ಉತ್ತಮ ಸಮಾಜಕ್ಕಾಗಿ

ಜಿಪಂ ಸಾಮಾನ್ಯ ಸಭೆ: ಅನುದಾನ ಹೆಚ್ಚಳಕ್ಕೆ ಆಗ್ರಹಿಸಿ ಸದಸ್ಯರ ಧರಣಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಿಲ್ಲ-ಸ್ಪಷ್ಟನೆ

0

ಬೆಳಗಾವಿ, ಜಿಲ್ಲಾ ಪಂಚಾಯ್ತಿ ಅಭಿವೃದ್ಧಿಗೆ ಅನುದಾನವನ್ನು ಯಾವುದೇ ಪಕ್ಷ ಅಥವಾ ಭಾಷಾ ಭೇದವಿಲ್ಲದೇ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಸದಸ್ಯರು ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ(ನ.25) ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲ ಸದಸ್ಯರು ತಮ್ಮ ಕ್ಷೇತ್ರಗಳಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಅನುದಾನ ಹಂಚಿಕೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸಮಜಾಯಿಷಿ ನೀಡಿದ ಅವರು, ವಿನಾಕಾರಣ ಆರೋಪ ಮಾಡುವ ಮೊದಲು ತಮ್ಮ ಕ್ಷೇತ್ರಕ್ಕೆ ಹಾಗೂ ಉಳಿದ ಕ್ಷೇತ್ರಗಳಿಗೆ ಹಂಚಿಕೆಯಾದ ಅನುದಾನದ ಬಗ್ಗೆ ಮಾಹಿತಿ ಪಡೆದುಕೊಂಡು ಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದು ಹೇಳಿದರು.

ಸದಸ್ಯರ ಧರಣಿ:
ಜನಸಂಖ್ಯೆ ಹಾಗೂ ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲಾ ಪಂಚಾಯ್ತಿಗೆ ಕಡಿಮೆ ಅನುದಾನ ನೀಡಲಾಗುತ್ತಿದ್ದು, ಸರ್ಕಾರ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅನೇಕ ಸದಸ್ಯರು ಜಿಪಂ ಅಧ್ಯಕ್ಷರ ಎದುರು ಧರಣಿ ಕುಳಿತರು.
ಇದಕ್ಕೆ ಸ್ಪಂದಿಸಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು, ಸದಸ್ಯರ ಒತ್ತಾಯದ ಮೇರೆಗೆ ಹೆಚ್ಚುವರಿ ಅನುದಾನ ಕೋರಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬಹುದು ಎಂದರು.
ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ತುಲನಾತ್ಮಕ ಮಾಹಿತಿ ನೀಡಿದ ಜಿಪಂ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಅವರು, ಸರ್ಕಾರವು ಆಯಾ ಜಿಲ್ಲೆಯ ಜನಸಂಖ್ಯೆ ಆಧರಿಸಿ ಅನುದಾನವನ್ನು ನೀಡುತ್ತಿದ್ದು, ತಾರತಮ್ಯ ಅಥವಾ ಕಡಿಮೆ ಅನುದಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.
ಅನುದಾನ ಕೊರತೆ ಎಂಬುದು ಸದಸ್ಯರ ತಪ್ಪು ಕಲ್ಪನೆ ಆಗಿದ್ದು, ರಾಜ್ಯದ ಜನಸಂಖ್ಯೆಯ ಶೇ.10ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಜನಸಂಖ್ಯೆಗೆ ಅನುಗುಣವಾಗಿ ಜಿಪಂ-636 ಕೋಟಿ, ತಾಪಂ-1226 ಕೋಟಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ 56 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ಅನುದಾನ ಮಾತ್ರ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ತಲಾ 4 ಕೋಟಿ ರೂಪಾಯಿ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಪ್ರತಿಯೊಂದು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಅನುಸರಿಸಲಾಗುತ್ತಿದೆ ಎಂದು ಮುಳ್ಳಳ್ಳಿ ತಿಳಿಸಿದರು.

ಮಾತೃಪೂರ್ಣ-ಮನೆಗೆ ಆಹಾರ ನೀಡಲು ಆಗ್ರಹ:
ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೆಲ ಸದಸ್ಯರು ಈ ಯೋಜನೆಯನ್ನೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸುವ ಅಧಿಕಾರ ಜಿಲ್ಲಾ ಪಂಚಾಯ್ತಿ ಸಭೆಗಳಿಗೆ ಇಲ್ಲ; ಆದರೆ ಜನರಿಗೆ ಅನುಕೂಲ ಆಗುವಂತೆ ಮಾರ್ಪಾಟು ಮಾಡಲು ಮತ್ತು ಲೋಪದೋಷ ಸರಿಪಡಿಸುವ ಕುರಿತು ಚರ್ಚೆ ನಡೆಸಬಹುದು ಎಂದು ಜಿಪಂ ಸಿಇಓ ರಾಮಚಂದ್ರನ್ ಆರ್. ತಿಳಿಸಿದರು.
ನಂತರ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕೆಲ ಸದಸ್ಯರು, ಮಾತೃಪೂರ್ಣ ಯೋಜನೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ತೊಂದರೆಯಾಗುತ್ತಿದೆ. ಬಾಣಂತಿಯರು ಕೇಂದ್ರಗಳಿಗೆ ಬಂದು ಆಹಾರ ಸ್ವೀಕರಿಸುವುದು ಕೂಡ ಕಷ್ಟ. ಆದ್ದರಿಂದ ಬಾಣಂತಿಯರಿಗೆ ಮನೆಗೆ ಆಹಾರವನ್ನು ಕಳುಹಿಸಿ ಕೊಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.

ಆರಂಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಗಂಗಾಧರಸ್ವಾಮಿ ತವಗಮಠ, ಜೀತೇಂದ್ರ ಮಾದರ ಮತ್ತಿತರರು, ಪ್ರತಿ ಸಭೆಯಲ್ಲಿ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದು, ಹಿಂದಿನ ಸಭೆಯ ಅನುಸರಣಾ ವರದಿಯ ಪ್ರಕಾರ ಕೆಲಸಗಳಾಗುತ್ತಿಲ್ಲ ಎಂದು ಕಿಡಿಕಾರಿದರು.
ಇದಕ್ಕೆ ದನಿಗೂಡಿಸಿದ ಅನೇಕ ಸದಸ್ಯರು ಪ್ರತಿ ಸಭೆಯಲ್ಲೂ ಅದೇ ವಿಷಯಗಳು ಪುನರಾವರ್ತನೆಯಾಗುತ್ತಿದ್ದು, ಯಾವುದೇ ಕೆಲಸಗಳಾಗದಿರುವುದರಿಂದ ಜಿಪಂ ಸಭೆ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಸದಸ್ಯರ ಬೇಡಿಕೆಗಳು ಹಾಗೂ ಅವರ ಕ್ಷೇತ್ರದ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಸದಸ್ಯರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು ಎಂದು ಸಿಇಓ ರಾಮಚಂದ್ರನ್ ಸೂಚನೆ ನೀಡಿದರು.
ರಾಯಬಾಗ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ವಿತರಿಸಿರುವ ಕಡಲೆ ಬೀಜದಲ್ಲಿ ಹುಳುಗಳು ಕಂಡಬಂದಿರುವುದನ್ನು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು.
ಕಾಕೋಳ ಕ್ಷೇತ್ರದಲ್ಲಿ ಕೋಳಿ ಫಾರ್ಮ ಆರಂಭಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಆ ಕ್ಷೇತ್ರದ ಸದಸ್ಯೆ, ಒಂದು ವೇಳೆ ಫಾರ್ಮ ಆರಂಭಿಸಿದರೆ ಗ್ರಾಮಸ್ಥರನ್ನು ಕರೆತಂದು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅವರು ಆರಂಭದಲ್ಲಿ ಸ್ವತಃ ನಾಡಗೀತೆ ಹಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸದಸ್ಯರು ಚಪ್ಪಾಳೆ ತಟ್ಟಿ ತಮ್ಮ ಪ್ರಶಂಸೆ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.