ಉತ್ತಮ ಸಮಾಜಕ್ಕಾಗಿ

ಪೊಲೀಸ್ ತನಿಖೆ ತರಬೇತಿಗೆ ವಿ.ವಿ ಮಾದರಿ ಸಂಸ್ಥೆ ಆರಂಭಿಸಲು ಚಿಂತನೆ; -:ಸಚಿವ ರಾಮಲಿಂಗಾರೆಡ್ಡಿ

0

ಡಿಸೆಂಬರ್‍ನಲ್ಲಿ ಕಲಬುರ್ಗಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಗಳ ಪರಿಶೀಲನೆ; ಸಚಿವ ಆರ್. ರೋಷನ್ ಬೇಗ್
ಬೆಳಗಾವಿ, ಇದೇ ತಿಂಗಳ ಅಂತ್ಯದಲ್ಲಿ ಕಲಬುರ್ಗಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡಿ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಲಾಗುವುದು ಹಾಗೂ ಡಿಸೆಂಬರನಲ್ಲಿ ಎರಡೂ ಪಾಲಿಕೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವರಾದ ಆರ್. ರೋಷನ್ ಬೇಗ್ ಅವರು ಹೇಳಿದರು.
ವಿಧಾನ ಪರಿಷತ್‍ನಲ್ಲಿಂದು ಸದಸ್ಯ ಅಮರನಾಥ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು.
ಕಲಬುರ್ಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯ 55 ವಾರ್ಡಗಳಲ್ಲಿ ಮುಖ್ಯಮಂತ್ರಿಗಳ 100 ಕೋಟಿ ರೂಪಾಯಿಗಳ ನಗರೋತ್ಥಾನ ಎರಡು ಹಾಗೂ ಮೂರನೇ ಹಂತ ಹಾಗೂ 90 ಕೋಟಿ ರೂಪಾಯಿಗಳ ವಿಶೇಷ ಅನುದಾನ ಸೇರಿ ಒಟ್ಟು 290 ಕೋಟಿ ರೂ.ಗಳಲ್ಲಿ 222 ಕಾಮಗಾರಿಗಳು ಅನುಮೋದನೆ ಪಡೆದಿವೆ. 182 ಕಾಮಗಾರಿಗಳು ಪೂರ್ಣಗೊಂಡಿವೆ. 34 ಕಾಮಗಾರಿಗಳು ಪ್ರಗತಿಯಲ್ಲಿವೆ. 6 ಕಾಮಗಾರಿಗಳನ್ನು ಆರಂಭಿಸಲಾಗುವುದು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡಗಳಲ್ಲಿ ಮುಖ್ಯಮಂತ್ರಿಗಳ 100 ಕೋಟಿ ರೂಪಾಯಿಗಳ ನಗರೋತ್ಥಾನ ಎರಡು ಹಾಗೂ ಮೂರನೇ ಹಂತದ ಯೋಜನೆಗಳಲ್ಲಿ 200 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಇದರಲ್ಲಿ 248 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, 173 ಕಾಮಗಾರಿಗಳು ಪೂರ್ಣಗೊಂಡಿವೆ. 56 ಕಾಮಗಾರಿಗಳು ಪ್ರಗತಿಯಲ್ಲಿವೆ. 19 ಕಾಮಗಾರಿಗಳುನ್ನು ಪ್ರಾರಂಭಿಸಬೇಕಾಗಿದೆ ಎಂದು ಸಚಿವರು ಆರ್. ರೋಷನ್ ಬೇಗ್ ಅವರು ಸದನದಲ್ಲಿ ವಿವರಿಸಿದರು.
 
ಪೊಲೀಸ್ ತನಿಖೆ ತರಬೇತಿಗೆ ವಿ.ವಿ ಮಾದರಿ ಸಂಸ್ಥೆ ಆರಂಭಿಸಲು ಚಿಂತನೆ;
-:ಸಚಿವ ರಾಮಲಿಂಗಾರೆಡ್ಡಿ
ಬೆಳಗಾವಿ,  ಗೃಹ ಇಲಾಖೆಯಲ್ಲಿ ಆಧುನಿಕ ತಂತ್ರಾಜ್ಞಾನ ಅಳವಡಿಕೆ ಮಾಡಿಕೊಂಡು ಕಾನ್‍ಸ್ಟೇಬಲ್ ದರ್ಜೆಯಿಂದ ಹಿಡಿದ್ದು, ಐಪಿಎಸ್ ವೃಂದದ ವರಗಿನ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೈಬರ್ ಕ್ರೈಂ, ಮೊಬೈಲ್ ಫೊರೆನ್ಸಿಕ್, ಗುಪ್ತಚರಣ ಸಂಗ್ರಹಣೆ, ವಿಚಾರಣೆ ತಂತ್ರಗಾರಿಕೆ, ಸಂಚಾರ ನಿರ್ವಹಣೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲು ವಿಶ್ವವಿದ್ಯಾಲಯದ ಮಾದರಿಯ ಸಂಸ್ಥೆಯನ್ನು ಆರಂಭಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.
ವಿಧಾನ ಪರಿಷತ್‍ನಲ್ಲಿಂದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ತಾರಾಅನುರಾಧ ಅವರು ಕೆಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿಯನ್ನು ನೀಡಿದರು.
ಪೊಲೀಸ್ ಇಲಾಖೆಯನ್ನು ಆಧುನಿಕರಣಗೊಳಿಸಲು ಬೆಂಗಳೂರು ನಗರದಲ್ಲಿ ಡಯಲ್-100 ಯೋಜನೆಯನ್ನು ಪರಿಚಯಿಸಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಮೈಸೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಡಯಲ್ -100 ಸೇವೆಯನ್ನು ಆಧುನಿಕರಣಗೊಳಿಸಲಾಗಿದೆ. ಪೊಲೀಸ್ ಸ್ಪಂದನಾ ಸಮಯದಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳಿಗೆ ತ್ವರಿತವಾಗಿ ಸ್ಪಂದಿಸಲು ಡೌನಲೋಡ್ ಮಾಡಿಕೊಳ್ಳಬಹುದಾದ ಆ್ಯಪ್‍ಗಳನ್ನು ಪರಿಚಯಿಸಲಾಗಿದೆ.
ಆಧುನಿಕ ತಂತ್ರಜ್ಞಾನ ಅಳವಡಿಕೆಯ ಭಾಗವಾಗಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಎಫ್.ಎಸ್.ಎಲ್ ಉನ್ನತೀಕರಣಕ್ಕೆ ಹಾಗೂ 80 ಕೋಟಿ ರೂಪಾಯಿ ವೆಚ್ಚದಲ್ಲಿ ಕಮಾಂಡ್ ಕಂಟ್ರೋಲ್ ಸ್ಥಾಪನೆಗೆ ಆಡಳಿತಾತ್ಮಕ ಅನಮೋದನೆ ನೀಡಲಾಗಿದೆ. ಪ್ರಸ್ತುತ ಒಟ್ಟು 100 ಇನೋವಾ ಮಾದರಿಯ ಹೈವೆ ಪೆಟ್ರೋಲಿಂಗ್ ವಾಹನಗಳು ಆಧುನಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 51 ಮಹಿಳಾ ಸಿಬ್ಬಂದಿ ಸಹಿತ ಪಿಂಕ್ ಹೊಯ್ಸಳ ವಾಹನಗಳ ಸೇರಿ ಒಟ್ಟು 273 ಆಧುನಿಕ ತಂತ್ರಜ್ಞಾನದ ಹೊಯ್ಸಳ ವಾಹನಗಳು ಕಾರ್ಯನಿರ್ವಹಿಸುತ್ತಿವೆ.
ಸೈಬರ್ ಕ್ರೈಂ, ಡಿಜಿಟಲ್ ಸಾಕ್ಷಾಧಾರಗಳ ವೈಜ್ಞಾನಿಕ ಸಂಗ್ರಹಣೆ, ರಕ್ಷಣೆ ಹಾಗೂ ತನಿಖೆ ಬಗ್ಗೆ ತರಬೇತಿಗೆ 2016-17ನೇ ಸಾಲಿನಲ್ಲಿ 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಅನುಪಾತವು 632ರಷ್ಟು ಇರುತ್ತದೆ. ರಾಷ್ಟ್ರೀಯ ಪೊಲೀಸ್ ಆಯೋಗದ ಏಳನೇ ವರದಿ ಅನುಸಾರ ಅಲ್ಪಮಟ್ಟಿನ ಪೊಲೀಸ್ ಸಿಬ್ಬಂದಿ ಕೊರತೆಯಿದೆ. ಅದನ್ನು ತಾತ್ಕಾಲಿಕವಾಗಿ ಲಭ್ಯವಿರುವ 25 ಸಾವಿರ ಗೃಹರಕ್ಷಕರ ನಿಯೋಜನೆ ಸೇವೆಪಡೆದು ಪೊಲೀಸ್‍ರ ಮೇಲಿರುವ ಹೊರೆ ಕಡಿಮೆ ಮಾಡಲಾಗುತ್ತಿದೆ.
2016-17ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಮೂರು ವರ್ಷಗಳ ಕಾಲಾವಧಿಯಲ್ಲಿ ಒಟ್ಟು 942 ಪಿಎಸ್‍ಐ ಮತ್ತು 12,139 ಪಿಸಿ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ. ಪೊಲೀಸ್ ಸಿಬ್ಬಂದಿಗಳ ಒತ್ತಡ ಕಡಿಮೆ ಮಾಡಲು ವಾರದ ರಜೆ ಕಡ್ಡಾಯವಾಗಿ ನೀಡಲಾಗುತ್ತಿದೆ. ಆರ್ಡರ್ಲಿ ಪದ್ಧತಿ ಕೈಬಿಟ್ಟು ಫಾಲೋವರ್ಸಗಳನ್ನು ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸುವಾಗ ಸಿಬ್ಬಂದಿಯ ಆರೋಗ್ಯ ಸ್ಥಿತಿ ಪರಿಗಣಿಸಲಾಗುತ್ತಿದೆ. ನೂತನ ತಂತ್ರಜ್ಞಾನಗಳ ಪರಿಚಯ, ವಾಹನಗಳ ಒದಗಿಸುವಿಕೆಯಿಂದ ಅಪರಾಧಗಳ ತಡೆ ಮತ್ತು ಸ್ಥಳಕ್ಕೆ ಭೇಟಿ ನೀಡುವ ಕಾರ್ಯ ಸುಗಮವಾಗಿದೆ. ಸಿಬ್ಬಂದಿ ಒತ್ತಡ ಕಡಿಮೆ ಮಾಡಲು ಆಟೋಟ, ಯೋಗ, ವ್ಯಾಯಾಮ, ಕೌನ್ಸಿಲಿಂಗ್, ತಜ್ಞ ವೈದ್ಯರಿಂದ ಆರೋಗ್ಯ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾನಸಿಕಸ್ಥೈರ್ಯ ಹೆಚ್ಚಿಸಲು ಮನೋವೈಜ್ಞಾನಿಕ ಸಲಹೆ ನೀಡಲು ಸಮಾಲೋಚಕರು ಹಾಗೂ ಹಿರಿಯ ಸಮಾಲೋಚಕರ ಹುದ್ದೆಗಳನ್ನು ಸೃಷ್ಠಿಸಿ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ.
ನೂತನ ಸಬ್ ಬೀಟ್ ವ್ಯವಸ್ಥೆಯಿಂದ ಸ್ಥಳೀಯ ಜನರು ಮತ್ತು ಪೊಲೀಸ್‍ರ ಸಂಪರ್ಕ ಹೆಚ್ಚಾಗಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎಂದು ವಿವರಿಸಿದರು.
ಬೆಂಗಳೂರು ರಾಜ ಕಾಲುವೆ ಒತ್ತುವರಿ ತೆರವು ಮುಂದುವರಿಕೆ; ಕೆ.ಜೆ.ಜಾರ್ಜ
ಬೆಳಗಾವಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲವೆಗಳು ಒತ್ತುವರಿಯಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಇದುವರೆಗೆ 1953 ಒತ್ತುವರಿ ಪ್ರಕರಣಗಳನ್ನು ಗುರುತಿಸಲಾಗಿದ್ದು, 1225 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಬಾಕಿ ಇರುವ 728 ಒತ್ತುವರಿ ಮಳೆನೀರುಗಾಲುವೆಗಳ ತೆರವು ಕಾರ್ಯವನ್ನು ಮುಂದುವರಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವರಾದ ಕೆ.ಜೆ.ಜಾರ್ಜ ಅವರು ಹೇಳಿದರು.
ವಿಧಾನ ಪರಿಷತ್‍ನಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ.ಆರ್. ರಮೇಶ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಮಳೆನೀರುಗಾಲುವೆಗಳ ಒಟ್ಟು ಉದ್ದ 842 ಕಿ.ಮೀಟರ್‍ನಷ್ಟಿದೆ. ರಾಜಕಾಲುವೆಗಳ ಪುನರ್ ನಿರ್ಮಾಣ ಕಾರ್ಯವನ್ನು ಕಳೆದ ಹತ್ತು ವರ್ಷಗಳಿಂದ ಕೈಗೆತ್ತಿಕೊಳ್ಳಲಾಗಿದೆ. ರಾಜ ಕಾಲುವೆಗಳ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯ ಭೂಮಾಪಕರಿಂದ ಕೈಗೊಳ್ಳಲಾಗಿದೆ. ಮಳೆನೀರುಗಾಲುವೆಗಳಲ್ಲಿ ಬಾಕಿ ಉಳಿದಿರುವ 728 ಒತ್ತುವರಿ ಜಾಗೆಗಳನ್ನು ಗುರುತಿಸಲು ಭೂದಾಖಲೆಗಳ ನಿರ್ದೇಶಕರಿಗೆ ಕೋರಲಾಗಿದೆ. ಅವರು ಒತ್ತುವರಿ ಜಾಗೆಗಳನ್ನು ಗುರುತಿಸಿದ ಕೊಡಲೆ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು.
2006 ರಿಂದ 2013ರವರೆಗೆ 664 ಕೋಟಿ ರೂಪಾಯಿಗಳ ವೆಚ್ಚದಲ್ಲಿ 53 ಕಿ.ಮೀಟರ್ ಹಾಗೂ 2013 ರಿಂದ 2017ರ ಜುಲೈ ಅಂತ್ಯದವರೆಗೆ 702.84 ಕೋಟಿ ರೂಪಾಯಿಗಳ ವೆಚ್ಚದಲ್ಲಿ 124 ಕಿ.ಮೀಟರ್ ರಾಜ ಕಾಲುವೆ ಪುನರ್‍ನಿರ್ಮಾಣ ಮಾಡಲಾಗಿದೆ. 2016-17 ಮತ್ತು 2017-18ರ ಕ್ರಿಯಾಯೋಜನೆಯಲ್ಲಿ 1100 ಕೋಟಿ ರೂಪಾಯಿ ವೆಚ್ಚದಲ್ಲಿ 192 ಕಿ.ಮೀ ರಾಜ ಕಾಲುವೆ ಪುನರ್‍ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 848 ಕಿ.ಮೀ ರಾಜಕಾಲುವೆ ಪೈಕಿ 229 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. 150 ಕಿ.ಮೀ ಕಾಮಗಾರಿಗಳು ಪ್ರಗತಿಯಲ್ಲಿದೆ. ಉಳಿದ 463 ಕಿ.ಮೀಗಳನ್ನು ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ರಾಜ ಕಾಲುವೆಗಳ ಬಗ್ಗೆ ಲೋಕಾಯುಕ್ತ ಕಚೇರಿಯಲ್ಲಿ ದೂರುಗಳು ದಾಖಲಾಗಿರುವ ಕುರಿತು ಸರ್ಕಾರದ ಗಮನಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಚಿವರು ಸದನಕ್ಕೆ ವಿವರಿಸಿದರು.
ಬೆಂಗಳೂರು ಮೆಟ್ರೊ; ಕನ್ನಡಿಗ ಸಿಬ್ಬಂದಿಯ ಹಿತರಕ್ಷಣೆಗೆ ಬದ್ಧ; ಸಚಿವ ಕೆ.ಜೆ.ಜಾರ್ಜ್
ಬೆಳಗಾವಿ,  ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿ.ಎಮ್.ಆರ್.ಸಿ.ಎಲ್) ದಲ್ಲಿ 33 ಮಂದಿ ಉದ್ಯೋಗಿಗಳು ನಿಯೋಜನೆ ಮೇಲೆ ಹಾಗೂ 761 ಉದ್ಯೋಗಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ, ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಸಿಬ್ಬಂದಿ ಶಿಸ್ತು ವರ್ತನೆ ಉಲ್ಲಂಘಿಸಿದಾಗ ಎಲ್ಲರಿಗೂ ಒಂದೇ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವರಾದ ಕೆ.ಜೆ.ಜಾರ್ಜ ಅವರು ಹೇಳಿದರು.
ವಿಧಾನ ಪರಿಷತ್‍ನಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು.
ಬಿ.ಎಮ್.ಆರ್.ಸಿ.ಎಲ್ ನ ಯಾವುದೇ ಉದ್ಯೋಗಿಗೆ ವಿಧಿಸುವ ಶಿಕ್ಷೆಯು ಆ ಉದ್ಯೋಗಿಯ ವಿರುದ್ಧ ಮಾಡಿರುವ ಮತ್ತು ಸಾಬಿತಾಗಿರುವ ಆರೋಪಗಳಿಗೆ ತಕ್ಕದಾಗಿರುತ್ತದೆ. ರೆಡ್ ಸಿಗ್ನಲ್ ಕ್ರಾಸ್ ಘಟನೆಗೆ ಸಂಬಂಧಿಸಿದಂತೆ 9 ಸ್ಟೇಷನ್ ಕಂಟ್ರೋಲರ್ ಹಾಗೂ ಟ್ರೈನ್ ಆಪರೇಟರ್‍ಗಳ ಮೇಲೆ ಕ್ರಮ ಜರುಗಿಸಿ ಸೂಕ್ತ ದಂಡನೆ ವಿಧಿಸಲಾಗಿದೆ. ಪಾಯಿಂಟ್ ಯಂತ್ರ ಹಾಳು ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಜೂನಿಯರ್ ಇಂಜನೀಯರ ವೃಂದದ ಇಬ್ಬರು ಉದ್ಯೋಗಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ.
ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಲಾಗುವುದು. ಸಿಬ್ಬಂದಿ ಶಿಸ್ತು ಕ್ರಮ ವಿಚಾರದಲ್ಲಿ ಸಚಿವರು ಹಾಗೂ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಡಿಸೆಂಬರ್‍ದಲ್ಲಿ ಹೆಚ್ಚು ಬೋಗಿಗಳ ಅಳವಡಿಕೆ:
ಬೆಂಗಳೂರು ಮೆಟ್ರೋದ 50 ರೈಲುಗಳಿಗೆ ಡಿಸೆಂಬರ್ ತಿಂಗಳಲ್ಲಿ 150 ಹೊಸ ಬೋಗಿಗಳನ್ನು ಅಳವಡಿಸಲಾಗುವುದು. ಆ ಸಂದರ್ಭದಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಬೋಗಿ ಮೀಸಲಿಡಲಾಗುವುದು ಎಂದು ಸಚಿವರಾದ ಕೆ.ಜೆ.ಜಾರ್ಜ ಅವರು ಹೇಳಿದರು.
ವಿಧಾನ ಪರಿಷತ್‍ನಲ್ಲಿ ಸದಸೆÀ್ಯ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು.
ಪ್ರತಿನಿತ್ಯ ಸುಮಾರು 3ಲಕ್ಷ ಜನ ಮೆಟ್ರೋ ರೈಲಿನ ಮೂಲಕ ಸಂಚರಿಸುತ್ತಿದ್ದಾರೆ. ಇದೀಗ ಪ್ರತಿ 6ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿದ್ದು, ಇದರ ಅವಧಿಯನ್ನು 4 ಅಥವಾ 3 ನಿಮಿಷಕ್ಕೆ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ
ಉಪ ಸಮಿತಿ ವರದಿ ಆಧರಿಸಿ ಹೆಚ್ಚಿನ ಪರಿಹಾರ :ಸಚಿವ ಎಂ.ಬಿ.ಪಾಟೀಲ್
ಸುವರ್ಣ ವಿಧಾನಸೌಧ ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗÀಡೆ ಪ್ರದೇಶದ ನಿರಾಶ್ರಿತರಿಗೆ ಹೆಚ್ಚಿನ ಪರಿಹಾರ ನೀಡುವ ಸಂಬಂಧಿಸಿದಂತೆ ರಚಿಸಲಾಗಿರುವ ಸಂಪುಟ ಉಪ ಸಮಿತಿ ಮುಂದಿನ ತಿಂಗಳು ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮುಳುಗಡೆ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಈ ಕುರಿತಾಗಿ ಸರ್ಕಾರಕ್ಕೆ ಸಲ್ಲಿಸುವ ವರದಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿಧಾನಸಭೆಯಲ್ಲಿ ತಿಳಿಸಿದರು.
ಗುರುವಾರ ನಿಯಮ 69ರಡಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಮುಳುಗಡೆಯಾಗಲಿರುವ ಗ್ರಾಮಗಳು ಹಾಗೂ ಈಗಾಗಲೇ ಪುನರ್ವಸತಿ ಕಲ್ಪಿಸಿರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸುವ ಕುರಿತ ಚರ್ಚೆಗೆ ಅವರು ಉತ್ತರಿಸಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ಮುಂದಿನ ತಿಂಗಳ 4 ಮತ್ತು 5ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ನೀಡಲಿದೆ. ಸಂಪುಟ ಉಪ ಸಮಿತಿಯ ವರದಿಯನ್ನು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ಉನ್ನತಾಧಿಕಾರ ಸಮಿತಿ ಪರಾಮರ್ಶಿಸಿ ಅಗತ್ಯ ಪರಿಹಾರವನ್ನು ಪ್ರಕಟಿಸಲಿದೆ.
2013ರಲ್ಲಿ ಜಾರಿಗೆ ಬಂದಿರುವ ನೂತನ ಭೂಸ್ವಾಧೀನ ಕಾಯ್ದೆಯನ್ವಯ ಭೂಮೌಲ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚಿನ ಪರಿಹಾರ ಒದಗಿಸುವ ಅವಕಾಶವಿದೆ. ಆದರೆ ಭೂ ಮೌಲ್ಯ ಹಳ್ಳಿಹಳ್ಳಿಗೂ ವ್ಯತ್ಯಾಸವಿರುವ ಕಾರಣ ನಾಲ್ಕುಪಟ್ಟು ಪರಿಹಾರ ಒದಗಿಸಿದರೂ ರೈತರಿಗೆ ಸೂಕ್ತ ನ್ಯಾಯ ಒದಗಿಸುವುದು ಕಷ್ಟವಾಗಿದೆ. ಈ ತೊಡಕು ನಿವಾರಣೆಗೆ ಮುಖ್ಯಮಂತ್ರಿಯವರು ಸಂಪುಟ ಉಪ ಸಮಿತಿ ರಚಿಸಿ ಫಲಾನುಭವಿಗಳ ಜೀವನ ಸುಧಾರಣೆ ಜತೆಗೆ ಕುಟುಂಬದ ಆರ್ಥಿಕ ನಿರ್ವಹಣೆ ಮಾಡಲು ಸಹಕಾರಿಯಾಗುವ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದರು.
ಕೇಂದ್ರ ಸರ್ಕಾರ ಕೃಷ್ಟಾ ಮೇಲ್ದಂಡೆ ಯೋಜನೆ ಐತೀರ್ಪಿನ ಅಧಿಸೂಚನೆ ಹೊರಡಿಸುವ ಮೊದಲೇ ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಭೂಸ್ವಾಧೀನ ಹಾಗೂ ಇತರೆ ಕಾಮಗಾರಿಗೆ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಅಧಿಸೂಚನೆವರೆಗೂ ಕಾಯ್ದಿದ್ದರೆ ನೀರಾವರಿ ಯೋಜನೆಗಳ ಕಾರ್ಯಾರಂಭ ಇನ್ನೂ 10 ವರ್ಷಗಳಷ್ಟು ವಿಳಂಬ ಆಗುತ್ತಿತ್ತು. ಕಳೆದ ನಾಲ್ಕು ವರ್ಷದಲ್ಲಿ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೊದಲ ಮತ್ತು ಎರಡನೇ ಹಂತದ ಯೋಜನೆ ಅನುಷ್ಟಾನಕ್ಕೆ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ 450ಕೋಟಿ ರೂ.ಗಳಷ್ಟು ಅಗತ್ಯವಿದ್ದು, ಈಗಾಗಲೇ 192ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಮುಳುಗಡೆ ಗ್ರಾಮಗಳಿಗೆ ಪರಿಹಾರ ಮತ್ತು ಪುನರ್ ವಸತಿಗಾಗಿ 600ರಿಂದ 700 ಕೋಟಿ ರೂ.ಗಳಷ್ಟು ಹಣ ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಮೊದಲ ಹಂತದ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಕಡಿಮೆ ಪರಿಹಾರ ದೊರಕಿದೆ. ಭೂಮಿಯೂ ಇಲ್ಲದೆ, ಉದ್ಯೋಗವೂ ಇಲ್ಲದೆ ಬಾಗಲಕೋಟೆ ಪಟ್ಟಣದಲ್ಲಿ ಹಮಾಲಿ ಮಾಡುವ ಪರಿಸ್ಥಿತಿಯಿದೆ. ಬಾಗಲಕೋಟೆಯಲ್ಲಿ ಉದ್ಯೋಗವಕಾಶಗಳ ಸೃಷ್ಟಿಗೆ ಸರ್ಕಾರ ತಕ್ಷಣ ಮುಂದಾಗಬೇಕು. ಎಸ್‍ಸಿ/ಎಸ್ಟಿ ಮೀಸಲಾತಿ ಮಾದರಿಯಲ್ಲಿ ಮುಳುಗಡೆ ಸಂತ್ರಸ್ತರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸಬೇಕು. ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವ ಉದ್ಯಮಿಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು. ಪುನರ್ ವಸತಿ ಸಂದರ್ಭದಲ್ಲಿ ಕನಿಷ್ಟ ಎರಡು ಗುಂಟೆ ನಿವೇಶನ ನೀಡಬೇಕು ಎಂದು ನಿರ್ಣಯದ ಮೇಲೆ ಮಾತನಾಡಿದ ಶಾಸಕರಾದ ಜೆ.ಟಿ.ಪಾಟೀಲ, ಸಿದ್ದು ನ್ಯಾಮೆಗೌಡ, ಅಪ್ಪಾಜಿ ನಾಡಗೌಡ, ಗೋವಿಂದ ಕಾರಜೋಳ, ಎಚ್.ವೈ.ಮೇಟಿ ಹಾಗೂ ವಿಜಯಾನಂದ ಕಾಶಪ್ಪನವರ್ ಒತ್ತಾಯಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.