ಉತ್ತಮ ಸಮಾಜಕ್ಕಾಗಿ

ಫ್ಲೆಕ್ಸಿ ಪ್ಯಾಕ್ ಘಟಕÀ ಉದ್ಘಾಟನೆ

0

ರೈತರು ಸಮಗ್ರ ಕೃಷಿ ಕೈಗೊಳ್ಳಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ: ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆ, ಹಾಲು ಉತ್ಪಾದನೆ, ತರಕಾರಿ ಬೆಳೆಯುವುದು, ರೇಷ್ಮೆ ಹುಳು ಸಾಕಾಣಿಕೆ, ಮೀನುಗಾರಿಕೆ ಸೇರಿದಂತೆ ಸಮಗ್ರ ಕೃಷಿಯನ್ನು ಕೈಗೊಂಡರೆ ಮಾತ್ರ ಕೃಷಿಯಿಂದ ಲಾಭವನ್ನು ಪಡೆಯಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಇಲ್ಲಿನ ಮಹಾಂತೇಶ ನಗರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ (ನ.23) ಹಮ್ಮಿಕೊಂಡಿದ್ದ ನೂತನವಾಗಿ ನಿರ್ಮಿಸಿದ ಫ್ಲೆಕ್ಸಿ ಪ್ಯಾಕ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಫ್ಲೆಕ್ಸಿ ಪ್ಯಾಕ್ ಘಟಕಗಳ ಮೂಲಕ ಹಾಲನ್ನು 90 ದಿನಗಳವರೆಗೆ ಸುರಕ್ಷಿತವಾಗಿ ಇಡಬಹುದಾಗಿದ್ದು, ಇದರಿಂದ ಹಾಲನ್ನು ಬೇರೆ ಬೇರೆ ರಾಜ್ಯಗಳು ಹಾಗೂ ದೂರದ ಪ್ರದೇಶಗಳಿಗೆ ಸಾಗಾಣಿಕೆ ಮಾಡಲು ಅನುಕೂಲವಾಗುತ್ತದೆ. ಇದರಿಂದ ಗ್ರಾಹಕರಿಗೆ, ಹಾಲು ಉತ್ಪಾದಕರಿಗೆ ಹಾಗೂ ಹಾಲು ಒಕ್ಕೂಟಗಳಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಗಳನ್ನು ಕೈಗೊಂಡಿದೆ. ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.2 ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಪ್ರಸ್ತುತವಾಗಿ ಹಾಲು ಉತ್ಪಾದಕರಿಗೆ ರೂ. 5 ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಪ್ರತಿದಿನ 77 ಲಕ್ಷ ಲೀ. ಹಾಲನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹಾಲು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುವ ಪದಾರ್ಥವಾಗಿರುವುದರಿಂದ ಕ್ಷೀರಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕೆನೆಭರಿತ ಹಾಲು ನೀಡಲಾಗುತ್ತಿದೆ. ಒಂದು ದಿನಕ್ಕೆ ಪ್ರತಿ ಮಗುವಿಗೆ 150 ಮಿ.ಲೀ ಹಾಲನ್ನು ನೀಡಲಾಗುತ್ತಿದ್ದು, ರಾಜ್ಯದ 1.2 ಕೋಟಿ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ರಾಯಚೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ಸುವಾಸನೆ ಭರಿತ ಹಾಲನ್ನು ನೀಡಲಾಗುತ್ತಿದೆ. ಶೀಘ್ರವೇ ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಹಾಲು ಉತ್ಪಾದಕರಿಗೆ ಪ್ರತಿದಿನ ಸರ್ಕಾರದಿಂದ ಪ್ರೋತ್ಸಾಹಧನವಾಗಿ ಸುಮಾರು 4 ಕೋಟಿ ರೂ. ನೀಡಲಾಗುತ್ತಿದೆ. ಕ್ಷೀರಭಾಗ್ಯಕ್ಕಾಗಿ ಸರ್ಕಾರದಿಂದ 900 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಜ್ಯದ 9.5 ಲಕ್ಷ ರೈತ ಕುಟುಂಬಗಳಿಗೆ ಹಾಲು ಉತ್ಪಾದನೆಯಿಂದ ಪ್ರಯೋಜನ ಪಡೆಯುತ್ತಿವೆ ಎಂದು ಹೇಳಿದರು.
ರಾಜ್ಯದಲ್ಲಿ 14 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ 23 ಲಕ್ಷ ಸದಸ್ಯರು ಇದ್ದಾರೆ. ದೇಶದಲ್ಲೇ ಹಾಲು ಉತ್ಪಾದನೆಯಲ್ಲಿ ರಾಜ್ಯ ಎರಡನೇ ಸ್ಥಾನವನ್ನು ಹೊಂದಿದೆ. ದೇಶದಲ್ಲಿ ಕ್ಷೀರಕ್ರಾಂತಿ ಉಂಟಾಗಲು ಪಿ.ಜಿ. ಕುರಿಯನ್ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ತಿಳಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಎ. ಮಂಜು ಅವರು ಮಾತನಾಡಿ, ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದರೆ ಮಾತ್ರ ದೇಶ ಬಲಿಷ್ಠಗೊಳ್ಳಲು ಸಾಧ್ಯ. ರೈತರು ಆರ್ಥಿಕವಾಗಿ ಶಕ್ತಿವಂತರಾಗಲು ಹೈಗಾರಿಕೆಯನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸರ್ಕಾರದ ಪಶುಭಾಗ್ಯ ಯೋಜನೆದಿಂದ ರೈತರು, ಕೂಲಿಕಾರರು ಹಾಗೂ ಬಡವರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳನ್ನು ಎಪಿಎಂಸಿಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆಯ ಕುರಿತು ಚಿಂತನೆ ನಡೆಸಲಾಗುತ್ತಿದೆ ಹಾಗೂ ಕುರಿ, ಮೇಕೆಗಳ ಮಾಂಸ ಮಾರಾಟವನ್ನು ಕೆಎಂಎಪ್ ವತಿಯಿಂದ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಹಾಲು ಒಕ್ಕೂಟಗಳು ನಿರ್ಮಾಣವಾಗಬೇಕು. ಹಾಲು ಒಕ್ಕೂಟಗಳ ಅಭಿವೃದ್ಧಿಗೆ ಹಾಲು ಉತ್ಪಾದಕರು ಹಾಗೂ ನಿರ್ದೇಶಕ ಮಂಡಳಿಯವರು ಒಟ್ಟಿಗೆ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನವಾಗಿ ನಿರ್ಮಿಸಿದ ಫ್ಲೆಕ್ಸಿ ಪ್ಯಾಕ್ ಘಟಕದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿದರು. ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಎ. ಮಂಜು ಅವರು ತೃಪ್ತಿ ಹಾಲಿನ ಪಾಕೆಟ್‍ಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅತ್ಯುತ್ತಮ ಹಾಲು ಉತ್ಪಾದಕರ ಸಂಘಗಳು ಹಾಗೂ ಹಾಲು ಉತ್ಪಾದಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗೋಕಾಕ ತಾಲೂಕಿನ ಬೆಟಗೇರಿ ಹಾಲು ಉತ್ಪಾದಕರ ಸಂಘಕ್ಕೆ ಶ್ರೇಷ್ಠ ಹಾಲು ಉತ್ಪಾದಕರ ಸಂಘ ಪ್ರಶಸ್ತಿ ಹಾಗೂ ಸಿಂದಿಕುರುಬೆಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅತ್ಯುತ್ತಮ ಹಾಲು ಉತ್ಪಾದಕರ ಸಂಘ ಪ್ರಶಸ್ತಿ, ರಾಯಭಾಗ ತಾಲೂಕಿನ ಬಸ್ತವಾಡ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಅತ್ಯುತ್ತಮ ಹಾಲು ಉತ್ಪಾದಕರ ಮಹಿಳಾ ಸಂಘ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯ ಅತ್ಯುತ್ತಮ ಹಾಲು ಉತ್ಪಾದಕರನ್ನು ಗುರುತಿಸಿ ವೈಯಕ್ತಿಕ ಪ್ರಶಸ್ತಿಗಳನ್ನು ಕೂಡಾ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಫಿರೋಜ್ ಶೇಠ್, ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ ಪಾಟೀಲ, ಸಂಸದ ಪ್ರಕಾಶ ಹುಕ್ಕೇರಿ, ಜಿಲ್ಲಾಧಿಕಾರಿ ಎಸ್.ಜಿಯಾವುಲಾ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಚಂದ್ರನ್.ಆರ್, ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕರಾದ ಡಾ. ಎಚ್.ವಿ. ತಿಪ್ಪಾರಡ್ಡಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.