ಉತ್ತಮ ಸಮಾಜಕ್ಕಾಗಿ

ಗದ್ದಲದಲ್ಲಿ ಗೋವಿಂದ..; ಬೆಳಗಾವಿ ಅಧಿವೇಶನ

0

ಬೆಳಗಾವಿ(ಸುವರ್ಣಸೌಧ): ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ಮೂಲಕ ಇತ್ಯರ್ಥಕ್ಕೆ ಎಂದು ಬಿಂಬಿಸಲಾಗಿದ್ದ ಚಳಿಗಾಲದ ಅಧಿವೇಶನ ಇಂದು ತುರಾತುರಿಯಲ್ಲಿ ಎರಡೂ ಸದನಗಳಲ್ಲಿ ಮಧ್ಯಾಹ್ನದೊಳಗೆ ಕ್ಲೋಸ್ ಆಯ್ತು. ನ. 13 ಕ್ಕೆ ಪ್ರಾರಂಭವಾಗಿದ್ದ ಅಧಿವೇಶನ ಅಂದು ಮತ್ತು ಇಂದು ಬಹುತೇಕ ನಡೆಯದೇ ಎಂಟು ದಿನದ ಕಲಾಪಕ್ಕೆ ಸೀಮಿತವಾಯಿತು. ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆಗೆ ಸರಕಾರದ ಕುಮ್ಮಕ್ಕು ಕಾರಣ ಎಂದು ಆರೋಪಿಸಿ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಗದ್ದಲ ಏರ್ಪಡಿಸಿದ್ದರಿಂದ ಮಧ್ಯಾಹನ 12ರ ಸುಮಾರಿಗೆ ವಿಧಾನಸಭೆ ಅನಿರ್ಧಿಷ್ಠಾವಧಿಗೆ ಮುಂದೂಡಲ್ಪಟ್ಟಿತು.
ಪರಿಷತ್ ನಲ್ಲೂ ಸಹ ಬಿಜೆಪಿ ಕಾರ್ಯಕರ್ತ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಕೊಲೆಗಡುಕರ ಪರವಾಗಿ ಸಚಿವ ವಿನಯ ಕುಲಕರ್ಣಿ ನಡೆದುಕೊಳ್ಳುತ್ತಿದ್ದಾರೆ. ಜಾರ್ಜ್ ಮತ್ತು ವಿನಯ ಕುಲಕರ್ಣಿ ಅವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯ ಉಂಟಾಗಿ; 10 ನಿಮಿಷ ಸಭಾಪತಿ ಡಿ. ಎಚ್. ಶಂಕರಮೂರ್ತಿ ಸದನ ಮುಂದೂಡಿದರು.ಮತ್ತೆ ಸದನ ಸೇರಿದಾಗ ಮತ್ತೆ ಗದ್ದಲ ಪ್ರಾರಂಭವಾಗಿ ಈ ಬಾರಿಯ ಬೆಳಗಾವಿ ಅಧಿವೇಶನಕ್ಕೆ ಕೊನೆ ಮೊಳೆ ಹೊಡೆದಂತಾಯಿತು. ವಿಧಾನಸಭೆಯ ಮೊಗಸಾಲೆಯಲ್ಲಿ ರಾಜಕೀಯ ನೇತಾರರ Assitants, ಅಧಿಕಾರಿಗಳ ನೌಕರರು ಸ್ವೀಟ್ ಬಾಕ್ಸಗಳನ್ನು ಹಿಡಿದು ಓಡಾಡುತ್ತ ತಮ್ಮ ಊರುಗಳಿಗೆ ತೆರಳುವ ಹುರುಪಿನಲ್ಲಿ ಕಂಡುಬಂದರು.ಗುರುವಾರ ಪರಿಷತ್ತಿನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕಕ್ಕೆ ಏನೇನು ಮಾಡುತ್ತೇವೆ ಎಂದು ನಿರ್ಧರಿಸುವ ಬದಲು; ಸರಕಾರ ಏನೇನು ಮಾಡಿದೆ ಎಂಬ ವರದಿ ಅಂಕಿ ಸಂಖ್ಯೆ ಸಮೇತ ವಾಚನ ಮಾಡಿ ಸರಕಾರ ನಿರ್ಲಕ್ಷಿಸಿಸಿಲ್ಲ ಎಂದು ಸಮರ್ಥಿಸಿಕೊಂಡರು. ಮೈಸೂರಿನಲ್ಲಿ ಇಂದು ನಡೆದ ಸಮ್ಮೇಳನದಲ್ಲಿ ಭಾಗವಹಿಸಲು ತುರಾತುರಿಯಲ್ಲಿ ಸಿಎಂ ರಾತ್ರಿಯೇ ಆಗಸದಲ್ಲಿ ಹಾರಿದರು. ಜನಜಂಗುಳಿ, ಶಾಲಾ ಮಕ್ಕಳು, ರಾಜಕಾರಣಿಗಳು, ಅತ್ಯುನ್ನತ ಅಧಿಕಾರಿಗಳು, ಸರಕಾರಿ ಸಿಬ್ಬಂಧಿ, ಪತ್ರಕರ್ತರು ಹಾಗೂ ಸೌಧ ವೀಕ್ಷನಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಸೌಧದ ಕಾರಿಡಾರಗಳು ಕೆಲವೇ ನಿಮಿಷಗಳಲ್ಲಿ ಖಾಲಿ ಹೊಡೆಯತೊಡಗಿದವು. ಊಟದ ಕೋಣೆಗಳಲ್ಲಿ ಜನ ಕಾಣದೇ ಬಫೆಗಳಲ್ಲಿ ಖಾಲಿ ಖಾಲಿ ಆಗಿತ್ತು.
ರಜೆ ಸೇರಿ ಒಟ್ಟು 12 ದಿನದಲ್ಲಿ ಸುಮಾರು 40 ಗಂಟೆಯಷ್ಟು ಸದನ ನಡೆದು ಮೂಢನಂಬಿಕೆ ನಿಷೇಧ ಕಾಯ್ದೆ ಸೆರಿ ಪ್ರಮುಖ ಬಿಲ್ ಗಳು ಪಾಸ್ ಆದವು.ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪಟ್ಟಿ ಮಾಡಿ ಜೆಡಿಎಸ್ ನ ಬಸವರಾಜ ಹೊರಟ್ಟಿ ಮತ್ತು ಕಾಂಗ್ರೆಸ್ ನ ಸಿ. ಎಂ. ಇಬ್ರಾಹಿಂ, ಬಸವರಾಜ ಪಾಟೀಲ (ಯತ್ನಾಳ) ಪರಿಷತ್ತಿನಲ್ಲಿ ಮತ್ತಿತರರು ಸವಿಸ್ತಾರವಾಗಿ ಮಾತನಾಡಿದರು. ಆದರೆ ಸರಕಾರ ತನ್ನ ಉತ್ತರದಲ್ಲಿ ಈಗಾಗಲೇ ಉತ್ತರ ಕರ್ನಾಟಕದ ಭಾಗಕ್ಕೆ ಆದ್ಯತೆ ಮೇಲೆ ಸರಕಾರಿ ಕಾರ್ಯಕ್ರಮಗಳನ್ನು ನೀಡಲಾಗಿದೆ ಎಂಬ ಸಮರ್ಥನೆ ಮಾಡಿಕೊಂಡಿತು. ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ನಡೆಸಿದ ಅಧಿವೇಶನದಿಂದ ಏನೂ ಪ್ರಮುಖ ನಿರ್ಧಾರಗಳು ಆಗಲಿಲ್ಲ. Nothing But National Waste ಎಂಬ ಮಾತುಗಳು ಪಡಸಾಲೆಯಲ್ಲಿ ಅಣುರಣಿಸಿದವು.

ಅಧಿವೇಶನದುದ್ದಕ್ಕೂ ಶಾಸಕರ ಹಾಜರಾತಿ ಗೈರು, ಶುದ್ಧ ಉದಾಸೀನತೆ ಮಾಡಿದರು ಎಂಬ ವರದಿಗಳು ಕಾಟಾಚಾರದ ಅಧಿವೇಶನ ಎಂಬುವುದನ್ನು ಪ್ರಚುರಪಡಿಸಿದವು. ಎರಡೂ ಸದನಗಳಲ್ಲಿ ಪ್ರತಿಪಕ್ಷಕ್ಕಿಂತ ಆಡಳಿತ ಪಕ್ಷವೇ ಎರಡೂ ಆಡಳಿತ ಮತ್ತು ಪ್ರತಿಪಕ್ಷದ ರೋಲ್ ಗಳನ್ನು ನಿಭಾಯಿಸಿದಂತೆ ಇತ್ತು ಎಂದು ಶಾಸಕರೊಬ್ಬರು ವ್ಯಂಗ್ಯವಾಡಿದರು.ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ತರಲು ಹೊರಟಿದ್ದ ಸರಕಾರ ವೈದ್ಯರ ಪ್ರತಿಭಟನೆಗೆ ಬೆದರಿ ‘ತೀರಾ ಸಪೂರ’ ಕಾಯ್ದೆ ಪಾಸ್ ಮಾಡಿಕೊಂಡಿತು. ಖಾಸಗಿ ವೈದ್ಯರ ಪ್ರತಿಭಟನೆಯಿಂದ ರಾಜ್ಯದಲ್ಲಿ ಸುಮಾರು ೨೫ ರೋಗಿಗಳು ಅಸುನೀಗಿದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವಾಗಲಿ, ವೈದ್ಯಕೀಯ ಸಂಘಟನೆಯಾಗಲಿ ಜವಾಬ್ದಾರರಲ್ಲ; ಇಡೀ ಸಮಾಜವೇ ಜವಾಬ್ದಾರಿ ಎಂದು ಹೆಗಲು ನೊಣಚಿದರು. ಆದರೆ ಮಾಧ್ಯಮಗಳ ತರಾಟೆಗೆ ಸಂಘಟನೆಯ ಅಧ್ಯಕ್ಷ ಡಾ. ರವೀಂದ್ರ ರೋಗಿಗಳ ಸಾವಿನ ‘ಪಾಪ’ ನನಗೆ ತಟ್ಟಲಿ ಎಂದು ನೈತಿಕ ಹೊಣೆ ಹೊತ್ತರು. ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಬಿಲ್ ಅನ್ನು ಹಲ್ಲಿಲ್ಲದ ಹಾವು ಎಂದು ಒಬ್ಬರು ಬಣ್ಣಿಸಿದರೆ ಇನ್ನೊಬ್ಬರು ಇದು ಹಾವು ಸಹ ಅಲ್ಲ ಎಂದು ವ್ಯಂಗ್ಯವಾಡಿದರು.ಇಡೀ ಸರಕಾರವೇ ಬೆಳಗಾವಿಯಲ್ಲಿದ್ದಾಗ ನಗರ ಹೃದಯಭಾಗದಲ್ಲಿ ತಡರಾತ್ರಿ ದೊಂಬಿ ಉಂಟಾಗಿ ಜಿಲ್ಲೆಯ ಹೆಸರು ಮೂರು ಕಾಸಿಗೆ ಹರಾಜಾಯಿತು.ಕೊನೆ ದಿನ ಬಯೋಡೈವರ್ಸಿಟಿ ಪಾರ್ಕ್ ಉದ್ಘಾಟನೆ ಗೆ ಮಚ್ಛೆಗೆ ತೆರಳಿದ್ದ ಅರಣ್ಯ ಸಚಿವರಿಗೆ ‘Honey Bite’ ಮಾಡಿ ಕಳಿಸಿದಂತಾಯಿತು. ಸಾಮಾಜಿಕ ಸಂಘಟನೆಗಳು, ಪ್ರಗತಿಪರ ಗುಂಪುಗಳು ತಮ್ಮ ಬೇಡಿಕೆಗಳಿಗೆ, ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿ ದಿನ ಸುವರ್ಣಸೌಧದ ಸುತ್ತ ಪ್ರತಿಭಟನೆ ನಡೆಸಿ ಅಹವಾಲುಗಳ ಸುರಿಮಳೆಗೈದರು. ವೈದ್ಯ ಸಂಘದ ಪ್ರತಿಭಟನೆ ಈ ಬಾರಿ ಎಲ್ಲರ ಗಮನ ಸೆಳೆಯಿತು. ಸುಮಾರು 650 ಸಿಬ್ಬಂಧಿ ಬಳಸಿ ವಿಧಾನಸೌಧದ ಅಗ್ನಿಮೂಲೆಯಲ್ಲಿ ಸುಮಾರು ,೬ ಸಾವಿರ ಜನರಿಗೆ ತಯಾರಿಸಲಾಗುತ್ತಿರುವ ₹500ಬೆಲೆಯ ಊಟ ತಮ್ಮ ಹೊಟ್ಟೆಗೆ ಸರಿಹೊಂದದೇ ‘ಬೇದಿ’ ಹತ್ತಿದೆ ಎಂದು ಸ್ವತಃ ಶಾಸಕರು ಸದನಗಳಲ್ಲೇ ಸಭಾಧ್ಯಕ್ಷರ ಬಳಿ ಆಕ್ಷೇಪ ದಾಟಿಯಲ್ಲಿ ಅಲವತ್ತುಕೊಂಡರು. ಕೆಲ ಸಚಿವ, ಶಾಸಕ ಹಾಗೂ ಪತ್ರಕರ್ತರು ಹೊಟ್ಟೆ ಬಾಧೆಗೊಳಗಾಗಿ ಆಸ್ಪತ್ರೆ ಸೇರಿದರು.
ಬೆಳಗಾವಿಗೆ ಸಕ್ಕರೆ, ಟೆಕ್ಸಟೈಲ್ ನಿರ್ದೇಶನಾಲಯ ಸೇರಿದಂತೆ ಇತರ ಕಚೇರಿಗಳು ಬರಬೇಕೆಂಬ ಬೇಡಿಕೆಗೆ ಸರಕಾರದ ಸ್ಪಷ್ಠತೆ ಅಧಿವೇಶನದಲ್ಲಿ ದೊರೆಯಲಿಲ್ಲ. ಕನ್ನಡ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯುವ ಮಾತಾಡಿದ್ದ ಸರಕಾರದ ನಡೆ ಸ್ಪಷ್ಠವಾಗಲಿಲ್ಲ. ಸುವರ್ಣಸೌಧ ಕಟ್ಟಡ ಬೆಳಗಾವಿಯಲ್ಲಿದೆ ಎಂಬ ಕಾರಣಕ್ಕೆ ಹೆಸರಿಗೆ ಅಧಿವೇಶನ ನಡೆಸುತ್ತಿದ್ದಾರೆ, ಆಗದ ಹೋಗದ ಸರಕಾರಿ ನೀತಿ ಇದು ಎಂದು ಜನಸಾಮಾನ್ಯರು ಸಹಜವಾಗಿ ಜರಿದರು.ಅಧಿವೇಶನದ ಮೊದಲ ದಿನವೇ ಮರಾಠಿ ಭಾಷಿಕರು ಶೆಡ್ಡು ಹೊಡೆದು ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ನಡೆಸಿ ಜಿಲ್ಲಾಡಳಿತದ ನಿಷೇದಾಜ್ಞೆ ನಡುವೆ ನೆರೆ ರಾಜ್ಯದ ಶಾಸಕರನ್ನು ಆಹ್ವಾನಿಸಿಯೇ ಮೇಳಾವ್ ನಡೆಸಿದರು. ಮಹಾದಾಯಿ ನದಿ ನೀರು ಹಂಚಿಕೆ, ಗಡಿವಿವಾದ ಸಮಸ್ಯೆ ಇತ್ಯರ್ಥಕ್ಕೆ ಸರಕಾರದ ರಕ್ಷಣಾತ್ಮಕ ತಯ್ಯಾರಿ, ರೈತರಿಗೆ ಬೆಂಬಲ ಬೆಲೆ ಮತ್ತು ಬಾಕಿ ಬಿಲ್ ಬಿಡುಗಡೆ ಯಾವುದಕ್ಕೂ ನಿರ್ಧಿಷ್ಠ ಸಾಧನಾತ್ಮಕ ಉತ್ತರ ಸರಕಾರದಿಂದ ದೊರೆಯಲಿಲ್ಲ. ಎರಡೂ ಸದನಗಳಲ್ಲಿ ಕೊನೆಗೂ ಗದ್ದಲ ಹೆಚ್ಚಾಗಿ ಇಂದು ಅಧಿವೇಶನ ಸಮಾಪ್ತಿಯಾಯಿತು.ಸಿದ್ಧು ಸರಕಾರದ ಕೊನೆ ಅಧಿವೇಶನ ಎಂದು ಕೆಲವರು ಮಾತನಾಡಿದರೆ, ಇನ್ನೂ ಕೆಲವರು ಮತ್ತೆ ಅಧಿವೇಶನ ಅವರೇ ನಡೆಸೋದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಗದ್ದಲದಲ್ಲಿ ಗೋವಿಂದ ಎಂಬಂತಾಯಿತು ಬೆಳಗಾವಿ ಅಧಿವೇಶನ.

Leave A Reply

 Click this button or press Ctrl+G to toggle between Kannada and English

Your email address will not be published.