ಉತ್ತಮ ಸಮಾಜಕ್ಕಾಗಿ

3ನೇ ಸುತ್ತಿನ ತೀವ್ರಗೊಂಡ ಇಂದ್ರಧನುಷ್ ಅಭಿಯಾನ: ಪೂರ್ವಭಾವಿ ಸಭೆ

0

ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಡಿ.1) 3ನೇ ಸುತ್ತಿನ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಕಾರ್ಯಪಡೆ ಅಭಿಯಾನದ ಕುರಿತು ಜಿಲ್ಲಾಮಟ್ಟದ ಪೂರ್ವಭಾವಿ ಸಭೆ ಜರುಗಿತು.
ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 3ನೇ ಸುತ್ತಿನ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಸಹಕಾರ ನೀಡಿ ಯಶಸ್ಸಿಗೆ ಶ್ರಮಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಯಾನದ ಕುರಿತು ಕೇವಲ ಅಂಕಿ ಸಂಖ್ಯೆಯಲ್ಲಿ ಪ್ರಗತಿಯನ್ನು ತೋರಿಸದೆ ಪ್ರಾಯೋಗಿಕವಾಗಿ ಹೆಚ್ಚು ಹೆಚ್ಚು ಕೆಲಸ ಮಾಡಿ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಟಾನಗೊಳಿಸಲು ಕಾರ್ಯ ತತ್ಪರರಾಗಬೇಕು ಎಂದು ಹೇಳಿದರು.
ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಸೂಕ್ತ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮನೆಮನೆಗೆ ಭೇಟಿ ನೀಡಿ ಲಸಿಕೆ ನೀಡಿರುವ ಕುರಿತು ಪರಿಶೀಲಿಸಬೇಕು ಹಾಗೂ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ತೀವ್ರಗೊಂಡ ಇಂದ್ರಧನುಷ್ ಕಾರ್ಯಕ್ರಮದ ಬಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಐ.ಇ.ಸಿ ಫಲಕಗಳನ್ನು ಅಳವಡಿಸಿಕೊಂಡು ಕಾರ್ಯಕ್ರಮದ ದಿನಗಳಂದು ಲಸಿಕಾ ಕೇಂದ್ರ ನಡೆಸಿ, ಲಸಿಕೆ ನೀಡಬೇಕು. ಜಿಲ್ಲಾಸ್ಪತ್ರೆಯಲ್ಲಿ ವ್ಯಾಕ್ಸಿನ್ ಮತ್ತು ಲಾಜಿಸ್ಟಿಕ್ಸ್ ಲಭ್ಯತೆಯ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಔಷಧ ವಿತರಕರೊಂದಿಗೆ ಚರ್ಚಿಸಿ ಯಾವುದೇ ಕುಂದುಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ರಾಮಚಂದ್ರನ್.ಆರ್ ಅವರು ಮಾತನಾಡಿ, ಈ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದ್ದು, ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಬೇಕು. ಅಂಗನವಾಡಿ ಸಹಾಯಕಿಯರಿಗೆ ಈ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
ಆರ್‍ಸಿಎಚ್‍ಒ ಡಾ. ಐ.ಪಿ. ಗಡಾದ ಅವರು ಮಾತನಾಡಿ, ತೀವ್ರಗೊಂಡ ಇಂದ್ರಧನುಷ್ ಅಭಿಯಾನದ 2ನೇ ಸುತ್ತಿನ ಪ್ರಗತಿ ಹಾಗೂ 3ನೇ ಸುತ್ತಿನಲ್ಲಿ ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. 3ನೇ ಸುತ್ತಿನ ಮಿಷನ್ ಇಂದ್ರಧನುಷ್ ಆಭಿಯಾನಕ್ಕೆ ಪುನಃ ಬಿಟ್ಟು ಹೋದ ಮಕ್ಕಳ ಬಗ್ಗೆ ಸಮೀಕ್ಷೆ ಮಾಡಿ 2 ವರ್ಷದೊಳಗಿನ ಮಕ್ಕಳು ಹಾಗೂ 5 ರಿಂದ 6 ವರ್ಷದ ಮಕ್ಕಳು ಮತ್ತು ಗರ್ಭಿಣಿಯರ ಪಟ್ಟಿಯನ್ನು ತರಿಸಿಕೊಂಡು, ಸೂಕ್ಷ್ಮ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
3ನೇ ಸುತ್ತಿನಲ್ಲಿ ಕ್ಲಿಷ್ಟಕರ ಪ್ರದೇಶಗಳನ್ನು ಗುರುತಿಸಿಕೊಂಡು ಸಮಾಲೋಚನೆ ಹಾಗೂ ಮಕ್ಕಳ ಸಮೀಕ್ಷೆ ಮಾಡಲಾಗಿದೆ ಮತ್ತು ಈ ಪ್ರದೇಶಗಳಲ್ಲಿ ಐಇಸಿಗೆ ಹೆಚ್ಚು ಒತ್ತು ನೀಡಲಾಗಿದೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ ಪ್ರತಿ ನ.ಆ. ಕೇಂದ್ರಗಳಿಗೊಬ್ಬರು ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ ಹಾಗೂ ಕಾರ್ಯಕ್ರಮದ ಮೇಲ್ವಿಚಾರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 3ನೇ ಸುತ್ತಿನ ತೀವ್ರಗೊಂಡ ಇಂದ್ರಧನುಷ್ ಅಭಿಯಾನ ಡಿಸೆಂಬರ್. 8 ರಿಂದ ಡಿ.19 ರವರೆಗೆ ಜರುಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಪ್ಪಾಸಾಹೇಬ ನರಹಟ್ಟಿ, ಡಬ್ಲೂಎಚ್‍ಒ ಡಾ. ಸಿದ್ಧಲಿಂಗಯ್ಯ, ತಹಶೀಲ್ದಾರ ಮಂಜುಳಾ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.