ಉತ್ತಮ ಸಮಾಜಕ್ಕಾಗಿ

ಸಾವಯವ ಬೆಳೆ-ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮ ಸಚಿವ ಕೃಷ್ಣ ಭೈರೇಗೌಡ

0

ಬೆಳಗಾವಿ: ಸಾವಯವ ಬೆಳೆಗಳು ಹಾಗೂ ಸಿರಿಧಾನ್ಯಗಳನ್ನು ನಾವು ಆಹಾರಕ್ಕಾಗಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
ಇಲ್ಲಿನ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯತ ಹಾಗೂ ಬೆಳಗಾವಿ, ಬಾಗಲಕೋಟ ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳ ಕೃಷಿ ಇಲಾಖೆ ಮತ್ತು ಜಿಲ್ಲಾ ಪ್ರಾಂತೀಯ ಸಹಕಾರ ಕೃಷಿಕರ ಸಂಘಗಳ ಆಶ್ರಯದಲ್ಲಿ ಶನಿವಾರ (ನ.25) ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸಾವಯವ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಪರಿಸರ ಸಂರಕ್ಷಣೆ ಹಾಗೂ ಮಣ್ಣಿನ ಗುಣಮಟ್ಟವನ್ನು ಕಾಪಾಡಬಹುದು. ಸಾವಯವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೆ ಬೆಳೆದ ಬೆಳೆಗಳನ್ನು ರೈತರೇ ಮುತುವರ್ಜಿ ವಹಿಸಿ ಮಾರಾಟ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಎಚ್.ಕೆ. ಪಾಟೀಲ ಅವರು ಕೃಷಿ ಸಚಿವರಾಗಿದ್ದಾಗ ರಾಜ್ಯದಲ್ಲಿ ಸಾವಯವ ನೀತಿಯನ್ನು ಜಾರಿಗೆ ತರಲಾಗಿತ್ತು. ಸದ್ಯ ಸಾವಯವ ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಬೆಳೆದ ಸಾವಯವ ಬೆಳಗಳನ್ನು ರೈತರೇ ಕ್ರೋಢೀಕರಿಸಿ ನೇರವಾಗಿ ಕಂಪನಿಗಳಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ. ರಾಜ್ಯದಲ್ಲಿ 14 ಸಾವಯವ ಬೆಳೆಗಾರರ ಪ್ರಾಂತೀಯ ಒಕ್ಕೂಟಗಳನ್ನು ರಚಿಸಲಾಗಿದ್ದು, ಕಂಪನಿಗಳು ಹಾಗೂ ರೈತರನ್ನು ಬೆಸೆಯುವ ಕೆಲಸ ಮಾಡಲಾಗಿದೆ. ಇದರಿಂದ ರೈತರಿಗೆ ಅತ್ಯಂತ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಸಿರಿಧಾನ್ಯಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶ ಇರುತ್ತದೆ ಹಾಗೂ ಸಿರಿಧಾನ್ಯಗಳು ಆರೋಗ್ಯಕ್ಕೂ ಉತ್ತಮ. ಆದ್ದರಿಂದ ರೈತರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕು ಹಾಗೂ ಸಾರ್ವಜನಿಕರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಸಾವಯವ ಬೆಳೆಗಳು ಹಾಗೂ ಸಿರಿಧಾನ್ಯಗಳನ್ನು ಇತರರಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಜನೇವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾವಯವ ಹಾಗೂ ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗುತ್ತಿದೆ. ದೇಶ, ವಿದೇಶದ 300 ದೊಡ್ಡ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ರಾಜ್ಯವನ್ನು ದೇಶದಲ್ಲೇ ಸಾವಯವ ಮತ್ತು ಸಿರಿಧಾನ್ಯಗಳ ಮುಖ್ಯ ಕೇಂದ್ರವನ್ನಾಗಿಸಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ ಸಾವಯವ ಬೆಳೆ ಮತ್ತು ಸಿರಿಧಾನ್ಯಗಳನ್ನು ಬೇರೆ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಪ್ತು ಮಾಡಬೇಕೆಂಬುದು ರಾಜ್ಯಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಾವಯವ ಬೆಳೆ ಹಾಗೂ ಸಿರಿಧಾನ್ಯಗಳ ಸೇವನೆ ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.
ಸಾವಯವ ಬೆಳೆಗಳನ್ನು ಬೆಳೆಯುವ ರೈತರಿಗೆ ಉತ್ತಮ ಮಾರುಕಟ್ಟೆ ದೊರೆತರೆ ಲಾಭವಾಗುತ್ತದೆ. ಸಾವಯವ ಕೃಷಿ ಉತ್ತಮ ಕೃಷಿ ವ್ಯವಸ್ಥೆಗೆ ನಾಂದಿಯಾಗಲಿ ಹಾಗೂ ಯುವಜನಾಂಗಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಾದ ಅಶೋಕ ತುಬಚಿ ಹಾಗೂ ಬಿ. ಸೋಮಶೇಖರ ಅವರು ಮಾತನಾಡಿದರು. ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೆ.ಎಲ್.ಇ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ವಿ.ಜೆ. ಪಾಟೀಲ ಅವರು ಸ್ವಾಗತಿಸಿದರು. ಕೋಳೆಕರ ಅವರು ವಂದಿಸಿದರು.
ಕೃಷಿ ಇಲಾಖೆಯ ಆಯುಕ್ತರಾದ ಗಿ. ಸತೀಶ, ನಿರ್ದೇಶಕರಾದ ಬಿ.ವೈ. ಶ್ರೀನಿವಾಸ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ. ಬಸಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಾರವಾರ ಜಿಲ್ಲೆಗಳ ಸಾವಿರಾರು ರೈತರು ಹಾಗೂ ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡಿದ್ದರು.
ರವಿವಾರ (ನ.26) ಕೂಡ ಮೇಳ ನಡೆಯಲಿದ್ದು, ಸಿರಿಧಾನ್ಯಗಳ ಅಡುಗೆ ಪ್ರಾತ್ಯಕ್ಷಿಕೆ, ಅಡುಗೆ ಸ್ಪರ್ಧೆ, ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ.

Leave A Reply

 Click this button or press Ctrl+G to toggle between Kannada and English

Your email address will not be published.