ಉತ್ತಮ ಸಮಾಜಕ್ಕಾಗಿ

ಮಾರ್ಚ 31ರೊಳಗಾಗಿ ಬಯಲುಬಹಿರ್ದೆಸೆ ಮುಕ್ತ ರಾಜ್ಯ ನಿರ್ಮಾಣ – ಸಚಿವ ಹೆಚ್.ಕೆ.ಪಾಟೀಲ

0

ಬೆಳಗಾವಿ,ಸುವರ್ಣ ವಿಧಾನ ಸೌಧ (ನ.24; ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಮುಖ ಉದ್ದೇಶವು ಬಯಲು ಬಹಿರ್ದೆಸೆ ಪದ್ಧತಿಯನ್ನು ನಿರ್ಮೂಲನೆಗೊಳಿಸುವುದಾಗಿದೆ. 2018ರ ಮಾರ್ಚ 31ರೊಳಗಾಗಿ ಕರ್ನಾಟಕವನ್ನು ಸಂಪೂರ್ಣ ಬಯಲುಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.
ವಿಧಾನ ಪರಿಷತ್‍ನಲ್ಲಿಂದು ಶಾಸಕರಾದ ಬಸನಗೌಡ ಆರ್.ಪಾಟೀಲ್ ಯತ್ನಾಳ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆ ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಸಾಕಷ್ಟು ಪ್ರಗತಿ ಕಂಡಿದೆ. ವಿಜಯಪುರದಲ್ಲಿ ಮಾತ್ರ ಶೇ. 35ರಷ್ಟು ಸಾಧನೆಯಾಗಿದೆ. ಇದನ್ನು ಚುರಕುಗೊಳಿಸಲು ಜಿಲ್ಲಾ ಪಂಚಾಯತ ಸಿಇಓ, ಅಧಿಕಾರಿಗಳು ಹಾಗೂ ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರಿಗೆ ತಿಳಿಸಲಾಗಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕೂಡ ಈ ಕಾರ್ಯಕ್ಕೆ ಕೈ ಜೋಡಿಸಬೇಕು.
ಶೌಚಾಲಯ ನಿರ್ಮಾಣ ಕಾರ್ಯಕ್ರಮವು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, ಕೇಂದ್ರದ ಪಾಲು ಹೆಚ್ಚಿಸಿದಲ್ಲಿ, ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಹೆಚ್ಚಿಸಿ ಫಲಾನುಭವಿಗಳಿಗೆ ನೀಡಲು ಸಿದ್ಧವಿದೆ ಎಂದು ಸಚಿವರು ತಿಳಿಸಿದರು.

ಗ್ರಾಮಸ್ವರಾಜ್ 2ನೇ ಹಂತಕ್ಕೆ 2 ಸಾವಿರ ಕೋಟಿ ವಿಶ್ವಬ್ಯಾಂಕ್ ನೆರವು:-
ವಿಶ್ವ ಬ್ಯಾಂಕ ನೆರವಿನ ಗ್ರಾಮಸ್ವರಾಜ್ 2ಹಂತದ ಯೋಜನೆಯ ಪ್ರಸ್ತಾವನೆಯು ವಿಶ್ವ ಬ್ಯಾಂಕಿಗೆ ಸಲ್ಲಿಕೆಯಾಗಿದೆ. ಕರ್ನಾಟಕ ರಾಜ್ಯದ ಕಾರ್ಯನಿರ್ವಹಣೆಯನ್ನು ಪ್ರಶಂಸೆ ಮಾಡಿರುವ ಬ್ಯಾಂಕ್ 2 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ ಎಂದು ಸಚಿವರಾದ ಎಚ್.ಕೆ.ಪಾಟೀಲ ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಎಂ.ಕೆ. ಪ್ರಾಣೇಶ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದರು.
ಡಾ. ಡಿ.ಎಂ ನಂಜುಂಡಪ್ಪ ವರದಿ ಅನುಸಾರ ಅತ್ಯಂತ ಹಿಂದುಳಿದ 39, ಅತೀ ಹಿಂದುಳಿದ 40 ತಾಲೂಕುಗಳು ಸೇರಿ ಒಟ್ಟು 79 ತಾಲೂಕುಗಳ 2790 ಗ್ರಾಮ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಕನಾಟಕ ವಿತ್ತೀಯ ಸುಧಾರಣಾ ಕಾಯ್ದೆ 2002ರ ಪ್ರಕಾರ ಧೀರ್ಘಕಾಲಿಕ ಸಾಲದ ರೂಪದಲ್ಲಿ ನೆರವು ನೀಡಲು ಉದ್ದೇಶಿಸಲಾಗಿದೆ. ವಿಶ್ವ ಬ್ಯಾಂಕಿನವರು ರಾಜ್ಯ ಸರ್ಕಾರಕ್ಕೆ ನೀಡುವ ಸಾಲವನ್ನು ಗ್ರಾಮ ಪಂಚಾಯತಿಗಳಿಗೆ ಸಾಲ ರೂಪದಲ್ಲಿ ನೀಡದೇ ಅನುದಾನ ರೂಪದಲ್ಲಿ ನೀಡಬೇಕೆಂಬ ನಿಲುವು ತಳೆದಿದ್ದಾರೆ. ಈ ದಿಸೆಯಲ್ಲಿ ಒಮ್ಮತ ಮೂಡಿಸಿ ವಿಶ್ವಬ್ಯಾಂಕ್ ನೆರವು ಪಡೆಯುವ ಪ್ರಯತ್ನ ಮುಂದುವರೆಸಲಾಗಿದೆ ಎಂದು ಸಚಿವರು ಹೇಳಿದರು.

Leave A Reply

 Click this button or press Ctrl+G to toggle between Kannada and English

Your email address will not be published.