ಉತ್ತಮ ಸಮಾಜಕ್ಕಾಗಿ

ಕೆರೆ ಒತ್ತುವರಿ ತಪ್ಪಿತಸ್ಥರ ಪತ್ತೆಗೆ ನ್ಯಾಯಾಂಗ ವಿಚಾರಣಾ ಸಮಿತಿ ರಚಿಸಲು ಸದನ ಸಮಿತಿ ಶಿಫಾರಸು

0

ಬೆಳಗಾವಿ(ಸುವರ್ಣ ವಿಧಾನಸೌಧ) ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಆಗಿರುವ ಜಲಮೂಲಗಳ ಒತ್ತುವರಿಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಲು ಸರ್ಕಾರವು ನ್ಯಾಯಾಂಗಿಕ ವಿಚಾರಣಾ ಸಮಿತಿಯನ್ನು ರಚಿಸುವಂತೆ ಬೆಂಗಳೂರು ಸುತ್ತಮುತ್ತ ಇರುವ ಕೆರೆಗಳಲ್ಲಿ ಆಗಿರುವ ಒತ್ತುವರಿಯ ಅಧ್ಯಯನ ಮಾಡಲು ಸ್ಪೀಕರ್ ಕೆ.ಬಿ. ಕೋಳಿವಾಡ ಅಧ್ಯಕ್ಷತೆಯಲ್ಲಿ ರಚಿಸಲಾದ ಸದನ ಸಮಿತಿಯು ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನವೆಂಬರ್ 21 ರಂದು ವಿಧಾನಸಭೆಯಲ್ಲಿ ಮಂಡಿಸಲಾದ ಈ ವರದಿಯ ಕುರಿತು ಮಾಹಿತಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆ.ಬಿ. ಕೋಳಿವಾಡ ಅವರು, ಈ ವಿಚಾರಣಾ ಸಮಿತಿಯು ಗುರುತಿಸಿದ ಅಧಿಕಾರಿಗಳು ಹಾಗೂ ಬಿಲ್ಡರುಗಳು ಮತ್ತು ಡೆವಲಪರ್‍ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಧಿಕಾರಿಗಳ ವಿರುದ್ಧ ಕೈಗೊಳ್ಳುವ ಕ್ರಮವು ಮತ್ತೊಬ್ಬರು ಈ ರೀತಿಯಾಗಿ ಮಾಡದಂತೆ ನಿರ್ಬಂಧಿಸುವಂತಿರಬೇಕು. ಬಿಲ್ಡರ್ ಮತ್ತು ಡೆವಲಪರ್‍ಗಳ ಚರ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳವುದು, ಅಧಿಕಾರಿಗಳು, ಬಿಲ್ಡರ್‍ಗಳು ಮತ್ತು ಡೆವಲಪರ್‍ಗಳಿಂದ ಆಗಿರುವ ನಷ್ಟವನ್ನು ವಸೂಲು ಮಾಡಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ಸಮಿತಿಯ ವರದಿಯ ಮುಖ್ಯಾಂಶಗಳು:
• ಜಲಾಗಾರಗಳ ವಿಸ್ತೀರ್ಣ ಮತ್ತು ಬಫರ್ ವಲಯಗಳ ವಿಸ್ತೀರ್ಣಗಳನ್ನು ಒಳಗೊಂಡ ಪ್ರದೇಶವನ್ನು ‘ನೀಲಿ ವಲಯ’ ವೆಂದು ಘೋಷಿಸುವುದು.
• ಜಲಾಗಾರಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯಗಳನ್ನು ನಿಯಂತ್ರಿಸಿ ನಿರ್ವಹಿಸಲು ಎಸಿಎಸ್ ಅವರ ಅಧೀನದಲ್ಲಿ ಸ್ವತಂತ್ರ ಅಧಿಕಾರವುಳ್ಳ ಪ್ರಾಧಿಕಾರವನ್ನು ರಚಿಸುವುದು.
• ನಗರದ ಸುತ್ತ ಇರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಮುನ್ಸಿಪಲ್ ಸಂಸ್ಥೆಗಳಲ್ಲಿ ಜಲಾಗಾರಗಳ ನಿರ್ವಹಣೆಯ ಬಗ್ಗೆ ಕಠಿಣ ಕ್ರಮಗಳನ್ನು ಅನುಸರಿಸುವುದು
• ಯಾವುದೇ ಆಸ್ತಿಯ ಬಗ್ಗೆ ಅದರ ಸುತ್ತ ದಾಖಲೆಗಳಂತೆ ಇರುವ ಜಲಾಗಾರಗಳು ಮತ್ತು ವಸ್ತು ಸ್ಥಿತಿಯಂತೆ ಜಮೀನಿನಲ್ಲಿರುವ ಜಲಾಗಾರಗಳನ್ನು ಮತ್ತು ಬಫರ್ ವಲಯಗಳನ್ನು ಗುರುತಿಸುವ ಸ್ಥಳ ನಕ್ಷೆಗಳನ್ನು ಹಾಜರು ಪಡಿಸಿಕೊಂಡು ಎಲ್ಲಾ ಯೋಜನೆಗಳ ಅನುಮೋದನೆ, ವಹಿವಾಟಿಗೆ ಬಳಸುವುದು ಹಾಗೂ ನೀರು ಸರಬರಾಜು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದು.
• ಅಭಿವೃದ್ಧಿ ಯೋಜನೆಗಳ ಅನುಮೋದನೆ ನೀಡಿದ ಕೂಡಲೇ ಅವುಗಳನ್ನು ಕಂಚಾಯ ದಾಖಲೆಗಳು ಮತ್ತು ನಕ್ಷೆಗಳಲ್ಲಿ ಕಾಲೋಚಿತಗೊಳಿಸುವುದು ಕಡ್ಡಾಯ ಮಾಡುವುದು.
• ಎಲ್ಲ ಅನುಮೋದನೆ ನೀಡಿದ ಯೋಜನೆಗಳ ವಿವರಗಳನ್ನು ಅಂತರ್ಜಾಲದಲ್ಲಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವುದು.
• ಎಲ್ಲಾ ಒತ್ತುವರಿ ಪ್ರಕರಣಗಳನ್ನು ಲ್ಯಾಂಡ್ ಗ್ರಾಬರ್ಸ್ ಕೋರ್ಟ್‍ನಲ್ಲಿಯೇ ನಿರ್ವಹಿಸಲು ಕ್ರಮ ಕೈಗೊಳ್ಳುವುದು.
ಒತ್ತುವರಿ ವಿವರ
ಸರ್ಕಾರವು ಸಮಿತಿಗೆ ಸಲ್ಲಿಸಿದ ವರದಿಯನ್ವಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 57932 ಎಕರೆ 26 ಗುಂಟೆ ವಿಸ್ತೀರ್ಣದ 1547 ಕೆರೆಗಳಿದ್ದು, ಒಟ್ಟು 10785 ಎಕರೆ 35.76 ಗುಂಟೆ ವಿಸ್ತೀರ್ಣದ ಕೆರೆ ಜಾಗ ಒತ್ತುವರಿಯಾಗಿದೆ. ಇದರಲ್ಲಿ ಸರ್ಕಾರಿ ಸಂಸ್ಥೆಗಳು 3247 ಎಕರೆ 7.37 ಗುಂಟೆ ಕೆರೆ ಒತ್ತುವರಿ ಮಾಡಿಕೊಂಡಿದ್ದು, ಖಾಸಗಿಯುವರಿಂದ 7530 ಎಕರೆ 20.17 ಗುಂಟೆ ವಿಸ್ತೀರ್ಣದ ಕೆರೆ ಒತ್ತುವರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸರ್ಕಾರ, ಸರ್ಕಾರಿ ಸಂಸ್ಥೆಗಳು, ಸರ್ಕಾರದ ಅಂಗ ಸಂಸ್ಥೆಗಳು ಮಾಡಿರುವ ಒತ್ತುವರಿಗಳು ಬಹುಪಾಲು ಸಾರ್ವಜನಿಕ ಮೂಲಸೌಲಭ್ಯ ಒದಗಿಸಲು ಮಾಡಲಾಗಿದ್ದು, ಇಂತಹ ಸಾರ್ವಜನಿಕ ಸೌಲಭ್ಯಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವುದು ಸೂಕ್ತವೆಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.
ಖಾಸಗಿ ಬಿಲ್ಡರುಗಳು, ಡೆವಲಪರ್‍ಗಳು, ಖಾಸಗಿ ಹೌಸಿಂಗ್ sಸಂಸ್ಥೆಗಳು ಕೆರೆಯ ಅಂಗಳದಲ್ಲಿ ನಿರ್ಮಿಸಿ, ಅಮಾಯಕ ಜನರಿಗೆ ಹಂಚಿಕೆ ಮಾಡಿರುವ ಪ್ರಕರಣಗಳಲ್ಲಿ ಕೆರೆಯನ್ನು ಪುನಶ್ಚೇತನ ಗೊಳಿಸಲು ಅವಕಾಶವಿದ್ದಲ್ಲಿ, ಒತ್ತುವರಿ ತೆರವುಗೊಳಿಸುವುದು, ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲದಿದ್ದಲ್ಲಿ ಅಂತಹ ಕೆರೆಗಳನ್ನು ನಿರ್ಜೀವ ಎಂದು ಘೋಷಿಸಿ, ಸರ್ಕಾರವು ಆಸ್ತಿಗಳನ್ನು ಸುಪರ್ದಿಗೆ ಪಡೆದು, ವಾಸಿಸುತ್ತಿರುವ ಹಕ್ಕುದಾರರಿಗೆ ವಾರ್ಷಿಕ ಲೀಸ್ ಆಧಾರದ ಮೇಲೆ ಹಂಚಿಕೆ ಮಾಡುವುದು ಅಥವಾ ಒಂದಾವರ್ತಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ನಿಗದಿತ ಶುಲ್ಕ ವಸೂಲಿ ಮಾಡಿ, ವಾಸಿಸುವ ಹಕ್ಕುದಾರರಿಗೆ ಹಕ್ಕು ನೀಡಬಹುದಾಗಿದೆ.
ಪುನಶ್ಚೇತನ ಗೊಳಿಸಬಹುದಾದ ಕೆರೆ ಅಂಗಳದಲ್ಲಿರುವ ವಾಣಿಜ್ಯ ಕಟ್ಟಡಗಳನ್ನು ಕಡ್ಡಾಯವಾಗಿ ತೆರವುಗೊಳಿಸುವುದು, ಪುನಶ್ಚೇತನಗೊಳಿಸಲು ಸಾಧ್ಯವಿಲ್ಲದಿದ್ದರೆ, ಅಂತಹ ಕೆರೆಗಳಲ್ಲಿರುವ ವಾಣಿಜ್ಯ ಕಟ್ಟಡಗಳನ್ನು ಸರ್ಕಾರವೇ ವಶಕ್ಕೆ ಪಡೆದು ನಿರ್ವಹಿಸುವುದು.
ಬಿಡಿಎ, ಬಿಬಿಎಂಪಿ ಮತ್ತು ಇತರ ಸರ್ಕಾರಿ ಸಂಸ್ಥೆಗಳು ಒತ್ತುವರಿ ಮಾಡಿ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ವಾಸವಾಗಿರುವ ಸಾರ್ವಜನಿಕರನ್ನು ಒಕ್ಕಲು ಎಬ್ಬಿಸದೆ ಇವರಿಂದ ಕೆರೆ ಅಭಿವೃದ್ಧಿ ಕರ ಸಂಗ್ರಹಿಸಿ ಕೆರೆ ಅಭಿವೃದ್ಧಿಗಾಗಿ ಬಳಸುವುದು ಎಂದು ಈ ವರದಿ ಹೇಳಿದೆ.
ಕೆರೆಗಳಲ್ಲಿ ನಿರ್ಮಾಣಗೊಂಡ ಕೊಳೆಗೇರಿಗಳನ್ನು ಸರ್ಕಾರವು ವಹಿಸಿಕೊಂಡು ಆದ್ಯತೆಯ ಮೇರೆಗೆ ಸ್ಥಳಾಂತರಿಸುವುದು.
ಕೆರೆ ಅಂಗಳವನ್ನು ಭಾಗಶಃ ಅಥವಾ ಪೂರ್ಣ ನಿರ್ಜೀವ ಎಂದು ಘೋಷಿಸುವ ಅಧಿಕಾರ ಯಾವುದೇ ನಿಯಮಾವಳಿಗಳಲ್ಲಿ ಇರುವುದಿಲ್ಲ. ಒತ್ತುವರಿಗಳನ್ನು ನಿಭಾಯಿಸುವಾಗ ನಿರ್ಜೀವ ಕೆರೆ ಎಂದು ಘೋಷಿಸುವುದು ಅಗತ್ಯವಾಗಿದ್ದು, ಕೆರೆಗಳನ್ನು ನಿರ್ಜೀವಗೊಳಿಸುವುದು ಮತ್ತು ಅದರಂತೆ ದಾಖಲೆಗಳನ್ನು ಕಾಲೋಚಿತಗೊಳಿಸುವುದಕ್ಕೆ ರಾಜ್ಯದ ವಿಧಾನ ಮಂಡಲವೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಕೆರೆಗಳಿಗೆ ಭೇಟಿ ನೀಡಿರುವ ಸಮಿತಿಯು 10 ಸಾವಿರ ಪುಟಗಳ ದಾಖಲೆ/ ಮಾಹಿತಿಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದೆ. ಕೆರೆ ಒತ್ತುವರಿದಾರರ ಪಟ್ಟಿಯನ್ನು ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಸಮಿತಿ ಅಧ್ಯಕ್ಷರೂ ಆದ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸದನ ಸಮಿತಿಯ ಸದಸ್ಯರಾದ ಎನ್.ಎ. ಹ್ಯಾರಿಸ್, ಕೆ.ಎಸ್. ಪುಟ್ಟಣ್ಣಯ್ಯ, ಡಾ. ಸುಧಾಕರ್, ಬಿ.ಆರ್. ಯಾವಗಲ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.