ಉತ್ತಮ ಸಮಾಜಕ್ಕಾಗಿ

ನವೆಂಬರ್ 25 ರಿಂದ ನಗರದಲ್ಲಿ ಸಾವಯುವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳ;

0

ಬೆಳಗಾವಿ, ಬೆಳಗಾವಿಯ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು “ಸಾವಯುವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳ”ವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು.
ಅವರು ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ನವೆಂಬರ್ 24ರ ಮುಂಜಾನೆ ಮಿಲೆಟ್ ನಡಿಗೆಯನ್ನು ಆಯೋಜಿಸಲಾಗಿದೆ. ಮೇಳದ ಸ್ಥಳದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲೆ ಹಾಗೂ ಮಹಿಳೆಯರಿಗೆ ಸಾವಯುವ- ಸಿರಿಧಾನ್ಯ ಆಹಾರ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಮೇಳದ ಸ್ಥಳದಲ್ಲಿಯೇ ಆಹಾರ ಪದಾರ್ಥಗಳನ್ನು ತಯಾರಿಸಿ, ಗ್ರಾಹಕರಿಗೆ ರುಚಿ ಸವಿಯಲು ಅನುವು ಮಾಡಿ ಕೊಡುವುದರ ಜೊತೆಗೆ ಸಾವಯುವ ಮತ್ತು ಸಿರಿಧಾನ್ಯಗಳ ಮಹತ್ವದ ಕುರಿತು ನುರಿತ ಆಹಾರ ತಜ್ಞರ, ವೈದ್ಯರು ಹಾಗೂ ಅನುಭವಿಕ ರೈತರಿಂದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳ ಮುಖಾಂತರ ಅರಿವು ಮೂಡಿಸಲಾಗುವುದು ಹಾಗೂ ನವೆಂಬರ್ 25ರ ಸಂಜೆ ಮೇಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಪೂರ್ವಭಾವಿಯಾಗಿ ರೈತರಲ್ಲಿ ಅರಿವು;
2018ನೇ ಸಾಲಿನ ಜನೇವರಿ ತಿಂಗಳಲ್ಲಿ 19, 20 ಮತ್ತು 21 ರಂದು ಸಾವಯುವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ರೈತರಲ್ಲಿ, ಗ್ರಾಹಕರಲ್ಲಿ ಹಾಗೂ ವರ್ತಕರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆ ಹಾಗೂ ಜಿಲ್ಲಾ ಸಾವಯುವ ಸಹಕಾರ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ 10 ಜಿಲ್ಲಾ ಕೇಂದ್ರಗಳಲ್ಲಿ ಸಾವಯುವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ.
ರಾಜ್ಯದಲ್ಲಿ 14 ಪ್ರಾಂತೀಯ ಸಾವಯುವ ಒಕ್ಕೂಟಗಳನ್ನು ಸ್ಥಾಪಿಸಲಾಗಿದೆ. ಸಾವಯುವ ಮತ್ತು ಸಿರಿಧಾನ್ಯಗಳ ಮಾರಾಟವು ಸಧ್ಯದಲ್ಲಿ ಪ್ರತ್ಯೇಕ ವ್ಯವಸ್ಥೆಯಡಿಯಲ್ಲಿ ಜರುಗುತ್ತಿದ್ದು, ಇದನ್ನು ಮುಖ್ಯವಾಹಿನಿಗೆ ತರುವ ಅವಶ್ಯಕತೆ ಇರುತ್ತದೆ. ಆದಕಾರಣ, ಮೇಳದ ಮುಖೇನ ಕೃಷಿ ಮತ್ತು ಆಹಾರ ಉದ್ದಿಮೆದಾರ ವಲಯವನ್ನು ಸಮನ್ವಯಗೊಳಿಸಲು ಪ್ರಯತ್ನಿಸಲಾಗುವುದು.
ಕಾರ್ಯಕ್ರಮಕ್ಕೆ ವಾಣಿಜ್ಯ ಸಂಘಗಳು, ಚಿಲ್ಲರೆ ಮಾರಾಟ ಸರಪಣಿ ಸಂಸ್ಥೆಗಳು, ಜಿಲ್ಲಾ ಮಟ್ಟದ ಚೇಂಬರ್ ಆಫ್ ಕಾಮರ್ಸ್, ಚಿಲ್ಲರೆ ಮಾರಾಟಗಾರರ ಸಂಘಗಳು, ಆಹಾರ ಸಂಬಂಧಿತ ಸಂಘಗಳು, ಆಹಾರ ಸಂಸ್ಕರಣಾ ಉದ್ದಿಮೆದಾರರು, ಹೋಟೆಲ್ ಉದ್ದಿಮೆದಾರರು, ನವೋದ್ಯಮಿಗಳು ಇವರುಗಳನ್ನು ಆಹ್ವಾನಿಸಲಾಗಿದೆ.
ಈ ವಾಣಿಜ್ಯ ಮೇಳದ ಮುಖಾಂತರ ಮಾರುಕಟ್ಟೆಯಲ್ಲಿ ದೊರೆಯುವ ಆಹಾರ ಉತ್ಪನಗಳಿಗೆ ಹೋಲಿಸಲಾಗಿ, ಸಾವಯುವ ಕೃಷಿಯಲ್ಲಿ ಬೆಳೆದ ಉತ್ಪನಗಳು ಹಾಗೂ ಸಿರಿಧಾನ್ಯಗಳು ಯಾವ ರೀತಿಯಲ್ಲಿ ಉತ್ತಮ ಎನ್ನುವುದರ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸಲಾಗುವುದು. ಜೊತೆಗೆ ಸಾವಯುವ ಮತ್ತು ಸಿರಿಧಾನ್ಯ ಉತ್ಪಾದಿಸುವ ರೈತರಿಗೆ ಉದ್ದಿಮೆದಾರರೊಂದಿಗೆ ಸಂಪರ್ಕ ಕೊಂಡಿಯನ್ನು ನಿರ್ಮಾಣ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸಲಾಗುವುದು.
ಮೇಳದ ಮುಖಾಂತರ ಆಹಾರ ಉದ್ದಿಮೆ ಸಂಸ್ಥೆಗಳು ಹಾಗೂ ಫುಡ್ ಪಾರ್ಕ್‍ಗಳು ಸಾವಯುವ ಮತ್ತು ಸಿರಿಧಾನ್ಯಗಳ ಉತ್ತೇಜನ ಹಾಗೂ ಸಹಭಾಗಿತ್ವದಲ್ಲಿ ನಿರಂತರವಾಗಿ ಇರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಲಾಗುವುದು.
ಮೇಳದಲ್ಲಿ ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿರಿಧಾನ್ಯ ಬೆಳೆಯುವ ರೈತರು ಇದರಿಂದ ಅಧಿಕ ಮಾಹಿತಿ ಪಡೆಯಲು ಮೇಳವು ಸಹಕಾರಿಯಾಗಲಿದೆ. ಮೇಳದಲ್ಲಿ ಸಾವಯುವ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳ ಉತ್ತೇಜನದಲ್ಲಿ ನಿರತರಾಗಿರುವ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು, ವಿತರಕರುಗಳನ್ನು ಆಹ್ವಾನಿಸಿ ಉತ್ಪನ್ನಗಳ ಪ್ರದರ್ಶನಕ್ಕಾಗಿ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಕೃಷಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ಮೇಳದಲ್ಲಿ ನಡೆಯುವ ಸಂಪೂರ್ಣ ಮಾಹಿತಿಯನ್ನು ವಿವರಿಸಿದರು. ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.