ್ ಕಾನ್‍ಸ್ಟೇಬಲ್‍ಗಳ ಕನಿಷ್ಠ ವೇತನದ ಆಧಾರದ ಮೇಲೆ ಗೃಹ ರಕ್ಷಕರಿಗೆ ದಿನಭತ್ಯೆಯನ್ನು ನಿಗಧಿಪಡಿಸಲು ಸರ್ವೋಚ್ಛ ನ್ಯಾಯಾಲಯ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಪ್ರಸ್ತುತ 25645 ಗೃಹ ರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕರ್ತವ್ಯ ನಿರತ ಗೃಹ ರಕ್ಷಕರಿಗೆ ಪ್ರತಿದಿನ ರೂ. 300 ರಿಂದ ರೂ. 400 ವರೆಗೆ ಹಾಗೂ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ರೂ. 250 ರಿಂದ ರೂ. 325 ರವೆರೆಗೆ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿಯೊಳಗೆ ಆರು ಸಾವಿರ ಪೌರ ಕಾರ್ಮಿಕರ ಹುದ್ದೆ ಖಾಯಂ
-ಸಚಿವ ಈಶ್ವರ ಖಂಡ್ರೆ
ಸುವರ್ಣ ವಿಧಾನಸೌಧ, ಬೆಳಗಾವಿ : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಹುದ್ದೆಗಳನ್ನು ಜನವರಿಯೊಳಗೆ ಖಾಯಂಗೊಳಿಸಲಾಗುವುದು ಎಂದು ಪೌರಾಡಳಿತ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಉದ್ಯಮಗಳ ಸಚಿವರಾದ ಈಶ್ವರ ಖಂಡ್ರೆ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕರಾದ ಎಚ್.ಎಸ್. ಶಿವಶಂಕರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಕುರಿತಂತೆ ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಆಕ್ಷೇಪನೆಗಳನ್ನು ಆಹ್ವಾನಿಸಲಾಗಿದೆ. ವಾರದೊಳಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದರು.
ವಿಶೇಷ ನೇಮಕಾತಿ ನಿಯಮಗಳ ಅನ್ವಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಪೌಕಾರ್ಮಿಕರ ನೇಮಕಾತಿಗೆ ಆಧ್ಯತೆ ನೀಡಲಾಗಿದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ವೃಂದದ ನೌಕರರನ್ನು ಖಾಯಂಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.
ಪೌರಕಾರ್ಮಿಕರ ಹುದ್ದೆಯ ಖಾಯಂಗೊಳಿಸುವ ನಿಯಮಾವಳಿ ಕುರಿತಂತೆ ಯಾವುದೇ ತೊಂದರೆಯಾಗದಂತೆ ಕಾನೂನು ಸಲಹೆಗಳನ್ನು ಪಡೆಯಲಾಗಿದೆ ಎಂದು ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್ ಅವರ ಪ್ರಶ್ನೆಗೆ ಉತ್ತರಿಸಿದರು.
ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆ
-ಗೃಹ ಸಚಿವ ರಾಮಲಿಂಗಾರೆಡ್ಡಿ
ಸುವರ್ಣ ವಿಧಾನಸೌಧ, ಬೆಳಗಾವಿ : ರಾಜ್ಯದೊಳಗೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಲು ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವರು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ಬಾಂಗ್ಲಾ ದೇಶದ 79 ಪ್ರಜೆಗಳನ್ನು ಪತ್ತೆ ಮಾಡಲಾಗಿದೆ. ಅವರ ವಿರುದ್ಧ ವಿದೇಶಿ ಕಾಯ್ದೆ ಅನ್ವಯ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿದ ನಂತರ ಅವರ ದೇಶಕ್ಕೆ ವಾಪಸ್ ಕಳುಹಿಸುವ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 51 ಅಕ್ರಮ ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಅಕ್ರಮ ವಲಸಿಗರು ವಿಮಾನ ನಿಲ್ದಾಣ, ಬಂದರು ಅಥವಾ ಭೂಮಾರ್ಗವಾಗಿ ದೇಶವನ್ನು ತೊರೆಯಲು ಸಾಧ್ಯವಾಗದಂತೆ ತೀವ್ರ ನಿಗಾ ವಹಿಸಲಾಗಿದೆ. ಕೇಂದ್ರ ಸರ್ಕಾರದ ಕಾಯ್ದೆಯಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳದಂತೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ರಾಜ್ಯದಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರ ಕುರಿತಂತೆ ವಿಶೇಷ ಕಾರ್ಯಪಡೆ ಜಿಲ್ಲಾವಾರು ಕಾರ್ಯಾಚರಣೆ ಕೈಗೊಂಡು ರಾಜ್ಯದಿಂದ ಹೊರಹಾಕುವ ಕುರಿತಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸದಸ್ಯರಾದ ಸುನೀಲ ಕುಮಾರ, ಸಿ.ಟಿ. ರವಿ, ಸುರೇಶಕುಮಾರ ಅವರ ಈ ಕುರಿತ ಉಪಪ್ರಶ್ನೆಗಳಿಗೆ ಉತ್ತರಿಸಿದರು.

ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ- ಸಚಿವ ಎಚ್. ಆಂಜನೇಯ
ಸುವರ್ಣ ವಿಧಾನಸೌಧ, ಬೆಳಗಾವಿ: ಸರ್ಕಾರದ ವಿವಿಧ ಇಲಾಖೆ ನಿಗಮ ಮಂಡಳಿ ವಿಶ್ವವಿದ್ಯಾಲಯಗಳಲ್ಲಿ 19,115 ಬ್ಯಾಕ್‍ಲಾಗ್ ಹುದ್ದೆಗಳನ್ನು ಗುರುತಿಸಲಾಗಿದೆ. ಈ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಜರುಗಿದ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಐಹೊಳೆ ಡಿ. ಮಾಲಿಂಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಪರಿಶಿಷ್ಟ ವರ್ಗಕ್ಕೆ 2,137 ಹಾಗೂ ಪರಿಶಿಷ್ಟ ಪಂಗಡಕ್ಕೆ 893 ಹುದ್ದೆಗಳು ಒಳಗೊಂಡಂತೆ 3,030 ಹಿಂಬಾಕಿ ಹುದ್ದೆಗಳನ್ನು ಗುರುತಿಸಲಾಗಿದೆ. ಎ ಗುಂಪಿನ 1,794, ಬಿ ವರ್ಗದ 74, ಸಿ ವರ್ಗದ 974 ಹಾಗೂ ಡಿ ವರ್ಗದ 188 ಹುದ್ದೆಗಳು ಒಳಗೊಂಡಿವೆ. ಈ ಪೈಕಿ 19,115 ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬುವ ಕುರಿತಂತೆ ಸಚಿವ ಸಂಪುಟದ ಉಪ ಸಮಿತಿಯು ಕಾಲಕಾಲಕ್ಕೆ ಸಭೆ ನಡೆಸಿ ಖಾಲಿ ಹುದ್ದೆಗಳ ಭರ್ತಿಗೆ ಆಯಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ಆಯಾ ಇಲಾಖೆಗಳ ನೇಮಕಾತಿ ನಿಯಾಮವಳಿಗಳಂತೆ ಮೆರಿಟ್ ಆಧಾರದ ಮೇಲೆ ಖಾಲಿ ಹುದ್ದೆಗಳನ್ನು ತುಂಬಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಲ್ಯಾಪ್‍ಟಾಪ್ ಖರೀದಿ ಅವ್ಯವಹಾರ ತನಿಖೆಗೆ ವಿಧಾನ ಪರಿಷತ್ ಸದನ ಸಮಿತಿ
ಸುವರ್ಣ ವಿಧಾನಸೌಧ, ಬೆಳಗಾವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿತರಣೆಯ ಲ್ಯಾಪ್‍ಟಾಪ್ ಖರೀದಿಯ ಅವ್ಯವಹಾರ ತನಿಖೆಗೆ ವಿಧಾನ ಪರಿಷತ್‍ನಲ್ಲಿ ಹಿರಿಯ ಸದಸ್ಯ ಕೆ.ಸಿ. ಕೊಂಡಯ್ಯ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಯಿತು.
ಐವನ್ ಡಿಸೋಜಾ, ಕೆ.ಟಿ. ಶ್ರೀಕಂಠೆಗೌಡ, ರಘುನಾಥರಾವ್ ಮಲ್ಕಾಪುರೆ, ಶರಣಪ್ಪ ಮಟ್ಟೂರು, ಅರುಣ ಶಹಾಪುರ ಹಾಗೂ ಆರ್. ಪ್ರಸನ್ನಕುಮಾರ ಸದನ ಸಮಿತಿಯ ಸದಸ್ಯರಾಗಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ ಪ್ರಕಟಿಸಿದರು.

ಆನ್‍ಲೈನ್ ಮೂಲಕ ಮದ್ಯ ಮಾರಾಟಕ್ಕೆ ಲೈಸನ್ಸ್ ನೀಡಿಲ್ಲ
-ಸಚಿವ ಆರ್.ಬಿ. ತಿಮ್ಮಾಪುರ
ಸುವರ್ಣ ವಿಧಾನಸೌಧ, ಬೆಳಗಾವಿ : ರಾಜ್ಯದಲ್ಲಿ ಆನ್‍ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಯಾವುದೇ ಕಂಪನಿಗಳಿಗೆ ಪರವಾನಿಗೆ ನೀಡಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಸದಸ್ಯರಾದ ಮಲ್ಲಿಕಾರ್ಜುನ ಸಿದ್ದರಾಮಪ್ಪ ಖೂಬಾ ಅವರ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿ ಮೇಲಿನಂತೆ ಮಾಹಿತಿ ಒದಗಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.